ಹಿರಿಯಜ್ಜ ‘ಪಾಪು’ಗೆ ಈಗ ಬಸವ ಪ್ರಶಸ್ತಿಯ ಕೋಡು

Update: 2017-12-10 10:53 GMT

ಕಟಿಬದ್ಧರಾಗಿ ನಾಡುನುಡಿಯ ಸೇವೆಯನ್ನೇ ತಮ್ಮ ಬದುಕಿನ ಕಾಯಕವನ್ನಾಗಿಸಿಕೊಂಡ ಪಾಟೀಲಪುಟ್ಟಪ್ಪ ಅವರನ್ನು ನಾಡು ಟಿಎಸ್ಸಾರ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಹೀಗೆ ಹಲವಾರು ಸಮ್ಮಾನಗಳಿಂದ ಕೊಂಡಾಡಿದೆ. ‘ಪ್ರಪಂಚದ ಪಾಪು’ ಅಭಿನಂದನಾ ಗ್ರಂಥ-ಶಿಷ್ಯರು, ಅಭಿಮಾನಿಗಳು ಅರ್ಪಿಸಿರುವ ಬಾಗಿನ. ಕರ್ನಾಟಕ ಮತ್ತು ಕನ್ನಡಿಗರ ಬದುಕಿನ ಸುಧಾರಣೆಯನ್ನು ಗುರಿಯಾಗಿಸಿಕೊಂಡ ಕರ್ಮಯೋಗಿ ಪಾಟೀಲ ಪುಟ್ಟಪ್ಪನವರಿಗೆ ಈಗ, ಈ ಇಳಿವಯಸ್ಸಿಲ್ಲಿ ಸಂದಿರುವ 2017ರ ಬಸವ ರಾಷ್ಟ್ರೀಯ ಪ್ರಶಸ್ತಿ ‘ಪಾತ್ರರಿಗೆ ಸಂದಿರುವ ನಾಡಿನ ಆಭಾರಮನ್ನಣೆ ಎಂದರೆ ಉತ್ಪ್ರೇಕ್ಷೆಯಾಗದು.

ಸಮಾಜ ಸುಧಾರಣೆ, ಸಾಮಾಜಿಕ ಬದಲಾವಣೆ ಮತ್ತು ಧಾರ್ಮಿಕ ಸಾಮರಸ್ಯ ಸಾಧಿಸುವ ನಿಟ್ಟಿನಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಕಾರ್ನಾಟಕ ಸರಕಾರ ನೀಡುವ ‘ಬಸವ ಪ್ರಶಸ್ತಿ’ ರಾಷ್ಟ್ರೀಯ ಪುರಸ್ಕಾರಕ್ಕೆ ಈ ವರ್ಷ ಭಾಜನರಾಗಿರುವ ಪಾಟೀಲ ಪುಟ್ಟಪ್ಪನವರಿಗೆ ಹೊಸ ವರ್ಷದಲ್ಲಿ ಬೆಳಗಾದರೆ ತೊಂಬತ್ತಾರರ ಪ್ರಾಯ. ಪತ್ರಿಕಾ ವ್ಯವಸಾಯ ಮತ್ತು ಕರ್ನಾಟಕ/ಕನ್ನಡ ಪರ ಹೋರಾಟಗಳಿಗೆ ಇಡೀ ಜೀವಮಾನವನ್ನು ಮುಡುಪಾಗಿಟ್ಟ ಪಾಟೀಲ ಪುಟ್ಟಪ್ಪನವರು ಹೊಸ ತಲೆಮಾರಿನ ಪತ್ರಕರ್ತರಿಗೆ/ ಕನ್ನಡ ಹೋರಾಟಗಾರರಿಗೆ ಹಿರಿಯಜ್ಜ. ಎಂದೇ ಅವರು ಇಂದಿಗೂ ಕರ್ನಾಟಕದ ಏಕತೆ ಹಾಗೂ ಕನ್ನಡ-ಕನ್ನಡಿಗರ ರಕ್ಷಣೆ ಕುರಿತು ದನಿ ಎತ್ತಿದರೆ ಅದು ಕರ್ನಾಟಕದ ಉದ್ದಗಲ ಅನುರಣಿಸುತ್ತದೆ.ಕನ್ನಡಿಗರು ಈ ಮಾಗಿದ ಕರಗೆ ಸ್ಪಂದಿಸುತ್ತಾರೆ. ಅದು ‘ಪಾಪು’ವಿನ ‘ದೊಡ್ಡ’ ವರ್ಚಸ್ಸು. ಎಷ್ಟಾದರೂ ಅವರು ‘ಪ್ರಪಂಚ’ದ ಪಾಪು. ಸ್ವಾತಂತ್ರ್ಯೋತ್ತರ ಕನ್ನಡ ಪತ್ರಿಕೋದ್ಯಮದಲ್ಲಿ ಮುಂಚೂಣಿಯ ಹೆಸರಾದ ಪಾಟೀಲ ಪುಟ್ಟಪ್ಪನವರು ಧಾರವಾಡ ಜಿಲ್ಲೆಯ ಹಾವೇರಿಯ ಹಲಗೇರಿಯವರು. ಅವರದು ಮಧ್ಯಮ ವರ್ಗದ ಕುಟುಂಬ. ಅವರು ಹುಟ್ಟಿದ್ದು ಮಕರ ಸಂಕ್ರಾಂತಿಯಂದು-14-1-1922- ಉತ್ತ್ತರಾಯಣ ಪುಣ್ಯಕಾಲ. ‘‘ನನ್ನ ಹುಟ್ಟುಹಬ್ಬವನ್ನು ನಾಡೆಲ್ಲಾ ಆಚರಿಸುತ್ತದೆ; ಸಂಪ್ರದಾಯದ ಪ್ರಕಾರ ಸೂರ್ಯ ಅಂದು ಪಥ ಬದಲಾಯಿಸುತ್ತಾನೆ’’ ಎಂಬುದು ಪಾಟೀಲ ಪುಟ್ಟಪ್ಪನವರದೇ ಮಾತು. ತನ್ನ ಜನ್ಮದಿನಕ್ಕೆ ಅನ್ವರ್ಥವಾಗುವ ಹಾಗೆ ಜನಮನದ ಪಥ ಬದಲಾವಣೆ ತಮ್ಮ ಬದುಕಿನ ಹೆಗ್ಗುರಿಯಾಗಬೇಕು -ಇದು ಯೌವನದ ಬಿಸಿಯಲ್ಲಿ ಪಾಪು ಕೈಗೊಂಡ ಸಂಕಲ್ಪ. ಇದಕ್ಕೆ ಅವರು ಆರಿಸಿಕೊಂಡ ಮಾರ್ಗ ಪತ್ರಿಕಾ ವ್ಯವಸಾಯ. ವಿದ್ಯಾರ್ಥಿಯಾಗಿದ್ದಾಗಲೇ ‘ಪಾಪು’ ಕಂಡುಕೊಂಡ ಪಥ ಬದಲಾವಣೆಯ ನಿಟ್ಟಿನಲ್ಲಿ ಇಟ್ಟ ಮೊದಲ ಹೆಜ್ಜೆ ಸ್ವಾತಂತ್ರ್ಯ ಸಂಗ್ರಾಮ. ಸ್ವಾತಂತ್ರ್ಯ ಹೋರಾಟದಲ್ಲಿ ಸೆರೆಮನೆ ವಾಸದ ಮೊದಲ ಸವಿ ಕಂಡರು. ಯುವಕ ಪಾಟೀಲ ಪುಟ್ಟಪ್ಪನವರೊಳಗಣ ನವ ಪಥದ ತುಡಿತಕ್ಕೆ ಸ್ಪಷ್ಟ ದಿಕ್ಕು ತೋರಿದವರು, ‘ಉಕ್ಕಿನ ಮನುಷ್ಯ’ನೆಂದೇ ಇತಿಹಾಸ ಪ್ರಸಿದ್ಧರಾದ ಸರ್ದಾರ್ ವಲ್ಲಭಭಾಯಿ ಪಟೇಲರು. ‘ಪಾಪು’ ಬೆಳಗಾವಿಯಲ್ಲಿ ವಕೀಲಿ ಪರೀಕ್ಷೆಗೆ ಓದುತ್ತಿದ್ದಾಗ ‘ಉಕ್ಕಿನ ಮನುಷ್ಯ’ನ ಬಗ್ಗೆ ಬರೆದ ಲೇಖನ ಸರ್ದಾರರ ಗಮನಕ್ಕೆ ಬಂದು, ಅದನ್ನು ಓದಿ ಮೆಚ್ಚಿಕೊಂಡ ಅವರು ‘ನೀವು ಪತ್ರಕರ್ತರಾಗಿ’ ಎಂದರಂತೆ. ಜೊತೆಗೆ ವಿದೇಶದಲ್ಲಿ ಪತ್ರಿಕೋದ್ಯಮ ಅಧ್ಯಯನಕ್ಕೆ ನೆರವಿನ ಹಸ್ತವನ್ನೂ ಚಾಚಿದರಂತೆ. ಬೆಳಗಾವಿಯಲ್ಲಿ ವಕೀಲಿ ಪರೀಕ್ಷೆ ಮುಗಿಸಿ ಕೊಂಚಕಾಲ ಮುಂಬೈಯಲ್ಲಿ ವಕೀಲಿ ವೃತ್ತಿ ನಡೆಸಿದರು. ವೃತ್ತಿಯ ಮಧ್ಯೆಯೇ, ‘ಬಾಂಬೆ ಕ್ರಾನಿಕಲ್’, ‘ಫ್ರೀ ಪ್ರೆಸ್’ ಪತ್ರಿಕೆಗಳಿಗೆ ಬರೆದು ಲೇಖನ ವ್ಯವಸಾಯದಲ್ಲಿ ಕೈಪಳಗಿಸಿಕೊಂಡರು. ವಕೀಲಿ ವೃತ್ತಿ ತೊರದು ಸರ್ದಾರ್ ಪಟೇಲರ ಹಿತನುಡಿಯಂತೆ ಅಮೆರಿಕಕ್ಕೆ ಹೋಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿ ಪತ್ರಿಕೋದ್ಯಮದಲ್ಲಿ ಉನ್ನತ ಶಿಕ್ಷಣ ಗಳಿಸಿ ತಾಯ್ನಿಡಿಗೆ ವಾಪಸಾದರು- ತಲೆತುಂಬ ತುಳಿಯ ಬೇಕಾದ ಹೊಸಹಾದಿಯ ಕನಸುಗಳನ್ನು ತುಂಬಿಕೊಂಡು.

ಅದೇ ವೇಳೆಗೆ ಅವರ ಗೆಳೆಯ ಕೆ.ಎಫ್.ಪಾಟೀಲರು ಹುಬ್ಬಳ್ಳಿಯಿಂದ ಕನ್ನಡ ದಿನ ಪತ್ರಿಕೆಯೊಂದನ್ನು ತರುವ ಉಮೇದಿನಲ್ಲಿದ್ದರು. ಹೀಗೆ ‘ವಿಶಾಲ ಕರ್ನಾಟಕ’ ಜನ್ಮ ತಾಳಿತು, ಪಾಪು ಸಂಪಾದಕತ್ವದಲ್ಲಿ. ಮುಂದೆ ಸ್ವಂತ ಪತ್ರಿಕೆ ‘ವಿಶ್ವ ವಾಣಿ’ ದಿನಪತ್ರಿಕೆ ಆರಂಭಿಸಿದರು. ಅವುಗಳ ಬೆನ್ನಿಗೇ ಬಂತು, ‘ಪ್ರಪಂಚ’, ‘ಸಂಗಮ’. ‘ವಿಶ್ವ ವಾಣಿ’ ಸುದ್ದಿಗಳಿಗೆ ಮೀಸಲಾದರೆ, ‘ಪ್ರಪಂಚ’ ಆ ಕಾಲಘಟ್ಟದ ಇತರ ಸಾಪ್ತಾಹಿಕಗಳಂತೆ ಕಥಾಸಾಹಿತ್ಯ ಪ್ರಧಾನವಾಗಲಿಲ್ಲ. ಕಥೆ ಇದ್ದರೂ ಅದು ಜಗತ್ತಿನ ಆಗುಹೋಗುಗಳ ಕಥಾನಕವೇ. ಜಗತ್ತಿನ ಎಲ್ಲ ಕ್ಷೇತ್ರಗಳ ಎಲ್ಲ ಬಗೆಯ ಸುದ್ದಿ, ಮಾಹಿತಿಪೂರ್ಣ ಲೇಖನಗಳು, ಬೋಧಪ್ರದವಾದ ಪ್ರಾಪಂಚಿಕ ವಿದ್ಯಮಾನಗಳು ‘ಪ್ರಪಂಚ’ದ ವೈಶಿಷ್ಟ್ಯವಾಯಿತು. ಹೀಗೆ ಪಾಪು ‘ಪ್ರಪಂಚ’ವನ್ನು ಲೋಕದ ವಿದ್ಯಮಾನಗಳ ಬೆಳಕಿಂಡಿಯಾಗಿಸಿದರು. ‘ಸಂಗಮ’ ಸಾಹಿತ್ಯ, ಕಲೆಗಳೂ ಸೇರಿದಂತೆ ಹಲವು ವಿಚಾರಗಳ ಸಂಗಮವಾಗಿ ಮೀಸಳಭಾಜಿ ಪ್ರಿಯರಿಗೆ ಇಷ್ಟವಾದರೂ ದೀರ್ಘಾಯುಷಿಯಾಗಲಿಲ್ಲ.

ಪತ್ರಿಕೋದ್ಯಮದಲ್ಲಿ ಪಾಟೀಲ ಪುಟ್ಟಪ್ಪನವರದು ಏಕವ್ಯಕ್ತಿ ಸಾಧನೆ. ಅವರು ಪತ್ರಿಕೆ ಪ್ರಾರಂಭಿಸಿದಾಗ ಅವರೇ ಸೇವಕ, ಅವರೇ ಧಣಿ ಎನ್ನುವಂಥ ಪರಿಸ್ಥಿತಿ. ಅವರಲ್ಲಿದ್ದ ದೊಡ್ಡ ಬಂಡವಾಳ ನಿರ್ಭೀತ ಬರವಣಿಗೆ. ತಮಗೆ ಸರಿ ಎನ್ನಿಸಿದ್ದನ್ನು ಹೇಳುವಾಗ ಅವರು ಯಾರ ಮುಲಾಜನ್ನೂ ನೋಡುತ್ತಿರಲಿಲ್ಲ. ಪತ್ರಿಕಾ ವ್ಯವಸಾಯ ಆರಂಭಿಸಿದ ಬಿಸಿಪ್ರಾಯದಲ್ಲೂ ಈಗಿನ ಪಕ್ವಪ್ರಬುದ್ಧ ಮನಸ್ಥಿತಿಯಲ್ಲೂ ಅದೇ ಜಾಯಮಾನ. ತಮಗೆ ಸರಿಯೆನಿಸಿದ್ದನ್ನು ಹೇಳುವಾಗ ಅದೇ ನಿಷ್ಠುರ ಮನೋಭಾವ.

ಭಾಷೆಯೂ ಅಷ್ಟೇ, ಚಬುಕಿನದು.

ಪಾಟೀಲ ಪುಟ್ಟಪ್ಪ ನಿರ್ಭೀತ ಪತ್ರಕರ್ತರಾಗಿ ಪತ್ರಿಕಾ ಧರ್ಮದ ಮೌಲ್ಯಗಳ ಅನುಷ್ಠಾನದಲ್ಲಿ ವ್ಯವಸ್ಥೆಯೊಂದಿಗೆ ಎಂಥ ಸಂದರ್ಭದಲ್ಲೂ ರಾಜಿಮಾಡಿಕೊಂಡವರಲ್ಲ. ಇದಕ್ಕೆ ಒಂದು ನಿದರ್ಶನ ತುರ್ತುಪರಿಸ್ಥಿತಿ. ಇಂದಿರಾ ಗಾಂಧಿಯವರು ಬೆಳಗಾಗುವುದರಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿ ಜನರ ಸ್ವಾತಂತ್ರ್ಯ ಹರಣ ಮಾಡಿದಾಗ ಕನ್ನಡವೂ ಸೇರಿದಂತೆ ದೇಶದ ಕೆಲವು ಪ್ರಮುಖ ಪತ್ರಿಕೆಗಳು ಸಂಪಾದಕೀಯ ಅಂಕಣವನ್ನು ಖಾಲಿ ಬಿಟ್ಟು ಪ್ರತಿಭಟನೆ ವ್ಯಕ್ತಪಡಿಸಿದವು. ಆದರೆ ‘ಪಾಪು’ ‘ವಿಶ್ವವಾಣಿ’ಯಲ್ಲಿ ತಮ್ಮದೇ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದು ಹೀಗೆ:

‘‘ಧರ್ಮವನ್ನು ರಕ್ಷಿಸುವವರನ್ನು ಧರ್ಮ ರಕ್ಷಿಸುವಂತೆ, ಪತ್ರಿಕಾ ಸ್ವಾತಂತ್ರ್ಯ ರಕ್ಷಿಸುವವರ ಸ್ವಾತಂತ್ರ್ಯವನ್ನು ಪತ್ರಿಕೆ ರಕ್ಷಿಸುತ್ತದೆ. ಎಲ್ಲ ಸ್ವಾತಂತ್ರ್ಯವನ್ನೂ ರಕ್ಷಿಸುವುದೆನ್ನುವ ಕಾರಣದಿಂದ ಪತ್ರಿಕಾ ಸ್ವಾತಂತ್ರ್ಯ ಹೆಚ್ಚಿನದು. ಸ್ವತಂತ್ರ ಜನರು ಅದನ್ನೆಂದಿಗೂ ಬಿಟ್ಟುಕೊಡಲಾರರು.....

ಬ್ರಿಟಿಷ್ ಸರಕಾರ ಇದ್ದಾಗ ಭಾರತದ ಯಾವ ಸ್ವಾಭಿಮಾನಿ ಪತ್ರಿಕೆಯೂ ತನ್ನ ಮೇಲೆ ಗದೆ ಬಂದಾಗ, ಅದನ್ನು ಸುಮ್ಮನೆ ಸಹಿಸಿಕೊಳ್ಳಲಿಲ್ಲ. ಆದರೆ ಕಾಲ ಈಗ ಬದಲಾಗಿದೆ. ಸ್ವಾತಂತ್ರ್ಯಕ್ಕೋಸ್ಕರ ಹೊಡೆದಾಡಿದ ಜನರನ್ನು, ಸ್ವಾತಂತ್ರ್ಯ ರಕ್ಷಣೆಯ ಹೆಸರಿನಲ್ಲಿ ಬಂಧನದಲ್ಲಿರಿಸಲಾಗಿದೆ. ಇದರ ಪರಿಣಾಮ ಏನಾದೀತೆಂದು ಕಾಲವೇ ಹೇಳಬೇಕು’’

-ಇದು ಪಾಟೀಲ ಪುಟ್ಟಪ್ಪನವರ ಪ್ರತಿಭಟನೆಯ ಶೈಲಿ. ತುರ್ತು ಪರಿಸ್ಥಿತಿಯನ್ನು, ಅದಕ್ಕೆ ಕಾರಣರಾದವರನ್ನು ನೇರವಾಗಿ ಟೀಕಿಸಲಿಲ್ಲ. ಆದರೆ ತಮ್ಮದೇ ಧಾಟಿಯಲ್ಲಿ ದೇಶದ ವಿರೋಧವನ್ನು ದಿಲ್ಲಿ ಆಡಳಿತಕ್ಕೆ ಮುಟ್ಟಿಸಿದ್ದರು. ಬಂಧನಕ್ಕೊಳಗಾಗದಂತೆ ಸಿಡಿಮದ್ದನ್ನು ಅರೆಯುವುದು ‘ಪಾಪು’ ಆಗ ಅನುಸರಿಸಿದ ಮಾರ್ಗ.

ಪತ್ರಕರ್ತರಾಗಿ, ನಾಡು-ನುಡಿಯ ಕ್ರಿಯಾವಾದಿಯಾಗಿ ಕರ್ನಾಟಕ ಏಕೀಕರಣ ಹೋರಾಟ ಮತ್ತು ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ‘ಪಾಪು’ ಮಹತ್ವಪೂರ್ಣವಾದ ಕೆಲಸಗಳನ್ನು ಮಾಡಿದವರು. 1944ರಷ್ಟು ಹಿಂದೆಯೇ ಲಾ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ತೊಡಗಿಸಿಕೊಂಡ ಅವರು ಏಕೀಕರಣ ಹೋರಾಟದ ಒಳಹೊರಗುಗಳನ್ನು ಚೆನ್ನಾಗಿ ಬಲ್ಲವರು. ಪತ್ರಕರ್ತರಾಗಿ ಭಾಷಾವಾರು ಪ್ರಾಂತ ರಚನೆಗೆ ಆಗ್ರಹಪಡಿಸಿ ಅದರಗುಂಚಿ ಶಂಕರಗೌಡ ಪಾಟೀಲರು ಕೈಗೊಂಡ ನಿರಶನ ಸತ್ಯಾಗ್ರಹ, ಅದಕ್ಕೆ ದೊರೆತ ಜನ ಬೆಂಬಲ, ಅದು ತಾಳಿದ ಹಿಂಸಾಸ್ವರೂಪ ಇವೆಲ್ಲವನ್ನೂ ಮೊದಲು ಲೋಕಕ್ಕೆ ವರದಿಮಾಡಿದವರು ‘ಪಾಪು’ (ಆ ಹೊತ್ತು ನಾವೇ ಪಿ.ಟಿ.ಐ.ಕಚೇರಿಯನ್ನು ಆಕ್ರಮಿಸಿ ಎಲ್ಲ ಕಡೆಗೂ ಸುದ್ದಿ ಕಳಿಸಿದೆವು). ಶಂಕರಗೌಡರ ಉಪವಾಸದ ಕೊನೆಯ ದಿನ ನಡೆದ ಗಲಾಟೆಯನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತು. ಇದರಿಂದಾಗಿ ಭಾಷಾವಾರು ಪ್ರಾಂತ ರಚನೆ ಬೇಗ ಆಯಿತು ಎನ್ನುತ್ತಾರೆ ‘ಪಾಪು’. ಏಕೀಕರಣದ ನಂತರವೂ ‘ಪಾಪು’ ಕೈಕಟ್ಟಿ ಕೂರಲಿಲ್ಲ. ಕನ್ನಡ-ಕನ್ನಡಿಗರು- ಕರ್ನಾಟಕಕ್ಕೆ ತೊಂದರೆ ಉದ್ಭವಿಸಿದಾಗಲೆಲ್ಲ ನ್ಯಾಯಕ್ಕಾಗಿ ನಡೆದ ಹೋರಾಟದಲ್ಲಿ ಮುಂದೆ ನಿಂತು ದನಿ ಎತ್ತುತ್ತಿರುವವರು. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದಾಗ ‘ಪಾಪು’ ಕನ್ನಡವನ್ನು ಆಡಳಿತ ಭಾಷೆಯಾಗಿಸುವ ನಿಟ್ಟಿನಲ್ಲಿ ಹಾಗೂ ಗಡಿಯಲ್ಲಿನ ಕನ್ನಡ ಪ್ರದೇಶಗಳ ಅಭಿವೃದ್ಧಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದವರು. ಕನ್ನಡದ ಬಗ್ಗೆ ಉಪೇಕ್ಷೆ ತಾಳಿದ್ದ ಅಧಿಕಾರಿಗಳಿಗೆಲ್ಲ ಸಿಂಹಸ್ವಪ್ನವಾಗಿದ್ದವರು.

ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ‘ಪಾಪು’ ಅವರ ಕಾರ್ಯಶೈಲಿ ಮತ್ತು ದಕ್ಷತೆ ಬಗ್ಗೆ ಮರಾಠಿ ಪತ್ರಿಕೆ ‘ಲೋಕಸತ್ತಾ’ ತನ್ನ ಸಂಪಾದಕೀಯದಲ್ಲಿ ಹೀಗೆ ಹೇಳುತ್ತದೆ:

‘‘ಪುಟ್ಟಪ್ಪನವರ ಕಾರ್ಯಪದ್ಧತಿಯು ವಿಲಕ್ಷಣವಾದುದು. ಅವರು ಯಾವ ಕಛೇರಿಗೆ ಯಾವ ದಿನ ಯಾವ ಹೊತ್ತಿನಲ್ಲಿ ಆಕಸ್ಮಿಕ ಭೇಟಿ ಕೊಡುತ್ತಾರೆಂಬುದೇ ಗೊತ್ತಾಗಿರಲಿಲ್ಲ. ಯಾವುದಾದರೂ ಕಾರ್ಯಾಲಯದಲ್ಲಿ ಯಾರಾದರೊಬ್ಬ ಅಧಿಕಾರಿ ಕನ್ನಡದ ಬಗ್ಗೆೆ ಟೀಕೆಟಿಪ್ಪಣಿ ಮಾಡುವುದು ಅವರ ಕಣ್ಣಿಗೆ ಬಿತ್ತೋ ಅವನ ಕಥೆ ಮುಗಿಯಿತು. ಅವರು ಇಂಗ್ಲಿಷ್ ಟೈಪ್‌ರೈಟರುಗಳನ್ನು ತೆಗೆಸಿಬಿಡುತ್ತಿದ್ದರಲ್ಲದೆ ಕನ್ನಡ ಟೈಪ್‌ರೈಟರುಗಳನ್ನು ಏಕೆ ಬಳಸುತ್ತಿಲ್ಲ ಎಂದು ಅಧಿಕಾರಿಗಳನ್ನು ಅಧಿಕಾರವಾಣಿಯಿಂದ ಕೇಳುತ್ತಿದ್ದರು. ಪಾಟೀಲ ಪುಟ್ಟಪ್ಪ ಎಂದರೆ ಅಧಿಕಾರಿಗಳು ನಡುಗುತ್ತಿದ್ದರು. ಹೀಗಾಗಿ ಆ ಕೂಡಲೇ ಕಾರ್ಯಾಲಯದ ಕಾರ್ಯಕ್ರಮದಲ್ಲಿ ಕನ್ನಡ ಅತೀ ಸುಲಭವಾಗಿ ನಡೆಯಲಾರಂಭಿಸಿತು......’’(ಆಗಸ್ಟ್ 6,1989) -ಹೀಗೆ, ಕಾವಲು ಸಮಿತಿ ಅಧ್ಯಕ್ಷರಾಗಿ ‘ಪಾಪು’ ಅವರ ಕನ್ನಡ ಪ್ರೇಮ ಮತ್ತು ಕಾರ್ಯವೈಖರಿಯನ್ನು ಮೆಚ್ಚಿಕೊಂಡಿರುವ ‘ಲೋಕಸತ್ತಾ’, ‘‘ನೆರೆಯ ಕರ್ನಾಟಕ ರಾಜ್ಯದಲ್ಲಿ ಒಬ್ಬ ಪಾಟೀಲರು ತಮ್ಮ ಭಾಷೆಗಾಗಿ, ತಮ್ಮ ಜನಕ್ಕಾಗಿ ಎಷ್ಟು ಚಡಪಡಿಸುತ್ತ್ತಿದ್ದಾರೆಂಬುದು ಜಗಜ್ಜಾಹೀರಾದ ಮೇಲೂ ಸಹ ನಮ್ಮ ರಾಜ್ಯದಲ್ಲಿನ ಪಾಟೀಲರು ಕೆಲಮಟ್ಟಿಗಾದರೂ ಬದಲಾಗಬಾರದೆ’’ ಎಂದು ಪ್ರಶ್ನಿಸುವ ಮೂಲಕ ಮರಾಠಿಗರನ್ನು ತಿವಿಯುತ್ತಲೇ ಮರಾಠಿಯ ಅಂದಿನ ಸ್ಥಾನಮಾನದ ಬಗ್ಗೆ ಆತಂಕವನ್ನು ಸೂಚಿಸುತ್ತದೆ. ಇನ್ನು ಬೆಳಗಾವಿ ಮತ್ತು ಗಡಿನಾಡ ಕನ್ನಡ ಪ್ರದೇಶಗಳ ಬಗ್ಗೆ ಕರ್ನಾಟಕ ಸರಕಾರ ಮಾಡುತ್ತಿರುವುದು ಸಾಲದೆಂಬುದು ಅಂದಿಗೂ ಇಂದಿಗೂ ಪಾಪು ಅವರ ಕೊರಗು. ‘‘ನಮ್ಮ ರಾಜಕಾರಣಿಗಳು ಕನ್ನಡದ ಬಗ್ಗೆ ಏನು ಮಾಡಬೇಕು ಅಂತ ಯಾರನ್ನೂ ಕೇಳೋದಿಲ್ಲ. ಬೆಳಗಾವಿಯಲ್ಲಿ ಕನ್ನಡಿಗರ ಸಂಖ್ಯೆಯನ್ನು ಹೆಚ್ಚಿಸಬೇಕು ಅನ್ನೋದು ಮುಖ್ಯ. ಆ ಬಗ್ಗೆ ಯಾರೂ ಯೋಚಿಸ್ತಾ ಇಲ್ಲ’’

      ಕ್ರಿಯಾವಾದಿ ಹೋರಾಟಗಾರರಾಗಿ, ಪತ್ರಕರ್ತರಾಗಿ ಇಪ್ಪತ್ತು-ಇಪ್ಪತ್ತೊಂದನೇ ಶತಮಾನದ ಕನಡದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ‘ಪಾಪು’ ಸಾಹಿತಿಯಾಗಿಯೂ ಕನ್ನಡ ಸಾಹಿತ್ಯದಲ್ಲಿ ತಮ್ಮ ಛಾಪನ್ನು ಮೂಡಿಸಿರುವುದುಂಟು. ದೇಶಸುತ್ತಿ ಕೋಶ ಓದಿರುವ ‘ಪಾಪು’ ಇಪ್ಪತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿರುವ ‘ಪಾಪು ಪ್ರಪಂಚ’ ಆಬಾಲವೃದ್ಧರಾದಿಯಾಗಿ ಎಲ್ಲರ ಗಮನ ಸೆಳೆದಿರುವ ಕೃತಿ. ಕಲೆ, ಸಂಸ್ಕೃತಿ, ಇತಿಹಾಸ ಅವರ ಗ್ರಂಥಗಳ ವಸ್ತುವಿಚಾರಗಳು. ವಿಚಾರ ಮಂಡನೆಯಲ್ಲಿ ಸ್ಪಷ್ಟತೆ, ನಿಖರತೆಗಳು ಓತಪ್ರೋತ ಓದಿಸಿಕೊಂಡು ಹೋಗುವ ಸರಳ ಶೈಲಿ ಅವರ ಬರವಣಿಗೆಯ ಹೆಚ್ಚುಗಾರಿಕೆ. ನವಿರಾದ ವ್ಯಂಗ್ಯ-ವಿಡಂಬನೆಗಳ ಮೊನಚು ಅವರ ಬರವಣಿಗೆಯ ಓಘಕ್ಕೆ ಚುರುಕುತನವನ್ನು ತಂದುಕೊಟ್ಟಿರುವುದೂ ಉಂಟು. ನೆಲ-ಜಲದ ವಿಷಯ ಬಂದಾಗ ಅವರ ತರ್ಕವಿಚಾರಗಳಿಗೆ ಬಂಡಾಯದ ಸ್ಪರ್ಶವೂ ಆಗುತ್ತದೆ. ಕನ್ನಡ, ಕರ್ನಾಟಕದ ಹಿತಾಸಕ್ತಿಯ ಮಾತು ಬಂದಾಗ ಇಂದಿಗೂ ‘ಪಾಪು’ ಅವರದು ಗಂಡುಮೆಟ್ಟಿನ ನಾಡಿನ ಸಿಂಹ ಗರ್ಜನೆಯೇ.

ಕಟಿಬದ್ಧರಾಗಿ ನಾಡುನುಡಿಯ ಸೇವೆಯನ್ನೇ ತಮ್ಮ ಬದುಕಿನ ಕಾಯಕವನ್ನಾಗಿಸಿಕೊಂಡ ಪಾಟೀಲಪುಟ್ಟಪ್ಪ ಅವರನ್ನು ನಾಡು ಟಿಎಸ್ಸಾರ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಹೀಗೆ ಹಲವಾರು ಸಮ್ಮಾನಗಳಿಂದ ಕೊಂಡಾಡಿದೆ. ‘ಪ್ರಪಂಚದ ಪಾಪು’ ಅಭಿನಂದನಾ ಗ್ರಂಥ-ಶಿಷ್ಯರು, ಅಭಿಮಾನಿಗಳು ಅರ್ಪಿಸಿರುವ ಬಾಗಿನ. ಕರ್ನಾಟಕ ಮತ್ತು ಕನ್ನಡಿಗರ ಬದುಕಿನ ಸುಧಾರಣೆಯನ್ನು ಗುರಿಯಾಗಿಸಿಕೊಂಡ ಕರ್ಮಯೋಗಿ ಪಾಟೀಲ ಪುಟ್ಟಪ್ಪನವರಿಗೆ ಈಗ, ಈ ಇಳಿವಯಸ್ಸಿಲ್ಲಿ ಸಂದಿರುವ 2017ರ ಬಸವ ರಾಷ್ಟ್ರೀಯ ಪ್ರಶಸ್ತಿ ‘ಪಾತ’್ರರಿಗೆ ಸಂದಿರುವ ನಾಡಿನ ಆಭಾರಮನ್ನಣೆ ಎಂದರೆ ಉತ್ಪ್ರೇಕ್ಷೆಯಾಗದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News