×
Ad

ಬಾಲಿ: ಶಮನಗೊಳ್ಳುತ್ತಿರುವ ಜ್ವಾಲಾಮುಖಿ

Update: 2017-12-04 22:43 IST

ಕರಂಗಸೆಮ್ (ಇಂಡೋನೇಶ್ಯ), ಡಿ. 4: ಇಂಡೋನೇಶ್ಯದ ಪ್ರವಾಸಿ ದ್ವೀಪ ಬಾಲಿಯ ವೌಂಟ್ ಅಗಂಗ್ ಜ್ವಾಲಾಮುಖಿ ಪರ್ವತ ಹೊರಸೂತ್ತಿರುವ ಬೂದಿ ಮಿಶ್ರಿತ ಹೊಗೆಯ ತೀವ್ರತೆ ಕಡಿಮೆಯಾಗಿದೆ. ವಾರಾಂತ್ಯದಲ್ಲಿ ಹಾರಾಟವನ್ನು ರದ್ದುಪಡಿಸಿದ್ದ ಆಸ್ಟ್ರೇಲಿಯನ್ ಏರ್‌ಲೈನ್ಸ್ ವಿಮಾನಗಳು, ಈಗ ಸಾಮಾನ್ಯ ರೀತಿಯಲ್ಲಿ ಹಾರಾಡುತ್ತಿವೆ.

ಜ್ವಾಲಾಮುಖಿಯ ಬಗ್ಗೆ ನೀಡಲಾಗಿರುವ ಎಚ್ಚರಿಕೆ ಗರಿಷ್ಠ ಮಟ್ಟದಲ್ಲೇ ಮುಂದುವರಿದಿದೆಯಾದರೂ, ಬಾಲಿ ದ್ವೀಪದ ಹೆಚ್ಚಿನ ಭಾಗ ಈಗ ಪ್ರವಾಸಿಗರಿಗೆ ಸುರಕ್ಷಿತವಾಗಿದೆ ಎಂದು ಇಂಡೋನೇಶ್ಯದ ವಿಪತ್ತು ನಿರ್ವಹಣಾ ಸಂಸ್ಥೆ ಸೋಮವಾರ ತಿಳಿಸಿದೆ.

ನಿಷೇಧಿತ ಪ್ರದೇಶದ ವ್ಯಾಪ್ತಿಯು ಜ್ವಾಲಾಮುಖಿಯ ಕ್ರೇಟರ್‌ನಿಂದ 10 ಕಿ.ಮೀ.ನಲ್ಲೇ ಮುಂದುವರಿದಿದೆ. 55,000ಕ್ಕೂ ಅಧಿಕ ಮಂದಿ ಈಗಲೂ ಶಿಬಿರಗಳಲ್ಲೇ ವಾಸಿಸುತ್ತಿದ್ದಾರೆ.

ಕಳೆದ ವಾರ ಮೂರು ದಿನಗಳ ಕಾಲ ಬಾಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಚ್ಚಿತ್ತು. ಆ ಅವಧಿಯಲ್ಲಿ ಸಾವಿರಾರು ಪ್ರವಾಸಿಗರು ದ್ವೀಪದಲ್ಲಿ ಸಿಕ್ಕಿಹಾಕಿಕೊಂಡಿದ್ದರು.

1963ರಲ್ಲಿ 1,100 ಮಂದಿ ಆಹುತಿ

ಬಾಲಿಯ ಮೌಂಟ್ ಅಗಂಗ್ ಜ್ವಾಲಾಮುಖಿ ಪರ್ವತವು ಈ ಹಿಂದೆ ಬೃಹತ್ ಪ್ರಮಾಣದಲ್ಲಿ ಸ್ಫೋಟಿಸಿದ್ದು 1963ರಲ್ಲಿ. ಆಗ 1,100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಆಗ ಜ್ವಾಲಾಮುಖಿಯು ಒಂದು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ ಲಾವಾರಸವನ್ನು ಚಿಮ್ಮಿಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News