ಇದು ದಾಂತೆವಾಡಾದ ಕಡಕನಾಥ್ ಕೋಳಿ,ರುಚಿಯೊಂದಿಗೆ ಬೆಲೆಯೂ ಖಡಕ್ !

Update: 2017-11-27 10:01 GMT

ಬಡತನ ತಾಂಡವವಾಡುತ್ತಿರುವ, ನಕ್ಸಲ್ ಪೀಡಿತ ಪ್ರದೇಶವಾಗಿರುವ ಛತ್ತೀಸ್‌ಗಡದ ಕಡಕನಾಥ್ ಕೋಳಿ ಈಗ ಕರ್ನಾಟಕದಲ್ಲಿಯೂ ಸದ್ದು ಮಾಡುತ್ತಿದೆ. ಹ್ಯಾಚರಿಗಳಲ್ಲಿ ಕಡಕನಾಥ್ ಜಾತಿಯ ಕೋಳಿಗಳನ್ನೂ ಸಾಕುತ್ತಿದ್ದು, ಒಂದು ದಿನದ ಮರಿಗಳನ್ನು ತಲಾ 70-80 ರೂ.ಗಳಿಗೆ ಮಾರಲಾಗುತ್ತಿದೆ. ಇಷ್ಟು ದುಡ್ಡಿನಲ್ಲಿ ಅರ್ಧ ಕೆಜಿ ಬ್ರಾಯ್ಲರ್ ಕೋಳಿಯ ಮಾಂಸವೇ ಸಿಗುತ್ತಿರುವಾಗ ಹುಟ್ಟಿ ಒಂದು ದಿನವಷ್ಟೇ ಆಗಿರುವ ಕಡಕನಾತ್ ಮರಿಗಳಿಗೆ ಈ ಪಾಟಿ ಬೆಲೆಯಿರುವುದು ಅಚ್ಚರಿಯನ್ನು ಮೂಡಿಸುತ್ತಿದೆ. ಬೆಂಗಳೂರಿ ನಂತಹ ನಗರಗಳಲ್ಲಿಯ ಹೋಟೆಲ್‌ಗಳಲ್ಲಿ ಕಡಕನಾಥ್ ಕೋಳಿಯ ಮಾಂಸದಿಂದ ತಯಾರಿಸಿದ ಖಾದ್ಯಗಳು ಜನಪ್ರಿಯಗೊಳ್ಳುತ್ತಿವೆ.

ಅಂದಹಾಗೆ ಕಪ್ಪುಬಣ್ಣದ ಈ ಕಡಕನಾಥ್ ಕೋಳಿಗಳ ಮಾಂಸವೂ ಕಪ್ಪುಬಣ್ಣದ್ದಾಗಿದೆ. ದಾಂತೆವಾಡಾದಲ್ಲಿ ಸ್ಥಳೀಯವಾಗಿ ‘ಕಾಲಿಮಾಸಿ’ ಎಂದು ಕರೆಯಲಾಗುವ ಕಡಕನಾಥ್ ಅತ್ಯುತ್ಕೃಷ್ಟ ತಳಿಯೆಂದು ಪರಿಗಣಿತವಾಗಿದ್ದು, ಅದರ ಮಾಂಸಕ್ಕೆ ಸಾಮಾನ್ಯ ಬ್ರಾಯ್ಲರ್ ಕೋಳಿಯ 3-4 ಪಟ್ಟು ಬೆಲೆಯಿದೆ. ದಾಂತೆವಾಡಾದಲ್ಲಿ ಈ ಕಡಕನಾಥ್ ಕೋಳಿಗಳ ಉದ್ಯಮ ಹೇಗಿದೆ ನೋಡೋಣ ಬನ್ನಿ.

ದಾಂತೆವಾಡಾ ಜಿಲ್ಲೆಯ ಪಲ್ನಾರ್ ಗ್ರಾಮದ ನಿವಾಸಿ ಉದಯಚಂದ್ ಸಿನ್ಹಾ ತನ್ನ ಫಾರ್ಮ್‌ನಲ್ಲಿ 333 ಕಡಕನಾಥ್ ಕೋಳಿಗಳನ್ನು ಸಾಕುತ್ತಿದ್ದಾರೆ. ಈ ಪೈಕಿ ಕನಿಷ್ಠ 300 ಕೋಳಿಗಳು ಬದುಕುತ್ತವೆ ಎಂಬ ವಿಶ್ವಾಸವಿರುವ ಅವರ ಲೆಕ್ಕಾಚಾರದಂತೆ ಇನ್ನಾರು ತಿಂಗಳಿಗೆ ಅವರಿಗೆ ಕನಿಷ್ಠ 2ರಿಂದ 2.5 ಲ.ರೂ.ಲಾಭವಿದೆಯಂತೆ.

ವಾಸ್ತವದಲ್ಲಿ ಕಡಕನಾಥ್ ಕೋಳಿ ಮೂಲತಃ ದಾಂತೆವಾಡಾದ್ದಲ್ಲ. ಅದು ನೆರೆಯ ಮಧ್ಯಪ್ರದೇಶದ ಜಬುವಾ ಮತ್ತು ಧಾರ್ ಜಿಲ್ಲೆಗಳಿಂದ ಬಂದಿದ್ದು, ದೇಶದ ಇತರ ಭಾಗಗಳಲ್ಲಿ ದಾಂತೆವಾಡಾದ ಕೋಳಿ ಎಂದೇ ಪ್ರಚಾರ ಪಡೆಯುತ್ತಿದೆ. ಕಡಕನಾಥ್ ಕೋಳಿಗಾಗಿ ಜಿಯಾಗ್ರಾಫಿಕಲ್ ಇಂಡಿಕೇಶನ್(ಜಿಐ) ಪಡೆಯಲು ದಾಂತೆವಾಡಾ ಜಿಲ್ಲಾಡಳಿತವು ಕಳೆದ ತಿಂಗಳು ಅರ್ಜಿಯನ್ನು ಗುಜರಾಯಿಸಿದೆ.

 ಕಡಕನಾಥ್ ಕೋಳಿಯ ತಳಿಯನ್ನು ದೇಶದ ಇನ್ನಿತರ ನಗರಗಳಲ್ಲಿ ಜನಪ್ರಿಯಗೊಳಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ ಸಾರಿಗೆ ಸಮಸ್ಯೆ ಅವರನ್ನು ಕಾಡುತ್ತಿದೆ. ದಾಂತೆವಾಡಾಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿರುವ ರಾಜಧಾನಿ ರಾಯಪುರ 385 ಕಿ.ಮೀ.ದೂರದಲ್ಲಿದೆ, ರೈಲ್ವೆ ಸಂಪರ್ಕ ವ್ಯವಸ್ಥೆಯೂ ಉತ್ತಮವಾಗಿಲ್ಲ. ಹೀಗಿದ್ದರೂ ಮುಂಬೈ, ಪುಣೆ ಮತ್ತು ವೈಜಾಗ್‌ನಂತಹ ನಗರಗಳಲ್ಲಿ ಕಡಕನಾಥ್ ಕೋಳಿಗಳ ಮಾರುಕಟ್ಟೆ ಸೃಷ್ಟಿಸಲು ಅವರು ಉದ್ದೇಶಿಸಿದ್ದಾರೆ.

ಕರ್ನಾಟಕದ ಬೆಂಗಳೂರು ,ಬೆಳಗಾವಿಯಂತಹ ನಗರಗಳಲ್ಲಿ ಕಡಕನಾಥ್ ಪೌಲ್ಟ್ರಿಗಳಿವೆ. ಇಲ್ಲಿ 3-4 ದಿನಗಳ ಮರಿಗಳು 70-80 ರೂ.ಗೆ ಮತ್ತು ಬೆಳೆದ ಕೋಳಿಗಳು ಪ್ರತಿ ಕೆಜಿಗೆ 300-400 ರೂ.ಗಳಿಗೆ ಮಾರಾಟವಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News