‘‘ನನ್ನ ಮನೆಯ ಮೇಲೆ ನಾಲ್ಕು ದಾಳಿಗಳಾಗಿವೆ’’ -ಡಾ. ಜೆ. ಎಸ್. ಬಂದೂಕ್‌ವಾಲಾ

Update: 2017-12-07 18:44 GMT

ಭಾಗ-1

ಡಾ. ಜೆ.ಎಸ್. ಬಂದೂಕ್‌ವಾಲಾರವರು ಓರ್ವ ಮುಸ್ಲಿಂ ಸಮಾಜ ಸುಧಾರಕ. 2007ರಲ್ಲಿ ಸೇವೆಯಿಂದ ನಿವೃತ್ತರಾಗುವವರೆಗೆ, ಮಹಾರಾಜ ಸಯ್ಯಿಜಿರಾವ್ ವಿಶ್ವವಿದ್ಯಾನಿಲಯದಲ್ಲಿ ಅಣು ಭೌತ ವಿಜ್ಞಾನ ಬೋಧಿಸಿದ್ದರು. 2002ರ ಗುಜರಾತ್ ದಂಗೆಯಲ್ಲಿ ಜನರ ಗುಂಪೊಂದು ಅವರ ಮನೆಯನ್ನು ಅವರ ಕಣ್ಣೆದುರೇ ಕಿಚ್ಚಿಟ್ಟು ಸುಟ್ಟು ಹಾಕಿತು. ಬಂದೂಕ್‌ವಾಲಾ ಮತ್ತು ಅವರ ಮಗಳು ಅದೃಷ್ಟವಶಾತ್ ಆ ದಾಳಿಯಲ್ಲಿ ಬದುಕಿ ಉಳಿದರು.
ಗೋಧ್ರಾ ರೈಲು ನಿಲ್ದಾಣದಲ್ಲಿ 58 ಮಂದಿ ಕೇಸರಿ ಮೂಲಭೂತವಾದಿಗಳು ರೈಲಿಗೆ ಕೊಳ್ಳಿ ಇಡುವಿಕೆಯಿಂದಾಗಿ ಕೋಮುಗಲಭೆಗಳು ಆರಂಭಗೊಂಡಿದ್ದವು. ರಾಜ್ಯದಾದ್ಯಂತ ಸಂಭವಿಸಿದ ಹಿಂಸೆಯಲ್ಲಿ 1,000ಕ್ಕೂ ಹೆಚ್ಚು ಮಂದಿ ಮೃತ ಪಟ್ಟರು. ಅವರಲ್ಲಿ ಬಹುಪಾಲು ಮುಸ್ಲಿಮರು.
ಗುಜರಾತ್‌ನಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಗಳಿಗೆ ಪೂರ್ವಭಾವಿಯಾಗಿ ಸ್ಕ್ರಾಲ್. ಇನ್‌ಗೆ ನೀಡಿದ ಸಂದರ್ಶನವೊಂದರಲ್ಲಿ, ತಾನು ಹೇಗೆ ಸಂಪ್ರದಾಯ ಶರಣ ಮುಸ್ಲಿಮರನ್ನು ವಿರೋಧಿಸಿದೆ ಮತ್ತು ಹೇಗೆ ಭಾರತೀಯ ಜನತಾ ಪಕ್ಷವನ್ನು ತಾನು ಒಪ್ಪಿಕೊಳ್ಳಲಿಲ್ಲ ಮತ್ತು ಮುಸ್ಲಿಮರು ಯಾಕೆ ರಾಜಕೀಯ ಪ್ರವೇಶಿಸಬಾರದು ಎಂದು ವಿವರಿಸಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ

♦ನಿಮ್ಮ ಜೀವನದಲ್ಲಿ ಎರಡು ಸ್ಪಷ್ಟ ಹಂತಗಳು ಕಾಣಿಸುತ್ತವೆ. ಮೊದಲನೆಯದರಲ್ಲಿ, ನೀವು ಮುಸ್ಲಿಮರಿಂದ ಉಗ್ರ ವಿರೋಧವನ್ನು ಎದುರಿಸಿದಿರಿ. ಉದಾಹರಣೆಗೆ, ಬೊಹ್ರಾ ಮುಸ್ಲಿಂ ಸಮುದಾಯದಿಂದ ನಿಮ್ಮನ್ನು ಹೊರಗೆ ಕಳುಹಿಸಿ ನಿಮಗೆ ಬಹಿಷ್ಕಾರ ಹಾಕಲಾಯಿತು. ಅದು ಯಾಕಾಗಿ?
ಉ:  ಅಮೆರಿಕದಲ್ಲಿ ನನ್ನ ಅಧ್ಯಯನ ಪೂರ್ಣಗೊಳಿಸಿದ ಬಳಿಕ, 1972ರಲ್ಲಿ ನಾನು ಭಾರತಕ್ಕೆ ಮರಳಿದೆ. ನಾನು ಒಮ್ಮೆ ವಡೋದರದಲ್ಲಿ ಮುಸ್ಲಿಮರ ಬೊಹ್ರಾ ಪಂಥದ ಆಧ್ಯಾತ್ಮಿಕ ಗುರು ಬೊಹ್ರಾ ಸೈಡ್ನಾರವರನ್ನು ಭೇಟಿಯಾದೆ. ಅವರು ಉದ್ಯಾನವೊಂದರಲ್ಲಿ ಪ್ರಾರ್ಥಿಸುತ್ತಿದ್ದರು. ಅವರಿಗೆ ಗೌರವ ಸಲ್ಲಿಸಲು ನಾನು ಅಲ್ಲಿ ನಿಂತು, ಅವರ ಕುಟುಂಬದ ಇಬ್ಬರು ಸದಸ್ಯರೊಡನೆ ಮಾತಾಡತೊಡಗಿದೆ. ನಾನು ಪ್ಯಾಂಟ್ ಮತ್ತು ಶರ್ಟ್ ತೊಟ್ಟಿದ್ದೆ. ನಾನು ಬೊಹ್ರಾ ಮುಸ್ಲಿಂ ಎಂದು ತಿಳಿದಾಗ, ಆ ಉಡುಪಿನಲ್ಲಿ ನಾನು ಸೈಡ್ನಾರನ್ನು ಭೇಟಿಯಾಗಲು ಅದು ಹೇಗೆ ಬಂದೆನೆಂದು ಅವರು ಸಿಟ್ಟಿನಿಂದ ಕೇಳಿದರು
ಒಬ್ಬ ಬೊಹ್ರಾ ಸೈಡ್ನಾರನ್ನು ಭೇಟಿಯಾಗಬೇಕಾದರೆ ಆತ ಸಾಂಪ್ರದಾಯಿಕ ಬೊಹ್ರಾ ಉಡುಪು ಧರಿಸಿ ಕಾದು ನಿಂತು ಒಂದು, ನಿರ್ದಿಷ್ಟ ರೀತಿಯಲ್ಲಿ, ಅವರ ಬಳಿಗೆ ಹೋಗಬೇಕು. ‘‘ನೀವು ಅಬ್ಡೆ ಸೈಡ್ನಾ ಆಗಿರಬೇಕು; ಅಂದರೆ ಸೈಡ್ನಾರ ಗುಲಾಮನಾಗಿರಬೇಕು ಎಂದು ಆ ಇಬ್ಬರು ಹೇಳಿದರು. ಅಲ್ಲಾಹುವಿನ ಹೊರತು ಬೇರೆಯಾರ ಗುಲಾಮನಾಗಲೂ ನನಗೆ ಸಾಧ್ಯವಿಲ್ಲ ಎಂದು ಹೇಳಿದೆ. ಅವರು ನನ್ನ ಮೇಲೆ ಒತ್ತಡ ಹಾಕಲು ಪ್ರಯತ್ನಿಸಿದರು. ಆದರೆ ರಾಜಿಗೆ ನಾನು ಒಪ್ಪಲಿಲ್ಲ.

♦ ನಿಮ್ಮನ್ನು ಬೊಹ್ರಾ ಮುಸ್ಲಿಂ ಸಮುದಾಯದಿಂದ ಬಹಿಷ್ಕರಿಸಲು ಆಜ್ಞೆ ಹೊರಡಿಸಲಾಯಿತೆ?
ಉ: ನನ್ನ ಜತೆ ವ್ಯವಹರಿಸದಂತೆ ಬೊಹ್ರಾಗಳಿಗೆ ಹೇಳುವ ಒಂದು ನೋಟಿಸನ್ನು ವಡೋದರದ ಪ್ರಮುಖ ದರ್ಗಾವೊಂದರಲ್ಲಿ ಅಂಟಿಸಲಾಯಿತು. ನಾನು ಆಗ ಯುವಕನಾಗಿದ್ದೆ, ಆ ಬಗ್ಗೆ ನಾನು ಚಿಂತಿಸಲಿಲ್ಲ. ಆದರೆ ಅವರು ಹುಚ್ಚು ಕೆಲಸ ಮಾಡತೊಡಗಿದರು; ನನ್ನನ್ನು ಪ್ರಾಧ್ಯಾಪಕ ಹುದ್ದೆಯಿಂದ ಕಿತ್ತೆಸೆಯಬೇಕೆಂದು ಆರಂಭಿಸಿದರು.

♦ ನಿಮ್ಮ ಮೇಲಿನ ಬಹಿಷ್ಕಾರ ಎಷ್ಟು ಸಮಯದ ವರೆಗೆ ಮುಂದುವರಿಯಿತು.?
ಉ: 1983ರಲ್ಲಿ ಅದು ಕೊನೆಗೊಂಡಿತು. ಯಾಕೆಂದರೆ ಪ್ರಧಾನಿ ಇಂದಿರಾ ಗಾಂಧಿಯವರು ಗುಜರಾತಿನಲ್ಲಿ ಯಾಕೆ ಕೋಮು ಗಲಭೆಗಳು ನಡೆಯುತ್ತವೆಂದು ತಿಳಿಯಲು ನನಗೆ ಹೇಳಿದರು. ಅವರು ನನಗೆ ಕರೆಮಾಡಿದ್ದರೆಂದು ಗೊತ್ತಾದಾಗ ಬೊಹ್ರಾ ಸಮುದಾಯದ ನಾಯಕತ್ವದ ಧೋರಣೆ ಬದಲಾಯಿತು. ಅವರು ನನಗೆ ಕಾಟ ಕೊಡುವುದನ್ನು ನಿಲ್ಲಿಸಿದರು...
ನಾನು ಬೊಹ್ರಾಗಳನ್ನು ತ್ಯಜಿಸಿದೆ, ಆದರೆ ಬೃಹತ್ತಾದ ಮುಸ್ಲಿಂ ಸಮುದಾಯ ನನ್ನನ್ನು ಸ್ವೀಕರಿಸಿತು.

♦ ಆದರೆ ಸಲ್ಮಾನ್ ರಶ್ದಿಯ ‘ಸಟಾನಿಕ್ ವರ್ಸಸ್’ ಬಗ್ಗೆ ನೀವು ತೋರಿದ ನಿಲುವಿಗಾಗಿ ಬೊಹ್ರಾಗಳಲ್ಲದ ಮುಸ್ಲಿಮರು ಕೂಡ ನಿಮ್ಮ ವಿರುದ್ಧ ತಿರುಗಿಬಿದ್ದರಲ್ಲ?
ಉ: 1989ರಲ್ಲಿ ರಶ್ದಿ ಬರೆದದ್ದು ತಪ್ಪು; ಆದರೆ ಅವರನ್ನು ಮುಸ್ಲಿಮರು ನಡೆಸಿಕೊಂಡ ರೀತಿ ಕೂಡ ತಪ್ಪು ಎಂದು ನಾನು ಬರೆದೆ... ಪರಿಣಾಮವಾಗಿ, ಮುಸ್ಲಿಂ ಪಂಡಿತರು ನನ್ನ ವಿರುದ್ಧ ಫತ್ವಾ ಹೊರಡಿಸಿದರು. ನಾನು ರಶ್ದಿಯ ಬೆಂಬಲಿಗ ಮತ್ತು ಪವಿತ್ರ ಪ್ರವಾದಿಯ ಶತ್ರು ಎಂದು ಹೇಳಲಾಯಿತು.

♦ಆದರೆ ನಿಮಗೆ ಅವರು ಹಾನಿ ಮಾಡಲಿಲ್ಲ, ಮಾಡಿದರೇ?

ಉ: ಆ ದಿನಗಳಲ್ಲಿ ಮುಸ್ಲಿಮರು ಕುಟುಂಬ ಯೋಜನೆ ಮಾಡಬೇಕು; ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು; ಅವರ ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸಬೇಕೆಂದು ಬರೆಯುತ್ತಿದ್ದೆ.
ಹಾಜಿ ಮಸ್ತಾನ್ ಆ ಲೇಖನಗಳನ್ನು ಓದಿ ಮೆಚ್ಚಿಕೊಂಡರು. ಅವರು ದಾವೂದ್ ಇಬ್ರಾಹೀಂನ ಜೊತೆ ಮೊದಲು ಇದ್ದ ಗ್ಯಾಂಗ್‌ಸ್ಟರ್, ಆದರೆ ಅವರಲ್ಲಿ ರಾಬಿನ್ ಹುಡ್‌ನ ಒಂದು ಅಂಶವೂ ಇತ್ತು ನನ್ನ ವಿರುದ್ಧ ಫತ್ವಾ ಹೊರಡಿಸಲಾಗಿದೆ ಎಂದು ಅವರಿಗೆ ತಿಳಿದಾಗ, ನನ್ನ ಪರವಾಗಿ ಹೋರಾಡಲು ತಾನು ವಡೋದರಾಗೆ ಬರುವುದಾಗಿ ಅವರು ಹೇಳಿದರು. ನಾನು ಅದೊಂದು ದೊಡ್ಡ ಜೋಕ್ ಎಂದು ತಿಳಿದೆ.
ನನಗೆ ಆಶ್ಚರ್ಯವಾಯಿತು. ಹಾಜಿ ಮಸ್ತಾನ್, ತಾನು ಹೇಳಿದಂತೆ, ನಿಜವಾಗಿಯೂ ವಡೋದರಾಕ್ಕೆ ಬಂದರು.ಅವರೊಂದು ಸಾರ್ವಜನಿಕ ಸಭೆಯಲ್ಲಿ ಮಾತಾಡಿ, ನನ್ನ ಪರವಾಗಿ ಬಲವಾಗಿ ಸಮರ್ಥಿಸಿದರು. ‘‘ಬಂದೂಕ್‌ವಾಲಾ ಏನು ಮಾಡುತ್ತಿದ್ದಾರೋ ಅದನ್ನು ಮಾಡಲು ಅವರಿಗೆ ಬಿಡಿ. ಅವರು ಪ್ರಪಂಚ ಏನು ಅಂತ ನೋಡಿದ್ದಾರೆ, ನೀವು ನೋಡಿಲ್ಲ’’ ಎಂದು ಹೇಳಿದರು.
ಅವರ ಭಾಷಣದ ಕೊನೆಯ ವಾಕ್ಯ ನನ್ನನ್ನು ಉಳಿಸಿತು. ಅವರು ಹೇಳಿದರು. ಬಂದೂಕ್‌ವಾಲಾ ಪರ್‌ಹಾತ್ ಉಟಾಯಾ ನೈನ್, ತೊ ಮೈ ಆಪ್‌ಕೊ ಚೋಡೂಂಗಾ ನಹಿ’’ (ನೀವ್ಯಾರಾದರೂ ಬಂದೂಕ್‌ವಾಲಾ ಮೇಲೆ ಕೈ ಮಾಡಿದರೆ ನಾನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ.’’) ಆ ಮೇಲೆ, ವಡೋದರಾ ದಲ್ಲಿ ನಿಜವಾಗಿ ಗುಜರಾತಿನ ಯಾವನೇ ಮುಸ್ಲಿಂ ನಾಯಕ, ನನಗೆ ಸವಾಲೊಡ್ಡಿದ್ದಿಲ್ಲ..

♦ ನೀವು ಮತಾಂಧ ಮುಸ್ಲಿಮನ ಹಾಗೆ ನಡೆದುಕೊಳ್ಳಲೂ ಇಲ್ಲ. ನಿಮ್ಮನ್ನು ಮತಾಂಧನೆಂದು ಜನ ಪರಿಗಣಿಸಲೂ ಇಲ್ಲ. ಹಾಗಿರುವಾಗ 2002ರಲ್ಲಿ ನಡೆದ ದೊಂಬಿಗಳಲ್ಲಿ ನಿಮ್ಮ ಮನೆಯ ಮೇಲೆ ದಾಳಿ ನಡೆದದ್ದು ನಿಮಗೆ ದೊಡ್ಡ ಶಾಕ್ ಆಗಿರಬೇಕಲ್ಲ?
ಉ: ಮುಸ್ಲಿಮರಿಗೆ ತಾವು ಎಲ್ಲಿ ಬಯಸುತ್ತಾರೋ ಅಲ್ಲಿ ವಾಸಿಸುವ ಹಕ್ಕು ಇದೆ ಎಂದು ಬಲವಾಗಿ ನಂಬಿದವ ನಾನು. ಭಾರತದಾದ್ಯಂತ ಹೆಚ್ಚಿನ ಪ್ರದೇಶಗಳಲ್ಲಿ ವಾಸಿಸಲು ಮುಸ್ಲಿಮರಿಗೆ ಅನುಮತಿ ನೀಡಲಾಗುತ್ತಿಲ್ಲ ಎಂಬುದು ದುಃಖದ ವಿಷಯ. ನನ್ನ 45 ವರ್ಷಗಳ ವಡೋದರಾ ವಾಸ್ತವ್ಯದಲ್ಲಿ, ನಾನು ಯಾವಾಗಲೂ ಮುಸ್ಲಿಮೇತರ (ನಾನ್-ಮುಸ್ಲಿಂ) ಪ್ರದೇಶಗಳಲ್ಲಿ ವಾಸಿಸಿದ್ದೇನೆ. ವಿಶೇಷವಾಗಿ, ಯಾಕೆಂದರೆ ನಾನೊಬ್ಬ ಸಾಮಾಜಿಕ ಕಾರ್ಯಕರ್ತ, ಇಷ್ಟರವರೆಗೆ ನನ್ನ ಮನೆಯ ಮೇಲೆ ನಾಲ್ಕು ದಾಳಿಗಳಾಗಿವೆ.
ಕೃಪೆ: scroll.in

Writer - ಸಂ: ಎಜಾಝ್ ಅಶ್ರಫ್

contributor

Editor - ಸಂ: ಎಜಾಝ್ ಅಶ್ರಫ್

contributor

Similar News

ಜಗದಗಲ
ಜಗ ದಗಲ