ಮಕ್ಕಳು ನಿಖರವಾಗಿ, ನಿರರ್ಗಳವಾಗಿ ಓದಲು ಕಷ್ಟಪಡುತ್ತಾರೆಯೇ.. ಹಾಗಾದರೆ ಅದು ಡಿಸ್ಲೆಕ್ಸಿಯಾ ಆಗಿರಬಹುದು

Update: 2017-12-01 10:36 GMT

 ಡಿಸ್ಲೆಕ್ಸಿಯಾ ಅಥವಾ ಪದಾಂಧತೆಯು ನರವಿಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಇದಕ್ಕೆ ತುತ್ತಾಗುವ ಮಕ್ಕಳಿಗೆ ನಿಖರವಾಗಿ ಮತ್ತು ನಿರರ್ಗಳವಾಗಿ ಓದಲು ಕಷ್ಟವಾಗುತ್ತದೆ. ಇದು ಅವರ ಕಲಿಯುವಿಕೆ ವೈಕಲ್ಯವಾಗಿದ್ದು, ಮಕ್ಕಳಿಗೆ ಸ್ಪೆಲ್ಲಿಂಗ್‌ಗಳನ್ನು ತಿಳಿದುಕೊಳ್ಳಲು, ಸರಿಯಾಗಿ ಬರೆಯಲು ಮತ್ತು ಓದಲು ಹಾಗೂ ಗಣಿತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿರಬಹುದು. ಬಾಲಿವುಡ್ ನಟ ಆಮಿರ್ ಖಾನ್ ಅವರ ‘ತಾರೆ ಜಮೀನ್ ಪರ್’ ಚಿತ್ರವು ಇದೇ ಡಿಸ್ಲೆಕ್ಸಿಯಾದಿಂದ ಬಳಲುತ್ತಿದ್ದ ಬಾಲಕನ ಕಥೆಯನ್ನು ಹೊಂದಿತ್ತು ಎನ್ನುವದು ಹಲವರಿಗೆ ನೆನಪಿರಬಹುದು.

ಡಿಸ್ಲೆಕ್ಸಿಯಾಕ್ಕೆ ನಿಖರ ಕಾರಣವನ್ನು ತಿಳಿದುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಈ ಸಮಸ್ಯೆಗೆ ಒಂದಕ್ಕಿಂತ ಹೆಚ್ಚು ಕಾರಣಗಳಿವೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಕೆಲವು ಪ್ರಕರಣಗಳಲ್ಲಿ ಅದು ವಂಶ ಪಾರಂಪರ್ಯವಾಗಿ ಬರಬಹುದು. ಮಿದುಳಿನಲ್ಲಿಯ ಸಮಸ್ಯೆಗಳು ಕೂಡ ಈ ರೋಗಕ್ಕೆ ಕಾರಣವಾಗಬಹುದು ಎಂದು ನಂಬಲಾಗಿದೆ. ಆದರೆ ದೃಷ್ಟಿದೋಷ ಡಿಸ್ಲೆಕ್ಸಿಯಾಕ್ಕೆ ಕಾರಣವಾಗುವುದಿಲ್ಲ ಎನ್ನುವುದು ದೃಢಪಟ್ಟಿದೆ.

ಡಿಸ್ಲೆಕ್ಸಿಯಾ ಮಕ್ಕಳನ್ನು ಮಾತ್ರವಲ್ಲ, ವಿವಿಧ ವಯೋಮಾನದ ಗುಂಪುಗಳನ್ನೂ ಕಾಡಬಹುದು ಮತ್ತು ಆಯಾ ವಯೋಮಾನಕ್ಕೆ ತಕ್ಕಂತೆ ಲಕ್ಷಣಗಳೂ ವಿಭಿನ್ನವಾಗಿರುತ್ತವೆ. ಓದುವುದರಲ್ಲಿ ಮತ್ತು ಸ್ಪೆಲ್ಲಿಂಗ್‌ಗಳನ್ನು ತಿಳಿದುಕೊಳ್ಳುವಲ್ಲಿ ಸಮಸ್ಯೆಗಳು, ಬರೆಯುವಲ್ಲಿ ತೊಂದರೆ, ತರಗತಿಯಲ್ಲಿನ ಕಪ್ಪುಹಲಗೆಯ ಮೇಲಿನ ಬರಹ ಅಥವಾ ಪುಸ್ತಕದಲ್ಲಿನ ಪಠ್ಯವನ್ನು ಬರೆದುಕೊಳ್ಳಲು ಕಷ್ಟ ಇವು ಡಿಸ್ಲೆಕ್ಸಿಯಾದ ಸಾಮಾನ್ಯ ಲಕ್ಷಣಗಳಲ್ಲಿ ಸೇರಿವೆ.

ಡಿಸ್ಲೆಕ್ಸಿಯಾದಿಂದ ಬಳಲುತ್ತಿರುವ ಮಗುವಿಗೆ ಗಣಿತವನ್ನು ಮತ್ತು ಭಾಷೆಯನ್ನು ತಿಳಿದುಕೊಳ್ಳಲು ಕಷ್ಟವಾಗಬಹುದು. ಅದು ಅಕ್ಷರವನ್ನು ಉಲ್ಟಾ ಅಥವಾ ವಾಕ್ಯವನ್ನು ಹಿಮ್ಮುಖವಾಗಿ ಬರೆಯಬಹುದು. ಪದಗಳನ್ನು ಸರಿಯಾಗಿ ಓದಲು ಕಷ್ಟವಾಗಬಹುದು.

ಇನ್ನೊಬ್ಬರೆದುರು ಅಥವಾ ತಮ್ಮಷ್ಟಕ್ಕೆ ಗಟ್ಟಿಯಾಗಿ ಓದದಿರುವುದು ಡಿಸ್ಲೆಕ್ಸಿಯಾ ಪೀಡಿತ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಲಕ್ಷಣವಾಗಿದೆ.

ಇಂತಹ ಮಕ್ಕಳು ಶಾಲಾರಂಭದ ದಿನಗಳಲ್ಲಿ ಹೆಚ್ಚಿನ ಶಬ್ದಗಳನ್ನು ಉಚ್ಚರಿಸುವುದು ಹೇಗೆ ಎನ್ನುವುದನ್ನು ಮರೆಯುತ್ತವೆ, ಸಾಮಾನ್ಯವಾಗಿ ಕಣ್ಣಿಗೆ ಬೀಳುತ್ತಿರುವ ಶಬ್ದಗಳನ್ನೂ ಗುರುತಿಸಲು ಅವುಗಳಿಗೆ ಸಾಧ್ಯವಾಗುವುದಿಲ್ಲ, ಜೊತೆಗೆ ಪದೇ ಪದೇ ಸ್ಪೆಲ್ಲಿಂಗ್ ತಪ್ಪುಗಳನ್ನು ಮಾಡುತ್ತವೆ. ಮಗು ಹೆಚ್ಚು ಜನರಿರುವ ಕಡೆಯಿಂದ ದೂರವಿರಲು ಬಯಸುತ್ತದೆ ಮತ್ತು ಖಿನ್ನವಾಗಿರುವಂತೆ ಕಂಡು ಬರುತ್ತದೆ.

ತಮ್ಮ ಮಗುವಿನಲ್ಲಿ ಡಿಸ್ಲೆಕ್ಸಿಯಾದ ಲಕ್ಷಣಗಳು ಕಂಡು ಬರುತ್ತಿವೆ ಎಂಬ ಶಂಕೆಯುಂಟಾ ದರೆ ಹೆತ್ತವರು ಶಿಕ್ಷಕರೊಂದಿಗೆ ಆ ಬಗ್ಗೆ ಸಮಾಲೋಚಿಸಬೇಕು ಮತ್ತು ಈ ಲಕ್ಷಣಗಳ ಮೇಲೆ ನಿಗಾ ಇಡಲು ಅವರ ನೆರವು ಪಡೆದುಕೊಳ್ಳಬೇಕು. ಮನೆಯಲ್ಲಿ ನೀವೇ ಮಗುವಿನಲಿಯ್ಲ ಇಂತಹ ಲಕ್ಷಣಗಳ ಮೇಲೆ ಉತ್ತಮವಾಗಿ ಗಮನ ಹರಿಸಬಹುದಾಗಿದೆ.

ನಿಮ್ಮ ಮಗುವಿನಲ್ಲಿ ಕಂಡು ಬಂದಿರುವ ಲಕ್ಷಣಗಳು ಡಿಸ್ಲೆಕ್ಸಿಯಾದ್ದೇ ಎನ್ನುವುದು ನಿಮಗೆ ಖಚಿತವಾದರೆ ನರರೋಗ ತಜ್ಞರು ಮತ್ತು ಮಕ್ಕಳ ವೈದ್ಯರನ್ನು ಮೊದಲು ಸಂಪರ್ಕಿಸಿ ಸಲಹೆಗಳನ್ನು ಪಡೆದುಕೊಳ್ಳಿ.

ಡಿಸ್ಲೆಕ್ಸಿಯಾಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳುವ ಮುನ್ನ ಮಗು ಯಾವ ಕ್ಷೇತ್ರದಲ್ಲಿ ಸಮಸ್ಯೆಗಳಿಂದ ಬಳಲುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಡಿಸ್ಲೆಕ್ಸಿಯಾಕ್ಕೆ ಪರಿಣಿತರಿಂದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗುತ್ತದೆ ಮತ್ತು ಈ ಕೆಳಗಿನ ಕೆಲವು ವಿಧಾನಗಳನ್ನು ಅನುಸರಿಸುವುದರಿಂದ ಚಿಕಿತ್ಸೆಯು ಪರಿಣಾಮಕಾರಿಯಾಗುವಂತೆ ಮಾಡಬಹುದು.

ನಿಮ್ಮ ಮಗುವಿಗೆ ಓದಲು ಕಷ್ಟವಾಗುತ್ತಿದ್ದರೂ ಪರಿಣಾಮಕಾರಿಯಾದ ವಿಶುವಲ್‌ಗಳನ್ನು ಬಳಸಿ ಆತ ಓದಲು ಸಾಧ್ಯವಾಗುವಂತೆ ಮಾಡಬಹುದು. ಇದಕ್ಕಾಗಿ ನೀವು ಚಿತ್ರಗಳನ್ನು ಮತ್ತು ಬಹುಮಾಧ್ಯಮಗಳನ್ನು ಬಳಸಬಹುದು ಮತ್ತು ಮಕ್ಕಳ ಚಟುವಟಿಕೆಗಳನ್ನು ಹೆಚ್ಚು ಸಂವಾದಪೂರ್ಣವಾಗಿಸಬಹುದು.

ಅಕ್ಷರಮಾಲೆಯನ್ನು ಬರೆಯಲು ಬೇರೆ ಬೇರೆ ಬಣ್ಣಗಳನ್ನು ಬಳಸಿ. ಈ ಅಕ್ಷರಗಳನ್ನು ಸೇರಿಸುವ ಮೂಲಕ ಶಬ್ದಗಳನ್ನು ಸೃಷ್ಟಿಸಿ ಮಗುವಿಗೆ ಹಂತ ಹಂತವಾಗಿ ಸ್ಪೆಲ್ಲಿಂಗ್ ಕಲಿಯಲು ನೆರವಾಗಬಹುದು.

ನೀವು ನಿಮ್ಮ ಮಕ್ಕಳ ಕಲಿಕೆಯಲ್ಲಿ ಆಡಿಯೊ ಬುಕ್‌ಗಳನ್ನೂ ಬಳಸಬಹುದು. ಅದರಲ್ಲಿ ವಿವರಣೆ ಸ್ಪಷ್ಟವಾಗಿದೆ ಮತ್ತು ಅದು ನಿಮ್ಮ ಮಗುವಿನಲ್ಲಿ ಆಸಕ್ತಿಯನ್ನು ಮೂಡಿಸುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ತನಗಿರುವ ಸಮಸ್ಯೆಯಿಂದ ಮಗು ಪ್ರತ್ಯೇಕವಾಗಿರಲು ಮತ್ತು ಖಿನ್ನತೆಗೊಳಗಾಗಲು ಅವಕಾಶ ನೀಡಬೇಡಿ. ಬದಲಿಗೆ ಬರೆಯಲು ಮತ್ತು ಓದಲು ಅದನ್ನು ಪ್ರೇರೇಪಿಸಿ. ಗೆರೆಯ ಹಾಳೆ ಮತ್ತು ವರ್ಡ್ ಬ್ಯಾಂಕ ಬಳಸಿ ಮಗುವಿಗೆ ಬರೆಯುವುದನ್ನು ಅಭ್ಯಾಸ ಮಾಡಿಸಿ. ನಿಮ್ಮ ಮಗು ನೀವು ಕೊಟ್ಟ ಕೆಲಸ ಸರಿಯಾಗಿ ಮಾಡಿದಾಗ ಪುಟ್ಟ ಕಾಣಿಕೆಯನ್ನು ನೀಡಿ ಖುಷಿಪಡಿಸಿ.

ಡಿಸ್ಲೆಕ್ಸಿಯಾ ಪೀಡಿತ ಮಗುವು ಓದುವಾಗ ಹೆತ್ತವರೂ ಅದರೊಂದಿಗೆ ಧ್ವನಿಗೂಡಿಸಿದರೆ ಹೆಚ್ಚಿನ ಲಾಭವಾಗುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ವಿಶುವಲ್‌ಗಳೊಂದಿಗೆ ಆಸಕ್ತಿ ಹುಟ್ಟಿಸುವಂತಹ ಪುಸ್ತಕವನ್ನು ಓದಿ ಮಗುವಲ್ಲಿ ಆಸಕ್ತಿಯನ್ನು ಮೂಡಿಸಿ. ಇದಕ್ಕಾಗಿ ಕೆಲವು ಆನ್‌ಲೈನ್ ಸಾಫ್ಟ್‌ವೇರ್‌ಗಳನ್ನು ಬಳಸಬಹುದು.

ಮಕ್ಕಳನ್ನು ಮರಳಿನಲ್ಲಿ ಆಡಲು ಬಿಡಿ. ಮರಳಿನಲ್ಲಿ ಶಬ್ದಗಳು ಮತ್ತು ಸಂಖ್ಯೆಗಳನ್ನು ಬರೆಯಲು ಅವಕಾಶ ಕಲ್ಪಿಸುವುದರಿಂದ ಮಕ್ಕಳಿಗೆ ತಮ್ಮ ಕೈ ಮತ್ತು ಮಿದುಳಿನ ನಡುವೆ ಸಮನ್ವಯವನ್ನು ಸುಧಾರಿಸಿಕೊಳ್ಳಲು ನೆರವಾಗುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಅದು ಮಗುವಿಗೆ ನೆನಪಿಟ್ಟುಕೊಳ್ಳುವುದನ್ನು ಸುಲಭವಾಗಿಸುವ ಜೊತೆಗೆ ಅದರ ಬರವಣಿಗೆ ಕೌಶಲವನ್ನು ಹೆಚ್ಚಿಸಲೂ ನೆರವಾಗುತ್ತದೆ.

ಡಿಸ್ಲೆಕ್ಸಿಯಾ ಪೀಡಿತ ಮಕ್ಕಳ ಹೆತ್ತವರು ಉತ್ತಮ ಸಹನಶಕ್ತಿಯ ಜೊತೆಗೆ ದೃಢವಾದ ಮನೋಬಲವನ್ನು ಹೊಂದಿರುವುದು ಬಹು ಮುಖ್ಯವಾಗಿದೆ. ಮಕ್ಕಳೊಂದಿಗೆ ಸಂವಹನ ಸಂಪರ್ಕವಿರಲಿ ಮತ್ತು ಅವರು ಹೇಳುವುದನ್ನು ಗಮನವಿಟ್ಟು ಆಲಿಸಿ. ಮಗು ಖಿನ್ನತೆ ಗೊಳಗಾಗದಂತೆ ಮತ್ತು ಇತರರಿಂದ ದೂರವಾಗಿರದಂತೆ ಎಚ್ಚರಿಕೆಯನ್ನು ವಹಿಸಿ. ಅದು ಸಾಮಾಜಿಕವಾಗಿ ಸಕ್ರಿಯವಾಗಿರುವಂತೆ ನೋಡಿಕೊಳ್ಳಿ ಮತ್ತು ಸದಾ ಅದನ್ನು ಬೆಂಬಲಿಸುತ್ತಿರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News