ಪಾರ್ಲಿಮೆಂಟ್‌ನಲ್ಲಿ ತಮ್ಮ ‘ಪ್ರತಾಪ’ ತೋರಿಸಿ

Update: 2017-12-07 18:47 GMT

ಮಾನ್ಯರೆ,

ಮೈಸೂರು ಮತ್ತು ಕೊಡಗು ಸಂಸದರು ಇತ್ತೀಚಿನ ದಿನಗಳಲ್ಲಿ ತಮ್ಮ ‘ಪ್ರತಾಪ’ವನ್ನು ಎಲ್ಲೆಂದರಲ್ಲಿ ತೋರುತ್ತಿ ದ್ದಾರೆ. ಪಾರ್ಲಿಮೆಂಟ್‌ನ ಸದಸ್ಯರಾಗಿ ಸುಮಾರು ಮೂರುವರೆ ವರ್ಷಗಳು ಸಂದಿದೆ. ಕರ್ನಾಟಕದ ಅನೇಕ ಸಮಸ್ಯೆಗಳು ಚರ್ಚಿಸಲ್ಪಡಬೇಕಾಗಿದೆ. ಕೇಂದ್ರ ಸರಕಾರದಿಂದ ಅವುಗಳಿಗೆ ಪರಿಹಾರವೂ ದೊರಕಬೇಕಾಗಿದೆ. ಅದಲ್ಲದೆ ತಾವು ಪ್ರತಿನಿಧಿಸುವ ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಸಮಸ್ಯೆಗಳಿವೆ. ತಾವು ಎಲ್ಲೆಂದರಲ್ಲಿ ಪ್ರತಾಪ ತೋರುವುದನ್ನು ಬಿಟ್ಟು, ಲೋಕಸಭೆಯಲ್ಲಿ ತಮ್ಮ ಪ್ರತಾಪವನ್ನು ತೋರಿದ್ದರೆ, ಕರ್ನಾಟಕ ಮೆಚ್ಚುವ ಒಬ್ಬ ಸಂಸದೀಯ ಪಟುವಾಗುತ್ತಿದ್ದಿರಿ. ಲೋಕ ಸಭೆಯಲ್ಲಿ ತಾವು ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀರಿ? ಎಷ್ಟು ಉತ್ತರಗಳನ್ನು ಪಡೆದಿದ್ದೀರಿ? ಮತ್ತು ಎಷ್ಟು ಚರ್ಚೆಗಳಲ್ಲಿ ಪಾಲ್ಗೊಂಡಿದ್ದೀರಿ? ಎಷ್ಟು ದಿನ ಹಾಜರಾತಿಯನ್ನು ಹಾಕಿದ್ದೀರಿ? ಹಾಗೆಯೇ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಧರ್ಮವನ್ನು ಹೊರತುಪಡಿಸಿ ಮೂಲಭೂತ ಸೌಕರ್ಯ ಸಮಸ್ಯೆಗಳ ಕಾರಣಕ್ಕೆ ಎಷ್ಟು ಬಾರಿ ಪತ್ರಗಳನ್ನು ಬರೆದಿದ್ದೀರಿ? ಸೌಲಭ್ಯಗಳು ಕಾರ್ಯಗತಗೊಳಿಸುವಲ್ಲಿ ಎಷ್ಟು ಶ್ರಮ ವಹಿಸಿದ್ದೀರಿ?

ನಿಮ್ಮನ್ನು ಜನತೆ ಆಯ್ಕೆ ಮಾಡಿರುವುದು ಲೋಕಸಭೆಗೆ ಹೊರತು, ಫೇಸ್‌ಬುಕ್, ಟ್ವಿಟರ್‌ನಲ್ಲಿ ವ್ಯಸ್ತವಾಗುವುದಕ್ಕಲ್ಲ. ನಿಮ್ಮಲ್ಲಿರುವ ಬುದ್ಧಿವಂತಿಕೆ, ಪತ್ರಕರ್ತರಾಗಿ ಪಡೆದುಕೊಂಡಿ ರುವ ಅನುಭವಗಳನ್ನು ಇನ್ನು ಮುಂದಕ್ಕಾದರೂ ಕ್ಷೇತ್ರದ ಕಲ್ಯಾಣಕ್ಕಾಗಿ ಬಳಸಿ ಪಾರ್ಲಿಮೆಂಟ್‌ನಲ್ಲಿ ತಮ್ಮ ಪ್ರತಾಪ ತೋರಿಸಿ. ನಿಮ್ಮ ಮೂಗಿನ ನೇರಕ್ಕೆ ನಡೆದುಕೊಳ್ಳದ ಪೊಲೀಸ್ ಅಧಿಕಾರಿಗಳನ್ನು ಮನಬಂದಂತೆ ಹಂಗಿಸುವುದನ್ನು ಬಿಟ್ಟು, ಅವರು ತಮ್ಮ ಕರ್ತವ್ಯ ಮಾಡಲು ಅವಕಾಶ ಮಾಡಿಕೊಡಿ. ಅವರು ಕಾನೂನು ಮೀರಿ ತಮ್ಮ ಅಧಿಕಾರವನ್ನು ಚಲಾಯಿಸಿ ದ್ದರೆ ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸುವ ಅಧಿಕಾರ ನಿಮಗೆ ಇದೆ. ನಿಮಗೆ ನ್ಯಾಯ ಕೊಡಬೇಕಾದುದು ನ್ಯಾಯಾಲಯವೇ ಹೊರತು ಟ್ವಿಟರ್ ಪ್ರಪಂಚವಲ್ಲ.

Similar News