ಸೆಲ್ಫಿ ತೆಗೆದ ಇಂಡೋನೇಶ್ಯದ ಕೋತಿ ‘ವರ್ಷದ ವ್ಯಕ್ತಿ’: ಪೆಟಾ

Update: 2017-12-06 17:16 GMT

ಪ್ಯಾರಿಸ್, ಡಿ. 6: ತನ್ನ ನಗುಮೊಗದ ಸೆಲ್ಫಿಯೊಂದನ್ನು ತೆಗೆದು ಪ್ರಸಿದ್ಧಿಗೆ ಬಂದಿರುವ ಇಂಡೋನೇಶ್ಯದ ಕೋತಿ ‘ನರುಟೊ’ವನ್ನು ಪ್ರಾಣಿಗಳ ಹಕ್ಕುಗಳ ಸಂಘಟನೆ ‘ಪೀಪಲ್ ಫಾರ್ ದಿ ಎತಿಕಲ್ ಟ್ರೀಟ್‌ಮೆಂಟ್ ಆಫ್ ಆ್ಯನಿಮಲ್ಸ್ (ಪೆಟಾ) ‘ವರ್ಷದ ವ್ಯಕ್ತಿ’ ಎಂಬುದಾಗಿ ಬುಧವಾರ ಘೋಷಿಸಿದೆ.

ಕೋತಿ ತೆಗೆದ ಸೆಲ್ಫಿಯು ಅಮೆರಿಕದಲ್ಲಿ ದೊಡ್ಡ ಕಾಪಿರೈಟ್ ಸಂಗ್ರಾಮಕ್ಕೆ ಕಾರಣವಾಗಿತ್ತು.

ನರುಟೊ ‘ಓರ್ವ ವ್ಯಕ್ತಿ, ಸೊತ್ತಲ್ಲ’ ಎಂಬುದನ್ನು ತಿಳಿಸಲು ಅದಕ್ಕೆ ಈ ಗೌರವ ನೀಡಲಾಗುತ್ತಿದೆ ಎಂದು ಪೆಟಾ ಹೇಳಿದೆ.

2011ರಲ್ಲಿ ಇಂಡೋನೇಶ್ಯದ ಸುಲವೆಸಿ ದ್ವೀಪದಲ್ಲಿ ಬ್ರಿಟಿಶ್ ಪ್ರಕೃತಿ ಛಾಯಾಗ್ರಾಹಕ ಡೇವಿಡ್ ಸ್ಲೇಟರ್ ತನ್ನ ಕ್ಯಾಮರವನ್ನು ಸಿದ್ಧಪಡಿಸಿಟ್ಟು ಕೆಲವು ನಿಮಿಷಗಳ ಕಾಲ ಹೊರಗೆ ಹೋಗಿದ್ದರು. ಆಗ ಬಂದ ಮಂಗವು ಕ್ಯಾಮರವನ್ನು ತನ್ನ ಕೈಗೆ ತೆಗೆದುಕೊಂಡು ಮಸೂರಗಳನ್ನೇ ನೋಡುತ್ತಾ ಶಟರ್ ಒತ್ತಿತ್ತು.

ಈ ಚಿತ್ರಗಳು ತಕ್ಷಣವೇ ಇಂಟರ್‌ನೆಟ್‌ನಲ್ಲಿ ವೈರಲ್ ಆದವು. ಆರು ವರ್ಷದ ಪ್ರಾಯದ ನರುಟೊನನ್ನೇ ತನ್ನ ಚಿತ್ರದ ಮಾಲಕನಾಗಿಸಬೇಕು ಎಂಬುದಾಗಿ ಕೋರಿ ಪೆಟಾ ಮೊಕದ್ದಮೆಯೊಂದನ್ನು ಹೂಡಿತ್ತು.

ಚಿತ್ರ ತೆಗೆಯಲು ಎಲ್ಲ ವ್ಯವಸ್ಥೆಗಳನ್ನು ಮಾಡಿರುವುದು ತಾನಾಗಿರುವುದರಿಂದ ಚಿತ್ರದ ಹಕ್ಕುಗಳನ್ನು ತನಗೆ ನೀಡಬೇಕು ಎಂಬುದಾಗಿ ಸ್ಲೇಟರ್ ವಾದಿಸಿದ್ದರು.

ಕ್ಯಾಲಿಫೋರ್ನಿಯದಲ್ಲಿ ದಾಖಲಾದ ಮೊದಲ ಪ್ರಕರಣದಲ್ಲಿ ಬ್ರಿಟಿಶ್ ಛಾಯಾಚಿತ್ರಗ್ರಾಹಕ ಪರವಾಗಿ ತೀರ್ಪು ಬಂತು.

ಇದರ ವಿರುದ್ದ ಪೆಟಾ ಮೇಲ್ಮನವಿ ಸಲ್ಲಿಸಿತು. ಸೆಪ್ಟಂಬರ್‌ನಲ್ಲಿ ಪ್ರಕರಣ ಇತ್ಯರ್ಥವಾಗಿದ್ದು, ಕೋತಿಯ ಸೆಲ್ಫಿ ಬಳಕೆ ಮತ್ತು ಮಾರಾಟದಿಂದ ಬರುವ ಹಣದ 25 ಶೇಕಡವನ್ನು ಇಂಡೋನೇಶ್ಯದ ‘ಕ್ರೆಸ್ಟಡ್ ಮಕಾಕ್’ ಮಂಗಗಳ ವಾಸಸ್ಥಳ ಅಭಿವೃದ್ಧಿಗೆ ನೀಡಲು ಸ್ಲೇಟರ್ ಒಪ್ಪಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News