ಕಚೇರಿಯಲ್ಲೇ ಮಹಿಳೆಯ ಎದುರು ಯುವಕನಿಂದ ಹಸ್ತಮೈಥುನ!
ಹೊಸದಿಲ್ಲಿ, ಡಿ.3: ರಾಷ್ಟ್ರರಾಜಧಾನಿಯು ದೇಶದಲ್ಲಿ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಎನ್ನುವ ಅಂಶ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಅಂಕಿಅಂಶಗಳಿಂದ ದೃಢಪಟ್ಟ ಬೆನ್ನಲ್ಲೇ ವ್ಯಕ್ತಿಯೊಬ್ಬ 32 ವರ್ಷದ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿ ಆಕೆಯ ಎದುರು ಹಸ್ತಮೈಥುನ ಮಾಡಿ, ಆಕೆಯನ್ನು ಕೂಡಿಹಾಕಿ ಪರಾರಿಯಾದ ವಿಚಿತ್ರ ಘಟನೆ ರಾಜಧಾನಿಯ ಹೃದಯಭಾಗದಲ್ಲಿ ನಡೆದಿದೆ.
ಕನೌಟ್ ಪ್ಯಾಲೇಸ್‌ನ ಕಚೇರಿಯ ಟೆರೇಸ್‌ನಲ್ಲಿ ಗುರುವಾರ ಬೆಳಗ್ಗೆ 10ರ ವೇಳೆಗೆ ಈ ಘಟನೆ ನಡೆದಿದ್ದು, ಮಹಿಳೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಈ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದಾನೆ. ಹಲವು ಕಚೇರಿಗಳು ಇರುವ ಈ ಕಟ್ಟಡದಲ್ಲೇ ಮಹಿಳೆ ಉದ್ಯೋಗದಲ್ಲಿದ್ದರು.
ವ್ಯಕ್ತಿಯ ಮುಖಚರ್ಯೆಯನ್ನು ಮಹಿಳೆ ವಿವರಿಸಿದ್ದು, ಘಟನೆ ನಡೆದ 48 ಗಂಟೆ ಬಳಿಕವೂ ಸಿಸಿಟಿವಿ ದೃಶ್ಯಾವಳಿ ಅಸ್ಪಷ್ಟವಾಗಿದೆ ಎಂಬ ಕಾರಣ ನೀಡಿ ದಿಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. "ಆದರೆ ಆತ ಹೇಗಿದ್ದಾನೆ ಮತ್ತು ಯಾವ ಉಡುಪು ಧರಿಸಿದ್ದ ಎನ್ನುವ ಬಗ್ಗೆ ಕಲ್ಪನೆ ಬಂದಿದೆ" ಎಂದು ಡಿಸಿಪಿ ಬಿ.ಕೆ.ಸಿಂಗ್ ಹೇಳಿದ್ದಾರೆ.
ಬಿಡುವಿನ ವೇಳೆಯಲ್ಲಿ ಮಹಿಳೆ ಟೆರೇಸ್‌ಗೆ ಬಂದಾಗ ಯುವಕನೊಬ್ಬ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಮುಖವನ್ನು ಜಾಕೆಟ್‌ನಿಂದ ಮುಚ್ಚಿಕೊಂಡಿದ್ದ. "ಸುಮಾರು 20 ವರ್ಷ ವಯಸ್ಸಿನ ಯುವಕ ಹಿಂಬಾಲಿಸಿಕೊಂಡು ಬಂದು ಅಸಭ್ಯವಾಗಿ ನೋಡುತ್ತಿದ್ದ. ಏನಾದರೂ ಪ್ರಮಾದವಾಗಿದೆಯೇ ಎಂದು ಆತನನ್ನು ಕೇಳಿದಾಗ ಆತ ನನ್ನ ದೇಹದತ್ತ ಕೈತೋರಿಸಿ, ನಿಂತುಕೊಂಡು ದಿಟ್ಟಿಸಿ ನೋಡತೊಡಗಿದ. ಅಲ್ಲಿಂದ ಹೊರಡಲು ಅನುವಾದಾಗ ಅಡ್ಡಗಟ್ಟಿದ. ಪೊಲೀಸರಿಗೆ ಕರೆ ಮಾಡುವುದಾಗಿ ನಾನು ಬೆದರಿಕೆ ಹಾಕಿದಾಗ ಹಸ್ತಮೈಥುನ ಮಾಡಿಕೊಂಡ" ಎಂದು ಮಹಿಳೆ ದೂರಿದ್ದಾರೆ.
ಮಹಿಳೆ ಆತನನ್ನು ತಳ್ಳಿ ಟೆರೇಸ್ ಬಾಗಿಲ ಬಳಿ ಬಂದಳು. ಆಗ ಬಾಗಿಲ ಚಿಲಕ ಹಾಕಿ ನಾನು ತಪ್ಪಿಸಿಕೊಳ್ಳಲು ಅವಕಾಶ ನೀಡದಂತೆ ಮಾಡಿರುವುದು ಗಮನಕ್ಕೆ ಬಂತು ಎಂದು ಮಹಿಳೆ ವಿವರಿಸಿದ್ದಾರೆ. ಮಹಿಳೆ ಕೂಗಿಕೊಂಡಾಗ ಆಕೆಯನ್ನು ಅಶ್ಲೀಲವಾಗಿ ನಿಂದಿಸಿ ಮೊಬೈಲ್ ಕಸಿದುಕೊಂಡ. ಬಳಿಕ ಪಕ್ಕದ ಟೆರೇಸ್‌ಗೆ ಹಾರಿ ತಪ್ಪಿಸಿಕೊಂಡ. ಚೀರಾಟ ಕೇಳಿ ಟೆರೇಸ್‌ಗೆ ಮಹಿಳೆಯ ಸಹೋದ್ಯೋಗಿಗಳು ಧಾವಿಸಿ ರಕ್ಷಿಸಿದರು ಎಂದು ಮಹಿಳೆ ತಿಳಿಸಿದ್ದಾರೆ.