×
Ad

ವಿಶ್ವಸಂಸ್ಥೆಯ ವಲಸಿಗರ ಒಪ್ಪಂದದಿಂದ ಹಿಂದೆ ಸರಿದ ಅಮೆರಿಕ

Update: 2017-12-03 22:45 IST

ನ್ಯೂಯಾರ್ಕ್,ಡಿ.3: ವಲಸಿಗರು ಹಾಗೂ ನಿರಾಶ್ರಿತರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸುಧಾರಣೆಗಳನ್ನು ತರಲು ವಿಶ್ವಸಂಸ್ಥೆಯು ರೂಪಿಸಿರುವ ಒಪ್ಪಂದದಿಂದ ಹಿಂದೆ ಸರಿಯಲು ಟ್ರಂಪ್ ಆಡಳಿತವು ಶನಿವಾರ ನಿರ್ಧರಿಸಿದೆ. ಈ ಒಪ್ಪಂದವು ತನ್ನ ನೀತಿಗಳಿಗೆ ಅಸಮಂಜಸವಾಗಿದೆಯೆಂದು ಅಮೆರಿಕವು ವಿಶ್ವಸಂಸ್ಥೆಗೆ ತಿಳಿಸಿದೆ.

  ವಲಸೆ ಕುರಿತ ವಿಶ್ವಸಂಸ್ಥೆಯ ಜಾಗತಿಕ ಒಡಂಬಡಿಕೆಯಲ್ಲಿ ತನ್ನ ಪಾಲ್ಗೊಳ್ಳುವಿಕೆಯನ್ನು ಅಮೆರಿಕವು ಕೊನೆಗೊಳಿಸುತ್ತಿದೆಯೆಂದು ಇಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕದ ನಿಯೋಗವು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರಿಗೆ ತಿಳಿಸಿದೆ’’ಎಂದು ಟ್ರಂಪ್ ಆಡಳಿತವು ಹೇಳಿಕೆಯೊಂದರಲ್ಲಿ ತಿಳಿಸಿದೆ.

2016ರ ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 193 ಸದಸ್ಯ ರಾಷ್ಟ್ರಗಳು ನಿರಾಶ್ರಿತರು ಹಾಗೂ ವಲಸಿಗರ ಕುರಿತಾದ ನ್ಯೂಯಾರ್ಕ್ ಘೋಷಣೆ ಎಂಬ ಒಡಂಬಡಿಕೆಯನ್ನು ಅವಿರೋಧವಾಗಿ ಅಂಗೀಕರಿಸಿದ್ದವು. ನಿರಾಶ್ರಿತರ ಹಕ್ಕುಗಳ ರಕ್ಷಣೆ, ಅವರ ಪುನರ್ವಸತಿಗೆ ನೆರವಾಗುವುದು ಹಾಗೂ ಆಶ್ರಯ ಪಡೆದ ದೇಶಗಳಲ್ಲಿ ಅವರಿಗೆ ಶಿಕ್ಷಣ ಹಾಗೂ ಉದ್ಯೋಗಗಳನ್ನು ಒದಗಿಸಲು ನೆರವಾಗುವುದಾಗಿ ಈ ಒಪ್ಪಂದದಡಿ ಸದಸ್ಯ ರಾಷ್ಟ್ರಗಳು ವಾಗ್ದಾನ ಮಾಡಿದ್ದವು.

  ಅಮೆರಿಕವು ಒಪ್ಪಂದದಿಂದ ಹಿಂದೆ ಸರಿದಿದ್ದರೂ, ಜಗತ್ತಿನಾದ್ಯಂತದ ವಲಸಿಗರು ಮತ್ತು ನಿರಾಶ್ರಿತರನ್ನು ಬೆಂಬಲಿಸುವ ತನ್ನ ನೀತಿಯನ್ನು ಮುಂದುವರಿಸಲಿದೆ. ಆದರೆ ವಲಸೆ ನೀತಿಗಳ ಕುರಿತಂತೆ ನಮ್ಮ ನಿರ್ಧಾರಗಳನ್ನು ಅಮೆರಿಕನ್ನರು ಮಾತ್ರವೇ ರೂಪಿಸಬೇಕಾಗಿದೆ ಎಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕ ರಾಯಭಾರಿ ನಿಕ್ಕಿ ಹ್ಯಾಲೆ ಇಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News