ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕಾಂಗ್ರೆಸ್ ತೊರೆಯಲಿ: ಎಂ.ಡಿ.ಚಂದ್ರಶೇಖರ್

Update: 2017-12-05 13:00 GMT

ಬೆಂಗಳೂರು, ಡಿ.5: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ಗೆ ಕಾಂಗ್ರೆಸ್‌ನಲ್ಲಿ ಸಿಗಬೇಕಾದ ಗೌರವ ಸಿಗುತ್ತಿಲ್ಲ. ಕೂಡಲೇ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷದತ್ತ ಒಲವು ತೋರಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ್ಷ ಎಂ.ಡಿ.ಚಂದ್ರಶೇಖರ್ ಒತ್ತಾಯಿಸಿದರು.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶರಣಾಗಿದೆ. ಇದರಿಂದ ಪರಮೇಶ್ವರ್‌ಗೆ ಗೌರವ ಸಿಗುತ್ತಿಲ್ಲ. ಕಾಂಗ್ರೆಸ್‌ನಲ್ಲಿರುವ ಈ ಬೆಳವಣಿಗೆಯನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅರ್ಥ ಮಾಡಿಕೊಂಡು ಸರಿಯಾದ ನಿರ್ಣಯ ಕೈಗೊಳ್ಳಬೇಕು ಎಂದು ತಿಳಿಸಿದರು.

ಡಾ.ಜಿ.ಪರಮೇಶ್ವರ್‌ಗೆ ಮುಖ್ಯಮಂತ್ರಿ ಪಟ್ಟ ಸಿಗಬಾರದೆಂದು ಸ್ವ-ಪಕ್ಷದವರೇ ಅವರನ್ನು ಸೋಲಿಸಿದರು. ಕಾಂಗ್ರಸ್‌ನಲ್ಲಿ ದಲಿತರನ್ನು ಅವಮಾನ ಮಾಡಲಾಗುತ್ತಿದೆ. ಸತತವಾಗಿ ಪಕ್ಷದ ಪರ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆಗೂ ಸಿಎಂ ಸ್ಥಾನ ಇದುವರೆಗೂ ಸಿಕ್ಕಿಲ್ಲ. ಕಾಂಗ್ರೆಸ್‌ನಲ್ಲಿ ಗುಲಾಮಗಿರಿ ಪದ್ಧತಿ ಇಂದಿಗೂ ಜೀವಂತವಾಗಿದೆ. ಎಂದು ಅವರು ಹೇಳಿದರು.

ದಲಿತ ನಾಯಕರಿಗೆ ಸಚಿವ ಸ್ಥಾನ ನೀಡುವಲ್ಲಿಯೂ ತಾರತಮ್ಯ ಉಂಟಾಗಿದೆ. ದಲಿತರನ್ನು ವಂಚಿಸುವುದು ಕಾಂಗ್ರೆಸ್ ಕುಲಕಸುಬು. ನಾನು ಜೆಡಿಎಸ್ ಉಪಾಧ್ಯಕ್ಷನಾಗಿದ್ದರೂ ಯಾವುದೇ ರಾಜಕೀಯ ವ್ಯಕ್ತಿಗಳ ಪ್ರಭಾವ ಮತ್ತು ಒತ್ತಡಕ್ಕೆ ಮಣಿದು ಪತ್ರಿಕಾಗೋಷ್ಠಿ ನಡೆಸುತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ದಲಿತ ನಾಯಕರಿಗೆ ಆಗುತ್ತಿರುವ ಅವಮಾನಗಳನ್ನು ಸಹಿಸಲಾಗದೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇನೆ ಎಂದು ಅವರು ಸಮರ್ಥನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News