ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಮಾತು ತಪ್ಪೇ?

Update: 2017-11-27 05:05 GMT

ಸಾಹಿತ್ಯ ಸಮ್ಮೇಳನಾಧ್ಯಕ್ಷರು ರಾಜಕೀಯವನ್ನು ವೇದಿಕೆಯಲ್ಲಿ ಮಾತನಾಡಬಾರದೇ? ಅವರ ಭಾಷಣ, ಕವಿರಾಜಮಾರ್ಗ, ಪಂಪ, ರನ್ನ, ಪೊನ್ನ ಇವುಗಳ ನಡುವೆಯೇ ಗಿರಕಿ ಹೊಡೆಯಬೇಕೇ? ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣವೆಂದರೆ ನಿದ್ದೆ ತೂಗುವ ಸಮಯ ಎಂದು ಈಗಾಗಲೇ ಕುಚೋದ್ಯಕ್ಕೆ ಒಳಗಾಗಿದೆ. ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣ ನಿದ್ದೆ ತೂಗುವವರನ್ನು ಬಡಿದೆಚ್ಚರಿಸುವಂತಿರಬೇಕು. ಹಾಗಾಗಬೇಕಾದಲ್ಲಿ, ಭಾಷಣ ವಾಸ್ತವಕ್ಕೆ ಹತ್ತಿರವಾಗಿರಬೇಕು. ಅದು ಕನ್ನಡದ ವರ್ತಮಾನದ ಸವಾಲುಗಳಿಗೆ ಮುಖಾಮುಖಿಯಾಗಬೇಕು ಮತ್ತು ಅವರು ಮಂಡಿಸುವ ವಿಷಯಗಳು ತೀವ್ರ ಚರ್ಚೆಗೆ ಒಳಗಾಗಬೇಕು. ಅದರ ಪರ, ವಿರುದ್ಧ ಧ್ವನಿಗಳು ಏಳಬೇಕು. ಅಂದರೆ ನಿದ್ದೆ ತೂಗುವ ಸಭಿಕರು ಒಮ್ಮೆಲೇ ಎಚ್ಚೆತ್ತು ಭಾಷಣ ಎತ್ತಿದ ಪ್ರಶ್ನೆಗಳಿಗೆ ಸ್ಪಂದಿಸುವಂತಾಗಬೇಕು. ಈ ನಿಟ್ಟಿನಲ್ಲಿ ಹೇಳುವುದಾದರೆ, ಈ ಬಾರಿಯ ಸಮ್ಮೇಳನಾಧ್ಯಕ್ಷರ ಭಾಷಣ, ನಿದ್ದೆ ತೂಗುತ್ತಿದ್ದ ಕನ್ನಡ ಸಾಹಿತ್ಯಾಭಿಮಾನಿಗಳನ್ನು ತಟ್ಟಿ ಎಚ್ಚರಿಸಿದೆ. ಅದಕ್ಕಾಗಿ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲರನ್ನು ಅಭಿನಂದಿಸಬೇಕು.

ವಿಪರ್ಯಾಸವೆಂದರೆ, ಇಂದು ಕೆಲವರು ಚಂದ್ರಶೇಖರ ಪಾಟೀಲರ ಭಾಷಣವನ್ನು ತಮ್ಮ ಮೂಗಿನ ನೇರಕ್ಕೆ ತಿರುಚಿ, ಋಣಾತ್ಮಕವಾದ ರೀತಿಯಲ್ಲಿ ಚರ್ಚಿಸುತ್ತಿದ್ದಾರೆ. ಚಂದ್ರಶೇಖರ ಪಾಟೀಲರು ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯವನ್ನು ತಂದಿದ್ದಾರೆ ಎನ್ನುವುದು ಇವರ ಆರೋಪ. ಇನ್ನು ಹಲವರು, ಅವರ ಮಾತುಗಳನ್ನೇ ತಿರುಚಿ, ಚಂದ್ರಶೇಖರ ಪಾಟೀಲರು ‘ಕಾಂಗ್ರೆಸ್‌ಗೆ ಮತ ನೀಡಲು ಕರೆ ನೀಡಿದ್ದಾರೆ’ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ.ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಮಾತನಾಡುವುದು ತಪ್ಪು ನಿಜ. ಆದರೆ ಕನ್ನಡದ ಹಿತಾಸಕ್ತಿಯ ಕುರಿತಂತೆ ಮಾತನಾಡುವುದೂ ತಪ್ಪಾಗುತ್ತದೆಯೇ? ಇಂದು ಕನ್ನಡದ ಹಿತಾಸಕ್ತಿಯನ್ನು ಕಾಪಾಡಬೇಕಾದರೆ ಕನ್ನಡತನವೆನ್ನುವುದು ರಾಜಕೀಯ ಶಕ್ತಿಯಾಗಿ ಹೊರಬರಬೇಕು ಎಂದು ಸಮ್ಮೇಳನಾಧ್ಯಕ್ಷರು ಮಾತನಾಡಿದರೆ ಅದು ಯಾವ ರೀತಿಯಲ್ಲಿ ತಪ್ಪಾಗುತ್ತದೆ? ಇಂದು ಕನ್ನಡದ ಹಿತಾಸಕ್ತಿ ರಾಜಕೀಯದೊಂದಿಗೆ ನೇರ ಸಂಬಂಧವನ್ನು ಹೊಂದಿದೆ.

ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಉಳಿಯಬೇಕಾದರೆ ಕನ್ನಡ ಹಿತಾಸಕ್ತಿಯ ಬಗ್ಗೆ ಕಾಳಜಿಯುಳ್ಳ ಸರಕಾರ ಅಸ್ತಿತ್ವದಲ್ಲಿರಬೇಕು. ದಿಲ್ಲಿಯ ದೊರೆಗಳು ಕನ್ನಡದ ಮೇಲೆ ಹಿಂದಿಯನ್ನು ಹೇರದಂತೆ ತಡೆಯಬೇಕಾದರೂ ಕನ್ನಡ ರಾಜಕೀಯ ಶಕ್ತಿಯಾಗಿ ರೂಪುಗೊಳಬೇಕಾಗುತ್ತದೆ. ಕಾವೇರಿ, ಕೃಷ್ಣಾ , ಮಹಾದಾಯಿ ಮೊದಲಾದ ಕರ್ನಾಟಕಕ್ಕೆ ಸಂಬಂಧಿಸಿದ ನೆಲ, ಜಲ ಸಮಸ್ಯೆಗಳಿಗೆ ರಾಜ್ಯದ ಪರವಾಗಿ ತೀರ್ಪು ಬರಬೇಕಾದರೂ ಕೇಂದ್ರವನ್ನು ನಡುಗಿಸುವ ರಾಜಕೀಯ ಶಕ್ತಿ ಕರ್ನಾಟಕಕ್ಕಿರಬೇಕಾಗುತ್ತದೆ. ಹೀಗೆ ಒಟ್ಟು ಕನ್ನಡ, ಕರ್ನಾಟಕದ ಹಿತಾಸಕ್ತಿಯ ಅಳಿವು ಉಳಿವು ರಾಜಕೀಯ ಇಚ್ಛಾಶಕ್ತಿಯ ಮೇಲೆಯೇ ನಿಂತಿದೆ ಎನ್ನುವಾಗ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರು ರಾಜಕೀಯವನ್ನು ಮಾತನಾಡಿದರೆ ಅದರಲ್ಲಿ ತಪ್ಪೇನಿದೆ?

ಇಷ್ಟಕ್ಕೂ ಚಂದ್ರಶೇಖರ ಪಾಟೀಲರು ಮಾತನಾಡಿರುವುದು ಸ್ಪಷ್ಟವಾಗಿದೆ. ಪ್ರಾದೇಶಿಕ ಪಕ್ಷಗಳಷ್ಟೇ ಕೇಂದ್ರದ ದೊಡ್ಡಣ್ಣ ಮನಸ್ಥಿತಿಗೆ ಲಗಾಮು ಹಾಕಲು ಸಾಧ್ಯ. ಈ ಕಾರಣದಿಂದಲೇ, ಕೇಂದ್ರ ಸರಕಾರ ತಮಿಳುನಾಡು, ಆಂಧ್ರ, ಪಶ್ಚಿಮಬಂಗಾಳದಂತಹ ರಾಜ್ಯಗಳಿಗೆ ಹೆದರುವುದು ಮತ್ತು ಕರ್ನಾಟಕಕ್ಕೆ ಕೇಂದ್ರದಿಂದ ಪದೇ ಪದೇ ಅನ್ಯಾಯವಾಗುತ್ತಿರುವುದು ಎಂದು ಭಾಷಣದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ. ಸದ್ಯಕ್ಕೆ ಪ್ರಾದೇಶಿಕ ಪಕ್ಷ ಕಟ್ಟುವುದು ಸಾಧ್ಯವಿಲ್ಲ, ಆದುದರಿಂದ ಕನ್ನಡದ ಹಿತಾಸಕ್ತಿಯನ್ನು ಕೇಂದ್ರದ ಮುಂದಿಡಬಲ್ಲ, ಕನ್ನಡ ಭಾಷೆಯನ್ನು ಅಜೆಂಡಾ ಆಗಿಟ್ಟುಕೊಂಡಿರುವ ಜಾತ್ಯತೀತ ಪಕ್ಷಕ್ಕೆ ಮತ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಚಂದ್ರಶೇಖರ ಪಾಟೀಲರು ಯಾವುದೇ ಒಂದು ನಿರ್ದಿಷ್ಟ ಪಕ್ಷಕ್ಕೆ ಮತ ನೀಡಿ ಎಂದು ಹೇಳಿಲ್ಲ. ಆದರೆ ಬಿಜೆಪಿ ಮತ್ತು ಸಂಘಪರಿವಾರ ಈ ಮಾತಿನ ವಿರುದ್ಧ ಹುಯಿಲೆಬ್ಬಿಸಿವೆ. ಈ ಮೂಲಕ ಅವರೇನು ಹೇಳುವುದಕ್ಕೆ ಹೊರಟಿದ್ದಾರೆ? ಬಿಜೆಪಿಯು ಕರ್ನಾಟಕದ ಹಿತಾಸಕ್ತಿಯನ್ನು ಕಾಯುವಂತಹ ಅಜೆಂಡಾವನ್ನು ಹೊಂದಿಲ್ಲ ಎನ್ನುವುದನ್ನು ಪರೋಕ್ಷವಾಗಿ ಬಿಜೆಪಿಯೇ ಒಪ್ಪಿಕೊಂಡಂತೆ ಆಗಿಲ್ಲವೇ? ಜೊತೆಗೆ ತನ್ನನ್ನು ತಾನೇ ಕೋಮುವಾದಿ ಪಕ್ಷ ಎಂದು ಬಿಜೆಪಿ ಕರೆದುಕೊಂಡಂತಾಗಲಿಲ್ಲವೇ? ಬಿಜೆಪಿ ಚಂಪಾ ಅವರ ಕರೆಗೆ ಸ್ಪಂದಿಸಿ, ಕನ್ನಡ ಹಿತಾಸಕ್ತಿಯ ಅಜೆಂಡಾವನ್ನು ಪಕ್ಷದೊಳಗೆ ಸೇರ್ಪಡೆಗೊಳಿಸಬೇಕು ಮತ್ತು ತಾನು ಜಾತ್ಯತೀತ ನೆಲೆಯಲ್ಲಿ ಮತ ಯಾಚಿಸಬೇಕು.

ಆಗ ಸಕಲ ಕನ್ನಡಿಗರು ಬಿಜೆಪಿಗೇ ಮತ ಹಾಕಲಿದ್ದಾರೆ. ಬದಲಿಗೆ, ಚಂಪಾ ಕಾಂಗ್ರೆಸ್‌ಗೆ ಮತ ನೀಡಲು ಕರೆ ನೀಡಿದ್ದಾರೆ ಎಂದು ಹೇಳುವ ಮೂಲಕ, ಅವರು ಹೇಳಿದ ಎರಡು ಹೆಗ್ಗಳಿಕೆಗಳನ್ನೂ ಸ್ವತಃ ಬಿಜೆಪಿಯೇ ಕಾಂಗ್ರೆಸ್ ಮಡಿಲಿಗೆ ಹಾಕಿದೆ. ಇಂದು ಸಾಹಿತ್ಯ ಸಮ್ಮೇಳನ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಬೇಕಾದರೆ, ಇಲ್ಲಿ ಮಂಡನೆಯಾಗುವ ನಿರ್ಣಯಗಳು ಜಾರಿಯಾಗಬೇಕಾದರೆ ಕನ್ನಡದ ಹಿತಾಸಕ್ತಿ ಉಳ್ಳ ಪಕ್ಷ ಅಧಿಕಾರಕ್ಕೆ ಬರುವುದು ಅತ್ಯಗತ್ಯವಾಗಿದೆ. ಕನಿಷ್ಠ ವಿವಿಧ ರಾಷ್ಟ್ರೀಯ ಪಕ್ಷಗಳ ಪ್ರತಿನಿಧಿಗಳಾದರೂ ಕನ್ನಡದ ಹೆಸರಿನಲ್ಲಿ ಮತ ಯಾಚನೆ ಮಾಡುವಂತಾಗಬೇಕು. ಬಹುಶಃ ರಾಜ್ಯದ ಬಿಜೆಪಿಯ ನಾಯಕರಿಗೆ ಕನ್ನಡ ಎನ್ನುವ ಪದವೇ ಗಂಟಲಿನ ಮುಳ್ಳಾಗಿ ಬಿಟ್ಟಿದೆ. ಯಾಕೆಂದರೆ ಬಿಜೆಪಿ ಮತ್ತು ಆರೆಸ್ಸೆಸ್ ರಾಷ್ಟ್ರಮಟ್ಟದಲ್ಲಿ ಹಿಂದಿ ಹೇರಿಕೆಯ ಅಭಿಯಾನದಲ್ಲಿ ತೊಡಗಿವೆ. ಹಿಂದಿಯ ವಿರುದ್ಧ ಮಾತನಾಡಿದರೆ ಪಕ್ಷದ ವರಿಷ್ಠರ ವಿರುದ್ಧ ಮಾತನಾಡಿದಂತೆ.

ಹಾಗೆಂದು, ಹಿಂದಿ ಹೇರಿಕೆಯ ಪರವಾಗಿ ಮಾತನಾಡಿದರೆ ಕನ್ನಡ ಭಾಷೆಯ ವಿರುದ್ಧ ಮಾತನಾಡಿದಂತೆ. ಇದು ಕೇವಲ ಹಿಂದಿ ಹೇರಿಕೆಗಷ್ಟೇ ಸೀಮಿತವಾಗಿಲ್ಲ. ಕನ್ನಡ ಮಾಧ್ಯಮ ಅನುಷ್ಠಾನ, ಮಹಾದಾಯಿ, ಕಾವೇರಿ ಮೊದಲಾದ ವಿಷಯಗಳಲ್ಲಿ ಬಿಜೆಪಿ ಸಂಸದರು ದ್ವಂದ್ವ ನೀತಿ ಅನುಸರಿಸುತ್ತಲೇ ಬಂದಿದ್ದಾರೆ. ಆದುದರಿಂದಲೇ ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಮಾತನಾಡುವುದು ಇವರಿಗೆ ಇಷ್ಟವಿಲ್ಲ. ಕನ್ನಡತನ ರಾಜಕೀಯ ಅಜೆಂಡಾ ಆಗುವುದು ಇವರಿಗೆ ಬೇಡ. ಚಂಪಾ ಈ ಬಗ್ಗೆ ಮಾತನಾಡಿದಾಗ ಬಿಜೆಪಿಯ ನಾಯಕರು ಕುಂಬಳಕಾಯಿ ಕದ್ದವರಂತೆ ಹೆಗಲು ಮುಟ್ಟಿ ನೋಡಿಕೊಂಡದ್ದು ಇದೇ ಕಾರಣಕ್ಕೆ. ಇಂದು ‘ಧರ್ಮ ಸಂಸದ್’ ಎಂಬ ಹೆಸರಿನಲ್ಲಿ ರಾಷ್ಟ್ರಮಟ್ಟದ ಧಾರ್ಮಿಕ ಸಮಾವೇಶ ಆಯೋಜಿಸಿ, ಲೌಕಿಕ ವಿಷಯಗಳ ಬಗ್ಗೆ ಮೋಹ ಇಲ್ಲದ ಸನ್ಯಾಸಿಗಳೇ ಯಾವುದೇ ನಾಚಿಕೆಯಿಲ್ಲದೆ ರಾಜಕೀಯ ಮಾತನಾಡುತ್ತಾರೆ. ಪೇಜಾವರ ಶ್ರೀಗಳು ಸಂವಿಧಾನ ಬದಲಾಗಬೇಕು ಎಂದು ಹೇಳಿಕೆ ನೀಡಿದರೆ, ಇನ್ನೊಬ್ಬ ಸ್ವಾಮೀಜಿಗಳು ಮೀಸಲಾತಿ ಇಲ್ಲವಾಗಬೇಕು ಎಂದು ಗರ್ಜಿಸುತ್ತಾರೆ.

ಧಾರ್ಮಿಕ ಸಂಸದ್‌ನಲ್ಲಿ ಸನ್ಯಾಸಿಗಳೇ ಕೆಟ್ಟ ರಾಜಕೀಯ ಪದಗಳನ್ನು ಬಳಸುತ್ತಿರುವಾಗ, ಸಮಾಜದ ಆಗುಹೋಗುಗಳೊಂದಿಗೆ, ವರ್ತಮಾನದ ಒಳಿತು ಕೆಡುಕಿನೊಂದಿಗೆ ನೇರ ಸಂಬಂಧವನ್ನು ಹೊಂದಿರುವ ಬರಹಗಾರ, ಸಾಹಿತಿ ರಾಜಕೀಯ ಮಾತನಾಡಬಾರದು ಎಂದು ಹೇಳುವುದು ರಾಜಕಾರಣಿಗಳ ಸಮಯ ಸಾಧಕತನವಾಗುತ್ತದೆ. ಚಂದ್ರಶೇಖರ ಪಾಟೀಲರು ನೀಡಿದ ಕರೆಯನ್ನು ಗಂಭೀರವಾಗಿ ಸ್ವೀಕರಿಸಬೇಕು. ಕನ್ನಡ ವಿರೋಧಿಗಳಿಗೆ, ಕರ್ನಾಟಕದ ಹಿತಾಸಕ್ತಿಗಳಿಗೆ ಸ್ಪಂದಿಸದವರಿಗೆ ಕನ್ನಡಿಗರ ಮತಗಳು ಸಿಗುವುದಿಲ್ಲ ಎನ್ನುವುದು ರಾಜಕಾರಣಿಗಳಿಗೆ ಮನವರಿಕೆಯಾದ ದಿನ, ಅವರು ಕನ್ನಡಕ್ಕಾಗಿ ದಿಲ್ಲಿಯಲ್ಲಿ ಧ್ವನಿಯೆತ್ತಲಾರಂಭಿಸುತ್ತಾರೆ. ಕರ್ನಾಟಕದ ಮನವಿಗಳಿಗೆ ಕೇಂದ್ರ ಸರಕಾರ ಅತ್ಯಾಸಕ್ತಿಯಿಂದ ಕಿವಿಯಾಗಲು ಮುಂದಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News