ಯುದ್ಧ ಮಾಡದೇ ಪ್ರತಿ ವರ್ಷ ಸಾವಿಗೀಡಾಗುವ ಭಾರತೀಯ ಸೈನಿಕರೆಷ್ಟು ಗೊತ್ತೇ?
ಹೊಸದಿಲ್ಲಿ, ಡಿ.3: ಯಾವುದೇ ಯುದ್ಧ ಮಾಡದೇ ಭಾರತೀಯ ಸೇನೆ ಪ್ರತಿ ವರ್ಷ 1,600 ಮಂದಿ ಸೈನಿಕರನ್ನು ಕಳೆದುಕೊಳ್ಳುತ್ತಿದೆ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಸೈನಿಕರ ಸಾವಿಗೆ ಮುಖ್ಯ ಕಾರಣ ರಸ್ತೆ ಅಪಘಾತಗಳು ಹಾಗೂ ಆತ್ಮಹತ್ಯೆ. ಜಮ್ಮು ಕಾಶ್ಮೀರದ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ನಡೆಯುವ ಸಂಘರ್ಷದಲ್ಲಿ ಆಗುವ ಜೀವಹಾನಿಗಿಂತ ಹೆಚ್ಚಿನ ಜೀವಹಾನಿ ಈ ಎರಡು ಕಾರಣಗಳಿಂದ ಆಗುತ್ತಿದೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ ಪ್ರತೀ ವರ್ಷ 350 ಸೈನಿಕರು ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. 120 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇತರ ಪ್ರಮುಖ ಕಾರಣಗಳೆಂದರೆ, ತರಬೇತಿ ಅವಧಿಯ ಆಕಸ್ಮಿಕಗಳು, ಆರೋಗ್ಯ ಸಮಸ್ಯೆಗಳು.
ಇಡೀ ವಿಶ್ವದಲ್ಲೇ ಅತ್ಯಧಿಕ ಮಂದಿ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿರುವ ದೇಶ ಎಂಬ ಕುಖ್ಯಾತಿಗೆ ಭಾರತ ಪಾತ್ರವಾಗಿದ್ದು, ಆತ್ಮಹತ್ಯೆ ಪ್ರಕರಣಗಳಲ್ಲೂ ಭಾರತಕ್ಕೆ ಅಗ್ರಸ್ಥಾನ. ಇದೇ ಕಾರಣಗಳು ಅತ್ಯಂತ ಶಿಸ್ತಿನ ಮತ್ತು ತರಬೇತಿಯ ವಾತಾವರಣ ಇರುವ ಸಶಸ್ತ್ರ ಪಡೆಗಳನ್ನೂ ಬಲಿ ಪಡೆಯುತ್ತಿರುವುದು ಆತಂಕಕಾರಿ ವಿಚಾರ.
ಭಾರತದ ನೌಕಾಪಡೆ, ಭೂಸೇನೆ ಹಾಗೂ ವಾಯುಪಡೆಗಳು 2015ರಿಂದೀಚೆಗೆ 6,500 ಸೈನಿಕರನ್ನು ಕಳೆದುಕೊಂಡಿವೆ. ಅತ್ಯಧಿಕ ಜೀವಹಾನಿಯಾಗಿರುವುದು 11.73 ಲಕ್ಷ ಮಂದಿಯನ್ನು ಹೊಂದಿರುವ ಭೂಸೇನೆಯಲ್ಲಿ ಎನ್ನುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ.