ಇ-ಸಿಗರೇಟ್ ನಿಮ್ಮ ಶ್ವಾಸಕೋಶಗಳಲ್ಲಿ ವಿಷವನ್ನು ತುಂಬುತ್ತದೆ

Update: 2017-12-09 09:36 GMT

ಧೂಮ್ರಪಾನದ ಚಟವನ್ನು ತಪ್ಪಿಸಲೆಂದು ಮಾರುಕಟ್ಟೆಗೆ ಬಂದಿರುವ ಇ-ಸಿಗರೇಟ್ ಗಳು ಉಪಕಾರದ ಬದಲು ಅಪಕಾರವನ್ನೇ ಮಾಡುತ್ತಿವೆ ಎನ್ನುವುದು ಗೊತ್ತೇ? ಧೂಮ್ರಪಾನದ ಚಟದಿಂದ ಪಾರಾಗಲು ಇ-ಸಿಗರೇಟ್ ಸೇದಲು ಆರಂಭಿಸಿದ್ದ ಎಷ್ಟೋ ಜನರು ಈಗ ಅದಕ್ಕೆ ದಾಸರಾಗಿಬಿಟ್ಟಿದ್ದಾರೆ. ಆದರೆ ದೀರ್ಘಾವಧಿಯಲ್ಲಿ ಇ-ಸಿಗರೇಟ್ ಕೂಡ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನುವುದು ಹೆಚ್ಚಿನ ತಜ್ಞರ ಅಭಿಪ್ರಾಯವಾಗಿದೆ.

ಅವು ನಮ್ಮ ಆರೋಗ್ಯಕ್ಕೆ ಹೇಗೆ ಅಪಾಯಕಾರಿ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

 ಹೆಚ್ಚಿನ ಇ-ಸಿಗರೇಟ್‌ಗಳು ಮನುಷ್ಯನನ್ನು ಧೂಮ್ರಪಾನದ ಚಟಕ್ಕೆ ದಾಸನನ್ನಾಗಿ ಮಾಡುವ, ತಂಬಾಕಿನಲ್ಲಿಯ ನಿಕೋಟಿನ್‌ನ್ನು ಒಳಗೊಂಡಿರುತ್ತವೆ. ಹೀಗಾಗಿ ಇ-ಸಿಗರೇಟ್ ಸೇವನೆಯೂ ಸಾಂಪ್ರದಾಯಿಕ ಸಿಗರೇಟ್‌ನಂತೆಯೇ ಚಟವಾಗಿ ಬಿಡುತ್ತದೆ. ಜೊತೆಗೆ ಅದು ಇನ್ಸುಲಿನ್ ಪ್ರತಿರೋಧ, ಮಧುಮೇಹ, ಅಪಧಮನಿ ಕಾಠಿಣ್ಯ ಮತ್ತು ಶ್ವಾಸಕೋಶ ಕಾನ್ಸರ್‌ನ ಅಪಾಯವನ್ನೂ ಹೆಚ್ಚಿಸುತ್ತದೆ. ಇ-ಸಿಗರೇಟ್ ‘ಜ್ಯೂಸ್’ ಎಂದೂ ಕರೆಯಲಾಗುವ ದ್ರವರೂಪದ ನಿಕೋಟಿನ್‌ನ ಕಾರ್ಟಿಡ್ಜ್‌ಗಳನ್ನು ಹೊಂದಿರುತ್ತದೆ ಎನ್ನುವುದು ಹೆಚ್ಚು ಕಳವಳಕಾರಿಯಾಗಿದೆ. ಈ ಜ್ಯೂಸ್ ನಮ್ಮ ಹೊಟ್ಟೆಯನ್ನು ಅಥವಾ ಚರ್ಮದ ಮೂಲಕ ಶರೀರದಲ್ಲಿ ಸೇರಿದರೆ ವಿಷಕಾರಿಯಾಗುತ್ತದೆ. ಮಕ್ಕಳೇನಾದರೂ ಆಕಸ್ಮಿಕವಾಗಿ ಇಂತಹ ದ್ರವಗಳನ್ನು ಸೇವಿಸಿದರೆ ಅದು ಮಾರಣಾಂತಿಕವಾಗಬಹುದು.

ಇ-ಸಿಗರೇಟ್ ಪಾಪ್‌ಕಾರ್ನ್‌ಗಳಿಗೆ ಹೆಚ್ಚಿನ ರುಚಿಯನ್ನು ನೀಡಲು ಬಳಸುವ ಡೈಎಸಿಟಲ್ ಎಂಬ ಸ್ವಾದಕಾರಕ ರಾಸಾಯನಿಕವನ್ನು ಒಳಗೊಂಡಿರುತ್ತದೆ. ನೇರವಾಗಿ ತಿಂದರೆ ಯಾವುದೇ ಹಾನಿಯನ್ನುಂಟು ಮಾಡದ ಡೈಎಸಿಟಲ್ ಉಸಿರಾಟದ ಮೂಲಕ ಶ್ವಾಸಕೋಶವನ್ನು ಸೇರಿದರೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ. ಅದರ ಹೊಗೆಯು ಬ್ರಾಂಕಿಯೊಲಿಟಿಸ್ ಸಮಸ್ಯೆಗೆ ಕಾರಣವಾಗುತ್ತದೆ. ಈ ಸ್ಥಿತಿಯನ್ನು ‘ಪಾಪಕಾರ್ನ್ ಲಂಗ್ಸ್’ ಎಂದು ಕರೆಯುತ್ತಾರೆ ಮತ್ತು ಇದು ಶ್ವಾಸನಾಳವನ್ನು ಕಿರಿದಾಗಿಸುತ್ತದೆ. ಕೆಮ್ಮು, ಉಬ್ಬಸ ಮತ್ತು ಉಸಿರಾಟಕ್ಕೆ ತೊಂದರೆ ಈ ಸಮಸ್ಯೆಯ ಲಕ್ಷಣಗಳಲ್ಲಿ ಸೇರಿವೆ. ಆದರೆ ಅತ್ಯಂತ ಕಳವಳಕಾರಿ ವಿಷಯವೆಂದರೆ ಶ್ವಾಸಕೋಶಗಳು ಡೈಎಸಿಟಿಲ್‌ನ ಹೊಗೆಯಿಂದ ಒಮ್ಮೆ ಹಾನಿಗೀಡಾದರೆ ಅದನ್ನು ಸರಿಪಡಿಸಲಾಗುವುದಿಲ್ಲ ಮತ್ತು ಹಾನಿಯು ಶಾಶ್ವತವಾಗಿರುತ್ತದೆ.

ಇ-ಲಿಕ್ವಿಡ್ ಅಥವಾ ದ್ರವರೂಪದ ನಿಕೋಟಿನ್ ಹೀಟಿಂಗ್ ಕಾಯ್ಲಿನ ಮೂಲಕ ಬಿಸಿಯಾದಾಗ ಫಾರ್ಮಾಲ್ಡಿಹೈಡ್ ಉಪ ಉತ್ಪನ್ನವಾಗಿ ಹೊಮ್ಮುತ್ತದೆ. ಇ-ಲಿಕ್ವಿಡ್‌ಗಳು ಪ್ರೊಪಿಲೀನ್ ಗ್ಲೈಕಾಲ್ ಸಂಯುಕ್ತಗಳನ್ನೊಳಗೊಂಡಿದ್ದು, ಅವು ಹೀಟಿಂಗ್ ಕಾಯ್ಲೊನ ಸಂಪರ್ಕಕ್ಕೆ ಬಂದಾಗ ಫಾರ್ಮಾಲ್ಡಿಹೈಡ್ ಮತ್ತು ಕಾರ್ಬೊಕ್ಸಿಲ್ ಅಲ್ಡಿಹೈಡ್ ಗುಂಪಿನ ಇತರ ಘಟಕಗಳು ಉತ್ಪತ್ತಿಯಾಗುತ್ತವೆ. ಫಾರ್ಮಾಲ್ಡಿಹೈಡ್ ಕ್ಯಾನ್ಸರ್‌ಕಾರಕವಾಗಿದ್ದು ಸಣ್ಣ ಪ್ರಮಾಣದಲ್ಲಿ ಕೂಡ ನಮ್ಮ ಶರೀರದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ.

ಇ-ಸಿಗರೇಟ್ ಸೇವನೆಯ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದು ದಟ್ಟ ಹೊಗೆಯನ್ನು ಹೊರಸೂಸುವಂತೆ ಮಾಡಲು ಹೊಸ ತಾಂತ್ರಿಕತೆಗಳನ್ನು ಬಳಸಲಾಗುತ್ತಿದೆ. ದ್ರವಗಳನ್ನು ಅತ್ಯಂತ ಹೆಚ್ಚು ಉಷ್ಣತೆಯಲ್ಲಿ ಕಾಯಿಸುವ ಮೂಲಕ ಸಾಂಪ್ರದಾಯಿಕ ಸಿಗರೇಟ್‌ನಂತೆ ದಟ್ಟ ಹೊಗೆ ಬರುವಂತೆ ಮಾಡಲಾಗುತ್ತಿದೆ. ಇದರಿಂದಾಗಿ ಪ್ರಬಲ ಫಾರ್ಮಾಲ್ಡಿಹೈಡ್ ಉತ್ಪಾದನೆಯಾಗುತ್ತದೆ ಮತ್ತು ಅದು ಹೊಗೆಯನ್ನು ಹೆಚ್ಚು ವಿಷಯುಕ್ತವಾಗಿಸುತ್ತದೆ.

ಇ-ಸಿಗರೇಟ್‌ನ ಅತ್ಯಂತ ದೊಡ್ಡ ವಿಪರ್ಯಾಸವೆಂದರೆ ಧೂಮ್ರಪಾನದ ಚಟದಿಂದ ಮುಕ್ತಿ ನೀಡಲು ಅದನ್ನು ಪರಿಚಯಿಸಲಾಗಿತ್ತಾದರೂ ಹೆಚ್ಚಿನ ಪ್ರಕರಣಗಳಲ್ಲಿ ಅದು ವ್ಯಕ್ತಿಯನ್ನು ತಂಬಾಕಿನ ದಾಸನನ್ನಾಗಿಸಿದೆ. ಇ-ಸಿಗರೇಟ್ ಬಳಸುವ ಹದಿಹರೆಯದವರಲ್ಲಿ ತಂಬಾಕಿನ ಚಟ ಉಂಟಾಗುವ ಸಾಧ್ಯತೆ ನಾಲ್ಕು ಪಟ್ಟು ಹೆಚ್ಚಿದೆ ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ಬೆಳಕಿಗೆ ತಂದಿದೆ.

ಇ-ಸಿಗರೇಟ್‌ಗಳ ಮಾರಾಟದ ಮೇಲೆ ಯಾವುದೇ ನಿಯಂತ್ರಣವಿಲ್ಲ ಮತ್ತು ಅದಕ್ಕಾಗಿ ನಿಗದಿತ ಮಾರ್ಗಸೂಚಿಯೂ ಇಲ್ಲ. ಹೀಗಾಗಿ ಯಾವುದೇ ಎಚ್ಚರಿಕೆ ಅಥವಾ ವಯೋಮಿತಿಯ ನಿರ್ಬಂಧವಿಲ್ಲದೆ ಇ-ಸಿಗರೇಟ್‌ಗಳು ಸುಲಭವಾಗಿ ಲಭ್ಯವಾಗುತ್ತಿವೆ. ಇದು ಇ-ಸಿಗರೇಟ್‌ನ್ನು ಸಾಂಪ್ರದಾಯಿಕ ಸಿಗರೇಟ್‌ಗಿಂತ ಹೆಚ್ಚು ಅಪಾಯಕಾರಿ ಯನ್ನಾಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News