×
Ad

ಪಾಕ್ ಚುನಾವಣೆಯಲ್ಲಿ ಹಾಫಿಝ್ ಗುಂಪಿನಿಂದ ಸ್ಪರ್ಧೆ

Update: 2017-12-03 22:32 IST

ಇಸ್ಲಾಮಾಬಾದ್,ಡಿ.3: ಮುಂದಿನ ವರ್ಷ ನಡೆಯಲಿರುವ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ ನೇತೃತ್ವದ ನಿಷೇಧಿತ ಸಂಘಟನೆಯಾದ ಜಮಾಅತ್-ಉದ್- ದಾವಾ ಪಕ್ಷವು ನೂತನವಾಗಿ ಸ್ಥಾಪನೆಯಾಗಿರುವ ಮಿಲಿ ಮುಸ್ಲಿಂ ಲೀಗ್ ಪಕ್ಷದ ಬ್ಯಾನರ್‌ನಡಿಯಲ್ಲಿ ಸ್ಪರ್ಧಿಸಲಿದೆಯೆಂದು ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಹಾಫಿಝ್ ಸಯೀದ್ ತಿಳಿಸಿದ್ದಾನೆ.

 ಕಾಶ್ಮೀರ ವಿವಾದದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುವುದಕ್ಕೆ ನೆರವಾಗುವ ಉದ್ದೇಶದಿಂದ ತನ್ನ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಕೈಗೊಂಡಿದೆಯೆಂದು ಆತ ಹೇಳಿದ್ದಾನೆ.

ಕಾಶ್ಮೀರ ಹೋರಾಟಕ್ಕೆ ಕಳಂಕ ತರಲು ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಿ ಲಾಬಿ ನಡೆಸುತ್ತಿದೆ ಹಾಗೂ ಪಾಕಿಸ್ತಾನದ ಹಾಲಿ ಸರಕಾರವು ಭಾರತಕ್ಕೆ ಮಣಿದು, ಅದರ ಓಲೈಕೆಯಲ್ಲಿ ತೊಡಗಿದೆಯೆಂದು ಹಾಫಿಝ್ ಸಯೀದ್ ಆರೋಪಿಸಿದ್ದಾನೆ.

 ಕಾಶ್ಮೀರ ಹೋರಾಟದ ಬಗ್ಗೆ ಜಾಗತಿಕ ಗಮನಸೆಳೆಯುವುದಕ್ಕಾಗಿ ರಾಜಕೀಯ ಪ್ರವೇಶಿಸಲು ಇದು ಸಕಾಲವಾಗಿದೆ ಎಂದು ಆತ ಹೇಳಿದ್ದಾನೆ.

  ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಲಾಹೋರ್‌ನ ಎನ್‌ಎ-120 ರಾಷ್ಟೀಯ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯಲ್ಲಿ ಮಿಲ್ಲಿ ಮುಸ್ಲಿಮ್ ಲೀಗ್ ಸ್ಪರ್ಧಿಸಿತ್ತು. ಪನಾಮಾ ಪೇಪರ್ಸ್‌ ಹಗರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಮಾಜಿ ಪ್ರಧಾನಿ ನವಾಝ್ ಶರೀಫ್ ಅವರನ್ನು ಅನರ್ಹಗೊಳಿಸಿದ್ದರಿಂದ ಈ ಕ್ಷೇತ್ರವು ಖಾಲಿಬಿದ್ದಿತ್ತು. ಉಪಚುನಾವಣೆಯಲ್ಲಿ ನವಾಝ್ ಶರೀಫ್‌ರ ಪತ್ನಿ ಕುಲ್ಸೂಮ್ ನವಾಝ್ ವಿಜಯಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News