ಮೊದಲ ರಾತ್ರಿ ಪತಿಯ ರಾಕ್ಷಸಿ ಪ್ರವೃತ್ತಿ: ಮಹಿಳೆ ಗಂಭೀರ
ಹೈದರಾಬಾದ್, ಡಿ.3: ವಿವಾಹವಾದ ಮೊದಲ ರಾತ್ರಿಯೇ ವ್ಯಕ್ತಿಯೊಬ್ಬ ಪತ್ನಿಯನ್ನು ವಿಕೃತವಾಗಿ ಹಿಂಸಿಸಿ, ಚೂರಿಯಿಂದ ಇರಿದ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯ ದೇಹದ ಸಿಕ್ಕ ಸಿಕ್ಕ ಕಡೆಗಳಲ್ಲಿ ಕಚ್ಚಿದ ಗಂಡ ಮುಖ ಮತ್ತು ಇತರ ಸೂಕ್ಷ್ಮ ಭಾಗಗಳ ಮೇಲೆ ಗುದ್ದಿ ರಾಕ್ಷಸಿ ಪ್ರವೃತ್ತಿ ಮೆರೆದಿದ್ದಾನೆ.
ಗಂಗಾಧರ ನೆಲ್ಲೂರು ತಾಲೂಕಿನ ಮೋತರಂಗನಪಲ್ಲಿ ಎಂಬಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. 24 ವರ್ಷದ ಸಂತ್ರಸ್ತೆ ನವವಧುವನ್ನು ಚಿತ್ತೂರು ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಅಪೋಲೊ ಆಸ್ಪತ್ರೆಗೆ ಕಳುಹಿಸಲಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ. ಪತಿಯನ್ನು ಬಂಧಿಸಿ ಶನಿವಾರ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಎಂಬಿಎ ಪದವೀಧರೆಯನ್ನು ಗುರುವಾರ ವಿವಾಹವಾಗಿದ್ದ. ವಿವಾಹದ ವೇಳೆ 1 ಕೋಟಿ ರೂಪಾಯಿ ವರದಕ್ಷಿಣೆ ನೀಡಿದ್ದಾಗಿ ಕುಟುಂಬದವರು ಹೇಳಿದ್ದಾರೆ. ಮೊದಲ ರಾತ್ರಿ ವಧು ಮಲಗುವ ಕೋಣೆಗೆ ಬರುತ್ತಿದ್ದಂತೆ ಆಕೆಯ ಮೇಲೆರಗಿ ಬೇಕಾಬಿಟಿ ಹೊಡೆಯಲು ಆರಂಭಿಸಿದ ಎನ್ನಲಾಗಿದೆ. "ಮುಖದ ಮೇಲೆ ಗುದ್ದಿ, ಸೂಕ್ಷ್ಮ ಭಾಗಗಳಿಗೆ ತುಳಿದ. ದೇಹದ ಕಂಡಕಂಡ ಭಾಗಗಳನ್ನೆಲ್ಲ ಕಚ್ಚಿ, ಚೂರಿಯಿಂದ ಇರಿದ" ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.
ಜೀವಕ್ಕೆ ಅಪಾಯವಿರುವುದನ್ನು ಅರಿತು ಕೊಠಡಿಯಿಂದ ತಪ್ಪಿಸಿಕೊಂಡಿದ್ದಾರೆ. ಆಕೆಗೆ ಆಘಾತವಾಗಿದ್ದು, ಮುಖ ಊದಿಕೊಂಡಿದೆ. ದೇಹದ ಎಲ್ಲ ಕಡೆ ಇರಿತ ಹಾಗೂ ಕಚ್ಚಿದ ಗಾಯಗಳಿವೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಸಂತ್ರಸ್ತೆಯ ತಾಯಿ ವಿವರ ನೀಡಿದ್ದಾರೆ.