ಮಾನವನ ಮಿದುಳಿನ ಬಗ್ಗೆ ನಿಮಗೆ ಗೊತ್ತಿರುವ ಈ 6 ವಿಚಾರಗಳು ಅಪ್ಪಟ ಸುಳ್ಳು!

Update: 2017-12-04 07:02 GMT

ಮಾನವನ ಮಿದುಳು ಶರೀರದ ಎಲ್ಲ ಚಟುವಟಿಕೆಗಳನ್ನು ನಿಯಂತ್ರಿಸುವ, ಹೊರಜಗತ್ತಿನ ಮಾಹಿತಿಗಳನ್ನು ವ್ಯಾಖ್ಯಾನಿಸುವ ಮತ್ತು ಅವುಗಳನ್ನು ನಮ್ಮ ನೆನಪಿನಲ್ಲಿರಿ ಸುವ ಶಕ್ತಿಕೇಂದ್ರವಾಗಿದೆ. ಸೆರೆಬ್ರಂ,ಸೆರೆಬಲಮ್ ಮತ್ತು ಬ್ರೇನ್‌ಸ್ಟೆಮ್‌ಗಳನ್ನೊಳಗೊಂಡ ಮಿದುಳು ಕಲೆ, ಭಾಷೆ, ನೈತಿಕ ನಿರ್ಧಾರ ಮತ್ತು ವಿಚಾರಗಳ ನಮ್ಮ ಸಾಮರ್ಥ್ಯವನ್ನು ನಿಯಂತ್ರಿಸುತ್ತದೆ.

ನರವ್ಯೂಹದ ಮುಖ್ಯ ನಿಯಂತ್ರಣ ಕೇಂದ್ರವಾಗಿರುವ ಮಿದುಳಿನ ಕುರಿತು ಜನರಲ್ಲಿ ಬೇರೂರಿರುವ ಕೆಲವವು ಮಿಥ್ಯೆಗಳು ಇಲ್ಲಿವೆ........

ನಾವು ಮಿದುಳಿನ ಶೇ.10ನ್ನು ಮಾತ್ರ ಬಳಸುತ್ತೇವೆ

 ಇದು ಮಿದುಳಿನ ಕುರಿತು ಅತ್ಯಂತ ಜನಪ್ರಿಯ ಮಿಥ್ಯೆಗಳಲ್ಲೊಂದಾಗಿದೆ. ಹಾರ್ವರ್ಡ್‌ನ ಮನೋಶಾಸ್ತ್ರಜ್ಞರಾದ ವಿಲಿಯಂ ಜೇಮ್ಸ್ ಮತ್ತು ಬೋರಿಸ್ ಸಿಡಿಸ್ ಅವರ ‘ರಿಸರ್ವ್ ಎನರ್ಜಿ’ ಸಿದ್ಧಾಂತವು ಈ ಮಿಥ್ಯೆಗೆ ಮೂಲವಾಗಿದೆ. 1890ರ ದಶಕದಲ್ಲಿ ಮಗುವೊಂದರ ವೇಗವರ್ಧಿತ ಬೆಳವಣಿಗೆಯಲ್ಲಿ ತಮ್ಮ ಸಿದ್ಧಾಂತವನ್ನು ಒರೆಗೆ ಹಚ್ಚಿದ ಅವರು, ಜನರು ತಮ್ಮ ಪೂರ್ಣ ಪ್ರಮಾಣದ ಮಾನಸಿಕ ಸಾಮಥ್ಯವನ್ನು ಬಳಸಿಕೊಳ್ಳುವು ದಿಲ್ಲ, ಅವರ ಮಿದುಳು ಸಂಪೂರ್ಣವಾಗಿ ಬಳಕೆಯಾಗುವುದಿಲ್ಲವೆಂದು ಪ್ರತಿಪಾದಿಸಿದ್ದರು. ಅಂದಿನಿಂದ ಮಾನವ ತನ್ನ ಮಿದುಳಿನ ಶೇ.10ರಷ್ಟನ್ನು ಮಾತ್ರ ಬಳಸುತ್ತಾನೆ ಎಂಬ ಮಿಥ್ಯೆ ಬೆಳೆದು ಬಂದಿದೆ. ಮಿದುಳಿನ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡರೆ ನಾವು ಬಹಳಷ್ಟನ್ನು ಸಾಧಿಸಬಲ್ಲೆವು ಎಂದು ನಾವು ನಂಬಿದ್ದೇವೆ. ಇದಕ್ಕೆ ಈ ಮಿಥ್ಯೆಯೇ ಕಾರಣ.

ಮಿದುಳಿನ ಹಾನಿ ಶಾಶ್ವತ

ಮಿದುಳು ತನಗೆ ಆಗಿರುವ ಹಾನಿಯನ್ನು ಪೂರ್ಣವಾಗಿ ಅಥವಾ ಭಾಗಶಃ ಸರಿ ಪಡಿಸಿಕೊಳ್ಳಲು ಸಮರ್ಥವಾಗಿದೆ. ಮಿದುಳನ್ನು ಬದಲಿಸಲು ಸಾಧ್ಯವಿಲ್ಲ ಮತ್ತು ಒಮ್ಮೆ ಅದು ‘ಹಾಳಾದರೆ’ ಅದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ನಂಬಿದ್ದರು. ಆದರೆ ಅದು ಸ್ವರಿಪೇರಿಯ ಸಾಮರ್ಥ್ಯವನ್ನು ಹೊಂದಿದೆ ಮತ್ತು ಹೊಸ ಜೀವಕೋಶಗಳನ್ನು ಸೃಷ್ಟಿಸಬಲ್ಲುದು ಎನ್ನುವುದನ್ನು ನಂತರದ ಅಧ್ಯಯನಗಳು ತೋರಿಸಿವೆ.

ಪದಬಂಧಗಳನ್ನು ಬಿಡಿಸುವುದು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ

 ಪದಬಂಧ ಸಮಸ್ಯೆಗಳನ್ನು ಬಿಡಿಸುವುದು 75ರಿಂದ 85ರ ಪ್ರಾಯದ ನಡುವೆ ನೆನಪಿನ ಶಕ್ತಿಯು ಕ್ಷೀಣಗೊಳ್ಳುವುದನ್ನು ಆರಂಭದಲ್ಲಿ ವಿಳಂಬಿಸುತ್ತದೆ, ಆದರೆ ವ್ಯಕ್ತಿಯಲ್ಲಿ ವೃದ್ಧಾಪ್ಯದ ಸಹಜ ಸಮಸ್ಯೆಯಾಗಿ ಮರೆಗುಳಿತನದ ಲಕ್ಷಣಗಳು ಕಾಣಿಸಿಕೊಂಡಾಗ ಇದು ಉಪಯೋಗಕ್ಕೆ ಬರುವುದಿಲ್ಲ ಎಂದು ನ್ಯೂಯಾರ್ಕ್‌ನ ಆಲ್ಬರ್ಟ್ ಐನ್‌ಸ್ಟಿನ್ ಕಾಲೇಜ್ ಆಫ್ ಮೆಡಿಸಿನ್‌ನ ಸಂಶೋಧಕರು ನಡೆಸಿದ ಅಧ್ಯಯನವು ತೋರಿಸಿದೆ. ಪದಬಂಧ ಸಮಸ್ಯೆಗಳನ್ನು ಬಿಡಿಸುವುದರಲ್ಲಿ ಯಾವುದೇ ಹಾನಿಯಿಲ್ಲ, ಆದರೆ ಅದು ನಿಮ್ಮನ್ನು ಪದಬಂಧ ಸಮಸ್ಯೆಗಳನ್ನು ಬಿಡಿಸುವುದರಲ್ಲಿ ನಿಪುಣರನ್ನಾಗಿಸಬಹುದೇ ಹೊರತು ಅದರಿಂದ ಮಿದುಳಿಗೆ ಅಂತಹ ಲಾಭವೇನಿಲ್ಲ ಎಂದು ಹೆಚ್ಚಿನ ನರವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ.

ಕೋಮಾ ಸ್ಥಿತಿಯೆಂದರೆ ಗಾಢನಿದ್ರೆಯಂತೆ

ಚಲನಚಿತ್ರಗಳಲ್ಲಿ ಕೋಮಾವನ್ನು ಹಾನಿರಹಿತ ಸ್ಥಿತಿ ಎಂಬಂತೆ ತೋರಿಸಲಾಗುತ್ತಿದೆ. ಕೋಮಾ ಸ್ಥಿತಿಗೆ ಜಾರುವುದೆಂದರೆ ಅದೊಂದು ರೀತಿ ಗಾಢನಿದ್ರೆಯಿದ್ದಂತೆ, ಅದು ಶರೀರಕ್ಕೆ ಅತ್ಯುತ್ತಮ ವಿಶ್ರಾಂತಿಯನ್ನು ನೀಡುತ್ತದೆ ಎಂಬ ನಂಬಿಕೆಯಿದೆ. ಆದರೆ ನಿಜ ಜೀವನದಲ್ಲಿ ಕೋಮಾದಿಂದ ಹೊರಬಂದವರು ಅಂಗವೈಫಲ್ಯಗಳಿಂದ ನರಳುವುದು ಹೆಚ್ಚು ಮತ್ತು ಅವರಿಗೆ ಪುನರ್ವಸತಿ ಅಗತ್ಯವಾಗುತ್ತದೆ. ಸಾಮಾನ್ಯವಾಗಿ ನಿದ್ರೆಯಲ್ಲಿಯೂ ಕ್ರಿಯಾಶೀಲವಾಗಿರುವ ಮಿದುಳಿನಲ್ಲಿಯ ಚಟುವಟಿಕೆಗಳ ಕೇಂದ್ರವು ಕೋಮಾ ಸ್ಥಿತಿಯಲ್ಲಿದ್ದವರಲ್ಲಿ ಜಡವಾಗಿರುತ್ತದೆ.

ತಲೆನೋವು ಮಿದುಳಿನಲ್ಲಿ ಆಗುತ್ತದೆ

ತಲೆನೋವಿಗೆ ಮಾನಸಿಕ ಒತ್ತಡ ಮತ್ತು ಮಿದುಳಿನಲ್ಲಿಯ ರಕ್ತನಾಳಗಳ ಊದುವಿಕೆ ಕಾರಣವೆಂಬ ನಂಬಿಕೆಯಿದೆ. ಆದರೆ ಮಿದುಳು ಸ್ವತಃ ಯಾವುದೇ ನೋವು ಗ್ರಹಿಕೆ ಕೋಶಗಳನ್ನು ಹೊಂದಿರುವುದಿಲ್ಲ. ಆದರೆ ಕುತ್ತಿಗೆಯ ಮತ್ತು ಮೂಳೆಗಳ ಸುತ್ತಲಿನ ಹೊದಿಕೆಗಳು ಮತ್ತು ತಲೆಬುರುಡೆ ಇಂತಹ ಕೋಶಗಳನ್ನು ಹೊಂದಿರುತ್ತವೆ. ಕುತ್ತಿಗೆ ಮತ್ತು ತಲೆಯಲ್ಲಿನ ಸ್ನಾಯಗಳು ಬಿಗಿದುಕೊಳ್ಳುವುದು ತಲೆನೋವಿಗೆ ನಿಜವಾದ ಕಾರಣವಾಗಿದೆ. ಸೆರೊಟೋನಿನ್ ಮಟ್ಟದಲ್ಲಿ ಅಸಮತೋಲನವೂ ತಲೆನೋವಿಗೆ ಕಾರಣವಾಗಿದೆ. ನಮ್ಮ ಮನಸ್ಥಿತಿ, ನಿದ್ರೆ ಮತ್ತು ರಕ್ತನಾಳ ಗಾತ್ರ ನಿಯಂತ್ರಣಕ್ಕೆ ಸೆರೊಟೋನಿನ್ ಅಗತ್ಯವಾಗಿದೆ.

ವ್ಯಕ್ತಿಯ ವ್ಯಕ್ತಿತ್ವ ಬಲ ಅಥವಾ ಎಡ ಮಿದುಳಿನ ಪ್ರಾಬಲ್ಯವನ್ನು ಸೂಚಿಸುತ್ತದೆ

 ಮಿದುಳಿನ ಎರಡೂ ಭಾಗಗಳು ಪರಸ್ಪರ ಅವಲಂಬಿತವಾಗಿವೆ. ವ್ಯಕ್ತಿಗಳಲ್ಲಿ ಬಲ ಮಿದುಳು ಅಥವಾ ಎಡ ಮಿದುಳು ಪ್ರಬಲವಾಗಿರುತ್ತವೆ ಹಾಗೂ ಬಲಮಿದುಳು ಹೆಚ್ಚು ಕ್ರಿಯಾಶೀಲವಾಗಿದ್ದವರು ಹೆಚ್ಚು ರಚನಾತ್ಮಕವಾಗಿರುತ್ತಾರೆ ಮತ್ತು ಎಡ ಮಿದುಳು ಹೆಚ್ಚು ಕ್ರಿಯಾಶೀಲರಾಗಿದ್ದವರು ಹೆಚ್ಚು ತಾಂತ್ರಿಕತೆ ಮತ್ತು ತರ್ಕವನ್ನು ಪ್ರದರ್ಶಿಸುತ್ತಾರೆ ಎಂದು ನಾವು ಕೇಳುತ್ತಿರುತ್ತೇವೆ. ಆದರೆ ಸಂಂಕೀರ್ಣ ಪ್ರಕ್ರಿಯೆಗಳಲ್ಲಿ ಮಿದುಳಿನ ಎರಡೂ ಭಾಗಗಳು ಕೂಡಿ ಕೆಲಸ ಮಾಡುತ್ತವೆ ಎನ್ನುವುದನ್ನು ಮಿದುಳಿನ ಸ್ಕಾನಿಂಗ್ ತಂತ್ರಜ್ಞಾನವು ಬೆಳಕಿಗೆ ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News