ಬಾಬಾಸಾಹೇಬರ ಕಡೆಯ ಸಂದೇಶಗಳು

Update: 2017-12-05 18:40 GMT

ಸಂದೇಶ ಒಂದು

‘‘ನನ್ನ ಸಂದೇಶವೆಂದರೆ ಹೋರಾಟ, ಇನ್ನೂ ಹೆಚ್ಚಿನ ಹೋರಾಟ; ತ್ಯಾಗ, ಇನ್ನೂ ಹೆಚ್ಚಿನ ತ್ಯಾಗ, ಬಲಿದಾನ! ಹೋರಾಟ, ಹೌದು ಹೋರಾಟ ಮಾತ್ರ ತ್ಯಾಗ, ಬಲಿದಾನ ಗಳು ತಂದೊಡ್ಡುವ ಕಷ್ಟ ನಷ್ಟ ಪರಂಪರೆಗಳನ್ನು ಪರಿಗಣಿಸ ದೆಯೇ ಮುನ್ನುಗ್ಗುವ ಧೀರ ಹೋರಾಟ ಮಾತ್ರ ಅವರ ವಿಮೋಚನೆ ಸಾಧಿಸಬಲ್ಲದು ಬೇರೆ ಇನ್ನಾವುದು ಕೂಡ ಅಸ್ಪಶ್ಯರ ಬಿಡುಗಡೆಯ ಮಾರ್ಗ ತೋರಲಾರದು.’’

ಸಂದೇಶ ಎರಡು

‘‘ಅಸ್ಪಶ್ಯರೆಲ್ಲರೂ ಒಂದು ಸಾಮೂಹಿಕ ಸಂಕಲ್ಪವನ್ನು ಅಂತರ್ಗತ ಮಾಡಿಕೊಳ್ಳಬೇಕು. ಅವರು ತಮ್ಮಳಗಿನ ಸಮಸ್ತ ಜಡತ್ವವನ್ನು ಕೊಡವಿ ಗರಿಷ್ಠ ಐಕ್ಯತೆಯೊಂದಿಗೆ ಎದ್ದು ನಿಂತು ಪ್ರತಿಭಟಿಸುವುದನ್ನು ಕಲಿತುಕೊಳ್ಳಬೇಕು. ಜೊತೆಗೆ ತಾವು ಕೈಗೊಂಡಿರುವ ಮಹತ್ತರ ಕಾರ್ಯದ ಪಾವಿತ್ರ್ಯದ ಬಗ್ಗೆ ದೃಢವಾದ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು. ಎಲ್ಲಕ್ಕೂ ಮಿಗಿಲಾಗಿ ತಾವು ಮುಟ್ಟಬೇಕಾದ ಗುರಿಯ ಬಗ್ಗೆ ಒಂದು ಸಮಷ್ಟಿ ನಿರ್ಧಾರವನ್ನು ಸೃಷ್ಟಿಸಿಕೊಳ್ಳಬೇಕು. ಅವರ ಕಾರ್ಯ ಎಷ್ಟು ಮಹತ್ವದ್ದಾಗಿದೆಯೆಂದರೆ, ಈ ಘನೋದ್ದೇಶ ಎಷ್ಟು ಶ್ರೇಷ್ಠವಾದುದ್ದಾಗಿದೆಯೆಂದರೆ ಸಮಸ್ತ ಅಸ್ಪಶ್ಯರು ಒಗ್ಗೂಡಿ ಒಕ್ಕೊರಲಿನಿಂದ ಈ ಪ್ರಾರ್ಥನೆಗೆ ಧ್ವನಿಗೂಡಿಸಬೇಕು.

ತನ್ನ ಜನ, ಜನಾಂಗಗಳನ್ನು ಉದ್ಧರಿಸಬಲ್ಲ ಮಹತ್ತರ ಕಾರ್ಯಕ್ಕೆ ತನ್ನನ್ನು ತಾನು ತೊಡಗಿಸಿಕೊಂಡು ಜೀವಂತಿಕೆ ಯಿಂದ, ಲವಲವಿಕೆಯಿಂದ ದುಡಿಯುವವನೆ ಧನ್ಯನು. ಗುಲಾಮಗಿರಿ ವ್ಯವಸ್ಥೆಯ ವಿರುದ್ಧ ಒಡ್ಡಲಾಗುವ ಪ್ರತಿಭಟನೆಗೆ ಶಕ್ತಿ ತುಂಬಿ ಸಂವರ್ಧಿಸಬಲ್ಲವರೇ ಧನ್ಯರು. ತಮ್ಮ ಬದುಕಿನ ಸರ್ವಸ್ವವನ್ನೇ ತನು, ಮನ, ಧನಕ್ಕಿಂತಲೂ ಮಿಗಿಲಾಗಿ ತನ್ನನ್ನೇ ಮುಡಿಪಾಗಿಟ್ಟು ತಮ್ಮ ಜನರನ್ನು ಶ್ರೇಯೋಭಿವೃದ್ಧಿಯ ಮಾರ್ಗದಲ್ಲಿ ನಡೆಸುವ ಪ್ರತಿಜ್ಞೆಗೈಯುವವರೇ ಧನ್ಯರು. ಮಾನಾಪಮಾನ ಗಳನ್ನು ಲೆಕ್ಕಿಸದೆ ಒಳ್ಳೆಯದೇ ಬರಲಿ, ಕೆಟ್ಟದ್ದೇ ಬರಲಿ, ಮಳೆ ಬರಲಿ, ಬಿಸಿಲಿರಲಿ ಭಯಂಕರ ಬಿರುಗಾಳಿಯೇ ದುರ್ದಾಳಿ ನಡೆಸಲಿ ಸಮಸ್ತ ಅಸ್ಪಶ್ಯರು ಪರಿಪೂರ್ಣವಾದ ಪೌರುಷವನ್ನು ಪುನಃ ಪಡೆದುಕೊಳ್ಳುವವರೆಗೆ ಎಲ್ಲಿಯೂ ನಿಲ್ಲದೆ ಅತುಲ ಧೈರ್ಯ ಧೀಮಂತಿಕೆಯೊಂದಿಗೆ ಮುನ್ನಡೆಯುವ ಅಚಲ ನಿರ್ಧಾರ ಕೈಗೊಳ್ಳುವವರೇ ಧನ್ಯ, ಧನ್ಯರು’’

ಸಂದೇಶ ಮೂರು

 ‘‘ನನ್ನನ್ನು ಕಾಡುತ್ತಿರುವ ಸಂಗತಿಗಳಾಗಲಿ, ನನ್ನನ್ನು ದುಃಖಕ್ಕೆ ದೂಡಿರುವ ವಿಷಯವಾಗಲಿ ನಿಮಗೆ ಅರ್ಥವಾಗುವುದಿಲ್ಲ. ನನಗೆ ಹಗಲಿರುಳು ಚುಚ್ಚಿ ನೋಯಿಸುತ್ತಿರುವ, ನನ್ನ ಚಿಂತೆಗೆ ಕಾರಣವಾಗಿರುವ ಮೊತ್ತಮೊದಲನೇ ಸಂಗತಿ ಎಂದರೆ, ನಾನು ನನ್ನ ಬದುಕಿನ ಧ್ಯೇಯೋದ್ದೇಶಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲವಲ್ಲ ಎಂಬುದು. ನನ್ನ ಜನರು ಇತರ ಸಮುದಾಯಗಳೊಂದಿಗೆ ಸರ್ವ ಸಮಾನತೆಯನ್ನು ಸಾಧಿಸಿಕೊಂಡು ರಾಜಕೀಯ ಅಧಿಕಾರದ ಮೂಲಕ ಆಳುವ ವರ್ಗಗಳಾಗಿ ಮೇಲೇರುವುದನ್ನು ನಾನು ನೋಡಬಯಸಿದ್ದೆ. ಆದರೆ, ನಾನೀಗ ಅನಾರೋಗ್ಯದಿಂದ ನಿತ್ರಾಣನಾಗಿದ್ದೇನೆ. ನನಗೆ ಸಾಧಿಸಲು ಸಾಧ್ಯವಾಗಿರುವುದೆಲ್ಲವೂ ಕೆಲವೇ ಕೆಲವು ಸುಶಿಕ್ಷಿತರು ಮಾತ್ರ ಬಳಸುತ್ತಿದ್ದಾರೆ. ತಮ್ಮ ಬದುಕನ್ನು ಮಾತ್ರ ಹಸನು ಮಾಡಿಕೊಂಡು, ಆನಂದಾತಿರೇಕದಲ್ಲಿ ಓಲಾಡುತ್ತಿದ್ದಾರೆ. ತಮ್ಮ ಮೋಸ ತಟವಟದ ನಡೆ-ನುಡಿಗಳ ಮೂಲಕ ನಿರುಪಯುಕ್ತ ಜನರಾಗಿ ಪರಿಣಮಿಸಿದ್ದಾರೆ. ಇವರಿಗೆ ದಮನಕ್ಕೊಳಗಾದ ತಮ್ಮ ಬಂಧು ಬಾಂಧವರ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ. ಇವರೊಳಗಿನ ಸಹಾನುಭೂತಿಯ ಸೆಲೆ ಶುಷ್ಕವಾಗಿದೆ. ಇವರೆಲ್ಲ ನನ್ನ ಕಲ್ಪನೆಯನ್ನು ಮೀರಿದ್ದಾರೆ. ವೈಯಕ್ತಿಕ ಗಳಿಕೆಗಳಿಗಾಗಿ ಹವಣಿಸುತ್ತಾ ತಮಗಾಗಿ ಮಾತ್ರ ಬದುಕುತ್ತಿದ್ದಾರೆ. ಇವರಲ್ಲಿಯ ಒಬ್ಬನೇ ಒಬ್ಬ ಕೂಡ ಸಾಮಾಜಿಕ ಕಾರ್ಯಕ್ಕೆ ತೊಡಗಲು ಸಿದ್ಧನಿಲ್ಲ. ಸರ್ವರೂ ತಮ್ಮ ಸರ್ವನಾಶದ ದಾರಿಯನ್ನು ತುಳಿಯುತ್ತಿದ್ದಾರೆ. ನಾನೀಗ ನನ್ನ ಗಮನವನ್ನು ಗ್ರಾಮಾಂತರದಲ್ಲಿಯ ನಿರಕ್ಷರಕುಕ್ಷಿಗಳೆಡೆಗೆ ತಿರುಗಿಸಬಯಸಿದ್ದೆ. ಅವರೆಲ್ಲ ತಮ್ಮ ಆರ್ಥಿಕ ಸ್ಥಿತಿಗತಿಗಳಲ್ಲಿ ಯಾವುದೇ ಬದಲಾವಣೆ ಇಲ್ಲದೆ ಇನ್ನೂ ಕಷ್ಟ ಪರಂಪರೆಗೆ ಬಲಿಯಾಗುತ್ತಲೇ ಇದ್ದಾರೆ. ಆದರೆ ನನ್ನ ಜೀವನ ಕೊನೆಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ನನ್ನ ಉಳಿದ ಬದುಕು ತುಂಬಾ ಕಡಿಮೆಯಿದೆ ಎಂಬುದು ನನಗೆ ಗೊತ್ತು. ನನ್ನ ಜೀವಮಾನ ಕಾಲದಲ್ಲಿಯೇ ದಮನಿತ ವರ್ಗಗಳೊಳಗಿಂದ ಯಾರಾದರೊಬ್ಬರು ಮುಂದೆ ಬಂದು ನಮ್ಮ ಆಂದೋಲನವನ್ನು ಮುನ್ನಡೆಸಿಕೊಂಡು ಹೋಗುವ ಭಾರವಾದ ಹೊಣೆಗೆ ಹೆಗಲು ಕೊಡಬಹುದೆಂದು ಆಶಿಸಿದ್ದೆ. ಆದರೆ ನಮ್ಮ ಈ ಸಂದರ್ಭದ ಸಮಸ್ಯೆಗೆ ಎದೆಗೊಟ್ಟು ಎದುರಿಸಬಲ್ಲ ಯಾರೊಬ್ಬರೂ ಮೇಲೆದ್ದು ಬರುವಂತೆ ಕಾಣುತ್ತಿಲ್ಲ. ನನ್ನ ಹಲವಾರು ಸ್ನೇಹಿತರಲ್ಲಿ ನನಗೆ ತುಂಬಾ ವಿಶ್ವಾಸವಿತ್ತು. ಇವರಲ್ಲಿ ಯಾರೊಬ್ಬರಾದರೂ ನನ್ನ ಅಭೀಪ್ಸೆಗೆ ಅನುಗುಣವಾಗಿ ನಡೆದುಕೊಳ್ಳಬಲ್ಲರೆಂಬ ಭರವಸೆ ಇತ್ತು. ಆದರೆ ತಮ್ಮ ಹೆಗಲೇರಲಿರುವ ಭಾರೀ ಜವಾಬ್ದಾರಿಯ ಭಾರದ ಕಿಂಚಿತ್ ಅರಿವಿಲ್ಲದೆ ಇವರೆಲ್ಲ ನಾಯಕತ್ವಕ್ಕಾಗಿ, ಅಧಿಕಾರಕ್ಕಾಗಿ ತಮ್ಮ ತಮ್ಮಾಳಗೆ ಬಡಿದಾಡುತ್ತಿದ್ದಾರೆ. ಹೊಣೆ ಹೊರಲು, ಆಂದೋಲನವನ್ನು ಯಶಸ್ವಿಯಾಗಿ ಮುಂದುವರಿಸಲು ಯಾರೂ ಅಣಿಯಾಗುತ್ತಿಲ್ಲ. ನಾನಿನ್ನು ನನ್ನ ದೇಶದ ಸೇವೆ ಮುಂದುವರಿಸಬೇಕೆಂಬ ಬಯಕೆಯ ಭಾರದ ಅಡಿಯಲ್ಲಿ ತತ್ತರಿಸುತ್ತಿದ್ದೇನೆ. ಕೊನೆಯ ಉಸಿರಿನವರೆಗೂ ದೇಶಕ್ಕೆ ನನ್ನ ಸೇವೆಯನ್ನು ಅರ್ಪಿಸಲು ಆಶಿಸುತ್ತಿದ್ದೇನೆ. ಆದರೆ ಜಾತೀಯತೆಯಿಂದ ತುಂಬಿ ತುಳುಕುತ್ತಿರುವ ಪೂರ್ವಾಗ್ರಹ ಪೀಡಿತ ಈ ದೇಶದಲ್ಲಿ ಹುಟ್ಟುವುದೇ ಒಂದು ಪಾಪ ಎನಿಸುತ್ತಿದೆ. ಸದ್ಯದ ವ್ಯವಸ್ಥೆಯಲ್ಲಿ ಎಲ್ಲರ ಕಿವಿಗಳು ಪ್ರಧಾನ ಮಂತ್ರಿಯ ಮಾತುಗಳಿಗೆ ಮೀಸಲಾಗಿರುವಂತೆ ತೋರುತ್ತಿದೆ. ಸದ್ಯಕ್ಕೆ ಪ್ರಧಾನ ಮಂತ್ರಿಯ ನೆಲೆ ನಿಲುವು, ಮಾತುಕತೆಗಳನ್ನು ಮನ್ನಣಿಸುವವರ ಮಾತನ್ನು ಮಾತ್ರ ಜನರು ಕಿವಿಗೊಟ್ಟು ಆಲಿಸುವ ಸ್ಥಿತಿಗೆ ಇಳಿದಿದ್ದಾರೆ. ಅವುಗಳಿಗೆ ಪರ್ಯಾಯವಾದ, ಭಿನ್ನವಾದ ಯಾವ ಮಾತುಗಳನ್ನೂ ಜನರು ಕೇಳದ ವಿಷಾದನೀಯ ಸ್ಥಿತಿ ನಿರ್ಮಾಣವಾಗಿದೆ. ಇಂತಹ ವಾಸ್ತವದಲ್ಲಿ ದೇಶದ ವ್ಯವಹಾರದ ಬಗ್ಗೆ ಆಸಕ್ತಿ ಉಳಿಸಿಕೊಳ್ಳುವುದು ಅತ್ಯಂತ ಕಠಿಣ ಕೆಲಸವಾಗಿ ಪರಿಣಮಿಸಿದೆ. ಅಬ್ಬಾ! ಈ ದೇಶ ಎಂತಹ ಅಧಃಪತನಕ್ಕೆ ಪಾತ್ರವಾಗುತ್ತಿದೆಯಲ್ಲ!

ನಾನಕ್ ಚಂದ್ ಹೋಗು ನನ್ನ ಜನರಿಗೆ ಹೇಳು. ನಾನು ಏನೆಲ್ಲ ಮಾಡಿರುವೆನೋ, ತುಸು ಮಟ್ಟಿಗಾದರೂ ಸಾಧಿಸಿರುವೆನೋ ಅದೆಲ್ಲವನ್ನು ನಾನು ಏಕಾಂಗಿಯಾಗಿಯೇ ಮಾಡಿದ್ದೇನೆ. ನನ್ನನ್ನು ನುಚ್ಚು ನೂರು ಮಾಡುವ ಅನೇಕ ತೊಂದರೆ ಸಂಕಟಗಳ ಒಳಗಿಂದ ಹಾಯ್ದು ಬಂದಿದ್ದೇನೆ. ಉದ್ದಕ್ಕೂ ನನ್ನ ಜನರು ನನ್ನೆಡೆಗೆ ಎಸೆದ ಬಿರು ನುಡಿಗಳು, ಎಲ್ಲ ದಿಕ್ಕಿನಿಂದಲೂ ಬಂದ ದೂಷಣೆಗಳು ಮಾತಿಗೂ ಮೀರಿದವು. ವಿಶೇಷ ವಾಗಿ, ಹಿಂದೂ ಪತ್ರಿಕಾ ಮಾಧ್ಯಮಗಳಿಂದ ಬಂದೆರಗಿದ ನಿಂದನೆಯ ನುಡಿಗಳು ನನ್ನನ್ನು ನೋಯಿಸಿವೆ. ಬದುಕಿನ ಉದ್ದಕ್ಕೂ ನಾನು ಇವರೆಲ್ಲರ ವಿರುದ್ಧ ಸೆಣೆಸಿದ್ದೇನೆ. ನನ್ನ ವಿರೋಧಿಗಳನ್ನು ಎದುರಿಸಿ ನಿಂತಿದ್ದೇನೆ. ಕೆಲವೇ ಕೆಲವು ಸ್ವಾರ್ಥದ ಉದ್ಧೇಶಗಳಿಗಾಗಿ ನನ್ನನ್ನು ಮೋಸ ಮಾಡಿದ ನಮ್ಮದೇ ಹಿಡಿಯಷ್ಟು ಜನರನ್ನು ಎದುರಿಸಿದ್ದೇನೆ. ಇದೆಲ್ಲದರ ಹೊರತಾಗಿಯೂ ನನ್ನ ಜೀವದ ಕೊನೆಯ ಉಸಿರಿನವರೆಗೂ ದಮನಿತರ ಸೇವೆಯನ್ನು ಮುಂದುವರಿಸಲು ನಿರ್ಧರಿಸಿದ್ದೇನೆ. ಯಾವುದೇ ಸಂದರ್ಭದಲ್ಲಿಯೂ ನನ್ನ ದೇಶ ಬಾಂಧವರ ಕೈ ಬಿಡದಿರಲು ತೀರ್ಮಾನಿಸಿದ್ದೇನೆ. ಬಹು ಕಷ್ಟಪಟ್ಟು ನನ್ನ ಹೋರಾಟದ ರಥವನ್ನು ಇಲ್ಲಿಯವರೆಗೂ ಎಳೆದು ತಂದಿದ್ದೇನೆ. ಇದು ಹೀಗೆ ಮುನ್ನಡೆಯಬೇಕು. ಅದರ ಮಾರ್ಗದಲ್ಲಿ ಏನೆಲ್ಲ ಎಡರುತೊಡರುಗಳು ಎದುರಾಗಬಹುದು. ಅಡ್ಡಿ ಅಡಚಣೆಗಳು ಅಡ್ಡಬರಬಹುದು. ಚ್ಯುತಿ ನ್ಯೂನತೆಗಳಂತಹ ಕಷ್ಟಗಳು ಅದರ ಮುನ್ನಡೆಗೆ ತೊಂದರೆ ಒಡ್ಡಬಹುದು. ಇವೆಲ್ಲವನ್ನು ಮೆಟ್ಟಿ ಮೀರಿ ನಿಲ್ಲುತ್ತಾ ಮುಂದೆ ಸಾಗಬೇಕು. ನನ್ನ ಜನರು ಈ ಸಂದರ್ಭದ ಸವಾಲನ್ನು ಸ್ವೀಕರಿಸುವ ಧೀಮಂತಿಕೆ ತೋರಬೇಕು. ಒಂದು ಗೌರವಾರ್ಹವಾದ ಮರ್ಯಾದೆಯ ಬದುಕು ಕಟ್ಟಿಕೊಳ್ಳಬೇಕೆಂದರೆ ಅವರೆಲ್ಲ ಇದಕ್ಕೆ ಸಿದ್ಧರಾಗಬೇಕು. ಒಂದು ವೇಳೆ ನನ್ನ ಜನರು ಹಾಗೂ ನನ್ನ ಕಟ್ಟಾ ಅನುಯಾಯಿಗಳು ಈ ಆಂದೋಲನದ ರಥವನ್ನು ಮುಂದೆ ನಡೆಸುವಲ್ಲಿ ವಿಫಲರಾದರೂ ಪರವಾಗಿಲ್ಲ. ಅವರು ಮಾಡಬಹುದಾದ ಉತ್ತಮ ಕೆಲಸವೆಂದರೆ ಅದು ಎಲ್ಲಿಗೆ ಬಂದಿದೆಯೋ ಅಲ್ಲಿಯೇ ನಿಲ್ಲುವಂತಾದರೂ ನೋಡಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿಯೂ ಅದು ಹಿಂದಕ್ಕೆ ಹೋಗದಂತೆ ಎಚ್ಚರಿಕೆ ವಹಿಸಬೇಕು. ಇದು ನನ್ನ ಸಂದೇಶ. ಹೌದು ಪ್ರಾಯಶಃ ನನ್ನೆಲ್ಲಾ ಗಾಂಭೀರ್ಯದೊಂದಿಗೆ ನೀಡಲಾ ಗುತ್ತಿರುವ ಕೊನೆ ಸಂದೇಶ. ನನ್ನ ಈ ಮಾತಿಗೆ ಎಲ್ಲರೂ ಕಿವಿಗೊಡುವರೆಂಬ ವಿಶ್ವಾಸ ನನಗಿದೆ. ಹೋಗು ನನ್ನ ಈ ಪರಮ ವಿಶ್ವಾಸದ ಸಂದೇಶವನ್ನು ಅವರಿಗೆ ತಿಳಿಸು. ಹೋಗು ಈ ಸಂದೇಶವನ್ನು ಅವರಿಗೆ ಮುಟ್ಟಿಸು. ಹೋಗು ಈ ಸಂದೇಶವನ್ನು ಅವರಿಗೆ ತಲುಪಿಸು.

(ಅಂಬೇಡ್ಕರ್ ಸ್ಮತಿ-ಸಂಸ್ಕೃತಿ ಪುಸ್ತಕದಿಂದ

ಇಂಗ್ಲಿಷ್: ನಾನಕ್ ಚಂದ್ ರತ್ತು
ಕನ್ನಡಕ್ಕೆ: ರಾಹು)

Writer - ಸಂಗ್ರಹ: ವಿಕಾಸ ಆರ್. ಮೌರ್ಯ

contributor

Editor - ಸಂಗ್ರಹ: ವಿಕಾಸ ಆರ್. ಮೌರ್ಯ

contributor

Similar News

ಜಗದಗಲ
ಜಗ ದಗಲ