ರೇರಾ ಕಾಯ್ದೆಗೆ ಜೈ ಎಂದ ಬಾಂಬೆ ಹೈಕೋರ್ಟ್
ಮುಂಬೈ,ಡಿ.7: ಕಟ್ಟಡ ನಿರ್ಮಾಣ ಉದ್ಯಮವನ್ನು ನಿಯಂತ್ರಿಸಲು ಹಾಗೂ ವಸತಿ ಖರೀದಿದಾರರ ಹಿತಾಸಕ್ತಿಗಳ ರಕ್ಷಣೆಗಾಗಿ ಇತ್ತೀಚೆಗೆ ಜಾರಿಗೆ ಬಂದಿರುವ 2016ರ ರಿಯಲ್ ಎಸ್ಟೇಟ್ ನಿಯಂತ್ರಣ ಹಾಗೂ ಅಭಿವೃದ್ಧಿ ಕಾಯ್ದೆ (ರೇರಾ)ಯ ಸಾಂವಿಧಾನಿಕ ಸಿಂಧುತ್ವವನ್ನು ಬಾಂಬೆ ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ.
ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಕೆಲವು ನಿವೇಶನಗಳ ಮಾಲಕರು ರೇರಾ ಕಾಯ್ದೆಯ 18 ನಿಯಾವಳಿಗಳನ್ನು ಪ್ರಶ್ನಿಸಿ ಸಲ್ಲಿಸಿದ ಹಲವು ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ನರೇಶ್ ಪಾಟೀಲ್ ಹಾಗೂ ರಾಜೇಶ್ ಕೇತ್ಕರ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ತಳ್ಳಿಹಾಕಿದೆ.
ಆದಾಗ್ಯೂ, ವಿಶೇಷ ಹಾಗೂ ನಿರ್ಬಂಧಿತ ಸನ್ನಿವೇಶಗಳಿಂದಾಗಿ ತಮ್ಮ ನಿರ್ಮಾಣ ಯೋಜನೆಗಳನ್ನು ಪೂರ್ಣಗೊಳಿಸಲು ನಿಗದಿಪಡಿಸಲಾದ ಕಾಲಮಿತಿಗಿಂತ 1 ವರ್ಷ ಹೆಚ್ಚುವರಿಯಾಗಿ ವಿಸ್ತರಿಸಲು ಅವಕಾಶ ನೀಡಬೇಕೆಂಬ ಅರ್ಜಿದಾರರ ಮನವಿಯನ್ನು ನ್ಯಾಯಾಲಯವು ಪುರಸ್ಕರಿಸಿದೆ.
ಬಾಂಬೆ ಹೈಕೋರ್ಟ್‌ನ ಈ ಆದೇಶದಿಂದಾಗಿ, ಬಿಲ್ಡರ್‌ಗಳು ಹಾಗೂ ರಿಯಲ್ ಎಸ್ಟೇಟ್ ಡೆವಲಪರ್‌ಗಳಿಗೆ, ತಮ್ಮ ಕಟ್ಟಡ ನಿರ್ಮಾಣ ಯೋಜನೆಗಳನ್ನು ಪೂರ್ಣ ಗೊಳಿಸಲು ನಿಗದಿತ ಸಮಯದಿಂದ ಒಂದು ವರ್ಷದ ಅಧಿಕ ಕಾಲಾವಕಾಶ ದೊರೆತಿರುವುದು ಅವರು ಸಮಾಧಾನದ ನಿಟ್ಟುಸಿರೆಳೆಯುವಂತೆ ಮಾಡಿದೆ.
ಆದರೆ ಅಸಾಧಾರಣ ಹಾಗೂ ನಿರ್ಬಂಧಿತ ಸನ್ನಿವೇಶಗಳಲ್ಲಿ ಮಾತ್ರವೇ ಹೆಚ್ಚುವರಿ ಕಾಲಾವಕಾಶ ವಿಸ್ತರಣೆಯನ್ನು ಪ್ರಾಧಿಕಾರವು ನೀಡಬಹುದಾಗಿದೆಯೆಂದು ನ್ಯಾಯ ಪೀಠವು ಸ್ಪಷ್ಟಪಡಿಸಿದೆ.
ರೇರಾ ಕಾಯ್ದೆಯ ಅನುಷ್ಠಾನದ ಬಗ್ಗೆ ಮುಂಬರುವ ವರ್ಷಗಳಲ್ಲಿ ಅತ್ಯಂತ ನಿಕಟವಾದ ಕಣ್ಗಾವಲು ನಡೆಸುವ ಅಗತ್ಯವಿದೆಯೆಂದು ನ್ಯಾಯಪೀಠವು ಪ್ರತಿಪಾದಿಸಿದೆ. ರೇರಾ ಕಾಯ್ದೆಯು ರಿಯಲ್ ಎಸ್ಟೇಟ್ ಪ್ರವರ್ತಕರನ್ನು ನಿಯಂತ್ರಿಸುವ ಕಾನೂನು ಮಾತ್ರವೇ ಅಲ್ಲ, ರಿಯಲ್ ಎಸ್ಟೇಟ್ ವಲಯವನ್ನು ಅಭಿವೃದ್ಧಿ ಪಡಿಸುವುದು ಅದರಲ್ಲೂ ವಿಶೇಷವಾಗಿ ದೇಶಾದ್ಯಂತ ಪೂರ್ತಿಯಾಗದೆ ಇರುವ ಕಟ್ಟಡ ನಿರ್ಮಾಣ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
ರಿಯಲ್ ಎಸ್ಟೇಟ್ ವಲಯವು ಅಗಾಧವಾದ ಸಮಸ್ಯೆಗಳನ್ನು ಎದುರಿಸು ತ್ತಿದೆಯೆಂದು ಅಭಿಪ್ರಾಯಿಸಿದ ನ್ಯಾಯಾಲಯವು, ಪ್ರತಿಯೊಬ್ಬ ನಾಗರಿಕನ ಕಣ್ಣೀರನ್ನು ಒರೆಸುವ ಮೂಲಕ ರಾಷ್ಟ್ರಪಿತ ಮಹಾತ್ಮಗಾಂಧಿಯವರ ಕನಸನ್ನು ಈಡೇರಿಸಲು ಒಂದು ಹೆಜ್ಜೆ ಮುಂದಿಡಬೇಕಾದ ಕಾಲವೀಗ ಸನ್ನಿಹಿತವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ರೇರಾ ಕಾಯ್ದೆಯ ಕಟ್ಟಡ ನಿರ್ಮಾಣ ಯೋಜನೆಗಳನ್ನು ಕಾರ್ಯಗತಗೊಳಿಸಲು ರಿಯಲ್‌ಎಸ್ಟೇಟ್ ಮಾಲಕರಿಗೆ ಕಟ್ಟುಪಾಡುಗಳನ್ನು ವಿಧಿಸುತ್ತದೆ. ಯೋಜನೆಗಳ ಪೂರ್ಣಗೊಳಿಸುವಲ್ಲಿ ವಿಳಂಬವಾದಲ್ಲಿ ಅವರಿಗೆ ದಂಡವಿಧಿಸಲು, ಲಾಭಕೋರ ಬಿಲ್ಡರ್‌ಗಳಿಂದ ಫ್ಲಾಟ್‌ಗಳ ಖರೀದಿದಾರರಿಗೆ ರಕ್ಷಣೆ ನೀಡುವ ಉದ್ದೇಶವನ್ನು ಹೊಂದಿದೆ.