ಕಳ್ಳರಿಗೆ ಭಾರತೀಯ ರೈಲ್ವೆ ಎಂದರೆ ಖಜಾನೆ !

Update: 2017-12-08 04:43 GMT

ಹೊಸದಿಲ್ಲಿ, ಡಿ. 8: ಭಾರತೀಯ ರೈಲ್ವೆಯಿಂದ ಕಳೆದ ವರ್ಷ ಒಟ್ಟು 11 ಲಕ್ಷ ಮಂದಿ ಕಳ್ಳತನ ಮಾಡಿರುವ ಅಂಶ ಬಹಿರಂಗವಾಗಿದೆ.

ಕಳ್ಳರಿಗೆ ನಿಜ ಅರ್ಥದಲ್ಲಿ ಭಾರತೀಯ ರೈಲ್ವೆ ಅಮೂಲ್ಯ ಖಜಾನೆಯಾಗಿ ಮಾರ್ಪಟ್ಟಿದೆ. ತಾಮ್ರದ ತಂತಿಗಳಿಂದ ಹಿಡಿದು ಕಬ್ಬಿಣದ ಬೋಲ್ಟ್‌ವರೆಗೆ, ಟವೆಲ್‌ನಿಂದ ಹಿಡಿದು ವಾಷ್‌ಬೇಸಿನ್ ವರೆಗೆ, ಹೊದಿಕೆಯಿಂದ ಹಿಡಿದು ನಳ್ಳಿಯವರೆಗೆ ಯಾವುದನ್ನೂ ಕಳ್ಳರು ಬಿಟ್ಟಿಲ್ಲ.

ರೈಲ್ವೆ ಸುರಕ್ಷತಾ ಪಡೆಗೆ 2016 ಅತಿ ಹೆಚ್ಚು ಕೆಲಸದ ವರ್ಷ. 11 ಲಕ್ಷ ಮಂದಿಯನ್ನು ರೈಲ್ವೆ ಸಾಮಗ್ರಿಗಳನ್ನು ಕದ್ದ ಆರೋಪದಲ್ಲಿ ಆರ್‌ಪಿಎಫ್ 2016ರಲ್ಲಿ ಬಂಧಿಸಿದೆ. ಮಹಾರಾಷ್ಟ್ರದಲ್ಲಿ ಅತ್ಯಧಿಕ ಎಂದರೆ 2.23 ಲಕ್ಷ ಮಂದಿಯ ಬಂಧನವಾಗಿದ್ದರೆ, ಎರಡನೇ ಸ್ಥಾನದಲ್ಲಿರುವ ಉತ್ತರ ಪ್ರದೇಶದಲ್ಲಿ 1.22 ಲಕ್ಷ ಮಂದಿಯ ಬಂಧನವಾಗಿದೆ.

ಕ್ಲಿಪ್, ಫಿಶ್‌ಪ್ಲೇಟ್, ಬೋಲ್ಟ್, ವೈರ್, ಬಾತ್‌ರೂಂ ಫಿಟ್ಟಿಂಗ್ಸ್‌ಗಳನ್ನು ರೈಲು ಬೋಗಿಗಳಿಂದ ಕದಿಯುತ್ತಿದ್ದವರನ್ನು ಆರ್‌ಪಿಎಫ್ ಬಂಧಿಸಿದೆ. ಅಂತೆಯೇ ಟ್ಯೂಬ್‌ಲೈಟ್ ಹಾಗೂ ಫ್ಯಾನ್‌ಗಳು, ಟವೆಲ್, ಹೊದಿಗೆಗಳು ಕೂಡಾ ಎ.ಸಿ.ಕೋಚ್‌ಗಳಿಂದ ಕಳ್ಳತನವಾಗುತ್ತಿವೆ. ಮಧ್ಯಪ್ರದೇಶದಲ್ಲಿ ವಿವಿಧ ಕಳ್ಳತನ ಆರೋಪದಲ್ಲಿ 95,594 ಮಂದಿಯನ್ನು ಬಂಧಿಸಲಾಗಿದೆ. ತಮಿಳುನಾಡಿನಲ್ಲಿ 81,408 ಹಾಗೂ ಗುಜರಾತ್‌ನಲ್ಲಿ 77,047 ಮಂದಿಯನ್ನು ಬಂಧಿಸಲಾಗಿದ್ದು, ಈ ಐದು ರಾಜ್ಯಗಳಿಂದ ಗರಿಷ್ಠ ಪ್ರಕರಣಗಳು ದಾಖಲಾಗಿವೆ.

ಉತ್ತಮ ಗುಣಮಟ್ಟದ ಕಬ್ಬಿಣ ಹಾಗೂ ತಾಮ್ರ ಕಳ್ಳರ ಪ್ರಮುಖ ಆಕರ್ಷಣೆಗಳು. ಹೈಟೆನ್ಷನ್ ತಂತಿಗಳು ಹಾಗೂ ಸಿಗ್ನಲ್ ಕೇಬಲ್‌ಗಳು ಕೂಡಾ ಕಳ್ಳತನವಾಗುತ್ತಿವೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News