ನ್ಯಾಯ ದೇವಿಯ ಮಡಿಲಲ್ಲಿನ ಅನ್ಯಾಯ!

Update: 2017-11-29 07:26 GMT

ಭಾಗ-1

ಇದೇಕೆ ಹೀಗಾಯಿತು? ಸಮಾನತೆಯ ಆಣೆ ಮಾಡಿ ಕಾನೂನು ಕಲಿತ ಕಾನೂನು ರಕ್ಷಕರೇಕೆ ಮಹಿಳಾ ವಿರೋಧಿ ಮನಸ್ಥಿತಿ ಹೊಂದಿದರು? ಮನುಷ್ಯನ ಮೂಲಸ್ವಭಾವವಾದ ತಾರತಮ್ಯ ಮತ್ತು ಕ್ರೌರ್ಯವನ್ನು ಬದಲಾಯಿಸಲು ಓದು ಮತ್ತು ವೃತ್ತಿ ವಿಫಲವಾಯಿತೇ? ಪುರುಷಾಧಿಕಾರವು ಅಲ್ಲಿರುವ ಮಹಿಳೆಯರ ಉಸಿರುಗಟ್ಟಿಸುತ್ತಿದೆಯೆ ಅಥವಾ ಗಮನಾರ್ಹ ಸಂಖ್ಯೆಯ ಮಹಿಳೆಯರಿಲ್ಲದಿರುವಿಕೆ ಲಿಂಗ ಸೂಕ್ಷ್ಮತೆ ಇಲ್ಲದಂತೆ ಮಾಡಿದೆಯೇ?

ಬಹುಪಾಲು ಮಹಿಳಾಪರ ಸುಧಾರಣೆ-ಯೋಜನೆ- ಕಾನೂನುಗಳನ್ನು ರೂಪಿಸಿದವರು ತಾಯ್ತನದ ಮನಸ್ಸಿನ ಪುರುಷರು. ಆದರೂ ವಿವಿಧ ಹಂತದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಕೊಡುವ ತೀರ್ಪು-ಸಲಹೆಗಳಲ್ಲಿ; ವಕೀಲರ ವಾದ-ಪ್ರತಿವಾದ ಧೋರಣೆಗಳಲ್ಲಿ ಇಣುಕುವ ಗಂಡು ಧೋರಣೆ ಕೆಲವೊಮ್ಮೆ ಚರ್ಚೆಗೆ ಬರುತ್ತದೆ. ತಾರತಮ್ಯ ರಹಿತವಾಗಿ ನ್ಯಾಯಾನ್ಯಾಯ ತೀರ್ಮಾನ ಮಾಡಬೇಕಾದ ನ್ಯಾಯಾಧೀಶರೇ ಪುರುಷ ಪಾರಮ್ಯ ಎತ್ತಿ ಹಿಡಿವಾಗ ಪ್ರಜ್ಞಾವಂತ ಮನಸ್ಸುಗಳು ಬೆಚ್ಚಿಬಿದ್ದು ನ್ಯಾಯವ್ಯವಸ್ಥೆ ಮಹಿಳಾ ವಿರೋಧಿಯಾಗತೊಡಗಿದೆಯೇ ಎಂಬ ಚರ್ಚೆ ಶುರು ಮಾಡುತ್ತವೆ.

ಪ್ರಾತಿನಿಧಿಕವಾಗಿ ನ್ಯಾಯವ್ಯವಸ್ಥೆಯಲ್ಲಿ ಕಡಿಮೆ ಸಂಖ್ಯೆಯ ದಲಿತರಿದ್ದಾರೆ. ಕಡಿಮೆ ಸಂಖ್ಯೆಯ ಆದಿವಾಸಿಗಳಿದ್ದಾರೆ. ಕಡಿಮೆ ಸಂಖ್ಯೆಯ ಹಳ್ಳಿಗರಿದ್ದಾರೆ. ಕಡಿಮೆ ಸಂಖ್ಯೆಯ ಅಲ್ಪಸಂಖ್ಯಾತ ಸಮುದಾಯದವರಿದ್ದಾರೆ. ಆದರೆ ಅಲ್ಲಿರುವ ಮಹಿಳೆಯರ ಸಂಖ್ಯೆ ಅವರ ಜನಸಂಖ್ಯೆಗನುಗುಣವಾಗಿ ತುಂಬ ಕಡಿಮೆಯಿದೆ. ಕಣ್ಣುಪಟ್ಟಿ ಕಟ್ಟಿ ತಕ್ಕಡಿ ಹಿಡಿದು ನಿಲ್ಲಿಸಿದ ನ್ಯಾಯದೇವತೆಯ ಮಟ್ಟಿಗಷ್ಟೇ ಮಹಿಳಾ ಭಾಗವಹಿಸುವಿಕೆ ಮುಗಿದು ಹೋಗುತ್ತಿದೆಯೇ ಎಂದು ಆತಂಕ ಹುಟ್ಟಿಸುವಂತೆ ವಾಸ್ತವವಿದೆ.
ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಫಾತಿಮಾ ಬೀವಿ ಅಥವಾ ಸುಜಾತಾ ಮನೋಹರ್ ಇರಲಿ; ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಇರಲಿ; ಇತ್ತೀಚೆಗೆ ಬಾರ್ ಅಸೋಸಿಯೇಷನ್ ಪ್ರವೇಶಿಸಿ ದಿಟ್ಟ ಕಮೆಂಟುಗಳಿಂದ ಸುದ್ದಿ ಮಾಡಿದ ಅನಿಮಾ ಮುಯರತ್ ಇರಲಿ - ಸ್ವತಂತ್ರವಾಗಿ ವೃತ್ತಿ ಕೈಗೊಂಡ ಯಾವುದೇ ಮಹಿಳಾ ನ್ಯಾಯವಾದಿಯನ್ನು ಉದ್ಯೋಗ ಸ್ಥಳದಲ್ಲಿ ಅವರ ಸ್ಥಿತಿಗತಿ ಕುರಿತು ಕೇಳಿ ನೋಡಿ. ನ್ಯಾಯಸ್ಥಾನ ಪುರುಷ ಪ್ರಧಾನವಾಗಿರುವುದನ್ನು, ತಾವು ಪುರುಷ ದರ್ಪದ ಕಾರಣವಾಗಿ ಅನುಭವಿಸುತ್ತಿರುವ ಸಂಕಟಗಳನ್ನು ನೋವಿನಿಂದ ಹೇಳಿಕೊಳ್ಳುತ್ತಾರೆ. ಅಪರಾಧ-ಶಿಕ್ಷೆಯ ಭಾಷೆ ಮಾತ್ರ ಗೊತ್ತಿರುವ ಗಂಡುಮನಸ್ಸುಗಳ ವಿರುದ್ಧ ದನಿಯೆತ್ತುವುದು, ಏನಾದರೂ ಬದಲಾವಣೆ ತರಬೇಕೆಂದು ಕನಸುವುದು ಸಾಧ್ಯವೇ ಇಲ್ಲವೆಂಬ ಸ್ಥಿತಿ ಇರುವುದನ್ನು ಹೆಸರು ಹಾಕಬಾರದೆಂಬ ಷರತ್ತಿನೊಂದಿಗೆ ಬಿಚ್ಚಿಡುತ್ತಾರೆ. ಬಹಿರಂಗವಾಗಿ ಟೀಕಿಸಿದ ಮಹಿಳೆಯರು ಪ್ರಭಾವಿಗಳಲ್ಲದಿದ್ದಲ್ಲಿ ಅವರ ವಿರುದ್ಧ ಊರೂರುಗಳಲ್ಲಿ ಮಾನನಷ್ಟ ಮೊಕದ್ದಮೆ ಜಡಿದು ಕೋರ್ಟು ಅಲೆಸಿ ಸುಸ್ತು ಮಾಡಲಾಗುತ್ತದೆ. ತಮಗೆ ಅನುಕೂಲೆಯಾಗಿರುವವರನ್ನು ಮೇಲೇರಿಸಿ, ತಮ್ಮ ದಿಕ್ತಟ ಮೀರುವ ಮಹಿಳಾ ವಕೀಲರನ್ನು ಅಲಿಖಿತ ಬಹಿಷ್ಕಾರ ಹಾಕಿ ಮೂಲೆಗುಂಪು ಮಾಡಲಾಗುತ್ತದೆ. ಕೈಬೆರಳೆಣಿಕೆಯಷ್ಟು ಮಹಿಳಾ ನ್ಯಾಯವಾದಿಗಳಷ್ಟೇ ಸ್ವತಂತ್ರವಾಗಿ, ಯಶಸ್ವಿಯಾಗಿ ಇಂಥ ಅಡೆತಡೆ ಎದುರಿಸಿ ಗೆದ್ದಿದ್ದಾರೆ. ಯಶಸ್ಸಿನ ಕಥೆಗಳಿಗಿಂತ ಸಾವಿರಪಟ್ಟು ಹೆಚ್ಚು ಮಹಿಳೆಯರು ಗಾಯಗೊಂಡ ಅನುಭವ ಹೊಂದಿದವರೇ ಇದ್ದಾರೆ.
ಇದೇಕೆ ಹೀಗಾಯಿತು? ಸಮಾನತೆಯ ಆಣೆ ಮಾಡಿ ಕಾನೂನು ಕಲಿತ ಕಾನೂನು ರಕ್ಷಕರೇಕೆ ಮಹಿಳಾ ವಿರೋಧಿ ಮನಸ್ಥಿತಿ ಹೊಂದಿದರು? ಮನುಷ್ಯನ ಮೂಲಸ್ವಭಾವವಾದ ತಾರತಮ್ಯ ಮತ್ತು ಕ್ರೌರ್ಯವನ್ನು ಬದಲಾಯಿಸಲು ಓದು ಮತ್ತು ವೃತ್ತಿ ವಿಫಲವಾಯಿತೇ? ಪುರುಷಾಧಿಕಾರವು ಅಲ್ಲಿರುವ ಮಹಿಳೆಯರ ಉಸಿರುಗಟ್ಟಿಸುತ್ತಿದೆಯೆ ಅಥವಾ ಗಮನಾರ್ಹ ಸಂಖ್ಯೆಯ ಮಹಿಳೆಯರಿಲ್ಲದಿರುವಿಕೆ ಲಿಂಗ ಸೂಕ್ಷ್ಮತೆ ಇಲ್ಲದಂತೆ ಮಾಡಿದೆಯೇ?

                                                       (  ಫಾತಿಮಾ ಬೀವಿ)
ನ್ಯಾಯಸ್ಥಾನದಲ್ಲಿರುವ ಮಹಿಳೆಯರ ಅಂಕಿಅಂಶ ಈ ಅನುಮಾನಗಳಿಗೆ ಪುಷ್ಟಿ ನೀಡುತ್ತದೆ.
ಭಾರತದಲ್ಲಿ 17 ಲಕ್ಷ ಲಾಯರುಗಳು ಬಾರ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಅದರಲ್ಲಿ ಶೇ. 10-15 ಮಾತ್ರ ಮಹಿಳೆಯರಿದ್ದಾರೆ. ಯಾವ ಕಾಲಘಟ್ಟದಲ್ಲೂ ಸುಪ್ರೀಂಕೋರ್ಟಿನಲ್ಲಿ ಇಬ್ಬರಿಗಿಂತ ಹೆಚ್ಚು ನ್ಯಾಯಾಧೀಶೆಯರಿಲ್ಲ. ಈಗ ಸುಪ್ರೀಂಕೋರ್ಟಿನ 25 ನ್ಯಾಯಮೂರ್ತಿಗಳಲ್ಲಿ ಜಸ್ಟಿಸ್ ಆರ್. ಭಾನುಮತಿ ಒಬ್ಬರೇ ಮಹಿಳೆ. ಇದುವರೆಗೆ ಆರು ಜನ ಮಹಿಳೆಯರಷ್ಟೇ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾಗಿದ್ದಾರೆ. ಭಾರತದ ಮೊದಲ ಮಹಿಳಾ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಬಂದದ್ದು 2009ರಲ್ಲಿ. ಸ್ವತಂತ್ರ ಭಾರತದ ಮೊದಲ ಮಹಿಳಾ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅನ್ನಾ ಚಾಂಡಿ 1959ರಲ್ಲಿ ಬಂದರು. ಆದರೆ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಲು (ಫಾತಿಮಾ ಬೀವಿ (1989-92) ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಲು (ಲೀಲಾ ಸೇಥ್ (1991-96) ಮಹಿಳೆಯರು ನಾಲ್ಕೈದು ದಶಕ ಕಾಲ ಕಾಯಬೇಕಾಯಿತು. ಪ್ರಸ್ತುತ ಎರಡು ಹೈಕೋರ್ಟುಗಳಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಮಹಿಳೆಯರಿದ್ದಾರೆ (ಮುಂಬೈಯಲ್ಲಿ ಜ. ಮಂಜುಳಾ ಚೆಲ್ಲೂರ್ ಹಾಗೂ ದಿಲ್ಲಿಯಲ್ಲಿ ಜ. ಜಿ. ರೋಹಿಣಿ).
ಗೊತ್ತೇ? ಭಾರತದ ಕೋರ್ಟುಗಳು 1924ರವರೆಗೆ ಮಹಿಳೆಯರಿಗೆ ತಮ್ಮ ಬಾಗಿಲು ಮುಚ್ಚಿಕೊಂಡಿದ್ದವು! ನ್ಯಾಯವಾದಿಗಳ ಸಹಾಯಕರಾಗಿ ಮಹಿಳಾ ಬ್ಯಾರಿಸ್ಟರುಗಳು ಕೆಲಸ ಮಾಡಿಕೊಡಬಹುದಿತ್ತೇ ವಿನಹ ಕೋರ್ಟಿನೊಳ ಹೊಕ್ಕು ವಾದಿಸುವಂತಿರಲಿಲ್ಲ. ಭಾರತದ ಮೊದಲ ಬ್ಯಾರಿಸ್ಟರ್ ಮಹಿಳೆ 1894ರಲ್ಲಿ ಇಂಗ್ಲೆಂಡಿನ ಆಕ್ಸ್‌ಫರ್ಡ್‌ನಲ್ಲಿ ಪದವಿ ಪಡೆದರೂ ಕೋರ್ಟು ಪ್ರವೇಶಿಸಲು 30 ವರ್ಷ ಕಾಯಬೇಕಾಯಿತು! ಹೌದು. ಕಾನೂನು ಅಭ್ಯಸಿಸಿ ಪದವಿ ಪಡೆದಿದ್ದರೂ ಹೆಣ್ಣು ಎಂಬ ಕಾರಣಕ್ಕೇ ಅವರ ಜ್ಞಾನ, ಬುದ್ಧಿಮತ್ತೆ ದಂಡವೆನಿಸಿತ್ತು.
ಭಾರತದ ಅಷ್ಟೆ ಅಲ್ಲ, ಬ್ರಿಟನಿನ ಮೊತ್ತಮೊದಲ ವಕೀಲೆ ಕಾರ್ನೆಲಿಯಾ ಸೊರಾಬ್ಜಿ (1866-1954). ಅವರು ಮಹಾರಾಷ್ಟ್ರದ ನಾಸಿಕ್‌ನವರು. ಪಾರ್ಸಿ ಕ್ರೈಸ್ತ ಮಿಷನರಿ ತಂದೆ ಸೊರಾಬ್ಜಿ ಕರ್ಸೆಡ್ಜಿ ಹಾಗೂ ಮಿಷನರಿಗಳಿಂದ ದತ್ತು ತೆಗೆದುಕೊಂಡು ಬೆಳೆಸಲ್ಪಟ್ಟ ಭಾರತೀಯ ಮೂಲದ ಫ್ರಾನ್ಸಿನಾ ಫೋರ್ಡ್ ಎಂಬ ತಾಯಿಯ ಒಂಬತ್ತು ಮಕ್ಕಳಲ್ಲಿ ಒಬ್ಬಳು ಆಕೆ. ಮನೆಯಲ್ಲಿ ಹಾಗೂ ಶಾಲೆಯಲ್ಲಿ ಕಾರ್ನೆಲಿಯಾ ಇಂಗ್ಲಿಷ್ ಶಿಕ್ಷಣ ಪಡೆದು ಬೆಳೆದಳು. ಅವಳ ತಾಯಿ ಮಹಿಳಾ ಶಿಕ್ಷಣದಲ್ಲಿ ನಂಬಿಕೆಯಿಟ್ಟು ಪುಣೆಯಲ್ಲಿ ಶಾಲೆ ತೆರೆಯಲು ಸಹಾಯ ಮಾಡಿದ್ದರು. ಅವರಮ್ಮನ ಬಳಿ ಸ್ಥಳೀಯ ಹೆಣ್ಣುಮಕ್ಕಳು ತಮ್ಮ ಆಸ್ತಿವ್ಯಾಜ್ಯ ಪರಿಹಾರಕ್ಕಾಗಿ ಸಲಹೆ ಪಡೆಯಲು ಬರುತ್ತಿದ್ದರು. ಆ ಮಾತುಕತೆಗಳು ಎಳೆಯ ಕಾರ್ನೆಲಿಯಾ ಮೇಲೆ ಪ್ರಭಾವ ಬೀರಿದವು.

                                       (ಕಾರ್ನೆಲಿಯಾ ಸೊರಾಬ್ಜಿ)
1889ರಲ್ಲಿ ಮುಂಬೈ ವಿಶ್ವವಿದ್ಯಾನಿಲಯದ ಬಿಎ ಪದವಿ ಪಡೆದ ಕಾರ್ನೆಲಿಯಾ ಆ ವಿಶ್ವವಿದ್ಯಾನಿಲಯದ ಮೊದಲ ಪದವಿ ಪಡೆದ ಮಹಿಳೆಯಾದರು. 1892ರಲ್ಲಿ ಆಕ್ಸ್‌ಫರ್ಡ್‌ನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ದೇಶದ ಮೊದಲ ಕಾನೂನು ಪದವೀಧರೆ ಹಾಗೂ ಆಕ್ಸ್‌ಫರ್ಡ್ ಕಾನೂನು ಶಾಲೆ ಪ್ರವೇಶಿಸಿದ ಮೊತ್ತಮೊದಲ ಮಹಿಳೆ ಆದರು. 1894ರಲ್ಲಿ ಭಾರತಕ್ಕೆ ಮರಳಿದರೂ ಪೂರ್ಣ ಪ್ರಮಾಣದ ನ್ಯಾಯವಾದಿಯಾಗುವಂತಿರಲಿಲ್ಲ. ಸಣ್ಣಪುಟ್ಟ ಕೆಲಸಗಳಿಗೇ ತೃಪ್ತಿ ಪಡಬೇಕಿತ್ತು.
ಆಗ ಹಿಂದೂ ಸಮಾಜದ ಕೆಲವು ಪ್ರದೇಶ-ಪಂಗಡಗಳ ಮಹಿಳೆಯರು ಪರ್ದಾ ಅನುಸರಿಸುತ್ತಿದ್ದರು. ಅವರೆಲ್ಲ ಪರ್ದಾ ಹಿಂದೆಯೇ ಇದ್ದ ಅನಕ್ಷರಸ್ಥರು. ಮನೆಯ ಕೆಲ ಪುರುಷರನ್ನು ಬಿಟ್ಟರೆ ಬೇರೆ ಗಂಡಸರನ್ನು ನೋಡುವಂತಿಲ್ಲ. ಏನೇ ವ್ಯವಹಾರ ಮಾಡುವುದಾದರೂ ಅವರ ಪರವಾಗಿ ಒಬ್ಬ ಗಂಡಸು ಇದ್ದರಷ್ಟೇ ಅದು ಊರ್ಜಿತವಾಗುತ್ತಿತ್ತು. ಆ ಮಹಿಳೆಯರಿಗೆ ಆಸ್ತಿವಂಚನೆಯಾದರೂ ಕಾನೂನು ಸಲಹೆ ತೆಗೆದುಕೊಳ್ಳಲಾರದವರಾಗಿದ್ದರು. ಅವರ ಹಲವು ಹಕ್ಕುಗಳು ಹೆಣ್ಣು ಎಂಬ ಕಾರಣಕ್ಕೇ ಮೊಟಕುಗೊಂಡಿದ್ದವು. ಕಾಥೇವಾಡ ಮತ್ತು ಇಂದೋರ್ ಸಂಸ್ಥಾನಗಳ ಇಂಥ ಪರ್ದಾ ನಶೀನ್ ಹೆಂಗಸರ ಪರವಾಗಿ ಮಾತನಾಡಲು ಕಾರ್ನೆಲಿಯಾ ವಿಶೇಷ ಅನುಮತಿ ಪಡೆದರು. ಆದರೆ ಅವರ ವಿದೇಶಿ ಪದವಿಗೆ ಮಾನ್ಯತೆ ಸಿಗಲಿಲ್ಲ. ಕೊನೆಗೆ 1897ರಲ್ಲಿ ಮುಂಬೈ ವಿಶ್ವವಿದ್ಯಾನಿಲಯದ ಎಲ್‌ಎಲ್‌ಬಿಯನ್ನೂ, 1899ರಲ್ಲಿ ಅಲಹಾಬಾದ್ ಹೈಕೋರ್ಟಿನ ಪ್ಲೀಡರ್ ಪರೀಕ್ಷೆಯನ್ನೂ ಪಾಸು ಮಾಡಿದರು. 1902ರಲ್ಲಿ ಮಹಿಳೆಯರು ಮತ್ತು ಮಕ್ಕಳ ಸಲಹಾಗಾರ್ತಿಯಾಗಿ ಇಂಡಿಯಾ ಆಫೀಸ್‌ನಲ್ಲಿ ಕೆಲಸ ಮಾಡತೊಡಗಿದರು. 1904ರಲ್ಲಿ ಬಂಗಾಳದ ಕೋರ್ಟ್ ಆಫ್ ವಾರ್ಡ್ಸ್‌ಗೆ ಮಹಿಳಾ ಸಹಾಯಕಿಯಾಗಿ ಕೆಲಸ ಮಾಡಿದರು. ಮುಂದಿನ 20 ವರ್ಷ 600ಕ್ಕಿಂತ ಹೆಚ್ಚು ಮಹಿಳೆಯರ, ಅನಾಥ ಮಕ್ಕಳ ಕಾನೂನು ಹಕ್ಕಿಗಾಗಿ, ಎಷ್ಟೋ ಸಲ ಯಾವ ಶುಲ್ಕವೂ ಇಲ್ಲದೆ ಹೋರಾಡಿದರು. ರಾಷ್ಟ್ರೀಯ ಹೋರಾಟಕ್ಕೆ ಬೆಂಬಲ ನೀಡಿದರು. ಬಾಲ್ಯವಿವಾಹ ವಿರೋಧಿಸಿ ಮತ್ತು ವಿಧವೆಯರ ಹಕ್ಕುಗಳ ಎತ್ತಿಹಿಡಿದು ವಿಸ್ತೃತವಾಗಿ ಬರೆದರು.
1924ರಲ್ಲಿ ನ್ಯಾಯದೇವತೆ ನ್ಯಾಯಸ್ಥಾನದ ಬಾಗಿಲುಗಳನ್ನು ಮಹಿಳೆಯರಿಗೆ ತೆರೆಸಿದಳು. ಅಲಹಾಬಾದ್ ಹೈಕೋರ್ಟಿನಲ್ಲಿ ಕಾರ್ನೆಲಿಯಾ ವಕೀಲೆಯಾಗಿ ನೋಂದಣಿಯಾದರು. ಆದರೆ ಅಲ್ಲಿನ ವಾತಾವರಣ ಮಹಿಳಾ ನ್ಯಾಯವಾದಿಗೆ ಎಷ್ಟು ಪ್ರತಿಕೂಲವಾಗಿತ್ತು ಎಂದರೆ 1928ರಲ್ಲಿ ನಿವೃತ್ತಿ ಪಡೆದು ಇಂಗ್ಲೆಂಡ್‌ಗೆ ಹೋಗಿಬಿಟ್ಟರು. ಕುಟುಂಬವೇ ಇಂಗ್ಲೆಂಡ್‌ಗೆ ಹೋಯಿತು.
ಆಗ ರಾಷ್ಟ್ರೀಯತೆ ಹೋರಾಟ ಮತ್ತು ಗಾಂಧಿ ಬೆಂಬಲಿತ ನಾಗರಿಕ ಅಸಹಕಾರವನ್ನು ವಿರೋಧಿಸಿ ಬ್ರಿಟಿಷ್ ರಾಜಸತ್ತೆಗೆ ಬೆಂಬಲ ಸೂಚಿಸಿದರು. ಬ್ರಿಟಿಷ್ ಆಳ್ವಿಕರ ಅಡಿ ಸ್ವಾಯತ್ತ ಸನಾತನ ಭಾರತ ಇರುವ ಹಾಗೇ ಇರಬೇಕೆಂದು ಹೇಳಿ ರಾಷ್ಟ್ರೀಯ ಹೋರಾಟಗಾರರ ಅವಗಣನೆಗೆ ಗುರಿಯಾದರು. ಸಮಾಜ ಸುಧಾರಣೆಯ ಅವರ ಕನಸುಗಳು ಹಾಗೇ ಉಳಿದವು. ಅವರ ಎಲ್ಲ ಕೆಲಸ-ಸೇವೆಗಳೂ ಹಿನ್ನೆಲೆಗೆ ಸರಿದುಬಿಟ್ಟವು.
ಇತ್ತೀಚೆಗೆ ಆಕ್ಸ್‌ಫರ್ಡ್‌ನ ಲಿಂಕನ್ ಇನ್‌ನಲ್ಲಿ ಅವರ ಮೂರ್ತಿ ಸ್ಥಾಪಿಸಲಾಗಿದೆ. ಆದರೆ ಭಾರತದ ಮಟ್ಟಿಗೆ ಅವರಿನ್ನೂ ಅಪರಿಚಿತರಾಗಿಯೇ ಉಳಿದಿದ್ದಾರೆ.

***

Writer - ಡಾ.ಎಚ್.ಎಸ್.ಅನುಪಮಾ

contributor

Editor - ಡಾ.ಎಚ್.ಎಸ್.ಅನುಪಮಾ

contributor

Similar News

ಜಗದಗಲ
ಜಗ ದಗಲ