ಕ್ರಾಂತಿಕಾರಿ ಉಧಮ್ ಸಿಂಗ್ ಪಂಜಾಬಿ ಅಸ್ಮಿತೆಯ ಹಲವು ಮುಖಗಳಲ್ಲಿ ಒಂದು ಮುಖ ಮಾತ್ರ

Update: 2017-12-04 18:41 GMT

ಭಾಗ-2

ಪಂಜಾಬಿ ಅಸ್ಮಿತೆಯ ಬಗ್ಗೆ ನಡೆಯುವ ಯಾವುದೇ ಚರ್ಚೆಯು, ನಿಗದಿಗೊಳಿಸಲ್ಪಟ್ಟ, ನಿರ್ದಿಷ್ಟ ಧಾರ್ಮಿಕ ಅಸ್ಮಿತೆಗಳನ್ನು ವಿಸರ್ಜಿಸಲು ಪ್ರಯತ್ನಿಸಿದ ಗುರುನಾನಕ್‌ರಹೊರತಾಗಿ ಅಪೂರ್ಣವಾಗಿಯೇ ಉಳಿಯುತ್ತದೆ. ನಾನೊಬ್ಬ ಹಿಂದೂ ಅಲ್ಲ ಅಥವಾ ಮುಸ್ಲಿಮನೂ ಅಲ್ಲ, ಎಂದು ಪುನಃ ಪುನಃ ಒತ್ತಿ ಹೇಳಿದವರು ಗುರುನಾನಕ್. ಅಲ್ಲದೆ ಮೊಗಲ್ ಚಕ್ರವರ್ತಿ ಔರಂಗಜೇಬನ ವಿರುದ್ಧ ತನ್ನ ಜನರ ಘನತೆ, ಗೌರವಕ್ಕಾಗಿ ಹೋರಾಡಿದ ಗುರು ಗೋವಿಂದ ಸಿಂಗ್ ಕೂಡ ಪಂಜಾಬಿ ಅನನ್ಯತೆಯ ಅವಿಭಾಜ್ಯ ಅಂಗ. ಭಾರತದ ವಿಭಜನೆ ಪೂರ್ವದ ಒಂದು ಪಂಜಾಬಿ ಕವನದಲ್ಲಿ ಹೇಳಿರುವಂತೆ, ಗುರು ಗೋವಿಂದ ಸಿಂಗ್ ಗಿಡುಗ ಒಂದನ್ನು ಸೋಲಿಸಲು ಒಂದು ಗುಬ್ಬಿಗೆ ಸ್ಫೂರ್ತಿ ನೀಡಬಲ್ಲ ಗುರು.

ಇಂತಹ ಪಂಜಾಬಿ ಅಸ್ಮಿತೆ ಭಗತ್‌ಸಿಂಗ್‌ನಲ್ಲಿ ಆಳವಾಗಿ ಬೇರೂರಿತ್ತು. ಭಗತ್‌ಸಿಂಗ್ ತನ್ನ ಪ್ರಬಂಧಗಳ ಸಂಕಲನದಲ್ಲಿ ಈ ಪಂಜಾಬಿ ಸಂಸ್ಕೃತಿಯನ್ನು ಸಿಖ್ ಗುರುಗಳ ಕ್ರಾಂತಿಕಾರಕ ರಾಜಕಾರಣವನ್ನು ಉಲ್ಲೇಖಿಸುತ್ತಾನೆ. ಹೆಮ್ಮೆಯ ಓರ್ವ ಪಂಜಾಬಿಯಾದ ಉಧಮ್‌ಸಿಂಗ್ ಕೂಡ ತನ್ನ ಮಾರ್ಗದರ್ಶಕನಾದ ಭಗತ್‌ಸಿಂಗ್‌ನ ಮಾರ್ಗವನ್ನೇ ಅನುಸರಿಸಿದ.

ಛಿದ್ರಗೊಳಿಸುವಿಕೆ 

 ಅದೇನಿದ್ದರೂ ಬ್ರಿಟಿಷ್ ಆಳ್ವಿಕೆಯ ವಸಾಹತು ಶಾಹಿ ಯುಗದಲ್ಲಿ, ದ್ವಿತೀಯ ಆಂಗ್ಲೊ-ಸಿಖ್ ಯುದ್ಧದ (1848-1849) ಬಳಿಕ, ಒಂದು ಹೊಸ ಪಂಜಾಬಿ ಅಸ್ಮಿತೆ ಅಸ್ತಿತ್ವಕ್ಕೆ ಬಂತು. ಅದು ಬ್ರಿಟಿಷ್ ಸರಕಾರಕ್ಕೆ ನಿಷ್ಠವಾದ (ಲಾಯಲಿಸ್ಟ್), ಬ್ರಿಟಿಷ್ ಸಾಮ್ರಾಜ್ಯ ಪರವಾದ ಪಂಜಾಬಿ ಅಸ್ಮಿತೆಯಾಗಿತ್ತು. 1857ರ ಯುದ್ಧದಲ್ಲಿ ಪಂಜಾಬ್ ಪ್ರಾಬಲ್ಯದ ಬ್ರಿಟಿಷ್ ಸೇನೆ ದಿಲ್ಲಿ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿ ದಂಗೆ ಕೋರರನ್ನು ಸೋಲಿಸಲು ಬ್ರಿಟಿಷರಿಗೆ ನೆರವಾದಾಗ ಪಂಜಾಬಿ ಅಸ್ಮಿತೆಯ ಈ ಪ್ರತಿಮೆ ಇನ್ನಷ್ಟು ಸ್ಪಷ್ಟವಾಗಿ ಕಾಣಿಸಿತು. ಹಲವು ಪಂಜಾಬಿ ಜನಸಮುದಾಯಗಳನ್ನು, ಚಿಕ್ಕ ಚಿಕ್ಕ ಗುಂಪುಗಳನ್ನು ‘ಸೇನಾ ಜನಾಂಗಗಳು’ ಎಂದು ಸನ್ಮಾನಿಸಲಾಯಿತು. ಅವರ ಜನಾಂಗದ, ವಂಶದ ಶ್ರೇಣಿಯಲ್ಲಿ ಅವರಿಗೆ ಉನ್ನತಮಟ್ಟದ ಒಂದು ಹುದ್ದೆಯನ್ನು ನೀಡಿದ ಈ ಪ್ರಶಸ್ತಿಯು ಅವರು ಬ್ರಿಟಿಷರಿಗೆ ನಿಷ್ಠರು, ಸ್ವಾಮಿ ನಿಷ್ಠರು ಎಂಬುದನ್ನು ಸೂಚಿಸುತ್ತಿತ್ತು.

ಆದ್ದರಿಂದ, ಬ್ರಿಟಿಷ್ ವಸಾಹತುಶಾಹಿ ಯುಗವು ಈ ಎರಡು ಪಂಜಾಬ್‌ಗಳ ನಡುವೆ ಒಂದು ತುಮುಲವನ್ನು, ತಿಕ್ಕಾಟವನ್ನು ಕಂಡ ಯುಗವಾಗಿತ್ತು. ಒಂದು ಪಂಜಾಬ್ ತನ್ನ ಅಂತಃಸತ್ವದಲ್ಲಿ, ತನ್ನ ತಿರುಳಿನಲ್ಲಿ ಕ್ರಾಂತಿಕಾರಕವಾದ ಪಂಜಾಬ್ ಆಗಿತ್ತು. ಅದು ದುಲ್ಹಾಭಟ್ಟಿ ಮತ್ತು ಅಹಮದ್‌ಖಾನ್ ಖರಾಲ್‌ರ ಪಂಜಾಬ್ ಆಗಿತ್ತು. ಅಹಮದ್‌ಖಾನ್ ಖರಾಲ್ 1857ರ ಯುದ್ಧದ ಅವಧಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಇನ್ನೊಬ್ಬ ಜಮೀನ್ದಾರನಾಗಿದ್ದ. ಆತ ಪಂಜಾಬ್ ಪ್ರಾಂತದಲ್ಲಿ ನಡೆದ ದಂಗೆಗಳಲ್ಲಿ ಏಕೈಕ ಪ್ರಮುಖ ದಂಗೆಯ ನೇತೃತ್ವ ವಹಿಸಿದ್ದ. ಇನ್ನೊಂದು ಪಂಜಾಬ್, ತಾವು ಬ್ರಿಟಿಷ್ ದೊರೆಗೆ ತೋರಿದ ಸ್ವಾಮಿ ನಿಷ್ಠೆಗಾಗಿ ಬ್ರಿಟಿಷ್ ಸರಕಾರದಿಂದ ರಾಯ್ ಬಹದ್ದೂರ್, ಖಾನ್ ಬಹದ್ದೂರ್ ಮತ್ತು ಸರ್ದಾರ್‌ನಂತಹ ಬಿರುದುಗಳನ್ನು ಪಡೆದಿದ್ದ ಪಂಗಡ ಮುಖಂಡರುಗಳ ಮತ್ತು ಶ್ರೀಮಂತರ ಪಂಜಾಬ್ ಆಗಿತ್ತು.

ಪಂಜಾಬ್ ಪ್ರಾಂತದಾದ್ಯಂತ ಶಿಕ್ಷಣ ಮತ್ತು ನಗರೀಕರಣ ವ್ಯಾಪಕವಾಗಿ ಹರಡಿದಂತೆ 20ನೇ ಶತಮಾನದ ಆದಿ ಭಾಗದಲ್ಲಿ ಪಂಜಾಬ್ ಇನ್ನಷ್ಟು ಹೋಳು ಹೋಳಾಯಿತು: ಪಂಜಾಬಿಗಳು ಪಂಜಾಬಿಗಳಾಗಿ ಉಳಿಯಲಿಲ್ಲ. ಬದಲಾಗಿ, ಅವರು ಬ್ರಿಟಿಷ್ ಸರಕಾರದ ಮನ್ನಣೆಗಾಗಿ, ಗುರುತಿಸುವಿಕೆ (ರಿಕಗ್ನಿಶನ್)ಗಾಗಿ ಹೋರಾಡುತ್ತಿರುವ ಹಿಂದೂಗಳಾದರು, ಮುಸ್ಲಿಮರಾದರು ಮತ್ತು ಸಿಖ್ಖರಾದರು. ಉರ್ದು ಭಾಷೆಯು ಮುಸ್ಲಿಮರ ಸಂಕೇತವಾಯಿತು, ಅವರ ಅನನ್ಯತೆಯ ಮಾಧ್ಯಮವಾಯಿತು. ಹಿಂದೂಗಳು ಅದೇ ವೇಳೆ, ಹಿಂದಿಯನ್ನು ಬಳಸುವ ಹಕ್ಕಿಗಾಗಿ ಹೋರಾಡಿದರು; ಪಂಜಾಬಿಯು ಸಿಖ್ಖರಿಗೆ ಸೀಮಿತವಾಗಿ ಉಳಿಯಿತು. ಮತ್ತು ಸಿಖ್ಖರು ಕ್ರಮೇಣ, ಅಂತಿಮವಾಗಿ, ಈ ಪಂಜಾಬಿ ಪರಂಪರೆಯ ಏಕೈಕ ಹಕ್ಕುದಾರರಾಗಿ, ಏಕೈಕ ವಾರೀಸುದಾರರಾಗಿ ಮೂಡಿಬಂದರು.

ದೇಶಕ್ಕೆ ಸ್ವಾತಂತ್ರದೊರಕುವಾಗ, ಭಾರತವು ಭಾರತ-ಪಾಕಿಸ್ತಾನವಾಗಿ ವಿಭಜಿಸಲ್ಪಟ್ಟು, ಭಾರತ ಮತ್ತು ಪಾಕಿಸ್ತಾನವೆಂಬ ಎರಡು ದೇಶಗಳು ಸೃಷ್ಟಿಯಾದಾಗ, ಮುಸ್ಲಿಮರಿಗೆ ಉರ್ದು ಮತ್ತು ಹಿಂದೂಗಳಿಗೆ ಹಿಂದಿ ಎಂಬ ಭಾಷೆಯ ನಿಗದಿಯಾಗಿ, ಈ ಎರಡರ ನಡುವೆ ತಿಕ್ಕಾಟ, ಘರ್ಷಣೆ ತೀವ್ರವಾಯಿತು. ಪಾಕಿಸ್ತಾನಿ ರಾಷ್ಟ್ರೀ ಯತೆಯ ಸಂಕೇತವಾಗಿ ಪಾಕಿಸ್ತಾನಿ ಪಂಜಾಬ್ ಮೂಡಿ ಬಂದದ್ದೇ ಇದಕ್ಕೆ ಕಾರಣ, ವಸಾಹತುಶಾಹಿ ಪರಂಪರೆಗೆ ಅನುಗುಣ ವಾಗಿ ಉರ್ದು ಪಂಜಾಬಿ ಗಳ ಭಾಷೆಯಾಯಿತು, ಅದೇ ಸಮಯದಲ್ಲಿ ಬುಲೆಹ್ ಶಾ, ಶಾ ಹುಸೈನ್, ಗುರುನಾನಕ್ ಮತ್ತು ಹೀರ್- ರಾಂಜಾ ರಂತಹ ಪಂಜಾಬಿ ಸಂಕೇತ ಗಳು ನಿಧಾನವಾಗಿ ಅಂಚಿಗೆ ಸರಿಯಲು, ಮುಖ್ಯ ಪ್ರವಾಹದಿಂದ ಹಿಂದೆ ಸರಿಯಲು ಆರಂಭಿಸಿದವು.

ಗಡಿಯ ಇನ್ನೊಂದು ಬದಿಯಲ್ಲಿ, ಪಂಜಾಬನ್ನು ಇನ್ನಷ್ಟು ಪ್ರತ್ಯೇಕ ಭಾಗವಾಗಿ ಪ್ರತ್ಯೇಕಿಸುತ್ತ ಹೋದಂತೆ, ಅದನ್ನು ಸಿಖ್ ಪ್ರಾಬಲ್ಯವುಳ್ಳ ಒಂದು ಪ್ರಾಂತವಾಗಿ ಮಾಡಿದಾಗ ಒಂದು ನವಪಂಜಾಬಿ ಅಸ್ಮಿತೆ ಉದಯಿಸಿತು. ಈ ನವ ಅಸ್ಮಿತೆಯು ಧಾರ್ಮಿಕ ಅಸ್ಮಿತೆಗೆ ಸಮಾನಾರ್ಥವಿರುವ ಒಂದು ಅಸ್ಮಿತೆಯಾಯಿತು. ಪಂಜಾಬಿ ಅಸ್ಮಿತೆಯ ಸಂಕೇತಗಳನ್ನು ಧಾರ್ಮಿಕ ಅಸ್ಮಿತೆಯ ಗುಂಪುಗಳು ತಮ್ಮದಾಗಿ ಮಾಡಿಕೊಂಡಾಗ, ತಮ್ಮ ವಶಕ್ಕೆ ತೆಗೆದುಕೊಂಡಾಗ ಆ ಸಂಕೇತಗಳು ಗತಕಾಲದ ಸ್ಮಾರಕಗಳಾದವು; ಸಮಕಾಲೀನ ಪಂಜಾಬಿ ಅಸ್ಮಿತೆಗೆ ಅಪ್ರಸ್ತುತವಾದವು. ಧಾರ್ಮಿಕ ಅಸ್ಮಿತೆಯೊಂದಿಗೆ ಸಮೀಕರಿಸಲಾದ ಈ ನವ ಅಸ್ಮಿತೆಯ ಪಂಜಾಬ್‌ನ ಜೊತೆಗೇ ಭಾರತ ಮತ್ತು ಪಾಕಿಸ್ತಾನ- ಎರಡೂ ಕೂಡ ವ್ಯವಹರಿಸಬೇಕಾಗಿದೆ.

ಕೃಪೆ: scroll.in

Writer - ಹಾರೂನ್ ಖಾಲಿದ್

contributor

Editor - ಹಾರೂನ್ ಖಾಲಿದ್

contributor

Similar News

ಜಗದಗಲ
ಜಗ ದಗಲ