ನಿಮ್ಮ ಮುಖದ ಮೇಲೆಯೇ ಕಾಣಿಸುವ ಈ 8 ರೋಗಲಕ್ಷಣಗಳ ಬಗ್ಗೆ ಗೊತ್ತೇ...?

Update: 2017-12-02 09:33 GMT

ನಿಮ್ಮ ಮುಖದಲ್ಲಿಯ ಲಕ್ಷಣಗಳನ್ನು ನೋಡಿಯೇ ರೋಗಗಳನ್ನು ಗುರುತಿಸಬಹುದು ಎನ್ನುವುದು ನಿಮಗೆ ಗೊತ್ತೇ? ಇಲ್ಲಿವೆ ಅಂತಹ ಎಂಟು ರೋಗಲಕ್ಷಣಗಳು.

ಒಣಗಿದ, ಪದರುಪದರಾದ ಚರ್ಮ ಅಥವಾ ತುಟಿಗಳು

ಇದು ನಿರ್ಜಲೀಕರಣದ ಸಾಮಾನ್ಯ ಲಕ್ಷಣವಾಗಿದೆ. ಇದು ಹೈಪೊಥೈರಾಯ್ಡಿಸಂನಂತಹ ಬೆವರು ಗ್ರಂಥಿಯ ಕಾರ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುವ ಹೆಚ್ಚು ಗಂಭೀರ ಸಮಸ್ಯೆಯನ್ನೂ ಸೂಚಿಸಬಹುದು ಅಥವಾ ಮಧುಮೇಹದ ಸಂಕೇತವೂ ಆಗಿರಬಹುದು.

ಮುಖದಲ್ಲಿ ಅತಿಯಾದ ಕೂದಲುಗಳು

ಮಹಿಳೆಯರ ಮುಖದಲ್ಲಿ, ನಿರ್ದಿಷ್ಟವಾಗಿ ದವಡೆಯ ರೇಖೆಯಲ್ಲಿ, ಗಲ್ಲದಲ್ಲಿ ಮತ್ತು ತುಟಿಯ ಮೇಲ್ಭಾಗದಲ್ಲಿ ಬೇಡದ ಕೂದಲುಗಳು ಬೆಳೆಯುತ್ತಿದ್ದರೆ ಅದು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುವ ಪಾಲಿಸಿಸ್ಟಿಕ್ ಓವರಿಯ ಸಮಸ್ಯೆಯಾಗಿರಬಹುದು. ಇಂತಹ ಸಂದರ್ಭದಲ್ಲಿ ಪುರುಷ ಹಾರ್ಮೋನ್‌ಗಳ ಸ್ರವಿಸುವಿಕೆ ಮಟ್ಟ ಹೆಚ್ಚಾಗಿರುತ್ತದೆ.

ಕಣ್ಣಗುಡ್ಡೆಗಳ ಮೇಲೆ ಮೃದುವಾದ ಹಳದಿ ಗಡ್ಡೆಗಳು

ಕಣ್ಣುಗುಡ್ಡೆಗಳ ಮೂಲೆಗಳಲ್ಲಿ ಅಥವಾ ಅವುಗಳ ಮೇಲೆ ಇಂತಹ ಪುಟ್ಟಗಡ್ಡೆಗಳು ಕಾಣಿಸಿಕೊಂಡರೆ ಅವು ಹೆಚ್ಚಿನ ಕೊಲೆಸ್ಟ್ರಾಲ್‌ನ್ನು ಸೂಚಿಸುತ್ತವೆ ಮತ್ತು ಇಂತಹ ವ್ಯಕ್ತಿಗಳಿಗೆ ಹೃದ್ರೋಗಗಳ ಅಪಾಯ ಹೆಚ್ಚಾಗಿರುತ್ತದೆ.

ಊದಿಕೊಂಡ ಕಣ್ಣುಗಳು

ದಣಿದಿರುವಂತೆ ಕಾಣುವ ಕಣ್ಣುಗಳು ತೀವ್ರ ಅಲರ್ಜಿಗಳ ಎಚ್ಚರಿಕೆಯ ಸಂಕೇತವಾ ಗಬಹುದು. ಈ ಅಲರ್ಜಿಗಳು ರಕ್ತನಾಳಗಳನ್ನು ಹಿಗ್ಗಿಸುತ್ತವೆ ಮತ್ತು ಅವುಗಳಲ್ಲಿ ಸೋರಿಕೆಗೆ ಕಾರಣವಾಗುತ್ತವೆ. ಕಣ್ಣುಗಳ ಕೆಳಗಿನ ಸಂವೇದನಾಶೀಲ ಚರ್ಮವು ಊದಿಕೊಳ್ಳುವಂತೆ ಮಾಡುತ್ತವೆ.

ಮುಖದಲ್ಲಿ ಅಸಮತೆ

ನಮ್ಮ ಮುಖದ ಎಡಭಾಗ ಮತ್ತು ಬಲಭಾಗ ಸಮಾನವಾಗಿರುತ್ತವೆ. ಮುಖದಲ್ಲಿ ಅಸಮತೆ ಕಂಡು ಬಂದರೆ ಅದು ಪಾರ್ಶ್ವವಾಯುವಿನ ಮೊದಲ ಲಕ್ಷಣವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ವ್ಯಕ್ತಿಗಳು ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಭಿನ್ನವಾಗಿ ಕಾಣುತ್ತದೆ. ಮುಖದ ಒಂದು ಭಾಗ ಮರಗಟ್ಟಿರುವುದು ಅಥವಾ ಪೂರ್ಣವಾಗಿ ನಗಲು ಸಾಧ್ಯವಾಗದ ಅನುಭವವಾಗಬಹುದು. ಮಾತನಾಡುವಲ್ಲಿ ತೊಂದರೆ ಕಾಣಿಸಕೊಳ್ಳಬ ಹುದು. ನಿಮ್ಮ ಕುಟುಂಬದಲ್ಲಿ ಹಿಂದೆ ಯಾರಾದರೂ ಪಾರ್ಶ್ವವಾಯು ಪೀಡಿತರಾಗಿದ್ದಿದ್ದರೆ ಈ ಲಕ್ಷಣಗಳನ್ನು ಖಂಡಿತ ಕಡೆಗಣಿಸಬೇಡಿ.

ಬಣ್ಣದಲ್ಲಿ ಬದಲಾವಣೆ

 ಮುಖದ ಚರ್ಮದ ಬಣ್ಣದಲ್ಲಿ ಅಲ್ಪ ಬದಲಾವಣೆಯಾದರೂ ಅದು ಆರೋಗ್ಯ ಎಲ್ಲೋ ಹದಗೆಟ್ಟಿದೆ ಎನ್ನುವುದನ್ನು ಸೂಚಿಸಬಹುದು. ಚರ್ಮದ ಬಣ್ಣ ಪೇಲವವಾಗಿದ್ದರೆ ಅದು ರಕ್ತಹೀನತೆಯ ಲಕ್ಷಣವಾಗಿರಬಹುದು. ಹಳದಿಯಾಗಿದ್ದರೆ ಯಕೃತ್ತಿನ ರೋಗವನ್ನು ಸೂಚಿಸಬಹುದು. ತುಟಿಗಳಲ್ಲಿ ಮತ್ತು ಉಗುರುಗಳ ಬುಡದಲ್ಲಿ ನೀಲಿ ಕಲೆಗಳು ಕಂಡುಬಂದರೆ ಅದು ಹೃದಯ ಅಥವಾ ಶ್ವಾಸಕೋಶಗಳ ಕಾಯಿಲೆಯ ಲಕ್ಷಣವಾಗಿರಬ ಹುದು.

ದದ್ದುಗಳು ಮತ್ತು ಹಪ್ಪಳೆಗಳು

ಮುಖದಲ್ಲಿ ದದ್ದುಗಳು ಮತ್ತು ಹಪ್ಪಳೆಗಳೆದ್ದಿದ್ದರೆ ಅದು ಕೆಲವು ಜೀರ್ಣ ಸಮಸ್ಯೆಗಳನ್ನು ಸೂಚಿಸಬಹುದು. ತುರಿಕೆಯನ್ನುಂಟು ಮಾಡುವ ಕೆಂಪು ಬಣ್ಣದ ದದ್ದುಗಳು ಸಿಲಿಯಾಕ್ ಕಾಯಿಲೆಯ ಸಂಕೇತವಾಗಿರಬಹುದು. ಕೆನ್ನೆಯ ಮೂಳೆಗಳು ಅಥವಾ ಮೂಗಿನ ಸೇತುವೆಯಲ್ಲಿ ಪಾತರಗಿತ್ತಿ ಆಕಾರದ ದದ್ದು ಲೂಪಸ್ ಅಥವಾ ಸ್ವ ಪ್ರತಿರೋಧಕ ವಿಕಾರವನ್ನು ಸೂಚಿಸುತ್ತದೆ. ಅಲರ್ಜಿ, ಎಸ್ಜಿಮಾ ಮತ್ತು ರೊಸಾಸಿಯಾ ಸೋಂಕುಗಳು ಕೂಡ ಮುಖದಲ್ಲಿ ದದ್ದುಗಳಿಗೆ ಕಾರಣವಾಗುತ್ತವೆ.

ಗಲ್ಲ ಕಿರಿದಾಗುವಿಕೆ

ಕುತ್ತಿಗೆ ದಪ್ಪಗಾಗುವುದು ಮತ್ತು ಗಲ್ಲ ಕಿರಿದಾಗುವುದು ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಯನ್ನು ಸೂಚಿಸಬಹುದು. ಇಂತಹ ಪ್ರಕರಣದಲ್ಲಿ ವ್ಯಕ್ತಿಯು ನಿದ್ರಿಸಿದ್ದಾಗ ಉಸಿರಾಟ ಆಗಾಗ್ಗೆ ಸುಮಾರು ಹತ್ತು ಸೆಕೆಂಡ್‌ಗಳ ಕಾಲ ಸ್ಥಗಿತಗೊಳ್ಳುತ್ತಿರುತ್ತದೆ. ಜೊತೆಗೆ ಗಟ್ಟಿಯಾಗಿ ಗೊರಕೆ ಹೊಡೆಯುತ್ತಿದ್ದರೆ ಬೆಳಿಗ್ಗೆ ತಲೆನೋವು ಅಥವಾ ದಿನವಿಡೀ ಆಯಾಸ ಕಾಣಿಸಿಕೊಳ್ಳಬಹುದು. ತಕ್ಷಣ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News