ಎಚ್ಚರಿಕೆ... ರಕ್ತದೊತ್ತಡ ನಿಯಂತ್ರಣಕ್ಕೆ ಮದ್ದು ಸೇವಿಸುವ ಮುನ್ನ ಈ ಸುದ್ದಿ ಓದಿ

Update: 2017-12-06 10:21 GMT

ರಕ್ತದೊತ್ತಡವನ್ನು ನಿಯಂತ್ರಿಸಲು ಸಾಮಾನ್ಯವಾಗಿ ಬಳಕೆಯಾಗುತ್ತಿರುವ ಔಷಧಿ ಯೊಂದು ಚರ್ಮದ ಕ್ಯಾನ್ಸರ್‌ನ ಅಪಾಯವನ್ನು ಗಣನೀಯವಾಗಿ ಹೆಚ್ಚಿಸಬಹುದು ಎಂದು ಈ ಬಗ್ಗೆ ಇತ್ತೀಚಿಗೆ ನಡೆದ ವ್ಯಾಪಕ ಅಧ್ಯಯನವು ಎಚ್ಚರಿಕೆ ನೀಡಿದೆ.

 ಹೈಡ್ರೋಕ್ಲೋರೊಥಿಯಝೈಡ್ ಅನ್ನು ಒಳಗೊಂಡ, ವಿಶ್ವಾದ್ಯಂತ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕಾಗಿ ಬಳಸಲಾಗುವ ಔಷಧಿಯು ತುಟಿಯ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸಬಹುದು ಎಂದು ದಿ ಯುನಿವರ್ಸಿಟಿ ಆಫ್ ಸದರ್ನ್ ಡೆನ್ಮಾರ್ಕ್‌ನ ಸಂಶೋಧಕರು ಈ ಹಿಂದೆ ಕಂಡುಹಿಡಿದಿದ್ದರು.

 ಇತ್ತೀಚಿನ ನೂತನ ಅಧ್ಯಯನದಲ್ಲಿ ಈ ಸಂಶೋಧಕರ ತಂಡವು ರಕ್ತದೊತ್ತಡ ನಿಯಂತ್ರಣ ಔಷಧಿ ಮತ್ತು ಚರ್ಮ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯ ನಡುವೆ ಸ್ಪಷ್ಟ ಸಂಬಂಧವನ್ನು ಗುರುತಿಸಿದೆ. ನಿರ್ದಿಷ್ಟವಾಗಿ ಹೈಡ್ರೋಕ್ಲೋರೊಥಿಯಝೈಡ್ ಅನ್ನು ಒಳಗೊಂಡಿರುವ ಔಷಧಿಗಳು ಮತ್ತು ಚರ್ಮದ ಸ್ಕ್ವಾಮಸ್ ಜೀವಕೋಶಗಳ ಕ್ಯಾನ್ಸರ್‌ನ ನಡುವೆ ನಂಟು ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಸಂಶೋಧಕರು ಇತರ ಸಾಮಾನ್ಯವಾಗಿ ಬಳಕೆಯಾಗುವ ರಕ್ತದೊತ್ತಡ ಔಷಧಿಗಳನ್ನೂ ತಮ್ಮ ಅಧ್ಯಯನಕ್ಕೊಳಪಡಿಸಿದ್ದರು. ಆದರೆ ಅವ್ಯಾವುದೂ ಚರ್ಮದ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುವುದಿಲ್ಲ ಎನ್ನುವುದು ಸಾಬೀತಾಗಿದೆ.

ಹೈಡ್ರೋಕ್ಲೋರೊಥಿಯಝೈಡ್ ಚರ್ಮವನ್ನು ಸೂರ್ಯನ ಅಲ್ಟ್ರಾ ವಯಲೆಟ್ ಕಿರಣಗಳಿಂದ ಹಾನಿಗೆ ಸುಲಭಭೇದ್ಯವಾಗಿಸುತ್ತದೆ ಎನ್ನುವುದು ನಮಗೆ ತಿಳಿದಿತ್ತು. ಆದರೆ ಈ ಔಷಧಿಯ ದೀರ್ಘಕಾಲಿಕ ಬಳಕೆಯು ಚರ್ಮದ ಕ್ಯಾನ್ಸರ್‌ನ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎನ್ನವುದು ಹೊಸ ಮತ್ತು ಅಚ್ಚರಿಯ ವಿಷಯವಾಗಿದೆ ಎಂದು ಯುನಿವರ್ಸಿಟಿ ಆಫ್ ಸದರ್ನ್ ಡೆನ್ಮಾರ್ಕ್‌ನ ಅಸೋಸಿಯೇಟ್ ಪ್ರೊಫೆಸರ್ ಆ್ಯಂಟನ್ ಪೊಟೆಗಾರ್ಡ್ ತಿಳಿಸಿದ್ದಾರೆ.

ಡೆನ್ಮಾರ್ಕಿನಲ್ಲಿಯ ಸುಮಾರು 80,000 ಚರ್ಮ ಕ್ಯಾನ್ಸರ್ ಪ್ರಕರಣಗಳನ್ನು ಆಧಾರವಾಗಿಟ್ಟುಕೊಂಡು ನಡೆಸಲಾದ ಅಧ್ಯಯನವು ಹೈಡ್ರೋಕ್ಲೋರೊಥಿಯಝೈಡ್ ಅನ್ನು ಒಳಗೊಂಡ ಔಷಧಿಗಳನ್ನು ಸೇವಿಸುವವರಲ್ಲಿ ಚರ್ಮದ ಕ್ಯಾನ್ಸರ್‌ನ ಅಪಾಯವು ಇತರರಿಗಿಂತ ಏಳು ಪಟ್ಟು ಅಧಿಕವಾಗಿರುತ್ತದೆ ಎನ್ನುವುದನ್ನು ಬೆಳಕಿಗೆ ತಂದಿದೆ.

 ಚರ್ಮದ ಕ್ಯಾನ್ಸರ್‌ನಲ್ಲಿ ಹಲವಾರು ವಿಧಗಳಿವೆ. ಅದೃಷ್ಟವಶಾತ್ ರಕ್ತದೊತ್ತಡ ನಿಯಂತ್ರಣ ಔಷಧಿಯೊಂದಿಗೆ ಗುರುತಿಸಿಕೊಂಡಿರುವ ಸ್ಕ್ವಾಮಸ್ ಜೀವಕೋಶಗಳ ಕ್ಯಾನ್ಸರ್‌ನ್ನು ಗುಣಪಡಿಸಬಹುದಾಗಿದೆ ಮತ್ತು ಈ ಕ್ಯಾನ್ಸರ್‌ನಿಂದ ಸಂಭವಿಸುವ ಸಾವುಗಳ ಪ್ರಮಾಣ ಅತ್ಯಂತ ಕಡಿಮೆ ಎಂದು ಅಧ್ಯಯನ ವರದಿಯು ತಿಳಿಸಿದೆ.

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವರು ವೈದ್ಯರೊಂದಿಗೆ ಸಮಾಲೋಚಿಸದೆ ತಾವು ಸೇವಿಸುವ ಔಷಧಿಗಳನ್ನು ಬದಲಿಸಕೂಡದು. ಆದರೆ ಈಗಾಗಲೇ ಹೈಡ್ರೋಕ್ಲೋರೊಥಿಯಝೈಡ್ ಅನ್ನು ಒಳಗೊಂಡ ಔಷಧಿಯನ್ನು ಸೇವಿಸುತ್ತಿದ್ದರೆ ವೈದ್ಯರನ್ನು ಕಂಡು ಸಾಧ್ಯವಾದರೆ ಬೇರೆ ಔಷಧಿಯನ್ನು ಶಿಫಾರಸು ಮಾಡುವಂತೆ ಕೋರುವುದು ಒಳ್ಳೆಯದು ಎನ್ನುತ್ತಾರೆ ಪೊಟೆಗಾರ್ಡ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News