ಕೊಳಕು ರಾಜಕೀಯ ಮಾಡುವ ಮೋದಿ ನೀಚ ವ್ಯಕ್ತಿ: ಮಣಿಶಂಕರ್ ಅಯ್ಯರ್

Update: 2017-12-07 16:45 GMT

ಹೊಸದಿಲ್ಲಿ, ಡಿ.7: ಕೊಳಕು ರಾಜಕೀಯ ಮಾಡುತ್ತಿರುವ ಪ್ರಧಾನಿ ಮೋದಿ ‘ನೀಚ ವ್ಯಕ್ತಿ’  ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಮಣಿ ಶಂಕರ್ ಅಯ್ಯರ್ ಹೇಳಿರುವುದು ವಿವಾದವನ್ನು ಸೃಷ್ಟಿಸಿದೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಯ್ಯರ್, “ಈ ವ್ಯಕ್ತಿ ನೀಚ ವ್ಯಕ್ತಿಯಾಗಿದ್ದಾರೆ. ಅವರಿನ್ನೂ ನಾಗರಿಕರಾಗಿಲ್ಲ ಹಾಗು ಇಂತಹ ಪರಿಸ್ಥಿತಿಯಲ್ಲಿ ಕೊಳಕು ರಾಜಕೀಯದ ಅವಶ್ಯಕತೆಯಿಲ್ಲ” ಎಂದು ಹೇಳಿದ್ದರು.

ಅಯ್ಯರ್ ಹೇಳಿಕೆ ವಿವಾದ ಸೃಷ್ಟಿಸುತ್ತಲೇ ಅಯ್ಯರ್ ಈ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

“ಪ್ರಧಾನಿಯ ಬಗ್ಗೆ ಮಣಿಶಂಕರ್ ಹೇಳಿಕೆಯನ್ನು ನಾನು ಪ್ರೋತ್ಸಾಹಿಸುವುದಿಲ್ಲ. ಈ ಹೇಳಿಕೆ ನೀಡಿದ್ದಕ್ಕಾಗಿ ಅಯ್ಯರ್ ಕ್ಷಮೆ ಯಾಚಿಸುತ್ತಾರೆ ಎಂದು ನಾನು ಹಾಗು ಕಾಂಗ್ರೆಸ್ ಪಕ್ಷ ನಿರೀಕ್ಷಿಸುತ್ತೇವೆ” ಎಂದು ರಾಹುಲ್ ಹೇಳಿದ್ದಾರೆ.

“ಕಾಂಗ್ರೆಸ್ ವಿರುದ್ಧ ಪ್ರಧಾನಿ ಹಾಗು ಬಿಜೆಪಿ ನಿರಂತರ ಕೊಳಕು ಭಾಷೆಯನ್ನು ಬಳಸುತ್ತಿದೆ. ಆದರೆ ಕಾಂಗ್ರೆಸ್ ಬೇರೆಯದೇ ಆದ ಸಂಸ್ಕೃತಿ ಹಾಗು ಪರಂಪರೆಯಿದೆ” ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಹೊಸದಿಲ್ಲಿಯ ಜನ್‌ಪಥ್ ರಸ್ತೆಯಲ್ಲಿ ವರ್ಷಗಳ ನಿರ್ಮಾಣಗೊಂಡ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಪ್ರಧಾನಿಯವರು, ‘‘ಅಂಬೇಡ್ಕರ್ ಹೆಸರಿನಲ್ಲಿ ಮತಯಾಚಿಸುವ ರಾಜಕೀಯ ಪಕ್ಷಗಳಿಗೆ ಪ್ರಾಯಶಃ ಈ ಕೇಂದ್ರದ ನಿರ್ಮಾಣವು ನೆನೆಗುದಿಯಲ್ಲಿದ್ದುದು ತಿಳಿದಿರಲಾರದು ಮತ್ತು ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕವೇ ಈ ಅದರ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗಿತು ಎಂದು ಹೇಳಿದ್ದರು. ಅಂಬೇಡ್ಕರ್ ನಿಧನರಾದ ಹಲವು ವರ್ಷಗಳ ಬಳಿಕ ಅವರ ಸಿದ್ಧಾಂತಗಳನ್ನು ಹೊಸಕಿಹಾಕಲು ಇದೇ ವ್ಯಕ್ತಿಗಳು ಪ್ರಯತ್ನಿಸಿದ್ದರು. ಆದರೆ ಅವರ ಆದರ್ಶಗಳನ್ನು ಜನಮಾನಸದಿಂದ ಅಳಿಸಿಹಾಕಲು ಸಾಧ್ಯವಾಗಲಿಲ್ಲ’’ ಎಂದು ಪ್ರಧಾನಿ ತಿಳಿಸಿದರು.

ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದ ನಿರ್ಮಾಣಕ್ಕೆ 23 ವರ್ಷಗಳ ಹಿಂದೆ ಚಾಲನೆ ದೊರೆತಿದ್ದರೂ, ಈ ವರ್ಷ ಅದರ ಕಾಮಗಾರಿ ಪೂರ್ಣಗೊಳಿಸಲಾಗಿರುವ ಬಗ್ಗೆ ಗಮನಸೆಳೆಯುತ್ತಾ ಪ್ರಧಾನಿ ಹೀಗೆ ಹೇಳಿದ್ದರು.

ಪ್ರಧಾನಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದಮಣಿಶಂಕರ್ ಅಯ್ಯರ್, ಅಂಬೇಡ್ಕರ್‌ಗೆ ಅವರ ಆದರ್ಶಗಳನ್ನು ಸಾಕಾರಗೊಳಿಸುವಲ್ಲಿ ನೆರವಾದ ಏಕೈಕ ವ್ಯಕ್ತಿ ಯೆಂದರೆ ಜವಾಹರಲಾಲ್ ನೆಹರೂ. ಮೋದಿಯವರು ನೆಹರೂ ಕುಟುಂಬದ ಬಗ್ಗೆ ಇಂತಹ ಮಾತುಗಳನ್ನು ಆಡಬಾರದು. ಪ್ರಧಾನಿಯ ಈ ಹೇಳಿಕೆಯು ಅವರ ಕೀಳುಮನಸ್ಥಿತಿಯನ್ನು ತೋರಿಸುತ್ತದೆಯೆಂದು ಅಯ್ಯರ್ ಟೀಕಿಸಿದ್ದರು. ಇಂತಹ ಕಾರ್ಯಕ್ರಮದಲ್ಲಿ ಕೊಳಕು ರಾಜಕೀಯ ಮಾಡುವ ಅಗತ್ಯವೇನಿತ್ತು ಎಂದು ಅವರು ಪ್ರಧಾನಿ ವಿರುದ್ಧ ಕಟಕಿಯಾಡಿದ್ದಾರೆ.

ಕ್ಷಮೆಯಾಚಿಸಿದ ಮಣಿಶಂಕರ್

ಇದಾದ ಬೆನ್ನಲ್ಲೇ ಮಣಿಶಂಕರ್ ಅಯ್ಯರ್ ಹೇಳಿಕೆ ನೀಡಿ, ತಾನು ಹಿಂದಿ ಭಾಷೆಯಲ್ಲಿ ಪಾಂಡಿತ್ಯವಿಲ್ಲದ ಕಾರಣ ಪದ ಬಳಕೆಯಲ್ಲಿ ಈ ಆವಾಂತರವಾಗಿದೆ ಎಂದು ತಿಳಿಸಿದ್ದು, ಕ್ಷಮೆಯಾಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News