ಕೂಡಲಸಂಗಮದೇವ ಸಾಕ್ಷಿ

Update: 2017-12-08 18:45 GMT

ಚೆನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು,
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗ ನಾನು,
ಕೂಡಲಸಂಗಮದೇವ ಸಾಕ್ಷಿಯಾಗಿ.

                                  -ಬಸವಣ್ಣ

1948ನೇ ಡಿಸೆಂಬರ್ 10ರಂದು ವಿಶ್ವಸಂಸ್ಥೆಯು 30 ಅಂಶಗಳಿಂದ ಕೂಡಿದ ಮಾನವ ಹಕ್ಕುಗಳ ಜಾಗತಿಕ ಘೋಷಣೆಯನ್ನು ಅಂಗೀಕರಿಸಿತು. ಮಾನವ ಕುಲದ ಇತಿಹಾಸದಲ್ಲಿ ಇದೊಂದು ಮಹತ್ವದ ಘಟನೆಯಾಗಿದೆ. ವಿಶ್ವಸಂಸ್ಥೆ ಗುರುತಿಸಿದ ಮಾನವ ಹಕ್ಕುಗಳು 12ನೇ ಶತಮಾನದ ಬಸವಣ್ಣನವರ ವಚನಗಳಲ್ಲಿವೆ! ‘ಎಲ್ಲ ಮಾನವರು ಹುಟ್ಟಿನಿಂದಲೇ ಸ್ವತಂತ್ರರು ಮತ್ತು ಘನತೆ ಹಾಗೂ ಹಕ್ಕುಗಳಲ್ಲಿ ಸಮಾನರು’ ಎಂಬುದು ಮಾನವ ಹಕ್ಕುಗಳ ಜಾಗತಿಕ ಘೋಷಣೆಯ ಮೊದಲ ಅಂಶವಾಗಿದೆ. ಮಾನವರು ಹುಟ್ಟಿನಿಂದಲೇ ಸ್ವತಂತ್ರರು. ಘನತೆ ಹಾಗೂ ಹಕ್ಕುಗಳಲ್ಲಿ ಸಮಾನರು ಎಂಬುದನ್ನು ಸಾರುವುದಕ್ಕಾಗಿಯೇ ಬಸವಣ್ಣನವರು ಮೇಲಿನ ವಚನವನ್ನು ಬರೆದಿದ್ದಾರೆ.

ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಸಮಾಜದಲ್ಲಿ ಜಾತಿಪ್ರಜ್ಞೆಯ ಜನ ತಮ್ಮ ಜಾತಿ ಯಾವ ಯಾವ ಜಾತಿಗಳಿಗಿಂತ ಮೇಲು ಎಂಬುದನ್ನು ಲೆಕ್ಕಹಾಕುತ್ತಲೇ ಇರುತ್ತಾರೆ. ಜಾತಿಗಳು ಬಹಳಷ್ಟು ಭಾರತೀಯರ ವ್ಯಕ್ತಿತ್ವದ ಭಾಗವಾಗಿವೆ. ಜಾತಿವ್ಯವಸ್ಥೆಯ ಕೊನೆಯ ಶ್ರೇಣಿಯಲ್ಲಿ ಬರುವ ಅಸ್ಪಶ್ಯರನ್ನು ಇಂದಿಗೂ ಕೀಳಾಗಿ ನೋಡಲಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಎಲ್ಲ ಜಾತಿಗಳ ವ್ಯವಸ್ಥೆಯನ್ನು ಮೀರಿ ಅನೈತಿಕ ಸಂಬಂಧದಿಂದ ಹುಟ್ಟಿದ ಮಕ್ಕಳ ಗತಿ ಏನು ಎಂಬ ಪ್ರಶ್ನೆ ಬಸವಣ್ಣನವರಿಗೆ ಕಾಡಿದೆ. ಮಾದಾರ ಚೆನ್ನಯ್ಯನವರು ಮತ್ತು ಡೋಹಾರ ಕಕ್ಕಯ್ಯನವರು ಮಹಾನುಭಾವಿಗಳು. ಆದರೆ ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟ ಜನ ಇಂಥಹವರನ್ನು ಕೂಡ ಅಸ್ಪಶ್ಯತಾ ಭಾವದಿಂದಲೇ ಕಾಣುತ್ತಾರೆ. ಇನ್ನು ಇಂಥವರ ಮನೆಗಳಲ್ಲಿನ ದಾಸ ದಾಸಿಯರ ವ್ಯಕ್ತಿತ್ವವನ್ನು ಯಾವ ರೀತಿಯಲ್ಲಿ ಪರಿಗಣಿಸಬಹುದು? ಅವರ ಮಕ್ಕಳ ಪರಿಸ್ಥಿತಿ ಏನು? ಕೆಳಜಾತಿಗಳವರ ದಾಸ-ದಾಸಿಯರ ಮಗ ಮತ್ತು ಮಗಳು ಅನೈತಿಕ ಸಂಬಂಧ ಬೆಳೆಸಿದಾಗ ಹುಟ್ಟುವ ಮಗುವಿನ ಭವಿಷ್ಯ ಏನಾಗಬಹುದು?

  ಜೀವಕಾರುಣ್ಯದ ಮಹಾಸಾಗರವೇ ಆದ ಬಸವೇಶ್ವರರು ಆ ಮಗುವೇ ತಾವೆಂದು ಘೋಷಿಸುತ್ತಾರೆ! ಕೂಡಲಸಂಗಮದೇವರೇ ಇದಕ್ಕೆ ಸಾಕ್ಷಿ ಎಂದು ಪ್ರತಿಪಾದಿಸುತ್ತಾರೆ. ಅನೈತಿಕ ಸಂಬಂಧದಿಂದ ಹುಟ್ಟಿದ ಆ ಮಗು ಕೂಡ ಎಲ್ಲ ಮಕ್ಕಳಂತೆ ಹುಟ್ಟಿನಿಂದಲೇ ಸ್ವತಂತ್ರವಾಗಿದೆ ಮತ್ತು ಒಂದೇ ರೀತಿಯ ಘನತೆ ಮತ್ತು ಹಕ್ಕುಗಳನ್ನು ಹೊಂದಿದೆ ಎಂಬುದನ್ನು ಒತ್ತಿ ಹೇಳುತ್ತಾರೆ. ಕೆಳಜಾತಿಗಳಲ್ಲಿ ಅನೈತಿಕ ಸಂಬಂಧದಿಂದ ಜನಿಸಿದವನು ಜಾತಿವ್ಯವಸ್ಥೆಯ ಸಮಾಜದಲ್ಲಿ ಅತ್ಯಂತ ಕೆಳಗಿನ ಸ್ತರದವನಾಗಿ ಇರಬೇಕಾಗುತ್ತದೆ. ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ನರಳುತ್ತಲೇ ಬದುಕಬೇಕಾಗುತ್ತದೆ. ಸಂವೇದನಾಶೀಲ ಬಸವಣ್ಣನವರು ಅಂಥವರೊಳಗೂ ಒಂದಾಗಿಹೋಗುತ್ತಾರೆ. ಅವರಲ್ಲಿ ಆತ್ಮಶಕ್ತಿಯನ್ನು ತುಂಬುತ್ತಾರೆ. ಮಾನವ ಘನತೆಯನ್ನು ಎತ್ತಿಹಿಡಿಯುತ್ತಾರೆ. ಕಟ್ಟಕಡೆಯ ಮನುಷ್ಯರನ್ನು ಮೊತ್ತಮೊದಲಿಗೆ ಗುರುತಿಸುವ ಕ್ರಮವನ್ನು ಬಸವಣ್ಣನವರು ಹೀಗೆ ಸೂಚಿಸಿದ್ದಾರೆ.

30 ಅಂಶಗಳ ಮಾನವ ಹಕ್ಕುಗಳ ಘೋಷಣೆಯ ಮೊದಲ ಅಂಶವಲ್ಲದೆ ಇನ್ನೂ 17 ಅಂಶಗಳು ಇಂಥ ಅನೈತಿಕ ಸಂಬಂಧದಿಂದ ಹುಟ್ಟಿದ ಮಕ್ಕಳಿಗೂ ನೇರವಾಗಿ ಅನ್ವಯಿಸುತ್ತವೆ: ಅಂಶ 2) ಮಾನವಹಕ್ಕುಗಳ ಘೋಷಣೆಯಲ್ಲಿನ ಎಲ್ಲ ಹಕ್ಕುಗಳು ಮತ್ತು ಸ್ವಾತಂತ್ರ್ಯ ಎಲ್ಲರಿಗೂ ಸಮನಾಗಿವೆ. 3) ಪ್ರತಿಯೊಬ್ಬರಿಗೂ ಬದುಕುವ, ಸ್ವತಂತ್ರವಾಗಿರುವ ಮತ್ತು ಭದ್ರತೆಯ ಹಕ್ಕಿದೆ. 4) ಗುಲಾಮಗಿರಿಗೆ ಅವಕಾಶವಿಲ್ಲ. 5) ಯಾರ ವಿರುದ್ಧವೂ ಕ್ರೂರವಾಗಿ ನಡೆದುಕೊಳ್ಳುವಂತಿಲ್ಲ. 6) ಕಾನೂನಿನ ಮುಂದೆ ಪ್ರತಿಯೊಬ್ಬರೂ ವ್ಯಕ್ತಿಯಾಗಿ ಗುರುತಿಸಿಕೊಳ್ಳುವ ಹಕ್ಕನ್ನು ಪಡೆದಿದ್ದಾರೆ. 7) ಕಾನೂನಿನ ಮುಂದೆ ಎಲ್ಲರೂ ಒಂದೇ 8) ತನ್ನ ಮೂಲಭೂತ ಹಕ್ಕುಗಳ ಪ್ರಕಾರ ನ್ಯಾಯ ಕೇಳುವ ಹಕ್ಕು ಪ್ರತಿಯೊಬ್ಬರಿಗೆ ಇದೆ. 9) ಯಾರನ್ನೂ ಮನಸ್ಸಿಗೆ ಬಂದಂತೆ ಬಂಧಿಸಲಿಕ್ಕಾಗದು. 12) ಯಾರದೇ ಖಾಸಗಿ ಬದುಕಿನಲ್ಲಿ ಕೈ ಹಾಕುವಂತಿಲ್ಲ. ಯಾರ ಘನತೆಗೂ ಕುಂದು ತರುವಂತಿಲ್ಲ. 13) ಪ್ರತಿಯೊಬ್ಬರಿಗೂ ತಮ್ಮ ದೇಶದಲ್ಲಿ ಮುಕ್ತವಾಗಿ ಸಂಚರಿಸುವ ಹಕ್ಕಿದೆ. 17) ಪ್ರತಿಯೊಬ್ಬರಿಗೂ ಆಸ್ತಿಯ ಹಕ್ಕಿದೆ. 18) ಪ್ರತಿಯೊಬ್ಬರು ವಿಚಾರ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯ ಪಡೆದಿದ್ದಾರೆ 19) ಪ್ರತಿಯೊಬ್ಬರೂ ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪಡೆದಿದ್ದಾರೆ. 22) ಪ್ರತಿಯೊಬ್ಬರು ಸಾಮಾಜಿಕ ಭದ್ರತೆಯ ಹಕ್ಕನ್ನು ಪಡೆದಿದ್ದಾರೆ. 24) ಪ್ರತಿಯೊಬ್ಬರು ವಿಶ್ರಾಂತಿಯ ಹಕ್ಕನ್ನು ಪಡೆದಿದ್ದಾರೆ. 25) ಗುಣಮಟ್ಟದ ಹಕ್ಕನ್ನು ಪ್ರತಿಯೊಬ್ಬರು ಪಡೆದಿದ್ದಾರೆ. 26) ಪ್ರತಿಯೊಬ್ಬರಿಗೂ ಶಿಕ್ಷಣ ಪಡೆಯುವ ಹಕ್ಕಿದೆ.

 ಬಸವಣ್ಣನವರು ಜನಿಸುವ ಮೊದಲೇ ಸಾವಿರಾರು ವರ್ಷಗಳಿಂದ ನಮ್ಮ ದೇಶದ ದಲಿತರು ಇಂಥ ಹಕ್ಕುಗಳಿಂದ ವಂಚಿತರಾಗಿದ್ದರು. ದಲಿತರಲ್ಲೇ ಅನೇಕ ಜಾತಿಗಳಿವೆ. ಅವುಗಳಲ್ಲಿನ ಹೊಲೆಯರನ್ನು ಬಲಗೈ ಎಂದು ಕರೆದರೆ ಮಾದಿಗರನ್ನು ಎಡಗೈ ಎಂದು ಕರೆಯಲಾಗುತ್ತಿದೆ. ಮನುಧರ್ಮದ ಶ್ರೇಣೀಕೃತ ಸಮಾಜದಲ್ಲಿ ಮಾದಿಗರು ಹೊಲೆಯರಿಗಿಂತ ಕೆಳಮಟ್ಟದಲ್ಲಿದ್ದಾರೆ. ಆಯಪದ್ಧತಿಯ ಪ್ರಕಾರ ಮಾದಿಗರು, ತಾವು ಸೇವೆ ಸಲ್ಲಿಸುವ ರೈತರ ಸತ್ತ ದನಗಳ ಚರ್ಮದಿಂದ ಚೆಮ್ಮಾವುಗೆಗಳನ್ನು ತಯಾರಿಸಿ ಆ ರೈತರಿಗೇ ಕೊಡುತ್ತಾರೆ. ಡೋಹರರು ಚರ್ಮವನ್ನು ಹದ ಮಾಡುವ ಕಾಯಕದವರು. ಈ ರೀತಿ ಚರ್ಮಕ್ಕೆ ಸಂಬಂಧಿಸಿದ ಕಾಯಕ ಮಾಡುವವರೇ ಮನುಧರ್ಮದ ಪ್ರಕಾರ ಅತ್ಯಂತ ಕೀಳುಮಟ್ಟದಲ್ಲಿರುವಾಗ ಇನ್ನು ಅವರ ದಾಸ ದಾಸಿಯರ ಸ್ಥಿತಿ ಎಂಥದ್ದಿರಬಹುದು! ಅವರ ಮಕ್ಕಳ ಪರಿಸ್ಥಿತಿ ಯಾವ ಕೆಳಮಟ್ಟಕ್ಕೆ ಹೋಗಿರಬಹುದು!! ಇನ್ನು ಅಂಥ ಮಕ್ಕಳು ಬೆಳೆದು ಅನೈತಿಕ ಸಂಬಂಧ ಬೆಳೆಸಿದಾಗ ಹುಟ್ಟಿದ ಮಗುವಿನ ಗತಿ ಏನಾಗಬಹುದು!!!

 ಹೊಲೆ ಮಾದಿಗರು ಕೂಡ ಸ್ವೀಕರಿಸಲು ಮುಂದೆ ಬರದಂಥ ಇಂಥ ಮಗುವಿನ ಬಗ್ಗೆ ಬಸವಣ್ಣನವರು ಚಿಂತಿಸಿದ್ದಾರೆ. ಅಂಥ ಮಗುವಿಗೂ ನ್ಯಾಯ ಒದಗಿಸುವ ಪಣ ತೊಟ್ಟಿದ್ದಾರೆ. ಅಂಥ ಮಕ್ಕಳ ಮಾನವ ಹಕ್ಕುಗಳ ಬಗ್ಗೆ ಪ್ರತಿಪಾದಿಸಿದ್ದಾರೆ. ಕೂಡಲಸಂಗಮದೇವ ಸಾಕ್ಷಿಯಾಗಿ ಆ ಮಗು ತಾನೇ ಎಂದು ಹೇಳುವಲ್ಲಿ ಬಸವಣ್ಣನವರ ಜೀವಕಾರುಣ್ಯ ಆಕಾಶದೆತ್ತರಕ್ಕೆ ಏರಿ ಇಡೀ ವಿಶ್ವಕ್ಕೇ ಮಾರ್ಗದರ್ಶಿಯಾಗುತ್ತದೆ.

***

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News