ವಿಮಾನದಲ್ಲಿ 200 ಜೀವಂತ ಜಿರಳೆ ಸಾಗಿಸುತ್ತಿದ್ದ ವೃದ್ಧ ದಂಪತಿಯ ಸೆರೆ

Update: 2017-12-01 10:12 GMT

ಬೀಜಿಂಗ್, ಡಿ.1: ಚೀನಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನ.25 ರಂದು ಲಗೇಜ್‌ಗಳನ್ನು ತಪಾಸಣೆ ನಡೆಸುತ್ತಿದ್ದ ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳಿಗೆ ಅಚ್ಚರಿ ಹಾಗೂ ಆಘಾತವೊಂದು ಎದುರಾಗಿತ್ತು.

  ಚೀನಾದ ವೃದ್ಧ ದಂಪತಿ ಸಾಗಿಸುತ್ತಿದ್ದ ಪ್ಲಾಸ್ಟಿಕ್ ಬ್ಯಾಗ್‌ನ್ನು ತೆರೆದು ನೋಡಿದಾಗ ಕಸ್ಟಮ್ಸ್ ಅಧಿಕಾರಿಗೆ ಅಚ್ಚರಿ ಕಾದಿತ್ತು. ಬ್ಯಾಗಿನೊಳಗೆ ಸುಮಾರು 200ರಷ್ಟು ಜೀವಂತ ಜಿರಳೆಗಳು ಓಡಾಡುತ್ತಿದ್ದವು. ಬ್ಯಾಗ್ ತೆರೆದ ತಕ್ಷಣ ಕಸ್ಟಮ್ಸ್ ಸಿಬ್ಬಂದಿಯ ಮೈಮೇಲೆ ಜಿರಳೆ ಹಾರಿದಾಗ ಅವರು ಒಂದು ಕ್ಷಣ ಗಲಿಬಿಲಿಗೊಂಡರು.

ಬಿಳಿಬಣ್ಣದ ಪ್ಲಾಸ್ಟಿಕ್ ಬ್ಯಾಗ್‌ನೊಳಗೆ ಕಪ್ಪು ವಸ್ತುಗಳು ಓಡಾಡುತ್ತಿರುವುದು ಗಮನಕ್ಕೆ ಬಂತು. ನಮ್ಮ ಸಿಬ್ಬಂದಿ ತೆರೆದು ನೋಡಿದಾಗ ಜಿರಳೆಗಳು ಒಮ್ಮಲ್ಲೇ ಹೊರಗೆ ಬಂದವು. ಆಗ ನಮ್ಮ ಸಿಬ್ಬಂದಿ ಕಿರುಚಾಡಿದ್ದರು’’ ಎಂದು ವಿಮಾನನಿಲ್ದಾಣದ ಭದ್ರತಾ ಸಿಬ್ಬಂದಿ ಹೇಳಿದ್ದಾರೆ.

ಅಧಿಕಾರಿಗಳು ಚೀನಾ ವೃದ್ಧ ದಂಪತಿಯನ್ನು ವಿಚಾರಣೆಗೆ ಒಳಪಡಿಸಿದರು. ತನ್ನ ಪತ್ನಿಯ ಚರ್ಮ ರೋಗದ ಚಿಕಿತ್ಸೆಗಾಗಿ ಜಿರಳೆಗಳನ್ನು ಕೊಂಡೊಯ್ಯುತ್ತಿರುವುದಾಗಿ ವೃದ್ಧ ವ್ಯಕ್ತಿ ಹೇಳಿದರು.

ಜಿರಳೆಯನ್ನು ಕೆಲವು ವೈದ್ಯಕೀಯ ಕ್ರೀಮ್‌ಗೆ ಮಿಶ್ರಣ ಮಾಡಿ ಪತ್ನಿಯ ಚರ್ಮಕ್ಕೆ ಲೇಪಿಸುತ್ತಿರುವುದಾಗಿ ವೃದ್ಧ ವ್ಯಕ್ತಿ ಹೇಳಿದ್ದಾರೆ.

 ವಿಮಾನದಲ್ಲಿ ಕೀಟಗಳಂತಹ ಜೀವಂತ ವಸ್ತುಗಳನ್ನು ಸಾಗಿಸುವಂತಿಲ್ಲ. ವಿಮಾನದಲ್ಲಿ ಇಂತಹ ವಸ್ತುಗಳನ್ನು ಸಾಗಿಸುವುದು ಇದೇ ಮೊದಲಲ್ಲ. 2011ರಲ್ಲಿ ಲಾಸ್‌ಏಂಜಲೀಸ್ ವಿಮಾನನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಸುಮಾರು 240 ವಿವಿಧ ಬಗೆಯ ಮೀನುಗಳನ್ನು ಸಾಗಿಸುತ್ತಿದ್ದಾಗ ಸೆರೆ ಸಿಕ್ಕಿದ್ದ. 2012ರಲ್ಲಿ ಶಾರ್ಜನ್ ಏರ್‌ಪೋರ್ಟ್‌ನಲ್ಲಿ ಈಜಿಪ್ಟ್ ದಂಪತಿ ತಮ್ಮ ಮಗನಿಗೆ ವೀಸಾ ನಿರಾಕರಿಸಿದ ಕಾರಣಕ್ಕ್ಕೆ ಮಗನನ್ನು ಬ್ಯಾಗ್‌ನಲ್ಲಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News