ಬಾಂಗ್ಲಾ ಟೆಸ್ಟ್ ತಂಡಕ್ಕೆ ಶಾಕೀಬ್ ನಾಯಕ

Update: 2017-12-10 18:30 GMT

ಢಾಕಾ, ಡಿ.10: ಬಾಂಗ್ಲಾದೇಶ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿ ಆಲ್‌ರೌಂಡರ್ ಶಾಕೀಬ್ ಅಲ್ ಹಸನ್ ನೇಮಕಗೊಂಡಿದ್ದಾರೆ. ಶ್ರೀಲಂಕಾ ವಿರುದ್ಧ ಮುಂದಿನ ಜನವರಿಯಲ್ಲಿ ತವರಲ್ಲಿ ನಡೆಯಲಿರುವ ಎರಡು ಟೆಸ್ಟ್ ಗಳ ಸರಣಿಗೆ ನಾಯಕರಾಗಿ ಶಾಕೀಬ್ ತಂಡವನ್ನು ಮುನ್ನಡೆಸಲಿದ್ದಾರೆ. ಹಾಲಿ ನಾಯಕ ಮುಶ್ಫಿಕುರ್ರಹೀಮ್ ಅವರನ್ನು ತಂಡದ ನಾಯಕತ್ವದಿಂದ ಕೆಳಗಿಳಿಸಿ, ಶಾಕೀಬ್‌ಗೆ ನಾಯಕತ್ವದ ಜವಾಬ್ದಾರಿಯನ್ನು ಮತ್ತೆ ನೀಡಲಾಗಿದೆ.

ಮಹ್ಮುದುಲ್ಲಾ ತಂಡದ ಉಪನಾಯಕರಾಗಿ ನೇಮಕಗೊಂಡಿದ್ದಾರೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಝ್ಮುಲ್ ಹಸನ್ ಅವರು ಬಿಸಿಬಿ ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಚಾರ ತಿಳಿಸಿದರು.

 ಮುಶ್ಫಿಕುರ್ರಹೀಮ್ 2011ರಿಂದ ಟೆಸ್ಟ್ ತಂಡದ ನಾಯಕರಾಗಿ 34 ಟೆಸ್ಟ್‌ಗಳಲ್ಲಿ ಬಾಂಗ್ಲಾತಂಡವನ್ನು ಮುನ್ನಡೆಸಿದ್ದಾರೆ. ಅವರ ನಾಯಕತ್ವದಲ್ಲಿ ಬಾಂಗ್ಲಾ ತಂಡ ಕೆಲವು ಪಂದ್ಯಗಳಲ್ಲಿ ಅಪೂರ್ವ ಕೆಲವು ದಾಖಲಿಸಿದೆ. ಕಳೆದ ವರ್ಷ ಇಂಗ್ಲೆಂಡ್, ಶ್ರೀಲಂಕಾ ಮತ್ತು ಅಸ್ಟ್ರೇಲಿಯ ವಿರುದ್ಧ ಟೆಸ್ಟ್ ಗಳಲ್ಲಿ ಜಯ ದಾಖಲಿಸಿತ್ತು. ಆದರೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಹೀಮ್ ಅವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕ ಪ್ರವಾಸದಲ್ಲಿ ಬಾಂಗ್ಲಾ ಕಳಪೆ ಪ್ರದರ್ಶನ ನೀಡಿತ್ತು. ಎರಡು ಟೆಸ್ಟ್‌ಗಳಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಮುಶ್ಫಿಕುರ್ರಹೀಮ್ ಅವರಿಂದ ನಾಯಕತ್ವದ ಹೊರೆಯನ್ನು ಕೆಳಗಿಳಿಸಲಾಗಿದ್ದು, ಬ್ಯಾಟಿಂಗ್‌ಗೆ ಹೆಚ್ಚು ಗಮನ ನೀಡುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಹಸನ್ ತಿಳಿಸಿದ್ದಾರೆ. ಶಾಕೀಬ್ ಎರಡನೇ ಬಾರಿ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. 2009ರಿಂದ 2011ರ ತನಕ ಅವರು ತಂಡದ ನಾಯಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News