ವಿಕಲಚೇತನರ ಸಬಲೀಕರಣ: ದೇಶದ ಪ್ರಮುಖ ಸವಾಲು

Update: 2017-12-02 18:50 GMT

ಅಂಗವೈಕಲ್ಯದಿಂದ ಬಾಧಿತರಾದ ವ್ಯಕ್ತಿಗಳ ಕಲ್ಯಾಣ ಕಾರ್ಯಕ್ರಮಗಳನ್ನು ರೂಪುಗೊಳಿಸುವಾಗ ಅವರನ್ನು ಸಾಮಾಜಿಕವಾಗಿ ಒಳಗೊಳ್ಳುವಂತೆ ಮಾಡುವುದು, ಅವರಿಗೆ ಮಾನವಹಕ್ಕುಗಳನ್ನು ನೀಡುವುದು, ಔದ್ಯೋಗಿಕ ಬೆಂಬಲ, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳನ್ನು ನೀಡುವುದನ್ನು ಕೂಡಾ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಜಗತ್ತಿನಾದ್ಯಂತ 10ರಿಂದ 15 ಶೇಕಡಾ ಮಂದಿ, ಯಾವುದಾದರೂ ಒಂದು ವಿಧದ ದೈಹಿಕ ಅಸಾಮರ್ಥ್ಯದಿಂದ ಬಳಲುತ್ತಿದ್ದಾರೆ. ಜಗತ್ತಿನಾದ್ಯಂತ 84.10 ಕೋಟಿ ವಿಕಲಚೇತನರಿದ್ದು, ಇದು ಜಗದ ಒಟ್ಟು ಜನಸಂಖ್ಯೆಯ ಶೇ.11ರಷ್ಟಾಗಿದೆ. ಇವರ ಪೈಕಿ ಶೇ.80ರಷ್ಟು ಮಂದಿ, ಕಡಿಮೆ ಸಂಪನ್ಮೂಲವಿರುವ ದೇಶಗಳಲ್ಲಿ ವಾಸವಾಗಿದ್ದಾರೆ. ಜಾಗತಿಕವಾಗಿ ಶ್ರವಣಮಾಂದ್ಯದಿಂದ 6.17 ಕೋಟಿ, ದೃಷ್ಟಿ ಮಾಂದ್ಯದಿಂದ 7.58 ಕೋಟಿ ಮಂದಿ ಪೀಡಿತರಾಗಿದ್ದಾರೆಂದು ಅಂದಾಜಿಸಲಾಗಿದೆ. ಕ್ರಮವಾಗಿ ಈ ಮೂರು ಶ್ರೇಣಿಗಳ 5.43 ಕೋಟಿ, 6.81 ಕೋಟಿ ಹಾಗೂ 3.54 ಕೋಟಿ ಮಂದಿ ಕಡಿಮೆ ಸಂಪನ್ಮೂಲವಿರುವ ದೇಶಗಳಲ್ಲಿ ವಾಸವಾಗಿದ್ದಾರೆ.

ವೃದ್ಧಾಪ್ಯ ಹಾಗೂ ಅಂಗವಿಕಲತೆ ಪರಸ್ಪರ ಥಳಕುಹಾಕಿಕೊಂಡಿದೆ. ಹೆಚ್ಚುತ್ತಿರುವ ವೃದ್ಧರ ಜನಸಂಖ್ಯೆಗೆ ಅನುಗುಣವಾಗಿ ಅಂಗವೈಕಲ್ಯದಿಂದ ಪೀಡಿತರಾದ ವೃದ್ಧರ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದೆ. ಆ ಮೂಲಕ ಜಗತ್ತಿನಾದ್ಯಂತದ ವಿಕಲಚೇತನರ ಒಟ್ಟು ಸಂಖ್ಯೆಯಲ್ಲಿ ಕೂಡಾ ಹೆಚ್ಚಳವಾಗಿದೆ. 2050ರ ವೇಳೆಗೆ ಈ ಸಂಖ್ಯೆಯು ಶೇ.21.1ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಅಂಗವೈಕಲ್ಯವು ಬಡತನಕ್ಕೆ ಕಾರಣವಾಗುತ್ತದೆ. ಆರೋಗ್ಯ ಹಾಗೂ ಪುನರ್ವಸತಿ ಸೇವೆಗಳನ್ನು ಪಡೆದುಕೊಳ್ಳುವ ವ್ಯಕ್ತಿಯ ಸಾಮರ್ಥ್ಯವನ್ನು ಅದು ಸೀಮಿತಗೊಳಿಸುತ್ತದೆ, ಅಷ್ಟೇ ಅಲ್ಲ ಶಿಕ್ಷಣ ಹಾಗೂ ಉದ್ಯೋಗದ ಅವಕಾಶವನ್ನು ಕೂಡಾ ಸೀಮಿತಗೊಳಿಸುತ್ತದೆ ಮತ್ತು ಆರೋಗ್ಯಪಾಲನೆ ಅಥವಾ ವೈಯಕ್ತಿಕ ನೆರವಿಗೆ ಸಂಬಂಧಿಸಿದ ಹೆಚ್ಚುವರಿ ವೆಚ್ಚಗಳನ್ನು ಅಧಿಕಗೊಳಿಸುತ್ತದೆ.

ಸೆನೆಗಲ್‌ನ ನ್ಯಾಯಾಧೀಶ ಕೆಬಾ ಎಂ’ಬಾಯೆ 1972ರಲ್ಲಿ ಸ್ಟ್ರಾಸ್‌ಬರ್ಗ್ ವಿವಿಯ ಮಾನವಹಕ್ಕುಗಳ ಕುರಿತ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ‘‘ಪ್ರತಿಯೊಬ್ಬ ವ್ಯಕ್ತಿಗೆ ಬದುಕುವ ಮತ್ತು ಉತ್ತಮವಾದ ಜೀವನವನ್ನು ನಡೆಸುವ ಹಕ್ಕಿದೆ’’ ಎಂಬ ಚಿಂತನೆಯನ್ನು ಮಂಡಿಸಿದ್ದರು. ಹೀಗಾಗಿ ಅಂಗವೈಕಲ್ಯದಿಂದ ಬಾಧಿತರಾದ ವ್ಯಕ್ತಿಗಳ ಕಲ್ಯಾಣ ಕಾರ್ಯಕ್ರಮಗಳನ್ನು ರೂಪುಗೊಳಿಸುವಾಗ ಅವರನ್ನು ಸಾಮಾಜಿಕವಾಗಿ ಒಳಗೊಳ್ಳುವಂತೆ ಮಾಡುವುದು, ಅವರಿಗೆ ಮಾನವಹಕ್ಕುಗಳನ್ನು ನೀಡುವುದು, ಔದ್ಯೋಗಿಕ ಬೆಂಬಲ, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳನ್ನು ನೀಡುವುದನ್ನು ಕೂಡಾ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ವಿಕಲಚೇತನರನ್ನು ಸಾಮಾಜಿಕವಾಗಿ ಒಳಪಡಿಸಿಕೊಳ್ಳುವಂತೆ ಮಾಡಲು ಕಾರ್ಯಕ್ರಮಗಳು ರೂಪುಗೊಳಿಸುವಾಗ, ಅವರಿಗೆ ಶಿಕ್ಷಣ, ಉದ್ಯೋಗಗಳು, ನಾಗರಿಕ ಬದುಕು, ಕುಟುಂಬ ಹಾಗೂ ಸಮಾಜದೊಂದಿಗೆ ಅವರು ಹೊಂದಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ತಂತ್ರಜ್ಞಾನದ ಪ್ರಭಾವವು ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾದ ಮಾನ್ಯತೆಯನ್ನು ಪಡೆದುಕೊಳ್ಳುತ್ತಿದೆ. ಸಾರ್ವಜನಿಕ ಸೌಲಭ್ಯಗಳನ್ನು ಹಾಗೂ ನಾಗರಿಕ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಅವರ ವಿರುದ್ಧ ತಾರತಮ್ಯವನ್ನು ಕಡಿಮೆಗೊಳಿಸುವುದಕ್ಕಾಗಿ ಇದನ್ನು ಮಾಡಲಾಗುತ್ತಿದೆ. ಊರುಗೋಲುಗಳು, ಶ್ರವಣ ಯಂತ್ರಗಳು (ಹಿಯರಿಂಗ್ ಏಯ್ಡಿ), ಎಫ್‌ಎಂ ಸಿಸ್ಟಂಗಳು, ಕೃತಕ ಆವಯವಗಳು, ಬ್ರೈಲಿ ಟೈಪ್‌ರೈಟರ್‌ಗಳು, ಕೃತಕ ಕಿವಿ ಅಳವಡಿಕೆ (ಕೋ ಕ್ಲೆಯರ್ ಇಂಪ್ಲಾಂಟ್ಸ್), ಆವಯವಗಳಿಗೆ ಹೊಂದಿಕೊಳ್ಳುವ ಪರಿಕರಗಳು, ಪ್ಯಾಂಟ್ ಅಥವಾ ಶೂ ಧರಿಸಲು ನೆರವಾಗುವ ಸಾಧನಗಳು, ಗಾಲಿಕುರ್ಚಿಗಳು ಇತ್ಯಾದಿ ಪರಿಕರಗಳನ್ನು ಅಂಗವಿಕಲರನ್ನು ಸಶಕ್ತಗೊಳಿಸುವ ಉಪಕರಣಗಳೆಂದು ಕೆಲವು ದಶಕಗಳ ಹಿಂದೆ ವ್ಯಾಖ್ಯಾನಿಸಲಾಗಿತ್ತು. ಆದರೆ ಇಂದು ಮೋಟಾರ್‌ಶಕ್ತಿ ಚಾಲಿತ ಗಾಲಿಕುರ್ಚಿಗಳು ಹಾಗೂ ಇಲೆಕ್ಟ್ರಾನಿಕ್ ವ್ಯವಸ್ಥೆಗಳ ಮೂಲಕ ನಾಗರಿಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಚರ್ಚೆಗಳಾಗುತ್ತಿವೆ.

ಇಂದು ಅಂಗವೈಕಲ್ಯವುಳ್ಳ ವ್ಯಕ್ತಿಗಳು ಯಾವುದೇ ವಿಶೇಷ ವಿನ್ಯಾಸದ ಉಪಕರಣಗಳನ್ನು ದೇಹಕ್ಕೆ ಅಳವಡಿಸಿಕೊಳ್ಳದೆಯೇ ಎಲ್ಲಾ ಸಾಮಾನ್ಯ ವ್ಯಕ್ತಿಗಳು ಬಳಸುವಂತಹ ಉಪಕರಣಗಳ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುವಂತೆ ಮಾಡುವ ಉಪಕರಣಗಳ ಉತ್ಪಾದನೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಎಲಿವೇಟರ್‌ಗಳು, ಇಳಿಜಾರು ಮೆಟ್ಟಲು (ರ್ಯಾಂಪ್), ಅಗಲವಾದ ಹಾಲ್‌ವೇ, ಸುಲಭವಾಗಿ ತೆರೆಯಲ್ಪಡುವ ಬಾಗಿಲುಗಳು, ಸ್ಕ್ರೀನ್ ರೀಡರ್‌ಗಳ ಮೂಲಕ ಕೆಲಸ ಮಾಡುವ ವೆಬ್‌ಸೈಟ್‌ಗಳು, ದೃಷ್ಟಿ ವರ್ಧಕ (ಮ್ಯಾಗ್ನಿಫೈಯರ್)ಗಳು, ಹಿಯರಿಂಗ್ ಏಯ್ಡಿ ಗಳ ಮೂಲಕ ಕೆಲಸ ಮಾಡಬಲ್ಲ ಮೊಬೈಲ್‌ಫೋನ್‌ಗಳು ಅವುಗಳಲ್ಲಿ ಕೆಲವು. ಪಾಲನೆದಾರರು ಹಾಗೂ ಅಂಗವೈಕಲ್ಯದಿಂದ ಪೀಡಿತರಾದವರ ನಡುವೆ ಸಂವಹನವನ್ನು ವೃದ್ಧಿಗೊಳಿಸುವಲ್ಲಿ ಆಧುನಿಕ ಸಾಮಗ್ರಿಗಳು ನೆರವಾಗುತ್ತವೆ. ಆಶ್ರಯ ಕೇಂದ್ರಗಳಲ್ಲಿ ವಾಸವಾಗಿರುವ ಅಂಗವಿಕಲರು ಮಾಹಿತಿಗಳನ್ನು ಪಡೆಯಲು ಹಾಗೂ ಪ್ರಶ್ನೆಗಳನ್ನು ಕೇಳುವುದಕ್ಕಾಗಿ ಅವರಿಗೆ ಟ್ಯಾಬ್‌ಗಳನ್ನು ಒದಗಿಸಲಾಗುತ್ತದೆ. ಬರೆಯಲು ಸಾಧ್ಯವಾಗದವರು ಸಂಜ್ಞೆಗಳನ್ನು ಆಧರಿಸಿದ ಸಾಧನಗಳ ಮೂಲಕ ಸಂವಹನ ನಡೆಸಬಹುದಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳು ಇಂತಹ ವ್ಯಕ್ತಿಗಳಿಗಾಗಿ ಇಳಿಜಾರಾದ ಪ್ರವೇಶದ್ವಾರಗಳಿರುವ ವಿಶೇಷ ಬಸ್‌ಗಳನ್ನು ಒದಗಿಸುವ ಮೂಲಕ ಅವರ ಸಾರ್ವಜನಿಕ ಸಂಚಾರ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿದೆ.

ಜಗತ್ತಿನ ಒಟ್ಟು ಅಂಗವಿಕಲ ವ್ಯಕ್ತಿಗಳಲ್ಲಿ 5ರಿಂದ 15 ಶೇಕಡಾ ಮಂದಿ ತಮ್ಮ ನಿತ್ಯಬದುಕಿನಲ್ಲಿ ತಂತ್ರಜ್ಞಾನದ ನೆರವು ಪಡೆಯುತ್ತಿದ್ದಾರೆಂದು ಅಂದಾಜಿಸಲಾಗಿದೆ. ತಂತ್ರಜ್ಞಾನದ ನೆರವಿನಿಂದ ವಂಚಿತರಾದ ಅಂಗವಿಕಲರಲ್ಲಿ ಬಹುತೇಕ ಮಂದಿ ದಕ್ಷಿಣ ಏಶ್ಯ ಹಾಗೂ ಆಫ್ರಿಕದಲ್ಲಿರುವ ಕಡಿಮೆ ಸಂಪನ್ಮೂಲಗಳ ದೇಶಗಳಲ್ಲಿ ಬದುಕುತ್ತಿದ್ದಾರೆ. ಆದರೆ ಇಂತಹ ತಂತ್ರಜ್ಞಾನಗಳನ್ನು ಪಡೆದುಕೊಳ್ಳುವ ಮುನ್ನ ಹಾಗೂ ಪಡೆದ ಆನಂತರ ಹಲವಾರು ಸಮಸ್ಯೆಗಳು ಕೂಡಾ ಉದ್ಭವಿಸುತ್ತವೆ. ಉದಾಹರಣೆಗೆ, ಅಂಗವಿಕಲ ವ್ಯಕ್ತಿಗಳಿಗೆ ಈಗ ಲಭ್ಯವಿರುವ ತಂತ್ರಜ್ಞಾನಗಳ ಬಗ್ಗೆ ಅರಿವಿನ ಕೊರತೆಯಿದೆ. ಅವುಗಳನ್ನು ಖರೀದಿಸುವ ಸಾಮರ್ಥ್ಯ, ಇಂತಹ ಸೇವೆಗಳನ್ನು ಒದಗಿಸಲು ತರಬೇತುಗೊಂಡ ವ್ಯಕ್ತಿಗಳ ಕೊರತೆ, ಉತ್ಪಾದನಾ ಹಂತದಲ್ಲಿನ ಸವಾಲುಗಳು, ಉತ್ಪಾದನೆ ಹಾಗೂ ಆಮದು ಕುರಿತಂತೆ ಪ್ರಶ್ನೆಗಳು ಉದ್ಭವಿಸಿವೆ. ಅದೇ ರೀತಿ, ಅಂತಹ ತಂತ್ರಜ್ಞಾನ ಸಾಧನಗಳ ನಿರ್ವಹಣೆ ಹಾಗೂ ರಿಪೇರಿ ಮತ್ತು ಅವುಗಳನ್ನು ಹೊಂದಿಸಿಕೊಳ್ಳುವ ಕುರಿತಾಗಿಯೂ ಸವಾಲುಗಳು ಉದ್ಭವಿಸುತ್ತವೆ. ಪರ್ಯಾಯ ತಂತ್ರಜ್ಞಾನವನ್ನು ಆಧರಿಸಿದ ಶೇ.50ರಷ್ಟು ಉಪಕರಣಗಳು, ಅವುಗಳ ಬಳಕೆಯಲ್ಲಿನ ತರಬೇತಿಯ ಕೊರತೆಯಿಂದಾಗಿ ಪರಿತ್ಯಜಿಸಲ್ಪಟ್ಟಿವೆ ಇಲ್ಲವೇ ತಿರಸ್ಕರಿಸಲ್ಪಟ್ಟಿವೆ.

ಸ್ವೀಕಾರಾರ್ಹವಾದ, ಕೈಗೆಟಕುವ ದರದ, ಯೋಗ್ಯ ಗುಣಮಟ್ಟದ (ಕಡಿಮೆ ದರವೆಂದರೆ, ಕೆಳಗುಣಮಟ್ಟವೆಂದು ಅರ್ಥವಲ್ಲ), ಸರಳ ಮತ್ತು ಮುಕ್ತ ನಿರ್ವಹಣೆ ಸಾಧ್ಯವಿರುವಂತಹ ಸಮರ್ಪಕವಾದ ನೆರವು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದೇ ಈ ಸಮಸ್ಯೆಗಿರುವ ಉತ್ತರವಾಗಿದೆ. ಇಂತಹ ತಂತ್ರಜ್ಞಾನವಿರುವ ಸಾಧನಗಳನ್ನು ಸ್ಥಳೀಯವಾಗಿ ರಿಪೇರಿಗೊಳಿಸಬೇಕಾಗಿದೆ ಹಾಗೂ ಕ್ಷಿಪ್ರವಾಗಿ ಜೋಡಣೆಯಾಗುವ ಸಾಮರ್ಥ್ಯವನ್ನು ಹೊಂದಿರಬೇಕಾಗಿದೆ. ಹಾಗಾದಲ್ಲಿ ಇಂತಹ ಉಪಕರಣಗಳ ಬಳಕೆಗೆ ಜನರು ತುಂಬಾ ಹೊತ್ತು ಕಾಯಬೇಕಾದ ಅಗತ್ಯವಿರುವುದಿಲ್ಲ. ಅಷ್ಟೇ ಅಲ್ಲ, ಇಲ್ಲಿ ಸರ್ವಿಸಿಂಗ್‌ನ ಅವಕಾಶವೂ ನಿರ್ಣಾಯಕವಾಗಿರುತ್ತದೆ. ಈ ಉಪಕರಣಗಳು ಬಳಕೆಯಲ್ಲಿರುವ ಸ್ಥಳಗಳ ಸಮೀಪವೇ ಸರ್ವಿಸಿಂಗ್ ಸೌಲಭ್ಯ ಕೂಡಾ ಇರಬೇಕಾಗುತ್ತದೆ ಮತ್ತು ಅದು ಕೇಂದ್ರೀಕೃತವಾಗಿರಕೂಡದು.

ಅಂಗವೈಕಲ್ಯದಿಂದ ಪೀಡಿತರಾದವರಿಗೆ ಲಭ್ಯವಿರುವ ಸಹಾಯಕ ತಂತ್ರಜ್ಞಾನದ ವಿಧಗಳ ಕುರಿತ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ. ಈ ತಂತ್ರಜ್ಞಾನಗಳು ಎಲ್ಲಿ ದೊರೆಯುತ್ತವೆ ಹಾಗೂ ಅವುಗಳನ್ನು ಹೇಗೆ ಪಡೆದು ಕೊಳ್ಳಬಹುದೆಂಬ ಬಗ್ಗೆ ಪರಿಜ್ಞಾನ ಹೊಂದಿರಬೇಕು. ದೇಶದ ಒಟ್ಟಾರೆ ಮೂಲಸೌಕರ್ಯ ಹಾಗೂ ಪರಿಸರಕ್ಕೆ ಹೊಂದಿಕೊಳ್ಳುವಂತಹ ವಿನ್ಯಾಸಗಳಲ್ಲಿ ನೂತನ ತಂತ್ರಜ್ಞಾನದ ಉಪಕರಣಗಳನ್ನು ತಯಾರಾಗುವಂತೆ ಮಾಡಲು ಕಾರ್ಯಾಗಾರಗಳನ್ನು ನಡೆಸಬೇಕಾಗಿದೆ. ಸ್ಥಳೀಯ ಮಟ್ಟದಲ್ಲಿ ಇಂತಹ ಉಪಕರಣಗಳ ತಯಾರಿಕೆಯನ್ನು ಪ್ರೋತ್ಸಾಹಿಸಬೇಕು. ಕಾನೂನಿನಡಿ ತಾವು ಹೊಂದಿರುವ ಜವಾಬ್ದಾರಿಗಳ ಬಗ್ಗೆ ಸರಕಾರ, ಉದ್ಯಮಗಳು ಹಾಗೂ ಅಂಗವೈಕಲ್ಯವಿರುವ ವ್ಯಕ್ತಿಗಳು ಕಾನೂನಿನಡಿ ತಮಗಿರುವ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕಾಗಿದೆ.

Writer - ಎಂ. ಎ. ಸಿರಾಜ್

contributor

Editor - ಎಂ. ಎ. ಸಿರಾಜ್

contributor

Similar News

ಜಗದಗಲ
ಜಗ ದಗಲ