‘ಗೇಮ್ ಆಫ್ ಅಯೋಧ್ಯಾ’ದ ನಿರ್ದೇಶಕನ ತೋಳು ಕತ್ತರಿಸಿದರೆ ಒಂದು ಲಕ್ಷ ರೂ. ಬಹುಮಾನ
Update: 2017-11-30 21:15 IST
ಹೊಸದಿಲ್ಲಿ,ನ.30: ವಾರಗಳ ಹಿಂದಷ್ಟೇ ಹರ್ಯಾಣದ ಬಿಜೆಪಿಯ ನಾಯಕರೋರ್ವರು ‘ಪದ್ಮಾವತಿ’ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಮತ್ತು ನಾಯಕಿ ದೀಪಿಕಾ ಪಡುಕೋಣೆ ಅವರ ವಿರುದ್ಧ ಹಿಂಸಾಚಾರವನ್ನು ಉತ್ತೇಜಿಸುವ ಹೇಳಿಕೆಯನ್ನು ನೀಡಿದ್ದರು. ಈ ಘಟನೆ ಇನ್ನೂ ಹಸಿರಾಗಿರುವಾಗಲೇ ‘ಗೇಮ್ ಆಫ್ ಅಯೋಧ್ಯಾ’ದ ನಿರ್ದೇಶಕ ಸುನಿಲ್ ಸಿಂಗ್ ಅವರ ತೋಳುಗಳನ್ನು ಕತ್ತರಿಸಿದವರಿಗೆ ಒಂದು ಲಕ್ಷ ರೂ.ಗಳ ಬಹುಮಾನವನ್ನು ನೀಡುವುದಾಗಿ ಅಲಿಗಡದ ಎಬಿವಿಪಿ ಕಾರ್ಯಕರ್ತ ಅಮಿತ್ ಗೋಸ್ವಾಮಿ ಎಂಬಾತ ಘೋಷಿಸಿದ್ದಾನೆ ಎಂದು ಆಂಗ್ಲ ದೈನಿಕವೊಂದು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.
‘ಗೇಮ್ ಆಫ್ ಅಯೋಧ್ಯಾ’ಕ್ಕೆ ಸೆನ್ಸಾರ್ ಮಂಡಳಿಯು ಅನುಮತಿಯನ್ನು ನಿರಾಕರಿಸಿತ್ತಾದರೂ, ಚಲನಚಿತ್ರ ಪ್ರಮಾಣಪತ್ರ ಮೇಲ್ಮನವಿ ನ್ಯಾಯಾಧಿಕರಣವು ಹಸಿರು ನಿಶಾನೆಯನ್ನು ತೋರಿಸಿದ್ದು, ಡಿ.8ರಂದು ಬಿಡುಗಡೆಗೆ ಚಿತ್ರವು ಸಜ್ಜಾಗಿದೆ. ಬಾಬರಿ ಮಸೀದಿ ಧ್ವಂಸದ ಹಿನ್ನೆಲೆಯಲ್ಲಿ ಹಿಂದೂ-ಮುಸ್ಲಿಂ ಜೋಡಿಯ ಪ್ರೇಮಕಥೆಯನ್ನು ಈ ಚಿತ್ರವು ಬಿಂಬಿಸಿದೆ.