ಬದುಕನ್ನು ಬಂದಂತೆ ಸ್ವೀಕರಿಸಿದ ಸಾಧಕ ಶಶಿಕಪೂರ್

Update: 2017-12-04 18:37 GMT

‘ಮೇರೆ ಪಾಸ್ ಮಾ ಹೈ’... ಇದು ಸುಪ್ರಸಿದ್ಧ ಹಿಂದಿ ಸಿನೆಮಾದ ಜನಪ್ರಿಯ ಡೈಲಾಗ್. ಇದು ಎಷ್ಟು ಜನಜನಿತವಾಯಿತೆಂದರೆ, ಚಿತ್ರ ಬಿಡುಗಡೆಯಾಗಿ 39 ವರ್ಷಗಳಾದರೂ ಇವತ್ತಿಗೂ ಚಾಲ್ತಿಯಲ್ಲಿದೆ. ಹೊಸ ಜನಾಂಗವನ್ನು ಸೆಳೆಯುತ್ತ, ಹೊಸ ಅರ್ಥಗಳನ್ನು ಸೃಷ್ಟಿಸುತ್ತ, ಹತ್ತು ಹಲವು ರೂಪಗಳನ್ನು ಪಡೆಯುತ್ತ, ಹಾಸ್ಯಕ್ಕೆ ಅಪಹಾಸ್ಯಕ್ಕೆ ಆಸ್ಪದವೀಯುತ್ತ ಈ ಸಂಭಾಷಣೆ ಈಗಲೂ ಜೀವಂತವಾಗಿದೆ.

 ಇದು 1975 ರಲ್ಲಿ ಬಂದ ‘ದೀವಾರ್’ ಚಿತ್ರದ ಸಂಭಾಷಣೆ. ಯಶ್ ಛೋಪ್ರಾ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮತ್ತು ಶಶಿಕಪೂರ್ ಅಣ್ಣತಮ್ಮಂದಿರ ಪಾತ್ರ ನಿರ್ವಹಿಸಿದ್ದರು. ಅಣ್ಣ ವಿಜಯ್ ರೌಡಿ; ಆಳುಕಾಳು, ಕಾರು, ಬಂಗಲೆ, ಹಣವುಳ್ಳ ಶ್ರೀಮಂತ. ತಮ್ಮ ನಿಷ್ಠಾವಂತ ಪೊಲೀಸ್ ಅಧಿಕಾರಿ; ಸತ್ಯ, ನ್ಯಾಯ, ಧರ್ಮಕ್ಕಾಗಿ ದುಡಿವ ಬಡವ. ಹಣ ಮುಖ್ಯ ಎನ್ನುವ ಅಣ್ಣ; ಅಮ್ಮ ಮುಖ್ಯ ಎನ್ನುವ ತಮ್ಮ. ಇಬ್ಬರ ನಡುವೆ ನಡೆಯುವ ಮಾತಿನ ಮೇಲಾಟದಲ್ಲಿ ಈ ಮೇಲಿನ ಸಂಭಾಷಣೆ ಶಶಿಕಪೂರ್‌ರಿಂದ ಸಿಡಿಯುತ್ತದೆ. ಅಷ್ಟೇ, ಥಿಯೇಟರ್‌ನಲ್ಲಿ ಕೂತ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ; ಕೆಲವರ ಕಣ್ಣಲ್ಲಿ ನೀರು. ಅಲ್ಲಿಗೆ ಬಣ್ಣದ ಜನರ ಗಿಲೀಟು ಗೆದ್ದಿತ್ತು.

ಬಹುಜನರನ್ನು ಸೂಜಿಗಲ್ಲಿನಂತೆ ಸೆಳೆದ ಈ ಭಾವನಾತ್ಮಕ ಸಂಭಾಷಣೆ ಮತ್ತು ದೃಶ್ಯವನ್ನು ಕಟ್ಟಿಕೊಟ್ಟ ‘ದೀವಾರ್’ ಆ ಕಾಲಕ್ಕೆ ಬಾಕ್ಸಾಫೀಸ್ ಕೊಳ್ಳೆ ಹೊಡೆದ ಸೂಪರ್ ಹಿಟ್ ಚಿತ್ರ. ಅಮಿತಾಭ್ ಮತ್ತು ಶಶಿಕಪೂರ್‌ರನ್ನು ಸ್ಟಾರ್ ನಟರನ್ನಾಗಿಸಿದ ಚಿತ್ರ. ಒಂದು ಚಿತ್ರದ ಸಂಭಾಷಣೆಯೇ ಇಷ್ಟೊಂದು ಜನಪ್ರಿಯವಾದರೆ, ಅದು ಈ ಕಾಲಕ್ಕೂ ಚಾಲ್ತಿಯಲ್ಲಿದ್ದರೆ, ಆ ಡೈಲಾಗ್ ಡೆಲಿವರಿ ಮಾಡಿದ ನಟನಿಗೆ ಸಾವುಂಟೆ?

ಶಶಿಕಪೂರ್(79) ಭೌತಿಕವಾಗಿ ಇವತ್ತು ಇಲ್ಲವಾಗಿರಬಹುದು. ಆದರೆ ಅವರ ಚಿತ್ರಗಳು, ಪಾತ್ರಗಳು, ಹಾಡುಗಳು, ಸಂಭಾಷಣೆಗಳು ಖಂಡಿತ ನಮ್ಮಂದಿಗಿರುತ್ತವೆ, ಅವರೂ ಇರುತ್ತಾರೆ.

ಚಾಕಲೆಟ್ ಹೀರೋ ಎನ್ನುವುದಕ್ಕೆ ಹೇಳಿಮಾಡಿಸಿದ ಮುಖಚಹರೆ, ತನ್ನ ಕಾಲದ ಸಮಕಾಲೀನ ನಾಯಕನಟರಾದ ಸಂಜೀವ್‌ಕುಮಾರ್, ರಾಜೇಶ್ ಖನ್ನಾ, ಧರ್ಮೇಂದ್ರ, ಅಮಿತಾಭ್ ಬಚ್ಚನ್‌ರಿಗೆ ಹೋಲಿಸಿದರೆ ಅಷ್ಟೇನೂ ಸದೃಢವಲ್ಲದ ದೇಹ, ಆದರೂ ರೋಮ್ಯಾಂಟಿಕ್ ಹೀರೋ ಎಂಬ ಬಿರುದು. ಇದು ಸಾಧ್ಯವಾದದ್ದಾದರೂ ಹೇಗೆ ಎಂದು ಹಿನ್ನೆಲೆ ಕೆದಕಿದರೆ, ದಶಕಗಳ ಕಾಲ ಚಿತ್ರರಂಗವನ್ನು ಆಳಿದ ಕಪೂರ್ ಕುಟುಂಬದ ಭವ್ಯ ಪರಂಪರೆಯ ಭದ್ರ ಬುನಾದಿ ಕಾಣುತ್ತದೆ. ಅದಕ್ಕೆ ರಂಗಭೂಮಿಯ ದಟ್ಟ ಹಿನ್ನೆಲೆ ತಳಕು ಹಾಕಿಕೊಂಡಿದೆ. ಬಾಲ ಕಲಾವಿದನಾಗಿ ನಟಿಸಿದ, ಸಹಾಯಕ ನಿರ್ದೇಶಕನಾಗಿ ತಾಂತ್ರಿಕ ನೈಪುಣ್ಯತೆ ಅರಗಿಸಿಕೊಂಡ ಅನುಭವವಿದೆ. ಆ ನಂತರ ಇಡೀ ಬದುಕನ್ನೇ ಬಣ್ಣದಲ್ಲಿ ಬೆರೆಸಿದ ದಾಖಲೆಯೂ ಇದೆ.

ಇಷ್ಟೆಲ್ಲ ಹಿರಿಮೆ-ಗರಿಮೆಗಳಿದ್ದ ಶಶಿಕಪೂರ್ ನಾಯಕನಟನಾಗಿ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು 1961ರಲ್ಲಿ. ಮೊದಲ ಚಿತ್ರ ಧರ್ಮಪುತ್ರವೂ ಸೇರಿದಂತೆ ಮತ್ತೆರಡು ಚಿತ್ರಗಳಲ್ಲಿ ನಟಿಸಿದರೂ, ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲರಾದರು. ಫ್ಲಾಪ್ ಹೀರೋ ಎನಿಸಿಕೊಂಡರು. ಇನ್ನು ನಟನೆ ನನ್ನಿಂದ ಸಾಧ್ಯವಿಲ್ಲ ಎಂದು ಹಿಂಬದಿಗೆ ಸರಿಯುವುದರಲ್ಲಿದ್ದರು. ಆಗ ಯಾರೂ ಊಹಿಸದ ಸಿನಿಮೀಯ ಘಟನೆಯೊಂದು ಘಟಿಸಿತು. ತಮ್ಮ ಸೌಂದರ್ಯ ಮತ್ತು ವಿಶಿಷ್ಟ ಅಭಿನಯದಿಂದಾಗಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ನಾಯಕನಟಿ ನಂದಾ ಅವರು, ತಮ್ಮ ಕೈಯಲ್ಲಿದ್ದ ಎಂಟು ಚಿತ್ರಗಳಿಗೆ ಶಶಿಕಪೂರ್ ಅವರೇ ಹೀರೋ ಆಗಬೇಕು, ಅವರಲ್ಲಿ ನಾಯಕನಟನಾಗುವ ಎಲ್ಲ ಲಕ್ಷಣಗಳೂ ಇವೆ, ಅವರಾದರೆ ಮಾತ್ರ ಈ ಚಿತ್ರಗಳಿಗೆ ಸಹಿ ಮಾಡುತ್ತೇನೆಂದು ನಿರ್ಮಾಪಕರ ಮುಂದೆ ತಮ್ಮ ಬೇಡಿಕೆಯನ್ನಿಟ್ಟರು.

ಮುಂದಿನದೆಲ್ಲ ಸಿನೆಮಾದಲ್ಲಿ ನಡೆದಂತೆಯೇ... ಶಶಿಕಪೂರ್-ನಂದಾ ಜೋಡಿಯ ಆ ಎಂಟು ಚಿತ್ರಗಳಲ್ಲಿ ಐದು ಹಿಟ್ ಚಿತ್ರಗಳಾದವು. ಇಬ್ಬರ ನಡುವಿನ ಅನ್ಯೋನ್ಯತೆ ಚಿತ್ರಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಶಶಿಕಪೂರ್ ಹೀರೋ ಆಗಿ ನೆಲೆ ನಿಂತರು. ಈ ಕಾರಣಕ್ಕಾಗಿಯೇ ಶಶಿಕಪೂರ್ ಸಂದರ್ಶನವೊಂದರಲ್ಲಿ, ‘ನಂದಾ ನನ್ನ ಮೆಂಟರ್’ ಎಂದು ಹಾಡಿ ಹೊಗಳಿದ್ದರು. ಅಷ್ಟೇ ಅಲ್ಲ, ಕೊನೆಯತನಕ ಆಕೆಯನ್ನು ಅಪಾರ ಗೌರವದಿಂದ ಕಾಣುತ್ತಿದ್ದರು.

 ಇಂತಹ ಶಶಿಕಪೂರ್ ಹುಟ್ಟಿದ್ದು 18.3.1938ರಂದು, ಕೋಲ್ಕತ್ತಾ ದಲ್ಲಿ. ತಂದೆ ಪೃಥ್ವಿರಾಜ್ ಕಪೂರ್ ಪ್ರಸಿದ್ಧ ರಂಗ ಭೂಮಿ ನಟರು ಮತ್ತು ಪ್ರಯೋಗಶೀಲ ಕಂಪೆನಿ ನಾಟಕದ ಮಾಲಕರು. ಜೊತೆಗೆ ಅಣ್ಣಂದಿರಾದ ರಾಜ್‌ಕಪೂರ್ ಮತ್ತು ಶಮ್ಮಿಕಪೂರ್ ಕೂಡ ಜನಪ್ರಿಯ ಚಿತ್ರನಟರಾಗಿ ಹೆಸರು ಮಾಡಿದವರು. ಹೀಗಾಗಿ ಶಶಿಕಪೂರ್ ಆಡಿ ಬೆಳೆದದ್ದು ಕಲಾ ಕುಟುಂಬದಲ್ಲಿ. ಆ ಕಾರಣಕ್ಕಾಗಿಯೇ ಶಶಿ, ತಮ್ಮ ನಾಲ್ಕನೇ ವಯಸ್ಸಿಗೇ ಬಣ್ಣ ಹಚ್ಚಿ ಚಿತ್ರರಂಗಕ್ಕೆ ಧುಮುಕಿದರು. ಬಾಲ ಕಲಾವಿದನಾಗಿ ಹೆಸರು ಮಾಡಿದರು. ಮೂರು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿಯುವ ಮೂಲಕ ತೆರೆಯ ಹಿಂದಿನ ಲೋಕದ ದರ್ಶನವನ್ನೂ ಪಡೆದರು. ಆನಂತರ ನಾಯಕನಟನಾಗಿ ನಟಿಸಿ, ಪ್ರೇಕ್ಷಕರ ಮನ ಗೆದ್ದು ಸ್ಟಾರ್ ಆಗಿಯೂ ಮಿಂಚಿದರು.

ಭಾರತೀಯ ಚಿತ್ರಜಗತ್ತಿನ ಇತಿಹಾಸದಲ್ಲಿ ದಾಖಲಾಗಿರುವ, ಅಚ್ಚಳಿಯದ ನೆನಪುಗಳನ್ನು ಬಿಟ್ಟು ಹೋಗಿರುವ ಶಶಿಕಪೂರ್, 148 ಹಿಂದಿ ಚಿತ್ರಗಳು, 12 ವಿದೇಶಿ ಚಿತ್ರಗಳು ಸೇರಿದಂತೆ ಒಟ್ಟು 160 ಚಿತ್ರಗಳಲ್ಲಿ ನಟಿಸಿರುವ ಮಹಾನ್ ಪ್ರತಿಭಾವಂತ ನಟ. ಬಾಲನಟನಾಗಿ, ನಾಯಕನಟನಾಗಿ, ಪೋಷಕ ನಟನಾಗಿ ನೂರಾರು ಪಾತ್ರಗಳಲ್ಲಿ ವೈವಿಧ್ಯಮಯ ನಟನೆ ನೀಡಿರುವ ಶಶಿ, ಅತಿ ಹೆಚ್ಚು ಕಮರ್ಷಿಯಲ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ‘ಅಜೂಬಾ’ ಎಂಬ ಚಿತ್ರವನ್ನು ನಿರ್ದೇಶಿಸಿ, ಆರು ಚಿತ್ರಗಳನ್ನು ನಿರ್ಮಿಸಿ, ಕಲಾತ್ಮಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಮೊತ್ತ ಮೊದಲ ಬಾರಿಗೆ ಭಾರತೀಯ ನಟನೊಬ್ಬ ವಿದೇಶಿ- ಬ್ರಿಟನ್, ಅಮೆರಿಕನ್ ಮತ್ತು ರಷ್ಯನ್- ಚಿತ್ರಗಳಲ್ಲಿ ನಟಿಸಿದ ಖ್ಯಾತಿಗೂ ಒಳಗಾಗಿದ್ದಾರೆ.

60ರ ದಶಕದಲ್ಲಿ ಆರಂಭವಾದ ಶಶಿಕಪೂರ್ ಅವರ ನಟನಾವೃತ್ತಿ 90ರ ದಶಕದವರೆಗೂ ವಿಸ್ತರಿಸಿದ್ದು, 70 ರಿಂದ 80ರ ಮಧ್ಯಭಾಗದಲ್ಲಿ ಭಾರೀ ಜನಪ್ರಿಯ ನಟನಾಗಿ ಹಿಂದಿ ಚಿತ್ರರಂಗವನ್ನು ಆಳಿದ್ದು ಈಗ ಇತಿಹಾಸ. ಮರ ಸುತ್ತುವ ರೋಮ್ಯಾಂಟಿಕ್ ಹೀರೋ ಪಾತ್ರದಲ್ಲಿ ಶಶಿಕಪೂರ್ ಅಂದಿನ ಜನಪ್ರಿಯ ತಾರೆಯರಾದ ನಂದಾ, ರಾಖಿ, ಶರ್ಮಿಳಾ ಠಾಗೂರ್, ಝೀನತ್ ಅಮಾನ್‌ರಜೊತೆ ನಟಿಸಿದ ನಂತರ, ಪರ್ವೀನ್ ಬಾಬಿ, ಹೇಮಾಮಾಲಿನಿ, ವೌಸಮಿ ಚಟರ್ಜಿಗಳೊಂದಿಗೆ ಕುಣಿದು ಕುಪ್ಪಳಿಸಿದ್ದೂ ಇದೆ. ಹಾಗೆಯೇ ನಾಯಕನಟನಾಗಿ ಕಳೆಗುಂದತೊಡಗಿದಾಗ ಮಲ್ಟಿಸ್ಟಾರ್ ಚಿತ್ರಗಳಲ್ಲಿ, ರಾಜೇಶ್ ಖನ್ನಾ, ಪ್ರಾಣ್, ಅಮಿತಾಭ್, ಸಂಜೀವ್ ಕುಮಾರ್, ಶತ್ರುಘ್ನಸಿನ್ಹಾರ ಜೊತೆ ಸೇರಿ ನಟಿಸುವ ಮೂಲಕ ಮತ್ತಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಉಳಿದದ್ದೂ ಇದೆ.

ಶಶಿಕಪೂರ್ ಅಂದಾಕ್ಷಣ ನೆನಪಿಗೆ ಬರುವುದು ಆ ಕಾಲಕ್ಕೇ ಬ್ಲಾಕ್ ಬಸ್ಟರ್ ಮೂವಿ ಎನಿಸಿಕೊಂಡ ‘ಸತ್ಯಂ ಶಿವಂ ಸುಂದರಂ, ದೀವಾರ್, ರೋಟಿ ಕಪಡಾ ಔರ್ ಮಕಾನ್, ಕಭೀ ಕಭೀ, ತ್ರಿಶೂಲ್, ಸುಹಾಗ್, ಕಾಲಾ ಪತ್ಥರ್, ಸಿಲ್‌ಸಿಲಾ, ನಮಕ್ ಹಲಾಲ್, ಕಲ್‌ಯುಗ್, ಜುನೂನ್’ ಇನ್ನು ಮುಂತಾದ ಚಿತ್ರಗಳು. ವಿಭಿನ್ನ ಆಂಗಿಕ ಅಭಿನಯದ ಮೂಲಕ ತಮ್ಮದೇ ಆದ ಅಭಿಮಾನಿ ವಲಯವನ್ನೇ ಸೃಷ್ಟಿಸಿಕೊಂಡಿದ್ದ ಶಶಿಕಪೂರ್ ಚಿತ್ರಬದುಕಿನ ಯಶಸ್ಸಿನಲ್ಲಿ ಅವರ ಚಿತ್ರಗಳ ಪಾತ್ರಗಳಂತೆ, ಹಾಡುಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ.

ಇಂತಹ ಶಶಿಕಪೂರ್‌ಗೆ ‘ನ್ಯೂ ಡೆಲ್ಲಿ ಟೈಮ್ಸ್’ ಮತ್ತು ‘ಜಬ್ ಜಬ್ ಫೂಲ್ ಕಿಲೇ’ ಚಿತ್ರಗಳ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಫಿಲ್ಮ್‌ಫೇರ್ ಕೊಡಮಾಡುವ ಜೀವಮಾನ ಸಾಧನೆಯ ಪ್ರಶಸ್ತಿಯೂ ದಕ್ಕಿದೆ. ಇದಲ್ಲದೆ ಭಾರತ ಸರಕಾರದ ಪ್ರತಿಷ್ಠಿತ ಪ್ರಶಸ್ತಿಯಾದ ಪದ್ಮಭೂಷಣವೂ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದು ಗೌರವಿಸಿವೆ. ಭಾರತೀಯ ಸಿನೆಮಾದ ಸರ್ವಶ್ರೇಷ್ಠ ಪುರಸ್ಕಾರವಾದ ಫಾಲ್ಕೆ ಪ್ರಶಸ್ತಿಯೂ ಶಶಿಕಪೂರ್ ಅವರಿಗೆ ಸಂದಿದೆ

ಮೊದ ಮೊದಲು ಶಶಿಕಪೂರ್ ಎಂದಾಕ್ಷಣ ಮೆಲೋಡಿ ಹಾಡುಗಳು ನೆನಪಾಗುತ್ತಿದ್ದವು. ಹಲವಾರು ಹಿಟ್ ಸಾಂಗ್‌ಗಳನ್ನು ಹಾಡಿದ ರಫಿ, ಶಶಿಕಪೂರ್ ಚಿತ್ರಗಳ ಪರ್ಮನೆಂಟ್ ಸಿಂಗರ್ ಆಗಿದ್ದರು. ಆದರೆ, 70ರ ದಶಕದ ನಂತರ ಶಶಿಕಪೂರ್‌ಗೆ ಕಿಶೋರ್ ಕುಮಾರ್ ಮೇಲೆ ಪ್ರೀತಿ ಹುಟ್ಟಿತು, ತಮ್ಮ ಚಿತ್ರಗಳಿಗೆ ಕಿಶೋರ್ ಕಡ್ಡಾಯವಾಗಿ ಹಾಡಲೇಬೇಕು ಎಂದು ನಿರ್ಮಾಪಕರಲ್ಲಿ ತಾಕೀತು ಮಾಡತೊಡಗಿದರು. ಆದರೆ ಆ ಕಾಲಕ್ಕೆ ಅವರು ಸೋಲೋ ನಾಯಕನಟನಾಗಿ ನಟಿಸುವ ಚಿತ್ರಗಳ ಸಂಖ್ಯೆ ಕಡಿಮೆಯಾಗಿ, ಸೋಲುವ ನಟನಾಗಿ ಪರಿವರ್ತಿತರಾಗುತ್ತಿದ್ದರು. ಆಗ ಶಶಿ ಆಸೆ ಕೈಗೂಡದೆ, ನಿರಾಶೆಯನ್ನನುಭವಿಸಿದ್ದೂ ಇದೆ.

ಅದೇ ಸಮಯಕ್ಕೆ ಸರಿಯಾಗಿ ತಮ್ಮ ಮೆಚ್ಚಿನ ಮಡದಿ ಜೆನ್ನಿಫರ್ ಕೆಂಡಲ್ ಕ್ಯಾನ್ಸರ್‌ಗೆ ತುತ್ತಾಗಿ ಸಾವನ್ನಪ್ಪಿದ್ದು ಶಶಿಕಪೂರ್ ಬಣ್ಣದ ಬದುಕಿನಿಂದ ನಿವೃತ್ತಿ ಬಯಸಲು ಪ್ರೇರೇಪಿಸಿತ್ತು. ಅದಕ್ಕೆ ಪೂರಕವಾಗಿ ದೇಹ ಕೂಡ ದಪ್ಪಗಾಗಿ ಚಿತ್ರೋದ್ಯಮದಿಂದ ದೂರ ಉಳಿಯುವಂತೆ ಮಾಡಿತ್ತು. ಸುಮಾರು ವರ್ಷಗಳ ಕಾಲ ಅಜ್ಞಾತವಾಸದಲ್ಲಿಯೇ ಉಳಿದ ಶಶಿಕಪೂರ್ ಆಗೊಮ್ಮೆ ಈಗೊಮ್ಮೆ ಸುದ್ದಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದುದು ಕೂಡ ಆರೋಗ್ಯದ ನೆಪದಲ್ಲಿ ಮಾತ್ರ. ಸಿನೆಮಾ ಎಂಬ ಮಾಯಾಲೋಕದ ವಿಚಿತ್ರವೇ ಹಾಗೆ, ಇಲ್ಲಿ ಚಾಲ್ತಿಯೇ ಬದುಕು... ಇದು ಅವರಿಗೂ ಗೊತ್ತಿತ್ತು. ಗೊತ್ತಿದ್ದ ಶಶಿಕಪೂರ್ ಬದುಕನ್ನು ಬಂದಂತೆ ಸ್ವೀಕರಿಸಿ ಸಾಗಿದ ಸಾಧಕ.

ಪ್ರೀತಿಯ ಮಡದಿ ಜೆನ್ನಿಫರ್

ಯುರೋಪಿಯನ್ ಮೂಲದ ಜೆನ್ನಿಫರ್ ಕೆಂಡಲ್ ನಟ ಶಶಿಕಪೂರ್ ಅವರ ಪತ್ನಿ. ವಿದೇಶಿ ಸಂಸ್ಕೃತಿಯ ಜೆನ್ನಿಫರ್ ರನ್ನು 1956 ರಲ್ಲಿ ಕೋಲ್ಕತ್ತಾದಲ್ಲಿ ಮೊದಲ ಬಾರಿಗೆ ಭೇಟಿ ಮಾಡಿದ ಶಶಿಕಪೂರ್, ಮೊದಲ ನೋಟದಲ್ಲಿಯೇ ಮದುವೆಯಾಗುವುದಾಗಿ ತಿಳಿಸಿದ್ದರು.

ಆಶ್ಚರ್ಯಕರ ಸಂಗತಿ ಎಂದರೆ, ಜೆನ್ನಿಫರ್ ತಂದೆ ಜೆಫ್ರಿ ಕೆಂಡಲ್ ‘ಶೇಕ್ಸ್‌ಪಿಯರಾನ’ ಎಂಬ ನಾಟಕ ತಂಡದ ಮಾಲಕ. ಆ ಕಾಲಕ್ಕೇ ಪ್ರಯೋಗಾತ್ಮಕ ನಾಟಕಗಳನ್ನು ಆಡಿಸುತ್ತ ಹೆಸರು ಗಳಿಸಿದ್ದ ಖ್ಯಾತ ನಾಟಕಕಾರ. ಹಾಗೆಯೇ ಶಶಿಕಪೂರ್‌ರವರ ತಂದೆ ಪೃಥ್ವಿರಾಜ್ ಕಪೂರ್ ಕೂಡ ಪೃಥ್ವಿ ಥಿಯೇಟರ್ ಮಾಲಕ. ಶಶಿ-ಜೆನ್ನಿಫರ್ ಇಬ್ಬರೂ ರಂಗಭೂಮಿ ಹಿನ್ನೆಲೆಯಿಂದ ಬಂದ ಕಲಾವಿದರು. ಆದರೆ ಇವರಿಬ್ಬರ ಮದುವೆಗೆ ನಟನೆಯೇ ಅಡ್ಡಿಬಂದದ್ದು ಕುತೂಹಲಕರ ಸಂಗತಿ. ‘ಶೇಕ್ಸ್‌ಪಿಯರಾನ’ ನಾಟಕ ತಂಡದ ಪ್ರಮುಖನಟಿಯಾಗಿದ್ದ ಜೆನ್ನಿಫರ್ ಮದುವೆಗೆ ಆಕೆಯತಂದೆಯೇ ಅಡ್ಡಿಯಾಗಿದ್ದರು. ಆಕೆ ಮದುವೆಯಾಗಿಹೋದರೆ, ತನ್ನ ಕಂಪೆನಿಯನ್ನೇ ಮುಚ್ಚಬೇಕಾ ಗುತ್ತದೆಂಬುದು ಆತನ ವಾದವಾಗಿತ್ತು. ಆದರೂ ವಿರೋಧಗಳ ನಡುವೆಯೇ 1958 ರಲ್ಲಿ ಭಾರತೀಯ ವಿವಾಹ ಪದ್ಧತಿಯ ಪ್ರಕಾರ ಶಶಿ-ಜೆನ್ನಿ ಮದುವೆಯಾದರು. ‘ಹೀಟ್ ಅ್ಯಂಡ್ ಡಸ್ಟ್’ ಎಂಬ ಚಿತ್ರದಲ್ಲಿ ಒಟ್ಟಿಗೆ ನಟಿಸಿದರು. ಮೂರು ಮಕ್ಕಳನ್ನೂ ಪಡೆದರು. ಆದರೆ ಮಕ್ಕಳಾರೂ ಹಿಂದಿ ಚಿತ್ರಜಗತ್ತಿನಲ್ಲಿ ಹೆಸರು ಮಾಡಲಿಲ್ಲ ಎನ್ನುವುದೂ ವಿಶೇಷವೇ. ಪತ್ನಿ ಜೆನ್ನಿಫರ್‌ಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಶಶಿ, 1984ರಲ್ಲಿ ಆಕೆ ಕ್ಯಾನ್ಸರ್‌ಗೆ ತುತ್ತಾಗಿ ಸಾವನ್ನಪ್ಪಿದಾಗ ಅರ್ಧ ಸತ್ತಂತಾಗಿ, ಬಣ್ಣದ ಬದುಕಿನಿಂದ ದೂರ ಸರಿದರು.
ಇದೇ ಸಂದರ್ಭದಲ್ಲಿ ಕನ್ನಡದಲ್ಲಿ ಗಿರೀಶ್ ಕಾರ್ನಾಡರ ನಿರ್ದೇಶನದಲ್ಲಿ ‘ಉತ್ಸವ್’ ಎಂಬ ಕಲಾತ್ಮಕ ಚಿತ್ರವನ್ನು ನಿರ್ಮಿಸಿದರು. ‘ಉತ್ಸವ್’ ಎರಡನೇ ಶತಮಾನದ ಸಂಸ್ಕೃತ ನಾಟಕ ‘ಮೃಚ್ಛಕಟಿಕ’ವನ್ನು ಆಧರಿಸಿದ ಚಿತ್ರ. ಈ ಚಿತ್ರ ಮಾಡುವ ಕಾಲಕ್ಕೆ ಶಶಿ ಸಿಕ್ಕಾಪಟ್ಟೆ ಊದಿಕೊಂಡಿದ್ದರು. ಆದರೂ ಚಿತ್ರದಲ್ಲಿ ಶೂದ್ರಕನ ಪಾತ್ರ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಚಿತ್ರದಲ್ಲಿ ಕನ್ನಡದ ಶಂಕರ್‌ನಾಗ್ ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News

ಜಗದಗಲ
ಜಗ ದಗಲ