ಕ್ರಾಂತಿಕಾರಿ ಉಧಮ್ ಸಿಂಗ್ ಪಂಜಾಬಿ ಅಸ್ಮಿತೆಯ ಹಲವು ಮುಖಗಳಲ್ಲಿ ಒಂದು ಮುಖ ಮಾತ್ರ

Update: 2017-12-03 18:59 GMT

ಭಾಗ-1

ಕೊಲೆ ಆಪಾದನೆಗಳನ್ನು ಹೊತ್ತಿದ್ದ ಉಧಮ್ ಸಿಂಗ್‌ನನ್ನು 1940ರಲ್ಲಿ ಲಂಡನ್‌ನ ಒಂದು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು. ಆ ವರ್ಷ ಮಾರ್ಚ್13ರಂದು ಆತ ಪಂಜಾಬಿನ ಮಾಜಿ ಲೆಫ್ಟಿನೆಂಟ್ ಗವರ್ನರ್ ಮೈಕಲ್ ಒಡ್ವಾಯರ್‌ನ ಮೇಲೆ ಗುಂಡುಹಾರಿಸಿ ಆತನನ್ನು ಕೊಂದಿದ್ದ. ಜಿಲಿಯನ್ ವಾಲಾಬಾಗ್ ಹತ್ಯಾಕಾಂಡ ಒಡ್ವಾಯರ್‌ನ ಮೇಲ್ವಿಚಾರಣೆಯಲ್ಲೇ ನಡೆದಿತ್ತು. ಉಧಮ್ ಸಿಂಗ್ ಗುಂಡಿಕ್ಕಿ ಒಡ್ವಾಯರ್‌ನನ್ನು ಕೊಂದ 21 ವರ್ಷಗಳ ಹಿಂದೆ 1919ರ ಎಪ್ರಿಲ್ 13 ರಂದು, ಭಾರತದಲ್ಲಿ ಬ್ರಿಟಿಷ್ ಸೇನೆಯ ಸೈನಿಕರು ಅಮೃತ್‌ಸರದ ಜಲಿಯನ್ ವಾಲಾಬಾಗ್‌ನಲ್ಲಿ ಶಾಂತವಾಗಿ ಪ್ರತಿಭಟಿಸುತ್ತಿದ್ದ ಜನರ ಗುಂಪೊಂದರ ಮೇಲೆ ಗುಂಡುಹಾರಿಸಿದ್ದರು. ಸುತ್ತ ಗೋಡೆಗಳಿದ್ದ ಆ ಉದ್ಯಾನದಲ್ಲಿ ಸೈನಿಕರ ಗುಂಡೇಟಿನಿಂದಾಗಿ 1,000ಕ್ಕೂ ಹೆಚ್ಚು ಮಂದಿ ಅಮಾಯಕರು ಕೊಲ್ಲಲ್ಪಟ್ಟರು. ಆಗ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಮೈಕಲ್ ಒಡ್ವಾಯರ್ ಮುಗ್ದರ ಮೇಲೆ ಗುಂಡುಹಾರಿಸಿದ ಸೈನಿಕರ ಕ್ರಮವನ್ನು ‘‘ಸರಿಯಾದ ಕ್ರಮ’’ವೆಂದು ಹೇಳಿದ್ದ.
ಬ್ರಿಟಿಷ್ ಆಡಳಿತದ ವಿರುದ್ಧ, ಪಂಜಾಬಿ ಸಿಖ್ಖರ ಮಾರ್ಕ್ಸ್ ವಾದಿ ಘದ್ದರ್ ಚಳವಳಿಯಿಂದ ಮತ್ತು ಭಗತ್‌ಸಿಂಗ್‌ನಿಂದ ಸ್ಫೂರ್ತಿ ಪಡೆದ ಓರ್ವಕ್ರಾಂತಿಕಾರಿಯಾಗಿದ್ದ ಉಧಮ್ ಸಿಂಗ್ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ವಿರುದ್ಧ ಪ್ರತೀಕಾರ ತೀರಿಸಲು ನಿರ್ಧರಿಸಿದ ಒಡ್ವಾಯರ್‌ನನ್ನು ಕೊಂದ ಬಳಿಕ ಆತ ತಾನಾಗಿಯೇ ಪೊಲೀಸರಿಗೆ ತನ್ನನ್ನು ಒಪ್ಪಿಸಿ ಬಂಧಿತನಾದ. ನ್ಯಾಯಾಲಯದಲ್ಲಿ, ವಿಚಾರಣೆ ಆರಂಭವಾಗುವ ಮೊದಲು ಪ್ರಮಾಣವಚನ ಸ್ವೀಕರಿಸಲು ಅವನಿಗೆ ಸಿಖ್ಖ್ಖರ ಪವಿತ್ರಗ್ರಂಥವಾದ ಗ್ರಂಥಸಾಹಿಬ್‌ನ ಒಂದು ಪ್ರತಿಯನ್ನು ನೀಡಲಾಯಿತು. ಅದನ್ನು ಸ್ವೀಕರಿಸಲು ನಿರಾಕರಿಸಿದ ಉಧಮ್ ಸಿಂಗ್ ಅದಕ್ಕೆ ಬದಲಾಗಿ, ಪಂಜಾಬ್‌ನ ಪ್ರಸಿದ್ಧ ಪ್ರಣಯಕತೆಯಾದ ವಾರಿಸ್ ಶಾನ ‘ಹೀರ್ ರಾಂಜಾ’ ಪುಸ್ತಕವನ್ನು ಹಿಡಿದು ತಾನು ಪ್ರಮಾಣ ಮಾಡುವುದಾಗಿ ಹೇಳಿದ. ನ್ಯಾಯಾಲಯಕ್ಕೆ ಬರುವ ಮೊದಲೇ, ಅದಾಗಲೇ ಆತ ‘ಹೀರ್‌ರಾಂಜಾ’ದ ಒಂದು ಪ್ರತಿಯನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡಿದ್ದ.

ಅವನಿಗಿಂತ ಮೊದಲೇ ರಾಷ್ಟ್ರೀಯ ರಂಗದಲ್ಲಿ ಕಾಣಸಿಕೊಂಡಿದ್ದ ಭಗತ್‌ಸಿಂಗ್‌ನ ಹಾಗೆಯೇ ಉಧಮ್ ಸಿಂಗ್ ಕೂಡ ಭಾರತದ ರಾಷ್ಟ್ರೀಯ ಹೋರಾಟದ ಒಂದು ಸಂಕೇತವಾಗಿದ್ದ. ದೇಶದ ಸ್ವಾತಂತ್ರಕ್ಕಾಗಿ ಭಾರತದ ಎಲ್ಲ ಪ್ರಮುಖ ಜನ ಸಮುದಾಯಗಳು ಹೀಗೆ ಒಟ್ಟಾಗಿ ಹೋರಾಡುತ್ತಿವೆ ಎಂಬುದನ್ನು ಸೂಚಿಸುವ ಸಲುವಾಗಿ, ನ್ಯಾಯಾಲಯದ ವಿಚಾರಣೆಯ ವೇಳೆ ನ್ಯಾಯಾಧೀಶರು ನಿನ್ನ ಹೆಸರೇನೆಂದು ಕೇಳಿದಾಗ ಆತ ರಾಮ್ ಮುಹಮ್ಮದ್ ಸಿಂಗ್ ಆಝಾದ್ ಎಂದು ಹೇಳಿದ. ಒಂದೆಡೆ, ತನ್ನ ಮಾರ್ಕ್ಸ್ ವಾದಿ ರಾಜಕೀಯ ಒಲವು ಮತ್ತು ನಿಲುವುಗಳ ಮೂಲಕ ಉಧಮ್ ಸಿಂಗ್ ಒಂದು ಅಂತಾರಾಷ್ಟ್ರೀಯ ಕ್ರಾಂತಿಕಾರಿ ದೃಷ್ಟಿಕೋನವನ್ನು ಹೊಂದಿದ್ದ. ಈ ದೃಷ್ಟಿಕೋನವನ್ನು ಸ್ವಾತಂತ್ರ ಹೋರಾಟದೊಳಕ್ಕೆ ತರಲು ಆತ ಬಯಸಿದ್ದ. 1930ರ ದಶಕದಲ್ಲಿ ಮತ್ತು 1940ರ ದಶಕದ ಆದಿ ಭಾಗದಲ್ಲಿ ಆದಂತೆ ಸ್ವಾತಂತ್ರ ಹೋರಾಟವನ್ನು ಸಂಕುಚಿತ ಕೋಮುವಾದಿ ಅಥವಾ ಜನಾಂಗೀಯ ಭೂತಕನ್ನಡಿ (ಲೆನ್ಸ್)ಗಳ ಮೂಲಕ ನೋಡಲು ಆತ ನಿರಾಕರಿಸಿದ. ಇನ್ನೊಂದೆಡೆ ಆತ ಪಂಜಾಬಿ ಸಾಂಸ್ಕೃತಿಕ ಭಾವಪುಂಜಗಳಲ್ಲಿ ಇನ್ನೂ ಭದ್ರವಾಗಿ ತನ್ನ ಬೇರುಗಳನ್ನು ಇಳಿಯಬಿಟ್ಟಿದ್ದ.
ಭಾರತೀಯಸಿನೆಮಾ ಉದ್ಯಮದಲ್ಲಿ ಆಗಾಗ್ಗೆ ಉಲ್ಲೇಖಗೊಳ್ಳುವುದ ರಿಂದಾಗಿ ಈಗ ವ್ಯಾಪಕವಾಗಿ ಎಲ್ಲರಿಗೂ ತಿಳಿದಿರುವ ಶಾನ ‘ಹೀರ್‌ರಾಂಜಾ’ ಒಂದು ಪಂಜಾಬಿ ಜಾನಪದ ಕತೆ. ಈ ಜಾನಪದ ಕತೆಯು ತಾನು ಹುಟ್ಟಿಕೊಂಡ ಸಂಸ್ಕೃತಿಯಲ್ಲಿ ಆಳವಾಗಿ ಸೇರಿಕೊಂಡಿರುವ, ಮತ್ತು ಪಂಜಾಬ್‌ನ ಜನತೆಯ ಮನೋರಂಗದ ಅವಿಭಾಜ್ಯ ಅಂಗವಾಗಿರುವ ಒಂದು ಕತೆಯಷ್ಟೇ ಆಗಿರದೆ ಅದು ಪಂಜಾಬಿ ಅನನ್ಯತೆಯ, ಪಂಜಾಬಿ ಅಸ್ಮಿತೆಯ ಅತ್ಯಂತ ಮುಖ್ಯವಾದ ಸಂಕೇತಗಳಲ್ಲಿ ಒಂದು ಸಂಕೇತವಾಗಿದೆ. ಹೀರ್- ರಾಂಜಾದ ಪ್ರತಿಯನ್ನು ಮುಟ್ಟಿ ಪ್ರಮಾಣಮಾಡುವ ಆಯ್ಕೆಯ ಮೂಲಕ ಯಾವುದೇ ಜನಾಂಗೀಯ ಅಥವಾ ಧಾರ್ಮಿಕ ಅಸ್ಮಿತೆಯನ್ನು ಮೀರಿ ತನ್ನ ಭಾರತೀಯ ಅಸ್ಮಿತೆಯನ್ನು ಉಳಿಸಿಕೊಂಡವ ಉಧಮ್ ಸಿಂಗ್. ಇದರ ಜತೆಗೇ ತನ್ನ ಈ ಆಯ್ಕೆಯ ಮೂಲಕ ತನ್ನ ಹೆಮ್ಮೆಯ ಪಂಜಾಬಿ ಅಸ್ಮಿತೆಯನ್ನು ಕೂಡ ಉಳಿಸಿಕೊಂಡವನಾಗಿದ್ದ.

ಕ್ರಾಂತಿಕಾರಕ ಪಂಜಾಬಿ ಅಸ್ಮಿತೆ (ಐಡೆಂಟಿಟಿ)

ಪಂಜಾಬಿ ಅಸ್ಮಿತೆಯ ಎಲ್ಲ ಸಂಕೇತಗಳೂ ಅಂತಃ ಸತ್ವದಲ್ಲಿ ಕ್ರಾಂತಿಕಾರಕ ಸಂಕೇತಗಳೇ: ವಿವಾಹ ವ್ಯವಸ್ಥೆಯ ವಿರುದ್ಧ ದಂಗೆ ಎದ್ದು ತನ್ನ ನಿಜವಾದ ಪ್ರೇಮಿಯನ್ನು ಆಯ್ಕೆ ಮಾಡಿದ ಹೀರ್; ತನ್ನ ನಿಜವಾದ ಪ್ರಿಯತಮೆಯಿಂದ ತನ್ನನ್ನು ದೂರ ಒಯ್ಯಲು ತನ್ನ ಧರ್ಮ ಪ್ರಯತ್ನಿಸಿದಾಗ ಆ ಧಾರ್ಮಿಕ ವ್ಯವಸ್ಥೆಯ ವಿರುದ್ಧ ದಂಗೆ ಎದ್ದ ರಾಂಜಾ, ಪಂಜಾಬಿ ಸೂಫಿ ಕವಿ ಶಾ ಹುಸೈನ್ ಭಕ್ತ ಮತ್ತು ದೇವರ ನಡುವಿನ ಪ್ರತ್ಯೇಕತೆಯ ಗೆರೆಯನ್ನು ಮಸುಕುಗೊಳಿಸಿದ ಅನಿಯಂತ್ರಿತ ಧಾರ್ಮಿಕತೆಯ ಪರವಾಗಿ ಸಾಂಪ್ರದಾಯಿಕ ಧರ್ಮಕ್ಕೆ ಸವಾಲೆಸೆದ, ಮತ್ತು ನೃತ್ಯ ಹಾಗೂ ಸಂಗೀತದ ಮೂಲಕ ದಂಗೆಯ ಒಂದು ವ್ಯಕ್ತಿವಾದಿ ಕ್ರಿಯೆಯನ್ನು ಅಭಿವ್ಯಕ್ತಿಗೊಳಿಸಿದ. ಅದೇ ರೀತಿಯಾಗಿ ಪಂಜಾಬಿ ಕವಿ ಬುಲೆಪ್ ಶಾ ಧಾರ್ಮಿಕ ಪುರೋಹಿತಶಾಹಿ ವಿರುದ್ಧವಷ್ಟೇ ಅಲ್ಲದೇ, ಹಿಂದೂ ಮತ್ತು ಮುಸ್ಲಿಂ ಪುರೋಹಿತಶಾಹಿ (ಕ್ಲರ್ಜಿ)ಯ ವಿರುದ್ಧವೂ ಏರುದನಿಯಲ್ಲಿ ಮಾತಾಡಿದ. ಸತ್ಯ ನಿಮ್ಮ ಒಳಗೇ ಇದೆ ಎಂದು ಆತ ಒತ್ತಿ ಹೇಳಿದ.
ಪ್ರತೀ ಜನವರಿ ತಿಂಗಳಲ್ಲಿ ಲೋಹ್ರಿ ಹಬ್ಬದ ವೇಳೆ, ಪಂಜಾಬಿಗಳು ಪಂಜಾಬಿನ ಜಾನಪದ ನಾಯಕ (ಹೀರೊ) ದುಲ್ಲಾ ಭಟ್ಟಿಯನ್ನು ನೆನೆದು ಸಂಭ್ರಮಾಚರಣೆ ಮಾಡುತ್ತಾರೆ. ದುಲ್ಲಾ ಭಟ್ಟಿ ತನ್ನ ಜಮೀನಿನಿಂದ ಬರುತ್ತಿದ್ದ ಆದಾಯವನ್ನು ರಕ್ಷಿಸುವುದಕ್ಕಾಗಿ ಬಲಿಷ್ಠ ಮೊಗಲ್ ದೊರೆ ಅಕ್ಬರ್‌ನ ವಿರುದ್ಧ ಶಸ್ತ್ರಗಳನ್ನು ಕೈಗೆತ್ತಿಕೊಂಡ ಪಿಂಡಿ ಭಟ್ಟಿಯಾನ್‌ನ ಓರ್ವ ಜಮೀನ್ದಾರ. ಈತನ ಶೌರ್ಯ ಸಾಹಸಗಳನ್ನು ಪಂಜಾಬಿಗಳು ಇಂದಿಗೂ ಸ್ಮರಿಸಿ ಕೊಂಡಾಡುತ್ತಾರೆ.

(ಮುಂದುವರಿಯುವುದು)

Writer - ಹಾರೂನ್ ಖಾಲಿದ್

contributor

Editor - ಹಾರೂನ್ ಖಾಲಿದ್

contributor

Similar News

ಜಗದಗಲ
ಜಗ ದಗಲ