ಕೊರಿಯ ಪರ್ಯಾಯ ದ್ವೀಪದಲ್ಲಿ ಗಂಭೀರ ಪರಿಸ್ಥಿತಿ: ವಿಶ್ವಸಂಸ್ಥೆ ರಾಯಭಾರಿ ಎಚ್ಚರಿಕೆ

Update: 2017-12-10 17:15 GMT

ವಿಶ್ವಸಂಸ್ಥೆ, ಡಿ. 10: ಉತ್ತರ ಕೊರಿಯದೊಂದಿಗೆ ಸಂಘರ್ಷಕ್ಕೆ ಕಾರಣವಾಗಬಲ್ಲ ತಪ್ಪು ಲೆಕ್ಕಾಚಾರದ ಅಪಾಯ ನೆತ್ತಿಯ ಮೇಲೆ ಯಾವತ್ತೂ ತೂಗುತ್ತಿದೆ ಎಂದು ವಿಶ್ವಸಂಸ್ಥೆಯ ಹಿರಿಯ ರಾಯಭಾರಿಯೊಬ್ಬರು ಶನಿವಾರ ಎಚ್ಚರಿಸಿದ್ದಾರೆ ಹಾಗೂ ಸಂಧಾನದ ದ್ವಾರಗಳನ್ನು ತೆರೆದಿಡುವಂತೆ ಉತ್ತರ ಕೊರಿಯವನ್ನು ಒತ್ತಾಯಿಸಿದ್ದಾರೆ.

ಅಮೆರಿಕದ ಪ್ರಧಾನ ಭೂಭಾಗವನ್ನು ತಲುಪಬಲ್ಲ ಕ್ಷಿಪಣಿಯೊಂದರ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿರುವುದಾಗಿ ಉತ್ತರ ಕೊರಿಯ ಘೋಷಿಸಿದ ಒಂದು ವಾರದ ಅವಧಿಯಲ್ಲಿ ಆ ದೇಶಕ್ಕೆ ನಾಲ್ಕು ದಿನಗಳ ಭೇಟಿ ನೀಡಿದ ಬಳಿಕ ಜೆಫ್ರಿ ಫೆಲ್ಟ್‌ಮನ್ ಈ ಎಚ್ಚರಿಕೆ ನೀಡಿದ್ದಾರೆ.

2010ರ ಬಳಿಕ, ವಿಶ್ವಸಂಸ್ಥೆಯ ಉನ್ನತ ಮಟ್ಟದ ರಾಜತಾಂತ್ರಿಕರೊಬ್ಬರು ಉತ್ತರ ಕೊರಿಯಕ್ಕೆ ಭೇಟಿ ನೀಡಿರುವುದು ಇದೇ ಮೊದಲ ಭಾರಿಯಾಗಿದೆ.

ಫೆಲ್ಟ್‌ಮನ್ ಉತ್ತರ ಕೊರಿಯದ ವಿದೇಶ ಸಚಿವ ರಿ ಯೊಂಗ್-ಹೊ ಮತ್ತು ಉಪ ವಿದೇಶ ಸಚಿವ ಪಾಕ್ ಮಯಂಗ್-ಕುಕ್‌ರನ್ನು ಭೇಟಿಯಾದರು ಹಾಗೂ ‘‘ಈಗಿನ ಪರಿಸ್ಥಿತಿಯು ಜಗತ್ತಿಗೆ ಎದುರಾದ ಅತ್ಯಂತ ಗಂಭೀರ ಶಾಂತಿ ಮತ್ತು ಭದ್ರತಾ ಸವಾಲಾಗಿದೆ’’ ಎಂಬುದನ್ನು ಅವರು ಒಪ್ಪಿಕೊಂಡರು ಎಂದು ವಿಶ್ವಸಂಸ್ಥೆ ತಿಳಿಸಿದೆ.

‘‘ತಪ್ಪು ಲೆಕ್ಕಾಚಾರವನ್ನು ನಿವಾರಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಹಾಗೂ ಸಂಘರ್ಷದ ಅಪಾಯಗಳನ್ನು ತಗ್ಗಿಸಲು ದ್ವಾರಗಳನ್ನು ಮುಕ್ತವಾಗಿಡುವ ತುರ್ತು ಅಗತ್ಯವಿದೆ ಎಂಬುದಾಗಿ ಫೆಲ್ಟ್‌ಮನ್ ಅಭಿಪ್ರಾಯಪಟ್ಟಿದ್ದಾರೆ ಹಾಗೂ ಕೊರಿಯ ಪರ್ಯಾಯದ್ವೀಪದಲ್ಲಿ ನೆಲೆಸಿರುವ ಪರಿಸ್ಥಿತಿಗೆ ಶಾಂತಿಯುತ ಪರಿಹಾರವೊಂದನ್ನು ಕಂಡುಹಿಡಿಯುವುದಕ್ಕೆ ಅಂತಾರಾಷ್ಟ್ರೀಯ ಸಮುದಾಯ ಬದ್ಧವಾಗಿದೆ ಎಂಬುದನ್ನು ಅವರು ಪುನರುಚ್ಚರಿಸಿದ್ದಾರೆ’’ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News