ಬಾಬರಿ ಮಸೀದಿ ಧ್ವಂಸ: ಭಾರತೀಯತೆಯ ಮೇಲೆ ನಡೆದ ದಾಳಿ

Update: 2017-12-05 18:35 GMT

ಬಾಬರಿ ಮಸೀದಿ ಧ್ವಂಸದ ನಂತರ ಬಿಜೆಪಿ ಮುಸಲ್ಮಾನರನ್ನು ತೋರಿಸಿ ಹಿಂದೂ ಓಟುಗಳನ್ನು ಕ್ರೋಡೀಕರಿಸುವ ಸುಲಭ ಉಪಾಯವನ್ನು ಕಂಡುಕೊಂಡಿತು. ಈವರೆಗೂ ರಾಮ ಮಂದಿರ ಕಟ್ಟುವ ಅಜೆಂಡಾ ಅನ್ನು ಪ್ರತೀ ಚುನಾವಣೆಯಲ್ಲೂ ಬಳಸಿ, ಮತದಾರರನ್ನು ಮಂಗ ಮಾಡುವ ಚಳಕವನ್ನು ಮೈಗೂಡಿಸಿಕೊಂಡು ಇಂದು ಇಡೀ ದೇಶವನ್ನೇ ಕೋಮು ದ್ವೇಷದಿಂದ ತತ್ತರಿಸುವಂತೆ ಮಾಡಿದೆ.

ನನಗಿನ್ನೂ ನೆನಪಿದೆ, ಅಂದು 6ನೇ ಡಿಸೆಂಬರ್ 1992, ಎಂದಿನಂತೆ ಬೆಂಗಳೂರು ಸಿವಿಲ್ ಕೋರ್ಟಿನ ಮೂರನೇ ಮಹಡಿಯ ಒಂದು ಕೋರ್ಟ್ ಹಾಲ್‌ನಲ್ಲಿ ನನ್ನ ಕೇಸಿನ ಕರೆಗಾಗಿ ಕಾಯುತ್ತಾ ಕುಳಿತಿದ್ದೆ. ಕೆಳಗಿನಿಂದ ಕೂಗಾಟ ಕಿರುಚಾಟಗಳು ಕೇಳಿಸುತ್ತಿದ್ದವು!? ಒಂದು ವಕೀಲರ ಗುಂಪು ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ಕೋರ್ಟ್ ಹಾಲಿಗೆ ನುಗ್ಗಿ ‘‘ಏ.. ಹೊರಗೆ ಬನ್ರೋ.. ಅಲ್ಲಿ ಅಯೋಧ್ಯೆಯಲ್ಲಿ ಹಿಂದೂಗಳ ಮೇಲೆ ಗುಂಡು ಹಾರಿಸಿ ... ನದಿಗೆ ಎಸೆಯುತ್ತಿದ್ದಾರೆ.. ಇಲ್ಲಿ ನೀವು ಕೋರ್ಟಲ್ಲಿ ವಾದ ಮಾಡುತ್ತಿದ್ದೀರಿ.. ನಾಚಿಕೆಯಾಗಲ್ವ.. ನಡೀರೋ ಹೊರಕ್ಕೆ..’’ ಎಂದು ವಕೀಲರನ್ನೆಲ್ಲ ಹೊರ ಕಳುಹಿಸಿದರು. ಅದರಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಗೆ ಸೇರಿದ ಎಲ್ಲರೂ ಇದ್ದರು, ಹಿಂದುತ್ವದ ಆಧಾರದ ಮೇಲೆ ಪಕ್ಷಭೇದ ಬಿಟ್ಟು ಎಲ್ಲರೂ ಒಂದಾಗಿದ್ದರು! ಕೋರ್ಟಿನಲ್ಲಿ ನಾನು ಮತ್ತು ಜಡ್ಜ್ ವೆಂಕಟರಾವ್ ಇಬ್ಬರೇ ಉಳಿದೆವು, ನನ್ನನ್ನು ಹೊರಹಾಕುವ ಅವರ ಪ್ರಯತ್ನ ಫಲಿಸಲಿಲ್ಲ ‘‘ಅವನೊಬ್ಬ ಹುಚ್ಚ. ಕೂತು ಏನು ಮಾಡ್ತಾನೋ ಮಾಡ್ಲಿ..’’ ಅಂತ ನನ್ನ ವಿರುದ್ಧ ಅಶ್ಲೀಲವಾಗಿ ಬೈಯುತ್ತಾ ಹೊರಟು ಹೋದರು. ನ್ಯಾಯಾಧೀಶರು ‘‘ಇನ್ನೇನು ಮಾಡುತ್ತೀರಿ ನೀವು ಹೊರಡಿ’’ ಎಂದರು. ‘‘ಇಲ್ಲ ಸ್ವಾಮಿ ಇವರ ವಿರುದ್ಧ ನನ್ನ ಪ್ರತಿಭಟನೆಯನ್ನು ದಾಖಲಿಸಲಿಕ್ಕಾದರೂ ಐದು ನಿಮಿಷ ವಾದ ಮಾಡುತ್ತೇನೆ..’’ ಎಂದು ವಿನಂತಿಸಿ ವಾದ ಮಾಡಿ ಹೊರಬಂದೆ. ಸದಾ ವಕೀಲರು, ಕಕ್ಷಿದಾರರಿಂದ ಗಿಜಿಗುಡುತ್ತಿದ್ದ ಆರು ಅಂತಸ್ತಿನ ಆ ಕೋರ್ಟ್ ಕಟ್ಟಡದಲ್ಲಿ ನನಗೆ ತಿಳಿದಂತೆ ನಾನೊಬ್ಬನೇ ಇದ್ದಂತಹ ಮೌನ ಆವರಿಸಿತ್ತು.. ನನ್ನ ಹೆಜ್ಜೆಯ ಶಬ್ದ ನನಗೆ ಕೇಳಿಸುತ್ತಿತ್ತು.

ಕೆಳಗಡೆ ವಕೀಲರ ಸಂಘದಲ್ಲಿ ದೊಡ್ಡ ಕೂಗಾಟ, ಕಿರುಚಾಟ ಕೇಳಿಸುತ್ತಲೇ ಇತ್ತು. ನನಗೆ ನನ್ನ ವಕೀಲ ಗೆಳೆಯ ನಸೀರ್ ಸಿಕ್ಕ. ಅವನನ್ನು ಮನೆಗೆ ಕಳಿಸಿದೆ.

 ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ್ದನ್ನು ವಿರೋಧಿಸಿ ಪ್ರಗತಿಪರರು ಎಂ.ಜಿ.ರಸ್ತೆಯ ಗಾಂಧಿ ಪ್ರತಿಮೆಯಿಂದ ಒಂದು ಮೌನ ಮೆರವಣಿಗೆ ಏರ್ಪಡಿಸಿದ ವಿಚಾರ ತಿಳಿಯಿತು. ಅಷ್ಟರಲ್ಲಿ ನಾಗಮೋಹನ ದಾಸ್ ಸಿಕ್ಕಿದರು, ನಾವಿಬ್ಬರೂ ನಮ್ಮ ಕೋಟು, ಬ್ಯಾಂಡುಗಳೊಂದಿಗೇ ಹೋಗಿ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡೆವು.

ನನಗೆ ಅರ್ಥವಾಗದ್ದು, so called educated ಎನಿಸಿಕೊಂಡ ವಕೀಲರು ತಮ್ಮ ಪಕ್ಷಭೇದ ಬಿಟ್ಟು ಸಂಘಪರಿವಾರದ ಬಾಬರಿ ಮಸೀದಿ ಧ್ವಂಸದ ಟ್ರ್ಯಾಪ್‌ನಲ್ಲಿ ಬಿದ್ದದ್ದು!! ಮುಸ್ಲಿಮರನ್ನು ತೋರಿಸಿ ಹಿಂದೂಗಳನ್ನು ಕ್ರೋಡೀಕರಿಸುವ ಸಂಘ ಪರಿವಾರದ ರಾಜಕಾರಣ ಯಶಸ್ವಿಯಾಗಿದ್ದೇ ಇಲ್ಲಿಂದ.

ಇದಕ್ಕಿಂತಲೂ ವಿಶೇಷವೆಂದರೆ ಬಾಬರಿ ಮಸೀದಿಯನ್ನು ಉರುಳಿಸುವಂತಹ, ಮುಂದೆ ಚರಿತ್ರಾರ್ಹ ಎನಿಸಿಕೊಳ್ಳುವ ಕೃತ್ಯವನ್ನು ಎಸಗಲು ಡಿಸೆಂಬರ್ 6ನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎಂಬುದು!? ಡಿಸೆಂಬರ್ 6, ಬಾಬಾಸಾಹೇಬ ಡಾ.ಅಂಬೇಡ್ಕರ್ ರವರು ಪರಿನಿಬ್ಬಾಣವಾದ ದಿನ. ಈ ದೇಶದ ಕೋಟ್ಯಂತರ ದಲಿತ, ಹಿಂದುಳಿದ, ಆದಿವಾಸಿ, ಅಲೆಮಾರಿಗಳು ಈ ದಿನವನ್ನು ದುಃಖದ ದಿನವನ್ನಾಗಿ ಪರಿಗಣಿಸುತ್ತಾರೆ. ಇದೇ ದಿನ ಬಾಬರಿ ಮಸೀದಿ ಧ್ವಂಸ ಮಾಡಿದ ಪರಿಣಾಮ ಇದನ್ನು ಇನ್ನು ಮುಂದೆ ‘ಹಿಂದೂ ಪುನರುತ್ಥಾನದ ದಿನ’ವನ್ನಾಗಿ ಸಂಘ ಪರಿವಾರ ಆಚರಿಸುತ್ತೆ! ಒಂದೇ ಏಟಿಗೆ ಹಿಂದೂಗಳಲ್ಲಿರುವ ದಲಿತ, ಆದಿವಾಸಿ, ಅಲೆಮಾರಿಗಳನ್ನು ಮತ್ತು ಮುಸ್ಲಿಮರನ್ನು ಮುಗಿಸುವುದು ಸಂಘಪರಿವಾರದ ತಂತ್ರ. ಇದು ನನಗೆ ಸ್ಪಷ್ಟವಾಗಿ ಮನದಟ್ಟಾಯಿತು. ಇದನ್ನು ಮೊದಲ ಬಾರಿಗೆ ‘ಲಂಕೇಶ್ ಪತ್ರಿಕೆ’ಯಲ್ಲಿ ಬರೆದೆ. ನಂತರ ಈ ತಂತ್ರ ಇಡೀ ದೇಶಕ್ಕೆ ಅರ್ಥವಾಯಿತು.

ಇದೇ ಸಂದರ್ಭದಲ್ಲಿ ಕೋಲಾರದಲ್ಲಿ ಅತ್ಯಂತ ಭಯಾನಕವಾಗಿ ಕೋಮು ಗಲಭೆೆಗಳು ಆರಂಭವಾದವು. ಕೋಲಾರದ ಶಾರದಾಂಬ ಛತ್ರದಲ್ಲಿ ಸಂಘ ಪರಿವಾರದ ಸಭೆಯಿತ್ತು, ಆ ಸಭೆಯಲ್ಲಿ ಸಂಘಪರಿವಾರದವನೊಬ್ಬ ಅತ್ಯಂತ ಪ್ರಚೋದನೆಯ ಭಾಷಣ ಮಾಡಿದ. ಇದನ್ನು ಕೇಳಿಸಿಕೊಂಡ ಹಿಂದುಳಿದ ವರ್ಗಕ್ಕೆ ಸೇರಿದ ಯುವಕನೊಬ್ಬ ಬಾಕು ಹಿಡಿದು ಬೀದಿಗೆ ಬಂದ, ಇವನ ಎದುರಿಗೆ ಒಬ್ಬ ಬೆಳ್ಳನೆಯ ಹುಡುಗ ತೆಳುವಾದ ಜುಬ್ಬಾ ಧರಿಸಿ ಬರುತ್ತಿದ್ದ, ಅವನ ಕೆಂಪು ಬಾರ್ಡರಿನ ಕಪ್ಪು ಬನೀನು ಜುಬ್ಬಾ ಒಳಗಿಂದ ಕಾಣುತ್ತಿತ್ತು. ಇವನಿಗೆ ಆತ ಮುಸ್ಲಿಂ ಎಂದು ಖಾತರಿಯಾಯಿತು, ಅವನ ಬಳಿ ಹೋಗಿ ‘‘ಕ್ಯಾರೆ..’’ ಅಂದ, ಅವನು ‘‘ಕ್ಯಾಬಿನೈರೆ..’’ ಅಂದ, ಇವನಿಗೆ ಇನ್ನಷ್ಟು ಖಾತರಿಯಾಯಿತು. ಇವನು ಬಾಕು ತೆಗೆದು ಎದೆಗೆ ಚುಚ್ಚಿದ..! ಅದು ನೇರವಾಗಿ ಹೃದಯವನ್ನು ಭೇದಿಸಿತು, ಕ್ಷಣಾರ್ಧದಲ್ಲಿ ಹುಡುಗ ಸತ್ತ. ನಿಜಕ್ಕೂ ಅವನು ಹಿಂದೂ ಬ್ರಾಹ್ಮಣರ ಹುಡುಗನಾಗಿದ್ದ, ಮಿಠಾಯಿ ಮಾಡುವ ಬಡಬ್ರಾಹ್ಮಣರ ಮಗ, ಇರಿದವನು ಹಿಂದುಳಿದ ಜಾತಿಗೆ ಸೇರಿದ ಕಂಬಳಿ ನೇಯುವವರ ಮಗ! ಕೊಂದವನೂ ಕೊಲ್ಲಿಸಿಕೊಂಡವನೂ ಇಬ್ಬರೂ ಹಿಂದುಗಳೇ!

ಮಾರನೇ ದಿನ ದಿನಪತ್ರಿಕೆಗಳಲ್ಲಿ ಹಿಂದೂವೊಬ್ಬನನ್ನು ಮುಸ್ಲಿಮರು ಕೊಂದರು.. ಎಂದು ಸುದ್ದಿ ಮಾಡಿದರು! ನಂತರ ಸತತವಾಗಿ ಒಂಬತ್ತು ಹೆಣಗಳು ಬಿದ್ದವು!! ಕೋಲಾರದ ಇತಿಹಾಸದಲ್ಲೇ ಆಗಿರದಂತಹ ಕೋಮು ಬೆಂಕಿ ಭುಗಿಲೆದ್ದಿತು.. ’ಲಂಕೇಶ್ ಪತ್ರಿಕೆ’ ಯಲ್ಲಿ ನಾನು ಈ ಸತ್ಯವನ್ನು ಬರೆದ ನಂತರ ಗಲಭೆ ಹತೋಟಿಗೆ ಬಂತು. ಇದೆಲ್ಲಾ ನಡೆದದ್ದು ಬಾಬರಿ ಮಸೀದಿ ಧ್ವಂಸದ ಪರಿಣಾಮವಾಗಿ ಆದ್ದರಿಂದ ಹಂಚಿಕೊಂಡೆ.

ಈವರೆಗೂ ಈ ಬಾಬರಿ ಮಸೀದಿ ಸಂಬಂಧ ವಿವಿಧ ಕೋಮು ಗಲಭೆಗಳಲ್ಲಿ ಸತ್ತವರ ಸಂಖ್ಯೆ ಎರಡು ಸಾವಿರ ಮೀರಿದೆ. ಅನೇಕರು ಅನೇಕ ರೀತಿಯಲ್ಲಿ ವಿಶ್ಲೇಷಣೆ ನೀಡುತ್ತಾ, ಏಳು ಸಾವಿರ ವರ್ಷಗಳಿಂದ ಒಂಬತ್ತು ಲಕ್ಷ ವರ್ಷಗಳವರೆಗೂ ಹಿಂದೆ ತ್ರೇತಾ ಯುಗದಲ್ಲಿ ಇದ್ದನೆಂದು ನಂಬಲಾದ ಶ್ರೀರಾಮಚಂದ್ರ ಹುಟ್ಟಿದ್ದು ಬಾಬರಿ ಮಸೀದಿಯ ಮುಖ್ಯ ಗುಂಬಝ್ ಇದ್ದ ಜಾಗದಲ್ಲಿ ಎಂದು ನಿಖರವಾಗಿ ಹೇಳುತ್ತಾರೆ!! ಬಾಬರಿ ಮಸೀದಿ ಕೆಡವಿದ ನಂತರ ಈ ಜಾಗ 1,482.5 ಚದರ ಗಜಗಳಷ್ಟನ್ನು ವಿಂಗಡಿಸಲಾಗಿದೆ.

ಸೆಪ್ಟಂಬರ್ 30, 2010ರಲ್ಲಿ ಲಕ್ನೋ ಹೈಕೋರ್ಟ್ ತ್ರಿಸದಸ್ಯ ಪೀಠ ಹಿಂದೂಗಳ ನಂಬಿಕೆಯನ್ನು ಎತ್ತಿಹಿಡಿದು ‘‘ಶ್ರೀರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ ಎಂಬುದು ಜಗತ್ತಿಗೇ ತಿಳಿದಿದೆ..’’ ಎನ್ನುವ ಅರ್ಥ ಬರುವಂತೆ ಹೇಳಿದೆ. ಇದರ ವಿರುದ್ಧ ‘ಸುನ್ನೀ ವಕ್ಫ್ ಬೋರ್ಡ್’ನವರು ಸುಪ್ರೀಂ ಕೋರ್ಟಿಗೆ ಹೋದರು. ಸುಪ್ರೀಂ ಕೋರ್ಟ್‌ನವರು ಈ 67ಎಕರೆಯಲ್ಲಿ ಯಾವುದೇ ಪ್ರಕ್ರಿಯೆ ಮಾಡಬಾರದೆಂದು ಹೇಳುತ್ತಾ ಹಿಂದೆ ಲಕ್ನೋ ಹೈಕೋರ್ಟ್ ಮಾಡಿದ್ದ ನಂಬಿಕೆ ಪ್ರಶ್ನೆಯನ್ನು leap of the faith ಎಂದಿದೆ. ಇದರ ಅರ್ಥ an act of believing in or attempting something whose existence or outcome cannot be proved or know ಎಂದು.

ಸುಪ್ರೀಂ ಕೋರ್ಟ್ 2002ರಲ್ಲಿ ಮಾಡಿದ ಆದೇಶದ ಮೇಲಿನ ಅಪೀಲ್ ಇಂದಿನ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳಾದ ಜಸ್ಟೀಸ್ ದೀಪಕ್ ಮಿಶ್ರಾರ ಮುಂದೆ ಡಿಸೆಂಬರ್ 5ರಂದೇ ವಿಚಾರಣೆಗೆ ಬಂದಿದೆ. ಬಾಬರಿ ಮಸೀದಿ ಧ್ವಂಸದ 25ನೇ ವಾರ್ಷಿಕ ಕರಾಳೋತ್ಸವದ ಸಂದರ್ಭದಲ್ಲೇ ಈ ಪ್ರಕರಣ ವಿಚಾರಣೆಗೆ ಬರುತ್ತಿರುವುದು ಕಾಕತಾಳೀಯವಿರಬಹುದೇ? ಏನೇ ಆದರೂ ಹದಿನಾರನೇ ಶತಮಾನದ ಪರ್ಸಿಯನ್ ಮತ್ತು ಅರೇಬಿಕ್ ಭಾಷೆಯ ದಾಖಲೆಗಳನ್ನಿಟ್ಟುಕೊಂಡು ಪ್ರಕರಣ ನಡೆಯುವ ಸಾಧ್ಯತೆಯಿದೆ.

ಈ ಮಧ್ಯೆ ಇದೇ ಎಪ್ರಿಲ್‌ನಲ್ಲಿ ಬಾಬರಿ ಮಸೀದಿ ಧ್ವಂಸದ ಅಪರಾಧ ಷಡ್ಯಂತ್ರ(criminal conspiracy)ದ ಮರುಪರಿಶೀಲನಾ ಅರ್ಜಿಯ ಮೇಲೆ ಪ್ರಕರಣದಲ್ಲಿ ಅಡ್ವಾಣಿ, ಮುರಳಿ ಮನೋಹರ ಜೋಷಿ ಹಾಗೂ ಉಮಾಭಾರತಿಯವರನ್ನು ನ್ಯಾಯಾಲಯ ತಪ್ಪಿತಸ್ಥರೆಂದು ಹೇಳಿದೆ.
1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ್ದು ಸಂಘ ಪರಿವಾರ ಆದರೆ ಆಗ ದೇಶದಲ್ಲಿ ಆಡಳಿತ ಮಾಡುತ್ತಿದ್ದದ್ದು ನರಸಿಂಹರಾವ್‌ರ ಕಾಂಗ್ರೆಸ್ ಸರಕಾರ. ತನ್ನ ಕೈಯಲ್ಲಿ ಪೊಲೀಸ್ ಇಂಟೆಲಿಜೆನ್ಸಿ, ಪೊಲೀಸ್ ಪಡೆಗಳು, ಮಿಲಿಟರಿ ಮತ್ತು ಪ್ಯಾರ ಮಿಲಿಟರಿಗಳಿದ್ದರೂ ಇಡೀ ಬಾಬರಿ ಮಸೀದಿಯನ್ನು ನೆಲಸಮ ಮಾಡುವವರೆಗೂ ಕಾಂಗ್ರೆಸ್ ಸರಕಾರ ಮೂಖ ಪ್ರೇಕ್ಷಕವಾಗಿತ್ತು. ಹಾಗೆ ನೋಡಿದರೆ ಈ ವಿಷಯದಲ್ಲಿ ಸಂಘಪರಿವಾರ ಮತ್ತು ಕಾಂಗ್ರೆಸ್ ಒಬ್ಬರಿಗೊಬ್ಬರು ಪೂರಕವಾಗಿ ನಡಕೊಂಡರು! ಈ ಕಾರಣಕ್ಕೇ ಬಾಬರಿ ಮಸೀದಿ ಧ್ವಂಸ, ಸಂಘಪರಿವಾರ ಮತ್ತು ಕಾಂಗ್ರೆಸ್ ಪಕ್ಷದ ‘ಜಾಯಿಂಟ್ ವೆಂಚರ್’ ಎಂದು ಕರೆಯಬಹುದು!
ಒಟ್ಟಾರೆಯಾಗಿ ಬಾಬರಿ ಮಸೀದಿ ಧ್ವಂಸದ ನಂತರ ಬಿಜೆಪಿ ಮುಸಲ್ಮಾನರನ್ನು ತೋರಿಸಿ ಹಿಂದೂ ಓಟುಗಳನ್ನು ಕ್ರೋಡೀಕರಿಸುವ ಸುಲಭ ಉಪಾಯವನ್ನು ಕಂಡುಕೊಂಡಿತು. ಈ ವರೆಗೂ ರಾಮ ಮಂದಿರ ಕಟ್ಟುವ ಅಜೆಂಡಾ ಅನ್ನು ಪ್ರತೀ ಚುನಾವಣೆಯಲ್ಲೂ ಬಳಸಿ, ಮತದಾರರನ್ನು ಮಂಗ ಮಾಡುವ ಚಳಕವನ್ನು ಮೈಗೂಡಿಸಿಕೊಂಡು ಇಂದು ಇಡೀ ದೇಶವನ್ನೇ ಕೋಮು ದ್ವೇಷದಿಂದ ತತ್ತರಿಸುವಂತೆ ಮಾಡಿದೆ. ಈಚೆಗೆ ರವಿಶಂಕರ ಗುರೂಜಿ ಎಂಬ ಸ್ವಘೋಷಿತ ಆಂತರಿಕ ಸಂಘ ಪರಿವಾರದ ದೇವಮಾನವರೊಬ್ಬರು ಬಾಬರಿ ಮಸೀದಿಯ ಸಮಸ್ಯೆ ಯನ್ನು ಬಗೆಹರಿಸುತ್ತೇನೆಂದು ವೈಯಾರವಾಗಿ ಓಡಾಡುತ್ತಿದ್ದಾರೆ.. ಇವರನ್ನು ನೋಡಿದರೆ ಶಾಲೆಯಲ್ಲಿ ಓದಿದ ಕೋತಿ ಮತ್ತು ಕಜ್ಜಾಯದ ಕತೆ ನೆನಪಾಗುತ್ತೆ!
ಬಾಬರಿ ಮಸೀದಿ ಈ ದೇಶದ ಅಸ್ಮಿತೆ ಮತ್ತು ಈ ನೆಲದ ಅಮೂಲ್ಯ ಸ್ವತ್ತು ಅದನ್ನು ಧ್ವಂಸ ಮಾಡುವುದೆಂದರೆ ದೇಶಕ್ಕೆ ಮಾಡುವ ನಷ್ಟ ಮತ್ತು ಅಪಚಾರ, ಇಂತಹ ಕೆಲಸ ಮಾಡಿ ಈಗಲೂ ಇದನ್ನು ಸಮರ್ಥಿಸಿಕೊಳ್ಳುತ್ತಾ ವಿಜೃಂಭಿಸುವವರನ್ನು ಕಂಡರೆ ಏನು ನೆನಪಾಗುತ್ತೆ..? ನಿಮ್ಮ ವಿವೇಚನೆಗೆ ಬಿಟ್ಟಿದ್ದು...

Writer - ಡಾ.ಸಿ.ಎಸ್.ದ್ವಾರಕಾನಾಥ್

contributor

Editor - ಡಾ.ಸಿ.ಎಸ್.ದ್ವಾರಕಾನಾಥ್

contributor

Similar News

ಜಗದಗಲ
ಜಗ ದಗಲ