ಒಂದು ಬಿಟ್‌ಕಾಯಿನ್ ಮೌಲ್ಯ 10,000 ಡಾಲರ್‌ಗೂ ಹೆಚ್ಚು !

Update: 2017-11-30 12:23 GMT

► ಏನೀ ನಿಗೂಢ ಕರೆನ್ಸಿ ಬಿಟ್‌ಕಾಯಿನ್?

► ಇದು ಎಷ್ಟು ರಿಸ್ಕೀ? ಎಷ್ಟು ಲಾಭದಾಯಕ?

► ಇದ್ದಕ್ಕಿದ್ದಂತೆ ಆಗಸಕ್ಕೇರಿದ ಮೌಲ್ಯದ ಹಿಂದಿನ ಅಸಲಿಯತ್ತೇನು?

ಭೌತಿಕವಾಗಿ ಅಸ್ತಿತ್ವದಲ್ಲಿಲ್ಲದ ಡಿಜಿಟಲ್ ಕರೆನ್ಸಿ ಬಿಟ್‌ಕಾಯಿನ್ ಈಗ ಭಾರೀ ಸದ್ದು ಮಾಡುತ್ತಿದೆ. ಈ ವರ್ಷವಿಡೀ ರೋಲರ್ ಕೋಸ್ಟರ್‌ನಂತೆ ಏರಿಳಿತಗಳನ್ನು ಪ್ರದರ್ಶಿಸುತ್ತಿದ್ದ ಬಿಟ್‌ಕಾಯಿನ್ ಮೌಲ್ಯ ಇದೀಗ ಮೊದಲ ಬಾರಿಗೆ 10,000 ಡಾ.ಗಳನ್ನು ದಾಟಿದೆ ಮತ್ತು ಅದೇ ವೇಗದಲ್ಲಿ ಮುನ್ನುಗ್ಗುತ್ತಿದೆ. 2018ರ ಕೊನೆಯ ವೇಳೆಗೆ ಒಂದು ಬಿಟ್‌ಕಾಯಿನ್ ಮೌಲ್ಯ 40,000 ಡಾ.ಗಳಿಗೆ ತಲುಪಲಿದೆ ಎಂದು ಕೆಲವರು ನಿರೀಕ್ಷಿಸಿದ್ದಾರೆ. ಆದರೂ ಹೂಡಿಕೆ ತಜ್ಞರು ಬಿಟ್‌ಕಾಯಿನ್ ಅನ್ನು ಪ್ಲೇಗ್ ಮಾರಿಗೆ ಹೋಲಿಸುತ್ತಿದ್ದಾರೆ..ಏಕೆ?

 ಖ್ಯಾತ ಹೂಡಿಕೆದಾರ ಹಾಗು ಇಂಡೆಕ್ಸ್ ಫಂಡ್‌ಗಳ ತಜ್ಞ ಜಾಕ್ ಬೋಗ್ಲ್ ಅವರು ಬಿಟ್‌ಕಾಯಿನ್‌ನಿಂದ ಪ್ರಭಾವಿತರಾಗಿಲ್ಲ. ಮಂಗಳವಾರ ನ್ಯೂಯಾರ್ಕ್‌ನಲ್ಲಿ ಕೌನ್ಸಿಲ್ ಆನ್ ಫಾರಿನ್ ರಿಲೇಷನ್ಸ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಟ್‌ಕಾಯಿನ್‌ಗೆ ಸಂಬಂಧಿಸಿದಂತೆ ಸಭಿಕರ ಪ್ರಶ್ನೆಗೆ, ‘‘ಬಿಟ್‌ಕಾಯಿನ್ ಪ್ಲೇಗ್ ರೋಗವಿದ್ದಂತೆ. ಅದರಿಂದ ದೂರವಿರಿ. ಇದನ್ನು ನಾನು ಸ್ಪಷ್ಟವಾಗಿಯೇ ಹೇಳುತ್ತಿದ್ದೇನೆ’’ಎಂದು ಉತ್ತರಿಸಿದರು.

ಬಿಟ್‌ಕಾಯಿನ್ ಯಾವುದೇ ಅಂಡರ್‌ಲಾಯಿಂಗ್ ಅಸೆಟ್ ಅಥವಾ ಆಧಾರ ವಾಗಿರುವ ಸ್ವತ್ತನ್ನು ಹೊಂದಿಲ್ಲ. ಬಾಂಡ್‌ಗಳು ಬಡ್ಡಿಯನ್ನು ನೀಡುತ್ತವೆ, ಶೇರುಗಳು ಗಳಿಕೆಯ ಜೊತೆಗೆ ಲಾಭಾಂಶಗಳನ್ನು ನೀಡುತ್ತವೆ. ಅತ್ಯುತ್ತಮ ಹೂಡಿಕೆಯಾಗಿರುವ ಚಿನ್ನವು ಯಾವುದೇ ಸಮಯದಲ್ಲಿಯೂ ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ. ಆದರೆ ನೀವು ಖರೀದಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಬೇರೆಯವರಿಗೆ ಮಾರಬಹುದೆಂಬ ಆಸೆಯೊಂದನ್ನು ಬಿಟ್ಟರೆ ಬಿಟ್‌ಕಾಯಿನ್ ಅನ್ನು ಬೆಂಬಲಿಸುವ ಯಾವುದೇ ಅಂಶವಿಲ್ಲ ಎಂದು ಬೋಗ್ಲ್ ವಿವರಿಸಿದರು.

ಬಿಟ್‌ಕಾಯಿನ್ ಬಗ್ಗೆ ಬೋಗ್ಲ್ ಒಬ್ಬರೇ ಶಂಕೆ ವ್ಯಕ್ತಪಡಿಸುತ್ತಿಲ್ಲ. ಜೆಪಿ ಮಾರ್ಗನ್ ಚೇಸ್‌ನ ಸಿಇಒ ಹಾಗೂ ಖ್ಯಾತ ಬ್ಯಾಂಕರ್ ಜೇಮಿ ಡಿಮನ್ ಅವರು, ಬಿಟ್‌ಕಾಯಿನ್ ಒಂದು ಗುಳ್ಳೆಯಿದ್ದಂತೆ ಮತ್ತು ಅದು ಖಂಡಿತ ಒಡೆಯಲಿದೆ ಎಂದು ಹೇಳಿದರೆ, ಶತಕೋಟ್ಯಧಿಪತಿ ಬ್ಯಾಂಕರ್ ಹೋವಾರ್ಡ್ ಮಾರ್ಕ್ಸ್ ಅವರು, ಅದು ಯಾವಾಗ ಕುಸಿಯುತ್ತದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲದ ಪಿರಾಮಿಡ್ ಯೋಜನೆಯಿದ್ದಂತೆ ಎಂದು ಬಣ್ಣಿಸಿದರು.

ಆದರೆ ಫಂಡ್‌ಸ್ಟಾರ್ಟ್‌ನ ಟಾಮ್ ಲೀ ಮತ್ತು ಖ್ಯಾತ ಹೂಡಿಕೆದಾರ ಬಿಲ್ ಮಿಲ್ಲರ್ ಸೇರಿದಂತೆ ವಾಲ್‌ಸ್ಟ್ರೀಟ್‌ನ ಕೆಲವು ಖ್ಯಾತನಾಮರು ಭೌತಿಕ ಅಸ್ತಿತ್ವವೇ ಇಲ್ಲದ ಬಿಟ್‌ಕಾಯಿನ್‌ಗೆ ಮಣೆ ಹಾಕಿದ್ದಾರೆ. ಮಿಲ್ಲರ್ ನಡೆಸುತ್ತಿರುವ ಫಂಡ್‌ನ ಶೇ.33ರಷ್ಟು ಆಸ್ತಿ ಬಿಟ್‌ಕಾಯಿನ್ ರೂಪದಲ್ಲಿದೆ.

 ಅಂದ ಹಾಗೆ ಬಿಟ್‌ಕಾಯಿನ್ ಅತ್ಯತ್ತಮ ಹೂಡಿಕೆಯಲ್ಲ, ಹಾಗೆಂದು ತೀರ ಕೆಟ್ಟದ್ದೂ ಅಲ್ಲ ಎಂದು ಮಧ್ಯಮ ನೀತಿಗೆ ಜೋತುಬಿದ್ದಿರುವ ಹೂಡಿಕೆದಾರರೂ ಇದ್ದಾರೆ. ಬಿಲಿಯಾಧಿಪತಿ ಮಾರ್ಕ್ ಕ್ಯೂಬನ್ ಈ ಗುಂಪಿಗೆ ಸೇರಿರುವಂತಿದೆ. ಬಿಟ್‌ಕಾಯಿನ್ ಸೇರಿದಂತೆ ಹೆಚ್ಚಿನ ಅಪಾಯದ ಹೂಡಿಕೆಗಳಲ್ಲಿ ನಿಮ್ಮ ಉಳಿತಾಯದ ಶೇ.10ರಷ್ಟು ಭಾಗವನ್ನು ತೊಡಗಿಸಿದರೆ ಕೆಟ್ಟದ್ದೇನಲ್ಲ. ನೀವು ನಿಮ್ಮ ಹಣವನ್ನು ಅದಾಗಲೇ ಕಳೆದುಕೊಂಡಿದ್ದೀರಿ ಎಂದು ಭಾವಿಸಿದರೆ ನೆಮ್ಮದಿಯಿಂದ ಇರಬಹುದು. ಅದೊಂದು ಥರ ಯಶಸ್ಸಿನ ಸಣ್ಣ ಅವಕಾಶವಿರುವ ಹತಾಶ ಪ್ರಯತ್ನದಂತೆ ಎಂದು ಅವರು ಹೇಳಿದರು.

ಆದರೆ ಈ ಊಹಾತ್ಮಕ ಡಿಜಿಟಲ್ ಕರೆನ್ಸಿಯಿಂದ ದೂರವಿರುವಂತೆ ಬೋಗ್ಲ್ ಕಿವಿಮಾತು ಹೇಳಿದ್ದಾರೆ. ಬಿಟ್‌ಕಾಯಿನ್ ಮೌಲ್ಯ 20,000 ಡಾ.ಗೂ ಮುಟ್ಟಬಹುದು, ಅದರರ್ಥ ನನ್ನ ಅಭಿಪ್ರಾಯ ತಪ್ಪು ಎಂದಲ್ಲ. ಅದರ ಮೌಲ್ಯ 100 ಡಾ.ಗೆ ಕುಸಿಯತ್ತದಲ್ಲ....ಆಗ ಮತ್ತೊಮ್ಮೆ ಮಾತನಾಡೋಣ ಎನ್ನುತ್ತಾರೆ ಅವರು.

► ಮೌಲ್ಯವರ್ಧನೆ ಹೇಗೆ,ಏನಿದರ ಹಿಂದಿನ ಗುಟ್ಟು?

 ಬಿಟ್‌ಕಾಯಿನ್ ಮೊದಲು ಪರಿಚಯವಾಗಿದ್ದು 2009ರಲ್ಲಿ. 2011,ಆಗಸ್ಟ್‌ನಲ್ಲಿ ಬಿಟ್‌ಸ್ಟಾಂಪ್ ಅದರ ಬೆಲೆಯ ಜಾಡು ಹಿಡಿಯಲು ಆರಂಭಿಸಿದಾಗಿನಿಂದ 1000 ಡಾ.ಗಳನ್ನು ದಾಟಲು 834 ದಿನಗಳನ್ನು ತೆಗೆದುಕೊಂಡಿತ್ತು. 2017,ಮೇ 20ರಂದು 2000 ಡಾ.ಗಳ ಗಡಿಯನ್ನು ದಾಟಲು ಇನ್ನೊಂದು 1270 ದಿನಗಳನ್ನು ತೆಗೆದುಕೊಂಡಿತ್ತು. 2017ರ ಉತ್ತರಾರ್ಧದಲ್ಲಿ ಬಿಟ್‌ಕಾಯಿನ್ ಮೌಲ್ಯ ಏರುತ್ತಲೇ ಇದ್ದು,ಮಂಗಳವಾರ 10,000 ಡಾ.ಗಳನ್ನು ದಾಟಿ ಬಳಿಕ ಕೇವಲ 12 ಗಂಂಟೆಗಳಲ್ಲಿ 11000 ಡಾ.ಗಳ ಮೈಲಿಗಲ್ಲನ್ನು ತಲುಪಿತ್ತು. ಗುರುವಾರ ಶೇ.18ರಷ್ಟು ಇಳಿಕೆಯನ್ನು ಕಂಡಿದೆ. ಇಷ್ಟು ವೇಗದ ಏರಿಕೆಯು ಇದು ನೀರಿನ ಗುಳ್ಳೆಯಂತೆ ಒಡೆಯಲಿದೆಯೇ ಎಂಬ ಆತಂಕವನ್ನು ಹೂಡಿಕೆದಾರರಲ್ಲಿ ಸೃಷ್ಟಿಸಿದೆ.

ಅಂದ ಹಾಗೆ ಬಿಟ್‌ಕಾಯಿನ್ ಪೂರೈಕೆಯು 21 ಮಿಲಿಯನ್‌ಗೆ ಸೀಮಿತವಾಗಿದೆ. ಸುಮಾರು 2040ರ ವೇಳೆಗೆ ಈ ಸಂಖ್ಯೆಯನ್ನು ತಲುಪುವ ನಿರೀಕ್ಷೆಯಿದೆ. ಈವರೆಗೆ 16.7 ಮಿಲಿಯನ್ ಬಿಟ್‌ಕಾಯಿನ್‌ಗಳು ಬಿಡುಗಡೆಗೊಂಡಿವೆ. ‘ಮೈನಿಂಗ್’ ಎಂದು ಕರೆಯಲಾಗುವ ಪ್ರಕ್ರಿಯೆಯ ಮೂಲಕ ಪ್ರತಿ 10 ನಿಮಿಷಗಳಿಗೆ 12.5 ಬಿಟ್‌ಕಾಯಿನ್ ಗಳು ವ್ಯವಸ್ಥೆಯಲ್ಲಿ ಸೇರ್ಪಡೆಗೊಳ್ಳುತ್ತಿವೆ. ಮೈನಿಂಗ್ ಪ್ರಕ್ರಿಯೆಯಲ್ಲಿ ನೂತನ ಬಿಟ್‌ಕಾಯಿನ್‌ಗಳನ್ನು ಸೃಷ್ಟಿಸಲು ಜಾಗತಿಕ ಕಂಪ್ಯೂಟರ್‌ಗಳ ಜಾಲದಲ್ಲಿ ಸಂಕೀರ್ಣ ಅಲ್ಗೋರಿದಮ್‌ಗಳ ಸಮಸ್ಯೆಗಳನ್ನು ಬಿಡಿಸಲು ಪೈಪೋಟಿ ನಡೆಯುತ್ತಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News