ಐಸಿಸಿ ಟೆಸ್ಟ್ ರ್ಯಾಂಕಿಂಗ್:ದ್ವಿತೀಯ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ

Update: 2017-12-07 09:22 GMT

ಹೊಸದಿಲ್ಲಿ, ಡಿ.7: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಗುರುವಾರ ಬಿಡುಗಡೆಗೊಳಿಸಿದ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

ಬುಧವಾರ ಕೊನೆಗೊಂಡಿರುವ ಶ್ರೀಲಂಕಾ ವಿರುದ್ಧದ ದಿಲ್ಲಿ ಟೆಸ್ಟ್‌ನಲ್ಲಿ ಜೀವನಶ್ರೇಷ್ಠ 243 ರನ್ ಗಳಿಸಿರುವ ಕೊಹ್ಲಿ ಮೂರು ಸ್ಥಾನ ಭಡ್ತಿ ಪಡೆದು ಎರಡನೇ ಸ್ಥಾನಕ್ಕೇರಿದ್ದಾರೆ.

ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಮೂರು ಶತಕಗಳ ಸಹಿತ ಒಟ್ಟು 610 ರನ್ ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧ ಸರಣಿ ಆರಂಭಕ್ಕೆ ಮೊದಲು ಕೊಹ್ಲಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಚೇತೇಶ್ವರ ಪೂಜಾರ ಹಾಗೂ ಜೋ ರೂಟ್ ಬಳಿಕ 6ನೇ ಸ್ಥಾನದಲ್ಲಿದ್ದರು.

ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಕೊಹ್ಲಿ 4 ಸ್ಥಾನ ಭಡ್ತಿ ಪಡೆದು ದ್ವಿತೀಯ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ನಂ.1 ಸ್ಥಾನ ಕಾಯ್ದುಕೊಂಡಿದ್ದು, ಕೊಹ್ಲಿಗಿಂತ 45 ಅಂಕ ಮುಂದಿದ್ದಾರೆ. ಸ್ಮಿತ್ 938 ಅಂಕ ಗಳಿಸಿದ್ದರೆ, ಕೊಹ್ಲಿ 893 ಅಂಕ ಗಳಿಸಿದ್ದಾರೆ.

ಕೊಹ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸತತ ದ್ವಿಶತಕ ಸಿಡಿಸಿದ್ದರು. ತವರು ಮೈದಾನ ಕೋಟ್ಲಾ ಸ್ಟೇಡಿಯಂನಲ್ಲಿ ಆರನೇ ಬಾರಿ ದ್ವಿಶತಕ ಸಿಡಿಸಿದ್ದಾರೆ. ಈ ಮೂಲಕ ವಿಂಡೀಸ್ ದಂತಕತೆ ಬ್ರಿಯಾನ್ ಲಾರಾ ಅವರ ಗರಿಷ್ಠ ದ್ವಿಶತಕದ ದಾಖಲೆಯನ್ನು ಹಿಂದಿಕ್ಕಿದ್ದರು.

ಪ್ರಸ್ತುತ ಕೊಹ್ಲಿ ಅವರು ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ನಂ.1 ಸ್ಥಾನದಲ್ಲಿದ್ದಾರೆ. 29ರ ಹರೆಯದ ಕೊಹ್ಲಿ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಭಾರತ ತಂಡಗಳ ರ್ಯಾಂಕಿಂಗ್‌ನಲ್ಲಿ ಒಂದು ಅಂಕ ಕಳೆದುಕೊಂಡ ಹೊರತಾಗಿಯೂ ನಂ.1 ಸ್ಥಾನದಲ್ಲಿ ಮುಂದುವರಿದಿದೆ. ಶ್ರೀಲಂಕಾ ತಂಡ ಟೆಸ್ಟ್ ಸರಣಿಯನ್ನು 0-1 ರಿಂದ ಸೋತ ಹೊರತಾಗಿಯೂ ಆರನೇ ಸ್ಥಾನವನ್ನು ಉಳಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News