ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂಗೆ ಮಾನ್ಯತೆ ಬೇಡ: ಅಮೆರಿಕಕ್ಕೆ ಫೆಲೆಸ್ತೀನ್ ಎಚ್ಚರಿಕೆ

Update: 2017-12-04 16:57 GMT

ರಮಲ್ಲಾ (ಫೆಲೆಸ್ತೀನ್), ಡಿ. 4: ಇಸ್ರೇಲ್‌ನ ರಾಜಧಾನಿಯಾಗಿ ಜೆರುಸಲೇಂಗೆ ಅಮೆರಿಕ ಮಾನ್ಯತೆ ನೀಡಿದರೆ, ಅದು ಇತ್ತೀಚೆಗೆ ಮಧ್ಯಪ್ರಾಚ್ಯದಲ್ಲಿ ಆರಂಭಿಸಿರುವ ಶಾಂತಿ ಪ್ರಯತ್ನಗಳನ್ನು ಹಾಳುಗೆಡವುತ್ತದೆ ಎಂದು ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಎಚ್ಚರಿಸಿದ್ದಾರೆ.

‘‘ಇಸ್ರೇಲ್‌ನ ರಾಜಧಾನಿಯಾಗಿ ಜೆರುಸಲೇಂಗೆ ಮಾನ್ಯತೆ ನೀಡುವುದಕ್ಕೆ ಸಂಬಂಧಿಸಿದ ಅಮೆರಿಕದ ಯಾವುದೇ ಕ್ರಮ ಅಥವಾ ಜೆರುಸಲೇಂಗೆ ಅಮೆರಿಕ ರಾಯಭಾರ ಕಚೇರಿಯ ಸ್ಥಳಾಂತರವು ಶಾಂತಿ ಪ್ರಕ್ರಿಯೆಯ ಭವಿಷ್ಯದ ಮೇಲೆ ಬೆದರಿಕೆಯಾಗಿದೆ ಹಾಗೂ ಅದು ಫೆಲೆಸ್ತೀನೀಯರಿಗೆ, ಅರಬ್ಬರಿಗೆ ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸ್ವೀಕಾರಾರ್ಹವಲ್ಲ’’ ಎಂದು ಅಬ್ಬಾಸ್ ನುಡಿದರು.

ತನ್ನನ್ನು ಭೇಟಿಯಾದ ಇಸ್ರೇಲ್‌ನ ಅರಬ್ ಸಂಸದರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು ಎಂದು ಅಧಿಕೃತ ವಫ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಮೆರಿಕ ರಾಯಭಾರ ಕಚೇರಿಯನ್ನು ಜೆರುಸಲೇಂಗೆ ಸ್ಥಳಾಂತರಿಸುವುದಾಗಿ ಚುನಾವಣಾ ಪ್ರಚಾರದ ವೇಳೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆ ನೀಡಿರುವುದನ್ನು ಸ್ಮರಿಸಬಹುದಾಗಿದೆ. ಈ ಭರವಸೆಯ ಜಾರಿಯನ್ನು ಮುಂದೂಡಲು ಟ್ರಂಪ್ ನಿರ್ಧರಿಸಿದ್ದು, ಅದಕ್ಕೆ ಪರಿಹಾರವಾಗಿ ಟ್ರಂಪ್ ಈ ವಾರ ಜೆರುಸಲೇಂನ್ನು ಇಸ್ರೇಲ್ ರಾಜಧಾನಿಯಾಗಿ ಘೋಷಿಸುವ ಸಾಧ್ಯತೆಯಿದೆ ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ.

ರಾಜಧಾನಿಯ ಬಗ್ಗೆ ವಿವಾದ

ಜೆರುಸಲೇಂ ತನ್ನ ರಾಜಧಾನಿಯೆಂದು ಇಸ್ರೇಲ್ ಪರಿಗಣಿಸಿದೆ. ಪ್ರಧಾನಿ ಕಚೇರಿ, ಸುಪ್ರೀಂ ಕೋರ್ಟ್ ಮತ್ತು ಸಂಸತ್ತು ಸೇರಿದಂತೆ ಇಸ್ರೇಲ್‌ನ ಹೆಚ್ಚಿನ ಸರಕಾರಿ ಸಂಸ್ಥೆಗಳು ಅಲ್ಲಿಂದಲೇ ಕಾರ್ಯಾಚರಿಸುತ್ತಿವೆ.

ಆದರೆ, ಈ ನಗರದ ಸ್ಥಿತಿಯನ್ನು ಶಾಂತಿ ಮಾತುಕತೆಗಳ ಮೂಲಕ ನಿರ್ಧರಿಸಬೇಕು ಎಂಬುದಾಗಿ ಅಂತಾರಾಷ್ಟ್ರೀಯ ಸಮುದಾಯ ಹೇಳುತ್ತದೆ.

ಅರಬ್ ಲೀಗ್ ಎಚ್ಚರಿಕೆ

 ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂನ್ನು ಮಾನ್ಯ ಮಾಡುವ ಟ್ರಂಪ್ ನಿರ್ಧಾರವು ಕುರುಡು ದುರಭಿಮಾನ ಮತ್ತು ಹಿಂಸಾಚಾರವನ್ನು ವೃದ್ಧಿಸುತ್ತದೆ ಹಾಗೂ ಅದು ಇಸ್ರೇಲ್-ಫೆಲೆಸ್ತೀನ್ ಶಾಂತಿ ಪ್ರಕ್ರಿಯೆಗೆ ಯಾವುದೇ ದೇಣಿಗೆ ನೀಡುವುದಿಲ್ಲ ಎಂದು ಅರಬ್ ಲೀಗ್ ಮುಖ್ಯಸ್ಥ ಅಹ್ಮದ್ ಅಬುಲ್ ಗೈತ್ ಹೇಳಿದ್ದಾರೆ.

‘‘ಈ ನಿರ್ಧಾರವು ಮಧ್ಯ ಪ್ರಾಚ್ಯ ಮತ್ತು ಇಡೀ ಜಗತ್ತಿನ ಸ್ಥಿರತೆಗೆ ಅಪಾಯಕಾರಿಯಾಗಿದೆ’’ ಎಂದು ಅವರು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News