ಈಕೆ ದೇಶದ ಮೊಟ್ಟಮೊದಲ ಭಿನ್ನಸಾಮರ್ಥ್ಯದ ವೀಡಿಯೊ ಮಾಡೆಲ್

Update: 2017-12-07 04:55 GMT

ಚೆನ್ನೈ, ಡಿ.7: ನಗರದ ಮೀನಾಕ್ಷಿ ಮಹಾದೇವ್ (26) ವಿಶಿಷ್ಟ ದಾಖಲೆ ಸೃಷ್ಟಿಸಿದ್ದಾರೆ. ದೇಶದ ಮೊಟ್ಟಮೊದಲ ಭಿನ್ನ ಸಾಮರ್ಥ್ಯದ ವೀಡಿಯೊ ಮಾಡೆಲ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಜವಳಿ ಬ್ರಾಂಡ್ ಒಂದರ ವೀಡಿಯೊ ಜಾಹೀರಾತಿನಲ್ಲಿ ನಟಿಸಿರುವ ಮೀನಾಕ್ಷಿ, ಎಲ್ಲರನ್ನು ಬೆರಗುಗೊಳಿಸಿದ್ದಾರೆ. 44 ಸೆಕೆಂಡ್‌ನ ಈ ವೀಡಿಯೊದಲ್ಲಿ ಬೆಂಗಳೂರು ಮೂಲದ ಈ ಯುವ ಮಾಡೆಲ್ ಆಕರ್ಷಕವಾಗಿ ಇಳಿಬಿಟ್ಟ ಆಭರಣದೊಂದಿಗೆ ಕಂಗೊಳಿಸಿದ್ದಾರೆ.

ಆಕರ್ಷಕ ಸೆಟ್ಟಿಂಗ್‌ನಲ್ಲಿ ನಿಂತಿರುವ ಈ ದೃಶಾವಳಿಯಲ್ಲಿ, ಆಕೆ ಪೋಲಿಯೊ ಪೀಡಿತೆ ಎಂಬ ಗುಮಾನಿ ಯಾರಲ್ಲೂ ಬರುವುದಿಲ್ಲ. ವೀಡಿಯೊದ ಕೊನೆಯಲ್ಲಿ ಈ ಮಾಡೆಲ್ ವ್ಹೀಲ್‌ಚೇರ್‌ನಲ್ಲಿ ಕುಳಿತಿರುವ ದೃಶ್ಯವಿದೆ.

ಚೆನ್ನೈನಲ್ಲಿ 13 ಗಂಟೆಗಳ ಶೂಟಿಂಗ್ ನೆನಪಿಸಿಕೊಳ್ಳುವ ಮೀನಾಕ್ಷಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಪದವೀಧರೆ. "ಮೊದಲು ನಾನು ನರ್ವಸ್ ಆದೆ. ಈಗ ಖುಷಿಯಾಗಿದ್ದೇನೆ. ಭಿನ್ನ ಸಾಮರ್ಥ್ಯದವರು ಏನೂ ಮಾಡಬಹುದು. ಅವರು ಕನಸು ಕಂಡರೆ ಅದನ್ನು ಸಾಧಿಸಬಹುದು. ನಮ್ಮ ಜಾಹೀರಾತುಗಳು ಎಲ್ಲರನ್ನೂ ಸೇರಿಸಿಕೊಳ್ಳುವಂತಿರಬೇಕು" ಎಂದು ಹೇಳಿದ್ದಾರೆ.

ಸ್ನೇಹಿತೆಯ ಉತ್ತೇಜನದಿಂದ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಮೀನಾಕ್ಷಿ, ಚೆನ್ನೈ ಮೂಲದ ಫ್ಯಾಷನ್ ಡಿಸೈನರ್ ಶಾಲಿನಿ ವಿಶಾಖನ್ ಅವರನ್ನು ಭೇಟಿ ಮಾಡಿದ ಬಳಿಕ ಈ ಜಾಹೀರಾತಿಗೆ ಮಾಡೆಲ್ ಆಗಿ ಬಳಸಿಕೊಂಡರು. ಸ್ವತಃ ಅಂಗವಿಕಲ ಪತಿಯನ್ನು ಹೊಂದಿರುವ ಶಾಲಿನಿ, ವಿನ್ಯಾಸದ ಉಡುಗೆಯಲ್ಲಿ ವೈಶಿಷ್ಟಕ್ಕೆ ಹೆಸರಾದವರು. ಭಿನ್ನ ಸಾಮರ್ಥ್ಯದವರಿಗಾಗಿಯೇ ವಿಶೇಷ ಉಡುಗೆ ಸಿದ್ಧಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News