ಸೂರ್ಯ ಅಸ್ತಮಿಸುವುದನ್ನೇ ಮರೆಯುವ ವಿಶ್ವದ ಈ ಸ್ಥಳಗಳು ನಿಮಗೆ ಗೊತ್ತೇ...?

Update: 2017-12-07 11:56 GMT

ಪೃಥ್ವಿಯ ಉತ್ತರ ಮತ್ತು ದಕ್ಷಿಣ ಧ್ರುವಗಳಿಗೆ ಸಮೀಪವಿರುವ ಪ್ರದೇಶಗಳಲ್ಲಿ, ಅವುಗಳ ಅಂತರವನ್ನು ಅವಲಂಬಿಸಿ ಸುದೀರ್ಘ ಹಗಲು ಇರುತ್ತದೆ. ಅದು 24 ಗಂಟೆ ಅಥವಾ 20 ಗಂಟೆಗಳದ್ದು ಆಗಿರಬಹುದು. ಅಂದರೆ ಈ ಪ್ರದೇಶಗಳಲ್ಲಿ ವಾರಗಟ್ಟಲೆ ಮತ್ತು ತಿಂಗಳುಗಟ್ಟಲೆ ಸೂರ್ಯನ ಬಿಸಿಲು ನಿರಂತರವಾಗಿರುತ್ತದೆ. ಭೂಮಿಯು ತನ್ನ ಅಕ್ಷದ ಮೇಲೆ ಸುಮಾರು 23 ಡಿಗ್ರಿಗಳಷ್ಟು ಓರೆಯಾಗಿರುವುದರಿಂದ ಧ್ರುವಗಳಿಗೆ ಸಮೀಪದಲ್ಲಿರುವ ಪ್ರದೇಶಗಳು ಸುದೀರ್ಘ ಹಗಲಿಗೆ ಸಾಕ್ಷಿಯಾಗುತ್ತವೆ. ಅಂದರೆ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಸೂರ್ಯ ಬರೀ ಉದಯಿಸುತ್ತಾನೆ ಮತ್ತು ವರ್ಷಕ್ಕೊಮ್ಮೆ ಅಸ್ತಮಿಸುತ್ತಾನೆ.

 ಉತ್ತರ ಧ್ರುವಕ್ಕೆ ಸಮೀಪದ ಆರ್ಕ್ಟಿಕ್ ವಲಯದ ಪ್ರದೇಶಗಳಲ್ಲಿ ಜನವಸತಿಯಿರು ವುದರಿಂದ ಈ ವಿದ್ಯಮಾನ ಹೆಚ್ಚಾಗಿ ಅನುಭವಕ್ಕೆ ಬರುತ್ತದೆ. ದಕ್ಷಿಣ ಧ್ರುವಕ್ಕೆ ಸಮೀಪದ ಅಂಟಾರ್ಕ್ಟಿಕ್ ವಲಯದಲ್ಲಿ ಇದು ನಡೆಯುತ್ತದೆಯಾದರೂ ಜನವಸತಿಯಿಲ್ಲದಿರುವುದರಿಂದ ಅಲ್ಲಿಗೆ ಸಂಶೋಧನೆಗೆ ತೆರಳುವ ವಿಜ್ಞಾನಿಗಳು ಮತ್ತು ಚಾರಣ ನಡೆಸುವ ಸಾಹಸಿಗಳಿಗೆ ಮಾತ್ರ ಅನುಭವಕ್ಕೆ ಬರುತ್ತದೆ. ಈ ವಿದ್ಯಮಾನದ ಗರಿಷ್ಠ ಟೈಮ್‌ಲೈನ್ ಗಳಂತೆ ದಕ್ಷಿಣ ಧ್ರುವದಲ್ಲಿ ಸೆ.1ರಂದು ಉದಯಿಸುವ ಸೂರ್ಯ ಮುಂದಿನ ವರ್ಷದ ಮಾರ್ಚ್ 22ರವರೆಗೂ ಅಸ್ತಮಿಸುವುದಿಲ್ಲ. ಉತ್ತರ ಧ್ರುವದಲ್ಲಿ ಮಾ.22ರಂದು ಉದಯಿಸುವ ಸೂರ್ಯ ಅದೇ ವರ್ಷದ ಸೆ.21ರವರೆಗೂ ಅಸ್ತಮಿಸುವುದಿಲ್ಲ.

ಆರ್ಕ್ಟಿಕ್ ವಲಯದಲ್ಲಿ ಅಥವಾ ಅದಕ್ಕೆ ಸಮೀಪ ಹಲವಾರು ದೇಶಗಳಿವೆ. ಕೆನಡಾ, ಗ್ರೀನ್‌ಲ್ಯಾಂಡ್, ಫಿನ್ಲಂಡ್, ನಾರ್ವೆ, ಸ್ವೀಡನ್, ರಷ್ಯಾ, ಅಲಾಸ್ಕಾ ಮತ್ತು ಐಸ್‌ಲ್ಯಾಂಡ್‌ನ ಭಾಗಗಳು ಈ ಪ್ರದೇಶದಲ್ಲಿ ಸೇರಿವೆ.

►ನಾರ್ವೆ

 ಬೇಸಿಗೆಯ ತಿಂಗಳುಗಳಲ್ಲಿ ಅಥವಾ ಮೇ ಕೊನೆಯ ಭಾಗದಿಂದ ಜುಲೈ ಕೊನೆಯ ಭಾಗದವರೆಗೆ ಆರ್ಕ್ಟಿಕ್ ವಲಯದ ಉತ್ತರಕ್ಕಿರುವ ಈ ದೇಶದ ಪ್ರದೇಶಗಳಲ್ಲಿ ಸೂರ್ಯ ಸಂಪೂರ್ಣವಾಗಿ ಅಸ್ತಮಿಸುವುದೇ ಇಲ್ಲ (ಹೀಗಾಗಿ ನಾರ್ವೆಯನ್ನು ‘ಮಧ್ಯರಾತ್ರಿಯ ಸೂರ್ಯನ ನಾಡು’ ಎನ್ನುತ್ತಾರೆ) ಮತ್ತು ದೇಶದ ಉಳಿದ ಭಾಗಗಳಲ್ಲಿ ದಿನದಲ್ಲಿ 20ಗಂಟೆಗಳವರೆಗೂ ಹಗಲಿನ ಬೆಳಕು ಇರುತ್ತದೆ. 24 ಗಂಟೆಗಳ ಹಗಲನ್ನು ಅನುಭವಿಸಬೇಕೆನ್ನುವವರು ನಾರ್ವೆಯ ಉತ್ತರ ಭಾಗಕ್ಕೆ ಭೇಟಿ ನೀಡಬಹುದು. ಈ ಸ್ಥಳಗಳಲ್ಲಿ ಅಕ್ಷರಶಃ ಸೂರ್ಯನೆಂದೂ ಮುಳುಗುವುದಿಲ್ಲ.

►ಫಿನ್ಲಂಡ್

ಸಹಸ್ರಾರು ಸರೋವರಗಳು ಮತ್ತು ದ್ವೀಪಗಳ ಈ ದೇಶದ ಹೆಚ್ಚಿನ ಭಾಗಗಳಲ್ಲಿ ಬೇಸಿಗೆ ಸಮಯದಲ್ಲಿ ಸೂರ್ಯ ನಿರಂತರವಾಗಿ 73 ದಿನಗಳ ಕಾಲ ಬೆಳಗುತ್ತಲೇ ಇರುತ್ತಾನೆ. ಚಳಿಗಾಲದಲ್ಲಿ ಈ ದೇಶದ ಜನರು ಬಿಸಿಲನ್ನು ಅನುಭವಿಸುವುದೇ ಇಲ್ಲ. ಆರ್ಕ್ಟಿಕ್ ವಲಯದ ಮೇಲೆ ಸೂರ್ಯ ಹೊಳೆಯುತ್ತಿರುತ್ತಾನೆ, ಆದರೆ ಇಲ್ಲಿ ಅಲ್ಪಾವಧಿಗೆ ಕ್ಷಿತಿಜದಾಚೆಗೆ ಮರೆಯಾಗುವ ಸೂರ್ಯ ಅಷ್ಟೇ ಬೇಗ ಮತ್ತೆ ಕಾಣಿಸಿಕೊಳ್ಳುತ್ತಾನೆ. ಹೀಗಾಗಿ ಇಲ್ಲಿ ಸಾಯುತ್ತಿರುವ ರಾತ್ರಿ ಮತ್ತು ಹುಟ್ಟುತ್ತಿರುವ ಹಗಲಿನ ನಡುವೆ ಹೆಚ್ಚಿನ ಅಂತರವಿಲ್ಲ.

►ಕೆನಡಾ

ವಿಶ್ವದ ಎರಡನೇ ಅತ್ಯಂತ ದೊಡ್ಡ ದೇಶವಾಗಿರುವ ಕೆನಡಾದ ಹಲವಾರು ಭಾಗಗಳು ವರ್ಷವಿಡೀ ಹಿಮದಿಂದ ಆವೃತವಾಗಿರುತ್ತವೆ. ಇನುವಿಕ್ ಮತ್ತು ವಾಯುವ್ಯ ಪ್ರದೇಶ ಗಳಂತಹ ಸ್ಥಳಗಳಲ್ಲಿ ಬೇಸಿಗೆಯಲ್ಲಿ ಸೂರ್ಯ ಸುಮಾರು 50 ದಿನಗಳ ಕಾಲ ಹೊಳೆಯುತ್ತಿರುತ್ತಾನೆ.

►ಅಲಾಸ್ಕಾ

ಮೇ ಕೊನೆಯಿಂದ ಜುಲೈ ಕೊನೆಯವರೆಗೂ ಈ ದೇಶದಲ್ಲಿ ಸೂರ್ಯ ವಿರಮಿಸು ವುದಿಲ್ಲ. ಹಾಗೆಯೇ ಚಳಿಗಾಲದಲ್ಲಿ ಈ ದೇಶವು ಕತ್ತಲಿನಲ್ಲಿ ಮುಳುಗಿರುತ್ತದೆ

►ಐಸ್‌ಲ್ಯಾಂಡ್

ಗ್ರೇಟ್ ಬ್ರಿಟನ್‌ನ ನಂತರ ಯುರೋಪಿನ ಅತ್ಯಂತ ದೊಡ್ಡ ದ್ವೀಪವಾಗಿರುವ ರಮಣೀಯ ದೇಶ ಐಸ್‌ಲ್ಯಾಂಡ್‌ನಲ್ಲಿ ಮೇ 10ರಿಂದ ಜುಲೈವರೆಗೆ ಸೂರ್ಯ ಅಸ್ತಮಿಸುವುದೇ ಇಲ್ಲ.

►ಸ್ವೀಡನ್

ಮೇಲಿನ ದೇಶಗಳಿಗೆ ಹೋಲಿಸಿದರೆ ಕೊಂಚ ಬೆಚ್ಚಗಿರುವ ಸ್ವೀಡನ್‌ನಲ್ಲಿ ಮೇ ಪೂರ್ವಾರ್ಧದಿಂದ ಆಗಸ್ಟ್ ಕೊನೆಯವರೆಗೂ ಮಧ್ಯರಾತ್ರಿಯ ಸುಮಾರಿಗೆ ಅಸ್ತಮಿಸುವ ಸೂರ್ಯ ನಸುಕಿನ 4:30ಕ್ಕೇ ಉದಯಿಸುತ್ತಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News