ಕಾರ್ಮಿಕ ಸಂಘಟನೆಗಳ ಹೋರಾಟ ತಂತ್ರಗಳು ಬದಲಾಗಬೇಕಾಗಿದೆ

Update: 2017-11-27 18:38 GMT

ಕಾರ್ಮಿಕ ಸಂಘಟನೆಗಳ ಮುಂದೆ ಕಾರ್ಮಿಕರ ಹಿತಾಸಕ್ತಿಗಳನ್ನು ಸಾರ್ವಜನಿಕರ ಹಿತಾಸಕ್ತಿಗಳನ್ನಾಗಿ ಮಾಡುವ ಬೆಟ್ಟದಂಥ ಕರ್ತವ್ಯವಿದೆ. ಹೀಗಾಗಿ ಆ ಗುರಿಯನ್ನು ಮುಟ್ಟಲು ಪ್ರಗತಿಪರ ರಾಜಕೀಯ ಮತ್ತು ಸಾಮಾಜಿಕ ಚಳವಳಿಗಳನ್ನು ಒಳಗೊಳ್ಳುವುದು ಒಂದು ದಾರಿಯಾಗಿದೆ.

ಭಾರತದಲ್ಲಿ ಮೊತ್ತ ಮೊದಲ ಕಾರ್ಮಿಕ ಸಂಘಟನೆ ಹುಟ್ಟಿ ಭರ್ತಿ ನೂರು ವರ್ಷಗಳಾಗುತ್ತಿರುವಾಗ, ಮತ್ತು ಕಾರ್ಮಿಕ ವರ್ಗವು ಸಂಘಟಿಸಿಕೊಳ್ಳುವ ಮತ್ತು ಮಾಲಕ ವರ್ಗದ ಜೊತೆ ತನ್ನ ಹಕ್ಕುಗಳಿಗಾಗಿ ಸಾಮೂಹಿಕ ಅನುಸಂಧಾನ ನಡೆಸುವ ಹಕ್ಕುಗಳನ್ನು ಪಡೆದುಕೊಂಡು ಹಲವು ದಶಕಗಳಾಗುತ್ತಿರುವ ಸಂದರ್ಭದಲ್ಲಿ ಕೇಂದ್ರದ ಎನ್‌ಡಿಎ ಸರಕಾರವು ಕಾಲಚಕ್ರವನ್ನು ಹಿಂದಕ್ಕೆಳೆಯುವ ಪ್ರಯತ್ನದಲ್ಲಿ ತೊಡಗಿದೆ. ಭಾರತದಲ್ಲಿ ಹೆಚ್ಚಿನ ಮಟ್ಟದಲ್ಲಿ ಬಂಡವಾಳ ಹೂಡಿಕೆ ಆಗದಿರಲು ಮತ್ತು ಹೆಚ್ಚಿನ ಮಟ್ಟದ ಆರ್ಥಿಕ ಪ್ರಗತಿ ಕಾಣದಿರಲು ಕಾರ್ಮಿಕಪರ ಕಾನೂನುಗಳೇ ಕಾರಣ ಎಂಬ ಮಿಥ್ಯೆಯನ್ನು ಹರಡಲು ಮಾಧ್ಯಮಗಳಿಗೆ ಹಾಗೂ ಉದ್ಯಮಪತಿಗಳಿಗೆ ಹೇರಳವಾದ ಅವಕಾಶಗಳನ್ನು ಒದಗಿಸಿಕೊಟ್ಟ ನಂತರ ಇದೀಗ ಸರಕಾರವೇ ಕಾರ್ಮಿಕ ಕಾನೂನುಗಳಲ್ಲಿ ಸುಧಾರಣೆಗಳನ್ನು ತರಲು ಮುನ್ನುಗ್ಗುತ್ತಿದೆ. ಉದ್ಯಮ ನಡೆಸುವುದನ್ನು ಸರಾಗಗೊಳಿಸುವ ಹೆಸರಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಕಾರ್ಮಿಕ ಕಾನೂನುಗಳನ್ನು ನಾಲ್ಕು ಮುಖ್ಯ ಕಾರ್ಮಿಕ ಸಂಹಿತೆಯೊಳಗೆ ತರಲು ನಡೆಸಿರುವ ಪ್ರಯತ್ನಗಳೂ ಸಹ ಕಾರ್ಮಿಕರ ಸಂಘಟಿತ ಶಕ್ತಿಯ ಬೆನ್ನುಮುರಿಯುವ ಪ್ರಯತ್ನವೇ ಆಗಿದೆ. ಹೀಗಿರುವಾಗ ಕಾರ್ಮಿಕ ಸಂಘಟನೆಗಳು ತಮ್ಮ ವ್ಯೆಹತಂತ್ರಗಳ ಬಗ್ಗೆ ಪುನರಾಲೋಚನೆ ಮಾಡುವ ಸಂದರ್ಭ ಬಂದಿಲ್ಲವೇ? ದೇಶದ ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಒಟ್ಟು ಸೇರಿ ನವೆಂಬರ್ 9ರಿಂದ ಮೂರು ದಿನಗಳ ಕಾಲ ದಿಲ್ಲಿಯಲ್ಲಿ ನಡೆಸಿದ ಹೋರಾಟವು ಅಭೂತಪೂರ್ವ ಬೆಂಬಲವನ್ನು ಪಡೆದುಕೊಂಡಿದ್ದು ನಿಜವಾದರೂ ಸರಕಾರ ಮತ್ತು ಉದ್ಯಮಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುವಲ್ಲಿ ಎಷ್ಟರಮಟ್ಟಿಗೆ ಸಫಲವಾಯಿತು? ಈ ಹಿಂದೆ ಸಂಘಟಿಸಲಾಗಿದ್ದ ಪ್ರತಿಭಟನೆಗಳಿಗೂ ಅದ್ಬುತ ಪ್ರತಿಕ್ರಿಯೆ ಬಂದಿತ್ತಾದರೂ ಮಾಧ್ಯಮಗಳಿಗೆ ಅದು ದೊಡ್ಡ ಸುದ್ದಿಯಾಗಲೇ ಇಲ್ಲ. ಉದ್ಯಮ ಮತ್ತು ಸರಕಾರವು ಅದನ್ನು ಕೇವಲ ಒಂದು ಪಾಕ್ಷಿಕ ಬೆಂಬಲವೆಂದು ಬಣ್ಣಿಸಿ ಕಾರ್ಮಿಕ ಕಾನೂನುಗಳ ಸುಧಾರಣೆಯ ಅಜೆಂಡಾವನ್ನು ಮುಂದುವರಿಸಿದವು.

ಕುತೂಹಲಕಾರಿ ವಿಷಯವೆಂದರೆ, ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟದಿಂದಾಗಿ ಕೇಂದ್ರ ಸರಕಾರಕ್ಕೆ ರಾಷ್ಟ್ರಮಟ್ಟದಲ್ಲಿ ಕಾರ್ಮಿಕ ವಿರೋಧಿ ಸುಧಾರಣೆಗಳನ್ನು ಜಾರಿಗೆ ತರಲು ಕಷ್ಟವಾದಾಗ ಅದೇ ಕಾನೂನುಗಳನ್ನು ರಾಜ್ಯ ಸರಕಾರಗಳು ಇನ್ನಷ್ಟು ಉತ್ಸುಕವಾಗಿ ಜಾರಿಗೆತರಲು ಪ್ರೋತ್ಸಾಹಿಸಿತು. ತಮ್ಮ ತಮ್ಮ ರಾಜ್ಯಗಳಿಗೆ ವಿದೇಶಿ ಹಣಹೂಡಿಕೆಯನ್ನು ಆಕರ್ಷಿಸಲು ರಾಜ್ಯಗಳು ಪರಸ್ಪರ ಸ್ಪರ್ಧಿಸುವುದನ್ನು, ಮೇಲಿನ ತಂತ್ರವನ್ನು ಬೆಂಬಲಿಸುವವರು ಸ್ಪರ್ಧಾತ್ಮಕ ಒಕ್ಕೂಟವಾದವೆಂದು ಬಣ್ಣಿಸುತ್ತಾರೆ. ಭಾರತೀಯ ಜನತಾ ಪಕ್ಷದ ಸರಕಾರಗಳೇ ಆಡಳಿತದಲ್ಲಿರುವ ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಮತ್ತು ಅದರ ಜೊತೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಉದ್ಯಮಿಗಳ ಹಿತಾಸಕ್ತಿಯನ್ನು ಕಾಯುವ ರೀತಿಯಲ್ಲಿ 1948ರ ಕಾರ್ಖಾನೆ ಕಾಯ್ದೆ, 1947ರ ಕೈಗಾರಿಕಾ ತಗಾದೆ ಕಾಯ್ದೆ, ಮತ್ತು 1961ರ ಅಪ್ರೆಂಟಿಸ್ ಕಾಯ್ದೆಗಳನ್ನು ದುರ್ಬಲಗೊಳಿಸುವಲ್ಲಿ ಮುಂಚೂಣಿಯಲ್ಲಿವೆ. ನಿಯಂತ್ರಿತ ಉದ್ಯಮ ವಲಯಗಳು ಹಾಗೂ ವಿಶಾಲವಾದ ಕಾರ್ಮಿಕ ಸಂಬಂಧಿ ನೀತಿ ನಿರೂಪಣೆಗಳ ಮೇಲೆ ಕೇಂದ್ರದ ಹಿಡಿತ ಹೆಚ್ಚಿದ್ದರೂ ರಾಜ್ಯ ಸರಕಾರಗಳು ತಮ್ಮ ತಮ್ಮ ರಾಜ್ಯಗಳಿಗೆ ಬೇಕಾದ ಉದ್ಯಮ ಸ್ನೇಹಿ ವಾತಾವರಣವನ್ನು ರೂಪಿಸಿಕೊಳ್ಳಬಹುದಾಗಿದೆ.
ಮಹಾರಾಷ್ಟ್ರ ಸರಕಾರವು ಕೈಗಾರಿಕಾ ತಗಾದೆ ಕಾಯ್ದೆಗೆ ತರಬೇಕೆಂದಿರುವ ತಿದ್ದುಪಡಿಯು 300 ಕಾರ್ಮಿಕರಿಗಿಂತ ಕಡಿಮೆ ಇರುವ ಉದ್ಯಮಗಳಿಗೆ ಕೈಗಾರಿಕಾ ತಗಾದೆ ಕಾಯ್ದೆಯಿಂದ ವಿನಾಯಿತಿ ಕೊಡುವಂಥ ಪ್ರಸ್ತಾಪವನ್ನು ಹೊಂದಿದೆ. (ಈಗಾಗಲೇ ರಾಜಸ್ಥಾನ ಮತ್ತು ಹರ್ಯಾಣ ರಾಜ್ಯಗಳು ಇಂತಹ ತಿದ್ದುಪಡಿಗಳನ್ನು ಜಾರಿ ಮಾಡಿಯಾಗಿದೆ). ಆದರೆ ಮಹಾರಾಷ್ಟ್ರ ಸರಕಾರವು ಇತರ ರಾಜ್ಯಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದೆ. 300ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಉದ್ಯಮಗಳು ಕಾರ್ಮಿಕರಿಗೆ 60 ದಿನಗಳ ಮುನ್ನ ನೋಟಿಸನ್ನು ಕೊಟ್ಟು ನಿರಂತರ ಸೇವಾವಧಿಯಲ್ಲಿನ ಪ್ರತಿವರ್ಷಕ್ಕೆ 60 ದಿನಗಳಂತೆ ಪರಿಹಾರವನ್ನು ಕೊಡುವುದಾದಲ್ಲಿ ಅಂಥ ಉದ್ಯಮಗಳು ಸರಕಾರದ ಅನುಮತಿಯ ಅಗತ್ಯವಿಲ್ಲದೆ ತಮ್ಮ ಕಾರ್ಖಾನೆಗಳನ್ನು ಮುಚ್ಚಬಹುದು ಮತ್ತು ಕಾರ್ಮಿಕರನ್ನು ಕಿತ್ತೊಗೆಯಬಹುದೆಂಬ ಪ್ರಸ್ತಾಪವನ್ನು ಅದು ಮುಂದಿಟ್ಟಿದೆ. ಅಷ್ಟು ಮಾತ್ರವಲ್ಲದೆ, 1970ರ ಗುತ್ತಿಗೆ ಕಾರ್ಮಿಕರು (ನಿಯಂತ್ರಣ ಮತ್ತು ನಿರ್ಮೂಲನೆ) ಕಾಯ್ದೆಯನ್ನು 50 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳಿಗೂ ಅನ್ವಯವಾಗುವಂಥ ತಿದ್ದುಪಡಿಗಳನ್ನು ಮಾಡಿದೆ. ಹೀಗಾಗಿ ಕಾರ್ಮಿಕ ಸಂಘಟನೆಗಳು ಇಂದು ಸ್ಥಳೀಯ, ಪ್ರಾದೇಶಿಕ ಮತ್ತು ರಾಜ್ಯಮಟ್ಟದಲ್ಲಿ ಬುಡಮಟ್ಟದ ಸಂಘಟನೆಗಳನ್ನು ಕಟ್ಟುವ ಕಡೆ ಒತ್ತು ಕೊಡುವ ಅಗತ್ಯವಿದೆ. ಮೇಲೆ ಹೇಳಿದ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿರುವುದು ನಿಜವಾ ದರೂ ನಿರಂತರತೆಯನ್ನು ಉಳಿಸಿಕೊಳ್ಳಬಲ್ಲ ಕಾರ್ಮಿಕರ ಸಂಘಟನೆ ಮತ್ತು ಒಟ್ಟುಸೇರಿಸುವಿಕೆ ಸಾಧ್ಯವಾಗುತ್ತಿಲ್ಲ.

1990ರ ನಂತರದಲ್ಲಿ ಬದಲಾಗುತ್ತಿರುವ ಕಾರ್ಮಿಕ ಪರಿಸರದಲ್ಲಿ ಅದು ಅಷ್ಟು ಸುಲಭದ ಕೆಲಸವೂ ಅಲ್ಲ. ದೊಡ್ಡ ಸಂಖ್ಯೆಯ ಕಾರ್ಮಿಕ ಗಣವು ಅಸಂಘಟಿತ ವಲಯಕ್ಕೆ ದೂಡಲ್ಪಟ್ಟಿರುವುದು ಮಾತ್ರವಲ್ಲದೆ ಸಂಘಟಿತ ವಲಯದಲ್ಲಿರುವ ಕಾರ್ಮಿಕರನ್ನೂ ಸಹ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತಿದೆ. ವಿಪರ್ಯಾಸದ ಸಂಗತಿಯೆಂದರೆ ಶಾಶ್ವತ ಸ್ವರೂಪದ ಉದ್ಯೋಗಗಳ ಬದಲಿಗೆ ಈ ರೀತಿ ಗುತ್ತಿಗೆ ಕಾರ್ಮಿಕರನ್ನು ಅತಿ ದೊಡ್ಡ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವುದು ಸರಕಾರಿ ಮತ್ತು ಅರೆ-ಸರಕಾರಿ ಸಂಸ್ಥೆಗಳೇ. ಗುತ್ತಿಗೆ ಆಧಾರದ ಕಾರ್ಮಿಕರನ್ನು ಸಂಘಟಿಸುವುದು ತುಂಬಾ ಪ್ರಯಾಸದ ಕೆಲಸ. ಇದಲ್ಲದೆ ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳು ಮಾಲಕರ ಬಗ್ಗೆ ಕಠಿಣ ವಾಗಿದ್ದು ಕಾರ್ಮಿಕರನ್ನು ಕೊಬ್ಬಿಸುತ್ತದೆ ಎಂಬ ಆರೋಪಗಳಿಗೂ ಕಾರ್ಮಿಕ ಸಂಘಟನೆಗಳು ಸರಿಯಾದ ಉತ್ತರಗಳನ್ನು ಒದಗಿಸಬೇಕಾಗುತ್ತದೆ. ಇಂತಹ ಕಾರ್ಮಿಕ ಕಾನೂನುಗಳಿಂದಾಗಿಯೇ ಭಾರತದ ಉತ್ಪಾದಕ ವಲಯವು ಅಭಿವೃದ್ಧಿ ಹೊಂದುತ್ತಿಲ್ಲವೆಂದು ಕಳೆದ ಹಲವಾರು ವರ್ಷಗಳಿಂದ ಉದ್ಯಮಪತಿಗಳು ವಾದಿಸುತ್ತಾ ಬಂದಿದ್ದಾರೆ. ಆದರೆ ಈ ಕಾರ್ಮಿಕ ಕಾನೂನುಗಳನ್ನು ಯಾರೂ ಸರಿಯಾಗಿ ಪಾಲಿಸುವುದಿಲ್ಲ ಹಾಗೂ ಅವೆಲ್ಲವನ್ನೂ ಹಾಡಹಗಲೇ ಪದಶಃ ಉಲ್ಲಂಘಿಸಲಾಗುತ್ತಲೇ ಬರಲಾಗಿದೆ ಮತ್ತು ಹೆಚ್ಚುತ್ತಿರುವ ಗುತ್ತಿಗೆ ಕಾರ್ಮಿಕ ಪದ್ಧತಿಯಿಂದಾಗಿ ಆ ಕಾನೂನುಗಳು ಬಹುಸಂಖ್ಯಾತ ಕಾರ್ಮಿಕರಿಗೆ ಅನ್ವಯವೇ ಆಗುವುದಿಲ್ಲ ಎಂಬ ಸತ್ಯಗಳನ್ನು ಮಾತ್ರ ಅವರು ಮುಚ್ಚಿಡುತ್ತಾರೆ. ಸಂಘಟಿತ ಕಾರ್ಮಿಕ ಚಳವಳಿಯ ಮುಂದಿರುವ ಅತಿದೊಡ್ಡ ಸವಾಲೆಂದರೆ ಕಾರ್ಮಿಕ ಸಂಘಟನೆಗಳ ಜಂಟಿ ಒಕ್ಕೂಟವನ್ನು ಗಂಭೀರವಾಗಿ ತೆಗೆದುಕೊಂಡು ಅರ್ಥಪೂರ್ಣ ಮಾತುಕತೆ ನಡೆಸುವಂತೆ ಒತ್ತಡ ತರುವುದು. ಆಗ ಮತ್ತೆ ತ್ರಿಪಕ್ಷೀಯ ಮಾತುಕತೆ ಪದ್ಧತಿಗೆ ಜೀವ ಬರುತ್ತದೆ. ಈ ಸಂದರ್ಭದಲ್ಲಿ ಎದುರಿಗೆ ಕಾಣುವ ಉದಾಹರಣೆಯೆಂದರೆ ಸಾರ್ವಜನಿಕ ವಲಯದ ಸಂಸ್ಥೆಗಳ ಮತ್ತು ಬ್ಯಾಂಕುಗಳ ಕಾರ್ಮಿಕ ಸಂಘಟನೆಗಳು. ಅವರು ತಮ್ಮ ಮೇಲೆ ಕಳಪೆ ಗುಣಮಟ್ಟದ ಸೇವಾ ಸಂಸ್ಕೃತಿಯ ಆರೋಪ ಮತ್ತು ಅದರಿಂದಾಗಿ ಅವುಗಳನ್ನು ಖಾಸಗೀಕರಿಸಬೇಕೆಂಬ ದಾಳಿಗಳನ್ನು ಸದಾ ಸರಕಾರ ಮತ್ತು ಮಾಧ್ಯಮಗಳಿಂದ ಎದುರಿಸುತ್ತಾರೆ. ಇಂತಹ ಕಂಪೆನಿಗಳನ್ನು ಪುನಶ್ಚೇತನಗೊಳಿಸುವ ಪ್ಯಾಕೇಜುಗಳು ಜಾರಿಯಾದಾಗ ಕಾರ್ಮಿಕ ಸಂಘಟನೆಗಳು ಅದರಲ್ಲಿ ಭಾಗವಹಿಸುವುದೇ ಇಲ್ಲ. ವಾಸ್ತವವಾಗಿ ಅದನ್ನು ತಮ್ಮ ಹಿತಾಸಕ್ತಿಗೆ ವಿರುದ್ಧವಿರುವ ವಿದ್ಯಮಾನವೆಂದೇ ಭಾವಿಸಲಾಗುತ್ತದೆ. ಉದಾಹರಣೆಗೆ ಸರಕಾರವು ಇತ್ತೀಚೆಗೆ 10 ಸಾರ್ವಜನಿಕ ಬ್ಯಾಂಕುಗಳಿಗೆ ಬಂಡವಾಳ ಮರುಪೂರಣ ಮಾಡುವಾಗ ಆ ಬ್ಯಾಂಕುಗಳ ಉದ್ಯೋಗಿಗಳಿಗೆ ನೀಡಲಾಗುತ್ತಿದ್ದ ಸವಲತ್ತುಗಳನ್ನು ಕಡಿತಗೊಳಿಸಬೇಕೆಂಬ ಶರತ್ತನ್ನು ವಿಧಿಸಲಾ ಗಿತ್ತು. ಬ್ಯಾಂಕ್ ಉದ್ಯೋಗಿಗಳ ಸಂಘಟನೆಯು ಈ ಶರತ್ತನ್ನು ವಿರೋಧಿಸುವುದರ ಜೊತೆಜೊತೆಗೆ ಬ್ಯಾಂಕುಗಳಿಗೆ ಮೋಸ ಮಾಡಿ ಸಾಲ ಮರುಪಾವತಿ ಮಾಡದ ಖಾಸಗಿ ಕಾರ್ಪೊರೇಟ್ ಉದ್ಯಮಪತಿಗಳ ವಿಷಯವನ್ನೂ ಪ್ರಸ್ತಾಪಿಸಿ ಅವರ ಮೇಲೂ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು. ಆದರೆ ಮಾಧ್ಯಮಗಳು ಇದನ್ನು ಅವಾಸ್ತವಿಕ ಮತ್ತು ಸೊಕ್ಕಿನ ನಿಲುವೆಂದು ಹೀಗಳೆದವು.
ಕಾರ್ಮಿಕ ಸಂಘಟನೆಗಳು ಪರಿಗಣಿಸಲೇಬೇಕಾದ ಇನ್ನೆರಡು ಪ್ರಮುಖ ವಿಷಯಗಳೆಂದರೆ (ಇನ್ನೂ ಇಂಥ ಹಲವಾರು ಪ್ರಮುಖ ವಿಷಯಗಳಿವೆ) ಕನಿಷ್ಠ ಕೂಲಿಯು ಜಾರಿಯಾಗದಿರುವುದು ಮತ್ತು ಎಲ್ಲಾ ಉದ್ಯಮಗಳಲ್ಲೂ ರಭಸದಿಂದ ಗುತ್ತಿಗೆ ಕಾರ್ಮಿಕ ಪದ್ಧತಿ ಜಾರಿಗೆ ಬರುತ್ತಿರುವುದು. ಇದು ಮಾಲಕರ ವಿರುದ್ಧದ ಹೋರಾಟದಲ್ಲಿ ಕಾರ್ಮಿಕರ ಸಾಮೂಹಿಕ ಶಕ್ತಿಯನ್ನು ಕಡಿಮೆ ಮಾಡಿವೆ. ಈ ಬಗೆಯ ಕಾರ್ಮಿಕ ವಿರೋಧಿ ಕಾನೂನುಗಳು ಒಂದೆಡೆ ಕಾರ್ಮಿಕರನ್ನು ಕಿತ್ತೊಗೆಯಲು ಮತ್ತು ಕಾರ್ಖಾನೆಗಳು ಬಂದ್ ಆಗಲು ಕಾರಣವಾಗುತ್ತಿದ್ದರೂ ಸಾರಾಂಶದಲ್ಲಿ ಅವು ಪ್ರಜಾತಂತ್ರ ವಿರೋಧಿ ಕ್ರಮಗಳೇ ಆಗಿವೆ. ಕಾರ್ಮಿಕ ಸಂಘಟನೆಗಳ ಮುಂದೆ ಇದನ್ನು ಅಂದರೆ ಕಾರ್ಮಿಕರ ಹಿತಾಸಕ್ತಿಗಳನ್ನು ಸಾರ್ವಜನಿಕರ ಹಿತಾಸಕ್ತಿಗಳನ್ನಾಗಿ ಮಾಡುವ ಬೆಟ್ಟದಂಥ ಕರ್ತವ್ಯವಿದೆ. ಹೀಗಾಗಿ ಆ ಗುರಿಯನ್ನು ಮುಟ್ಟಲು ಪ್ರಗತಿಪರ ರಾಜಕೀಯ ಮತ್ತು ಸಾಮಾಜಿಕ ಚಳವಳಿಗಳನ್ನು ಒಳಗೊಳ್ಳುವುದು ಒಂದು ದಾರಿಯಾಗಿದೆ.
ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News

ಜಗದಗಲ
ಜಗ ದಗಲ