ಎಚ್ಚರಿಕೆ.. ನೋವು ನಿವಾರಕಗಳು ಈ ಅಪಾಯವನ್ನು ಶೇ.95ರಷ್ಟು ಹೆಚ್ಚಿಸುತ್ತವೆ

Update: 2017-12-10 11:14 GMT

ಕೆಲವೊಮ್ಮೆ ತಲೆನೋವು, ಮೈಕೈ ನೋವು ತೀವ್ರವಾಗಿ ಕಾಡಿದಾಗ ನಾವು ಹಿಂದೆಮುಂದೆ ವಿಚಾರ ಮಾಡದೆ ನೋವು ನಿವಾರಕ ಮಾತ್ರೆಗಳನ್ನು ನುಂಗುತ್ತೇವೆ. ನೋವು ನಿವಾರಕ ಮಾತ್ರೆಗಳ ಅತಿಯಾದ ಸೇವನೆ ಮೂತ್ರಪಿಂಡಗಳಿಗೆ ಹಾನಿಯನ್ನುಂಟು ಮಾಡುತ್ತದೆ ಎನ್ನುವ ವಿಷಯ ಈಗ ಹೆಚ್ಚಿನವರಿಗೆ ಗೊತ್ತಿದೆ. ಇತ್ತೀಚಿನ ಅಧ್ಯಯನದಂತೆ ಅದು ಬೊಜ್ಜಿನ ಅಪಾಯ ಮತ್ತು ನಿದ್ರಾಹೀನತೆಯನ್ನೂ ಹೆಚ್ಚಿಸುತ್ತದೆ ಎನ್ನುವುದು ಬೆಳಕಿಗೆ ಬಂದಿದೆ.

ನೋವು ನಿವಾರಕಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ ಮತ್ತು ಅವುಗಳ ಬಳಕೆಯನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದು ಬ್ರಿಟನ್‌ನ ನ್ಯೂ ಕ್ಯಾಸಲ್ ವಿವಿಯ ಸಂಶೋಧಕರು ಅಭಿಪ್ರಾಯಿಸಿದ್ದಾರೆ.

ಕಳೆದೊಂದು ದಶಕದಲ್ಲಿ ವೈದ್ಯರು ನೋವಿಗೆ ಮತ್ತು ಬರಿಸುವ ಅಂಶವಿರುವ ಔಷಧಿಗಳು ಮತ್ತು ಉಪಶಾಮಕಗಳನ್ನು ಶಿಫಾರಸು ಮಾಡುವ ಪ್ರವೃತ್ತಿ ತೀವ್ರವಾಗಿ ಹೆಚ್ಚಿದೆ ಮತ್ತು ಇದು ಬೊಜ್ಜು ಮತ್ತು ನಿದ್ರಾಹೀನತೆಯ ಅಪಾಯವನ್ನು ಇಮ್ಮಡಿ ಗೊಳಿಸಿದೆ.

 ನಿದ್ರೆಮಾತ್ರೆಗಳ ಸೇವನೆಯು ಅದನ್ನೇ ಒಂದು ಚಟವಾಗಿಸುತ್ತದೆ ಎನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತು. ಆದರೆ ನಿದ್ರೆಮಾತ್ರೆಗಳನ್ನು ಸೇವಿಸುವವರ ಆರೋಗ್ಯ ತೀವ್ರವಾಗಿ ಹದಗೆಟ್ಟಿರುತ್ತದೆ ಎನ್ನುವುದನ್ನು ಈ ಅಧ್ಯಯನವು ತೋರಿಸಿದೆ. ಅವರಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಾಗಿರುತ್ತದೆ ಮತ್ತು ಸರಿಯಾಗಿ ನಿದ್ರೆ ಬರುವುದಿಲ್ಲ ಎಂದು ದೂರುತ್ತಿರುತ್ತಾರೆ ಎನ್ನುತ್ತಾರೆ ವರದಿಯ ಮುಖ್ಯಲೇಖಕಿ, ನ್ಯೂ ಕ್ಯಾಸಲ್ ವಿವಿಯ ರೀಸರ್ಚ್ ಅಸೋಸಿಯೇಟ್ ಸೋಫೀ ಕ್ಯಾಸಿಡಿ.

ಬ್ರಿಟನ್‌ನ 1,33,000 ಅಧಿಕ ಜನರನ್ನು ಗುರಿಯಾಗಿಟ್ಟುಕೊಂಡಿದ್ದ ಸಂಶೋಧನಾ ತಂಡವು ಚಯಾಪಚಯ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ನಡುವಿನ ಸಂಬಂಧವನ್ನು ಅಧ್ಯಯನಕ್ಕೊಳಪಡಿಸಿತ್ತು.

  ತಂಡವು ತೀವ್ರವಾದ, ಕ್ಯಾನ್ಸರೇತರ ನೋವು ಮತ್ತು ಹೃದಯ-ಚಯಾಪಚಯ ಕಾರಣಗಳಿಂದಾಗಿ ನೋವು ನಿವಾರಕಗಳು ಮತ್ತು ಔಷಧಿಗಳು ಹಾಗೂ ಕೇವಲ ಹೃದಯ-ಚಯಾಪಚಯ ಸಮಸ್ಯೆಗಳಿಗಾಗಿ ಔಷಧಿಗಳನ್ನು ಸೇವಿಸುವವರ ದೇಹತೂಕ, ಸೊಂಟದ ಸುತ್ತಳತೆ ಮತ್ತು ರಕ್ತದೊತ್ತಡವನ್ನು ಹೋಲಿಸಿತ್ತು. ಉಪಶಾಮಕಗಳು ಮತ್ತು ಹೃದಯ ಚಯಾಪಚಯ ಸಮಸ್ಯೆಗಳಿಗೆ ಔಷಧಿಗಳನ್ನು ಸೇವಿಸುವವರಲ್ಲಿ ಕೇವಲ ಹೃದಯ-ಚಯಾಪಚಯ ಸಮಸ್ಯೆಗಳಿಗಾಗಿ ಔಷಧಿಗಳನ್ನು ಸೇವಿಸುವವರಿಗಿಂತ ಬೊಜ್ಜಿನ ಅಪಾಯ ಶೇ.95ರಷ್ಟಿರುವುದು ಬೆಳಕಿಗೆ ಬಂದಿದೆ. ಅದೇ ರೀತಿ ಅವರಲ್ಲಿ ಸೊಂಟದ ಸುತ್ತಳತೆ ಹೆಚ್ಚುವ ಅಪಾಯ ಶೇ.82ರಷ್ಟು ಮತ್ತು ಅಧಿಕ ರಕ್ತದೊತ್ತಡದ ಅಪಾಯ ಶೇ.63ರಷ್ಟು ಅಧಿಕವಾಗಿತ್ತು.

ಹೀಗಾಗಿ ಹೃದ್ರೋಗ, ಮಧುಮೇಹ ಮತ್ತು ಮಿದುಳಿನ ಆಘಾತದ ಔಷಧಿಗಳೊಂದಿಗೆ ನೋವು ನಿವಾರಕಗಳನ್ನು ಸೇವಿಸುವವರು ಬೊಜ್ಜುದೇಹವನ್ನು ಹೊಂದುವ ಸಾಧ್ಯತೆ ಶೇ.95ರಷ್ಟು ಹೆಚ್ಚಿದೆ ಎನ್ನುತ್ತಾರೆ ಸಂಶೋಧಕರು.

ಉಪಶಾಮಕವಾಗಿ ಬಳಸಲಾಗುವ ಮತ್ತು ಬರಿಸುವ ಔಷಧಿಗಳಾದ ಓಪಿಯಡ್‌ಗಳು ಅದರ ಸೇವನೆಯನ್ನು ಚಟವಾಗಿಸುವುದರಿಂದ ಅವು ಅತ್ಯಂತ ಅಪಾಯಕಾರಿ ನೋವು ನಿವಾರಕಗಳಾಗಿವೆ ಎಂದು ಅಧ್ಯಯನವು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News