ಕಪ್ಪುಹಣ ಬಿಳುಪು ಪ್ರಕರಣ: ಡಿ.4ರಂದು ಮಲ್ಯ ವಿಚಾರಣೆ
ಲಂಡನ್,ಡಿ.3: ಈ ವರ್ಷದ ಆರಂಭದಲ್ಲಿ ಕಪ್ಪು ಹಣವನ್ನು ಬಿಳುಪುಗೊಳಿಸಿದ ಆರೋಪದಲ್ಲಿ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರಿಂದ ಬಂಧಿಸಲ್ಪಟ್ಟ ಬಳಿಕ 6.50 ಲಕ್ಷ ಪೌಂಡ್ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಮದ್ಯದೊರೆ ವಿಜಯ್ ಮಲ್ಯ ಸೋಮವಾರ ಪ್ರಕರಣದ ವಿಚಾರಣೆಗಾಗಿ ಸೋಮವಾರ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟರ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ಭಾರತದ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ.ಗೂ ಅಧಿಕ ಸಾಲವನ್ನು ಮರುಪಾವತಿಸದೆ 2016ರ ವಿದೇಶಕ್ಕೆ ಪರಾರಿಯಾದ ಬಳಿಕ ಮಲ್ಯ ಲಂಡನ್‌ನಲ್ಲಿ ನೆಲೆಸಿದ್ದರು.
ಕಪ್ಪುಹಣಬಿಳುಪುಗೊಳಿಸಿದ ಪ್ರಕರಣದಲ್ಲಿ ತಾನುಅಮಾಯಕನಾಗಿದ್ದು, ತನ್ನ ಮೇಲೆ ಪೊಲೀಸರು ಕಪೋಲಕಲ್ಪಿತ ಆರೋಪಗಳನ್ನು ಹೊರಿಸಿದ್ದಾರೆಂದು ಮಲ್ಯ ಹೇಳಿದ್ದಾರೆ.
ಬ್ರಿಟನ್‌ನ ಕ್ರಿಮಿನಲ್ ಹಾಗೂ ಅರ್ಥಿಕ ವಂಚನೆ ಕಾನೂನುಗಳ ತಜ್ಞ ನ್ಯಾಯವಾದಿಯೆಂದು ಖ್ಯಾತರಾದ ಬ್ಯಾರಿಸ್ಟರ್ ಕ್ಲೇರ್ ಮೊಂಟೆಗೊಮರಿ ನೇತೃತ್ವದ ವಕೀಲರ ತಂಡವು ಮಲ್ಯ ಪರವಾಗಿ ನ್ಯಾಯಾಲಯದಲ್ಲಿ ವಾದಿಸಲಿದೆ.
ಮಲ್ಯ ಅವರನ್ನು ಗಡಿಪಾರು ಮಾಡಿ, ತನಗೆ ಹಸ್ತಾಂತರಿಸಬೇಕೆಂದು ಭಾರತವು ಬ್ರಿಟನ್ ಸರಕಾರವನ್ನು ಆಗ್ರಹಿಸುತ್ತಿದೆ.