ಸಫ್ವಾನ್ ನಾಪತ್ತೆ, ಕೊಲೆಯ ಹಿಂದೆ ಕಾನೂನು ವ್ಯವಸ್ಥೆಯ ವೈಫಲ್ಯ

Update: 2017-11-29 03:40 GMT

ಒಂದು ಕಾಲದಲ್ಲಿ ಕರಾವಳಿಯೆಂದರೆ ಮೀನು, ಕಡಲು, ಅಬ್ಬಕ್ಕ, ಕಂಬಳ, ಕಿಂಞಣ್ಣ ರೈ, ಕಾರಂತ, ಗೋವಿಂದ ಪೈ ಇತ್ಯಾದಿಗಳು ಕಣ್ಣ ಮುಂದೆ ಬರುತ್ತಿದ್ದವು. ಇಂದು ಕರಾವಳಿಯೆಂದರೆ, ಕೋಮುಗಲಭೆ, ಡ್ರಗ್ಸ್, ಕೊಲೆ, ಜಾತೀಯತೆ, ನಕಲಿ ಗೋರಕ್ಷಕರು ಇತ್ಯಾದಿ ಕಣ್ಣ ಮುಂದೆ ಬರುತ್ತವೆ. ಒಂದು ಕಾಲದಲ್ಲಿ ಇದಿನಬ್ಬರ ಐಕ್ಯಗಾನಕ್ಕಾಗಿ ಸುದ್ದಿಯಲ್ಲಿದ್ದ ಉಳ್ಳಾಲದಂತಹ ಊರು ಇಂದು ಡ್ರಗ್ಸ್, ರೌಡಿಗಳು ಮೊದಲಾದ ಕಾರಣಗಳಿಗಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಇದೀಗ ಇನ್ನೊಂದು ಬರ್ಬರ ಘಟನೆ, ದಕ್ಷಿಣ ಕನ್ನಡ ಜಿಲ್ಲೆಯ ಕಡೆಗೆ ಬೆಂಗಳೂರಿನ ಜನ ಕತ್ತು ಹೊರಳಿಸುವಂತೆ ಮಾಡಿದೆ. ದಕ್ಷಿಣ ಕನ್ನಡದ ಸುರತ್ಕಲ್‌ನ ಸಫ್ವಾನ್ ಎಂಬ 22ರ ತರುಣ ಕೆಲ ದಿನಗಳಿಂದ ಕಾಣೆಯಾಗಿದ್ದ. ಆತನದು ಬಡ ಕುಟುಂಬ.

ಆತನ ಅಪಹರಣದ ಹಿಂದೆ ಸುರತ್ಕಲ್‌ನ ಕೆಲವು ರೌಡಿಗಳು, ಗೂಂಡಾಗಳು ಇದ್ದಾರೆ ಎನ್ನುವುದು ಅದಾಗಲೇ ಸುದ್ದಿಯಾಗಿತ್ತು. ಆದರೆ ಪೊಲೀಸ್ ಇಲಾಖೆಯಾಗಲಿ, ರಾಜಕಾರಣಿಗಳಾಗಲಿ ಕಾಣೆಯಾದ ಹುಡುಗನ ಕುರಿತಂತೆ ವಿಶೇಷ ಆಸಕ್ತಿ ವಹಿಸಿರಲಿಲ್ಲ. ಕೆಲವು ಪ್ರಗತಿಪರ ತರುಣರು ಬೀದಿಗಿಳಿದು ನಾಪತ್ತೆಯಾದ ಹುಡುಗನ ಪರವಾಗಿ ಪ್ರತಿಭಟನೆಗೆ ಇಳಿದ ಬಳಿಕ ಪೊಲೀಸರು ಎಚ್ಚರಗೊಂಡರು. ಒಲ್ಲದ ಮನಸಿನಿಂದ ಪೊಲೀಸರು ತನಿಖೆಗಿಳಿದರು. ಇದೀಗ ಕೆಲವು ದುಷ್ಕರ್ಮಿಗಳು ಆ ಯುವಕನನ್ನು ಕೊಂದು ಆಗುಂಬೆ ಘಾಟಿಯಲ್ಲಿ ಎಸೆದಿರುವುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಸುರತ್ಕಲ್‌ನ ಮುಹಮ್ಮದ್ ಫೈಝಲ್ ಇಬ್ರಾಹೀಂ ಶೇಖ್ ಯಾನೆ ಟೊಪ್ಪಿ ಫೈಝಲ್ ಹಾಗೂ ಸಾಹಿಲ್ ಇಸ್ಮಾಯೀಲ್ ಎಂಬಾತನನ್ನು ಬಂಧಿಸಿದ್ದಾರೆ. ಆದರೆ ಮುಖ್ಯ ಆರೋಪಿಗಳನ್ನು ಬಂಧಿಸಲು ಅವರಿಗೆ ಇನ್ನೂ ಸಾಧ್ಯವಾಗಿಲ್ಲ.

ಇದು ಒಂದು ನಿರ್ದಿಷ್ಟವಾದ ವೈಯಕ್ತಿಕ ಪ್ರಕರಣವಾಗಿದ್ದರೆ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿರಲಿಲ್ಲ. ವೈಯಕ್ತಿಕ ದ್ವೇಷ ಅಥವಾ ಇನ್ನಿತರ ಸಣ್ಣ ಪುಟ್ಟ ಕಾರಣಗಳಿಗಾಗಿ ಅಪರಾಧಗಳು ನಡೆಯುತ್ತಿರುತ್ತವೆ. ಆದರೆ ಸಫ್ವಾನ್ ಎನ್ನುವ ತರುಣನ ಅಪಹರಣ ಮತ್ತು ಹತ್ಯೆ, ಹೇಗೆ ಕರಾವಳಿಯಲ್ಲಿ ಅಪರಾಧ ಜಾಲಗಳು ವ್ಯವಸ್ಥಿತವಾಗಿ ವಿಸ್ತಾರ ಗೊಳ್ಳುತ್ತಿವೆ ಮತ್ತು ಇದನ್ನು ರಾಜಕಾರಣಿಗಳು, ಪೊಲೀಸರೇ ಹೇಗೆ ಹಾಲೆರೆದು ಪೋಷಿಸುತ್ತಿದ್ದಾರೆ ಎನ್ನುವುದನ್ನು ಹೇಳುತ್ತಿದೆ. ಸಾಧಾರಣವಾಗಿ ಸಫ್ವಾನ್ ಎನ್ನುವ ಯುವಕನನ್ನು ಯಾವುದೋ ಕೋಮುವಾದಿ ಸಂಘಟನೆಗಳು ಅಥವಾ ಮುಸ್ಲಿಮೇತರ ಸಂಘಟನೆಗಳು ಅಪಹರಿಸಿ ಕೊಂದು ಹಾಕಿದ್ದಿದ್ದರೆ ಇದೀಗ ಎಲ್ಲ ಮುಸ್ಲಿಮ್ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ಸಲ್ಲಿಸುತ್ತಿದ್ದವೇನೋ. ಕೊಂದವರು ಮತ್ತು ಕೊಲ್ಲಲ್ಪಟ್ಟ ತರುಣನ ಧರ್ಮ ಒಂದೇ ಆಗಿರುವ ಕಾರಣದಿಂದಷ್ಟೇ ಕರಾವಳಿ ತಣ್ಣಗಿದೆ. ಆದರೆ ಇದೇ ಸಂದರ್ಭದಲ್ಲಿ ಸಫ್ವಾನ್‌ನನ್ನು ಬಲಿತೆಗೆದುಕೊಂಡಿರುವುದು ಕೇವಲ ಕೆಲವು ರೌಡಿಗಳ ಕ್ರಿಮಿನಲ್ ಮನಸ್ಥಿತಿ ಮಾತ್ರ ಅಲ್ಲ ಎನ್ನುವುದನ್ನು ನಾವು ಗಮನಿಸಬೇಕು.

ಅವರನ್ನು ಸುತ್ತಿಕೊಂಡಿರುವ ಗಾಂಜಾ, ಡ್ರಗ್ಸ್ ಮಾಫಿಯಾಗಳೂ ಈ ತರುಣನ ಕೊಲೆಯಲ್ಲಿ ಪಾತ್ರವಹಿಸಿವೆ. ಇತ್ತೀಚೆಗೆ, ಉಳ್ಳಾಲ ಹೇಗೆ ಗಾಂಜಾ, ಡ್ರಗ್ಸ್‌ಗಳಿಂದಾಗಿ ಇನ್ನೊಂದು ಬಿಹಾರ ಆಗುವ ಹಂತದಲ್ಲಿದೆ ಎನ್ನುವ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇಲ್ಲಿನ ರೌಡಿ ಗ್ಯಾಂಗ್‌ಗಳು ಬೆಳೆಯಲು ಪೊಲೀಸರ ವೌನವೇ ಕಾರಣ ಎನ್ನುವುದನ್ನು ಜನರು ಬಹಿರಂಗವಾಗಿಯೇ ಆಡುತ್ತಿದ್ದಾರೆ. ರಾಜಕಾರಣಿಗಳೇ ಪರೋಕ್ಷವಾಗಿ ಈ ರೌಡಿಗಳಿಗೆ ಆಶ್ರಯ ನೀಡುತ್ತಿದ್ದಾರೆ. ಎಷ್ಟೆಂದರೆ, ಒಬ್ಬ ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿ ಉಳ್ಳಾಲ ಕಾಂಗ್ರೆಸ್‌ನ ಮಹತ್ವದ ಸ್ಥಾನವನ್ನು ತನ್ನದಾಗಿಸಿಕೊಂಡ. ಸುರತ್ಕಲ್ ಕೂಡ ಇದೇ ದಾರಿಯಲ್ಲಿದೆ ಎನ್ನುವುದನ್ನು ಸಫ್ವಾನ್ ಹತ್ಯೆ ಪ್ರಕರಣ ಹೇಳುತ್ತಿದೆ. ಆದರೆ ಈ ಕುರಿತಂತೆ ಕ್ಷೇತ್ರದ ಶಾಸಕರು, ಜಿಲ್ಲೆಯ ಸಚಿವರು ಮಾತ್ರ ಇನ್ನೂ ತುಟಿ ಬಿಚ್ಚಿಲ್ಲ. ಒಂದು ಮೂಲದ ಪ್ರಕಾರ ಸುರತ್ಕಲ್‌ನ ಆಸುಪಾಸಿನಲ್ಲಿ ಡ್ರಗ್ಸ್ ವ್ಯವಹಾರಗಳು ಚುರುಕಾಗಿವೆ. ಪೊಲೀಸ್ ಇಲಾಖೆ ಈ ಬಗ್ಗೆ ಗೊತ್ತಿದ್ದೂ ಗೊತ್ತಿಲ್ಲದಂತೆ ವರ್ತಿಸುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ. ಇದು ಕೇವಲ ಡ್ರಗ್ಸ್, ಗಾಂಜಾ ಮಾರಾಟಕ್ಕೆ ಅಷ್ಟೇ ಸೀಮಿತವಾಗಿ ಉಳಿದಿಲ್ಲ.

ಸಣ್ಣ ಪ್ರಾಯದ ಯುವಕರನ್ನು ಸೆಳೆಯುವ ಪ್ರಯತ್ನವನ್ನು ಇವರು ಮಾಡುತ್ತಿದ್ದಾರೆ. ಸಜ್ಜನರು ಇವರ ವಿರುದ್ಧ ಧ್ವನಿಯೆತ್ತಲಾಗದಂತಹ ಸನ್ನಿವೇಶ ನಿರ್ಮಾಣವಾಗಿದೆ. ಶಾಲೆ, ಮಸೀದಿಯ ಸಮೀಪದಲ್ಲೂ ಇವರು ಠಳಾಯಿಸುತ್ತಿದ್ದಾರೆ. ಇವರ ವಿರುದ್ಧ ಯಾರಾದರೂ ಮಾತೆತ್ತಿದರೆ ತೋಲ್ಬಲದಿಂದ ಬಾಯಿ ಮುಚ್ಚಿಸುತ್ತಿದ್ದಾರೆ. ನಿರುದ್ಯೋಗಿಗಳು ಇವರ ಕುಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ. ಪೊಲೀಸರ ಪರೋಕ್ಷ ಸಹಕಾರದಿಂದಲೇ ಇವೆಲ್ಲವೂ ನಡೆಯುತ್ತಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಹಲವು ಕ್ರಿಮಿನಲ್ ಪ್ರಕರಣಗಳಿಗೆ ಇವರು ಬೇಕಾದವರಾದರೂ, ಪೊಲೀಸರ ಜೊತೆಗೆ ಆತ್ಮೀಯ ಸಂಬಂಧವನ್ನೂ ಹೊಂದಿದ್ದಾರೆ ಎನ್ನಲಾಗುತ್ತಿದೆ. ಇವರ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದರೆ ಇಲಾಖೆಯೊಳಗಿರುವ ಕೆಲವು ಪೊಲೀಸರೇ ರೌಡಿಗಳಿಗೆ ಮಾಹಿತಿ ನೀಡುತ್ತಾರೆ ಎಂಬ ಆರೋಪಗಳಿವೆ. ಇಲ್ಲವಾದರೆ, ತಮ್ಮ ವಿರುದ್ಧ ಧ್ವನಿಯೆತ್ತಿದ ಎನ್ನುವ ಕಾರಣಕ್ಕಾಗಿ ಒಬ್ಬ 22 ವರ್ಷ ಪ್ರಾಯದ ತರುಣನನ್ನು ಅಪಹರಿಸಿ ಹಲವು ದಿನಗಳ ಕಾಲ ಚಿತ್ರಹಿಂಸೆ ನೀಡಿ, ಆಗುಂಬೆ ಕಾಡುಗಳಲ್ಲಿ ಎಸೆಯುತ್ತಾರೆ ಎಂದರೆ ಇವರೊಳಗೆ ಮನುಷ್ಯತ್ವ ಎಳ್ಳಷ್ಟಾದರೂ ಇದೆ ಎಂದು ಯಾಕೆ ನಂಬಬೇಕು?

ಇರಲಿ, ಸಫ್ವಾನ್ ಎನ್ನುವ ತರುಣ ಅಪರಹಣಕ್ಕೀಡಾದ ಹೊತ್ತಿನಲ್ಲೇ ಪೊಲೀಸರು ಜಾಗೃತರಾಗಿ ಈ ಕ್ರಿಮಿನಲ್‌ಗಳ ಹಿಂದೆ ಬಿದ್ದಿದ್ದರೆ ಆತನ ಜೀವ ಉಳಿಯುತ್ತಿತ್ತೋ ಏನೋ. ಆದರೆ ಸಂಪೂರ್ಣವಾಗಿ ಈ ಪ್ರಕರಣವನ್ನು ನಿರ್ಲಕ್ಷಿಸಿದರು. ಕುಟುಂಬದವರ ದೂರನ್ನೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸದೇ ಇದ್ದಿದ್ದರೆ ಸಫ್ವಾನ್ ‘ನಾಪತ್ತೆ’ಯ ಪಟ್ಟಿಯಲ್ಲಿ ಸೇರಿ ಬಿಡುತ್ತಿದ್ದ. ಕೊಲೆಯಾಗಿರುವ ಘಟನೆ ಹೊರಬರುತ್ತಲೇ ಇರುತ್ತಿರಲಿಲ್ಲ. ಸಫ್ವಾನ್ ಎನ್ನುವ ಯುವಕನನ್ನು ಬರ್ಬರವಾಗಿ ಕೊಂದು, ಕಾಡಲ್ಲಿ ಎಸೆಯುವ ಮೂಲಕ, ತಮ್ಮ ವಿರುದ್ಧ ಮಾತನಾಡಿದರೆ ಎಂತಹ ಸ್ಥಿತಿ ಎದುರಿಸಬೇಕಾಗುತ್ತದೆ ಎನ್ನುವುದನ್ನು ಜನರಿಗೆ ಅಲ್ಲಿನ ರೌಡಿಗಳು ಸಂದೇಶ ರವಾನಿಸಿದ್ದಾರೆ.

ಈ ಘಟನೆ ಒಂದು ಜೀವಕ್ಕೆ ಸಂಬಂಧಿಸಿದ್ದಲ್ಲ. ಒಂದು ಊರಿನ ಏಳುಬೀಳಿಗೆ ಸಂಬಂಧಿಸಿದ್ದು. ಸುರತ್ಕಲ್, ಉಳ್ಳಾಲದಂತಹ ಪ್ರದೇಶಗಳಲ್ಲಿ ಮುಸ್ಲಿಮ್ ಸಮುದಾಯ ಬಹುಸಂಖ್ಯಾತರು. ಆದರೆ ಈ ಪ್ರದೇಶ ತೀರಾ ಹಿಂದುಳಿದಿದೆ. ಅವರಲ್ಲಿ ಬಡತನ, ಅನಕ್ಷರತೆ ತಾಂಡವವಾಡುತ್ತಿವೆ. ಇಂತಹ ಹೊತ್ತಿನಲ್ಲಿ ಈ ಪ್ರದೇಶಗಳಲ್ಲಿ ಗಾಂಜಾ, ಡ್ರಗ್ಸ್‌ನಂತಹ ಜಾಲಗಳು ತೀವ್ರವಾದರೆ ಅದು ಅವರ ಸಾಮಾಜಿಕ ಬದುಕನ್ನು ಇನ್ನಷ್ಟು ದುಸ್ತರಗೊಳಿಸುತ್ತದೆ. ಶಿಕ್ಷಣ ಪಡೆದು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾದ ಯುವಕರು ಇಂತಹ ಜಾಲಗಳ ಕೈಗೆ ಸಿಕ್ಕಿದರೆ ಅದು ಬರೇ ಯುವಕರನ್ನು ಮಾತ್ರವಲ್ಲ, ಭವಿಷ್ಯದಲ್ಲಿ ಇಡೀ ಕರಾವಳಿಯನ್ನೇ ಕೆಡಿಸಿ ಹಾಕುತ್ತದೆ. ಬಡತನ ಹೆಚ್ಚುತ್ತದೆ. ಸಾಮಾಜಿಕ ಘನತೆ ಇಳಿಯುತ್ತದೆ.

ವಿಪರ್ಯಾಸವೆಂದರೆ, ಸುರತ್ಕಲ್ ಮತ್ತು ಉಳ್ಳಾಲ ಎರಡೂ ಕ್ಷೇತ್ರಗಳನ್ನು ಮುಸ್ಲಿಮ್ ನಾಯಕರೇ ಪ್ರತಿನಿಧಿಸುತ್ತಿದ್ದಾರೆ. ತಮ್ಮ ಊರು ಇಂತಹ ಜಾಲಗಳಿಂದ ಸರ್ವನಾಶವಾಗುತ್ತಿದ್ದರೂ ಅದರ ಬಗ್ಗೆ ಜಾಣ ಕುರುಡರಾಗಿದ್ದಾರೆ. ಒಂದೆಡೆ ರಾಜಕಾರಣಿಗಳ ಮೌನ, ಪೊಲೀಸರ ಕುಮ್ಮಕ್ಕು ಇಡೀ ಕರಾವಳಿಯನ್ನು ಅಪಾಯದೆಡೆಗೆ ದೂಡುತ್ತಿದೆ. ಆದುದರಿಂದ ಸಫ್ವಾನ್ ಎನ್ನುವ ತರುಣನನ್ನು ಅಪಹರಿಸಿ ಬರ್ಬರವಾಗಿ ಕೊಂದವರನ್ನು ಜೈಲಿಗೆ ತಳ್ಳುವುದರಿಂದಷ್ಟೇ ಪೊಲೀಸರ ಕೆಲಸ ಮುಗಿಯುವುದಿಲ್ಲ. ಸುರತ್ಕಲ್, ಉಳ್ಳಾಲ ಸೇರಿದಂತೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನು ಆವರಿಸಿರುವ ಗಾಂಜಾ ಜಾಲಗಳನ್ನು ಮಟ್ಟ ಹಾಕದೇ ಇದ್ದರೆ ಇಂತಹ ಕೊಲೆಗಳು ಮತ್ತೆ ಮತ್ತೆ ನಡೆಯುತ್ತಲೇ ಇರುತ್ತದೆ. ಆದುದರಿಂದ ಕರಾವಳಿಯ ಜನಪ್ರತಿನಿಧಿಗಳು ಸಮಾಜವನ್ನು ಕ್ಯಾನ್ಸರ್‌ನಂತೆ ಬಾಧಿಸುತ್ತಿರುವ ರೌಡಿಗಳ ಬಗ್ಗೆ, ಗಾಂಜಾ ಜಾಲಗಳ ಬಗ್ಗೆ ಮೌನ ಮುರಿಯಬೇಕು. ಪೊಲೀಸರನ್ನು ತಟ್ಟಿ ಎಚ್ಚರಿಸಬೇಕು. ಇಲ್ಲವಾದರೆ ಜನಗಳೇ ಬೀದಿಗಿಳಿದು ಕಾನೂನನ್ನು ಕೈಗೆತ್ತಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News