ಕರ್ನಾಟಕ ರಾಜಕೀಯ ಬೇಕಿರುವುದು ಹುಸಿ ಪರ್ಯಾಯಗಳಲ್ಲ

Update: 2017-12-10 18:35 GMT

ಇಂದು ಭಾರತದ ಜನರು ಹತ್ತು ಹಲವು ಸಂದಿಗ್ಧ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ. ಇದೆಲ್ಲದರ ಆರಂಭ ಬಹಳ ಹಿಂದೆ ಆಗಿದ್ದರೂ ಅದರ ತೀವ್ರತೆ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇದರ ವೇಗ ಗಣನೀಯವಾಗಿ ತೀವ್ರವಾಗಿದೆ. ಸಂಸತ್, ಸಂವಿಧಾನ, ನ್ಯಾಯಾಂಗ, ಹೀಗೆ ಪ್ರಜಾಸತ್ತಾತ್ಮಕ ಯಂತ್ರಗಳನ್ನು ಚಾಣಾಕ್ಷತನದಿಂದ ಬಳಸಿಕೊಳ್ಳುತ್ತಾ ಅದರ ಮೂಗಿನಡಿಯಲ್ಲಿಯೇ ನಿರಂಕುಶ ಏಕವ್ಯಕ್ತಿ ಆಡಳಿತ ವ್ಯವಸ್ಥೆಯನ್ನು ಈ ದೇಶದ ಜನರ ಮೇಲೆ ಹೇರುವ ಪ್ರಯತ್ನ ಈಗ ನಡೆಯುತ್ತಿದೆ.

ಈಗ ಒಂದೆಡೆ ದೇಶವನ್ನು ನಿರಂಕುಶ ಫ್ಯಾಶಿಸ್ಟ್ ಆಳ್ವಿಕೆಯತ್ತ ಎಳೆಯಲಾಗುತ್ತಿದೆ. ಅದೇ ವೇಳೆಯಲ್ಲಿ ಹಲವರು ಕೋಮುವಾದ ಹಾಗೂ ಫ್ಯಾಶಿಸಂ ಅನ್ನು ಎದುರಿಸಲು ಇರುವ ರಾಷ್ಟ್ರೀಯ ಪಕ್ಷಗಳಲ್ಲಿ ಕಾಂಗ್ರೆಸ್ಸೇ ಸೂಕ್ತ ಹಾಗಾಗಿ ಕಾಂಗ್ರೆಸ್ಸನ್ನೇ ಬೆಂಬಲಿಸಿ ಎಂದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೇ ರೀತಿಯ ಚರ್ಚೆಗಳು ಮೊನ್ನೆ ತಾನೇ ಮುಗಿದ ಕನ್ನಡ ಸಾಹಿ್ಯ ಸಮ್ಮೇಳನದಲ್ಲೂ ಕೇಳಿ ಬಂದಿದೆ.

ಗುಜರಾತಿನಲ್ಲಿ ಇತ್ತೀಚಿನ ಎರಡು ಪ್ರಮುಖ ಜನ ಚಳವಳಿಗಳ ನಾಯಕತ್ವ ಕಾಂಗ್ರೆಸ್‌ನ ತೆಕ್ಕೆಗೆ ಹೋಗಿದೆ. ಅದರಲ್ಲಿ ಒಂದು, ಉನಾದಲ್ಲಿ ನಡೆದ ದಲಿತರ ಮೇಲಿನ ಕ್ರೂರ ಹಾಗೂ ಮನುಷ್ಯ ವಿರೋಧಿ ದೌರ್ಜನ್ಯದ ಹಿನ್ನೆಲೆಯಲ್ಲಿ ಹುಟ್ಟಿ ಬೆಳೆದ ಜೆಗ್ನೇಶ್ ಮೆವಾನಿ ನೇತೃತ್ವದ್ದು, ಮತ್ತೊಂದು ಮೇಲ್ಜಾತಿ ಪಾಟಿದಾರರಿಗೆ ಮೀಸಲಾತಿ ಕೊಡಿ ಇಲ್ಲವಾದರೆ ಮೀಸಲಾತಿ ವ್ಯವಸ್ಥೆಯನ್ನೇ ರದ್ದುಗೊಳಿಸಿ ಎಂಬ ಹಕ್ಕೊತ್ತಾಯದೊಂದಿಗೆ ಬೆಳೆದ ಹಾರ್ದಿಕ ಪಟೇಲ್ ನೇತೃತ್ವದ್ದು. ಕಾಂಗ್ರೆಸ್ ಈಗಾಗಲೇ ಪಟೇಲ್ ಸಮುದಾಯದ ಮೀಸಲಾತಿ ಇನ್ನಿತರ ಹಕ್ಕೊತ್ತಾಯಗಳನ್ನು ಈಡೇರಿಸುವ ಭರವಸೆ ನೀಡಿ ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಮೇಲ್ವರ್ಗ ಮೇಲ್ಜಾತಿಯ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಹೊರಟಿದೆ. ವಿಚಿತ್ರ ಏನೆಂದರೆ, ದಲಿತ ಅಲ್ಪಸಂಖ್ಯಾತ, ಹಿಂದುಳಿದವರನ್ನು ಒಗ್ಗೂಡಿಸಿ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಸಾಧಿಸಬೇಕು. ಕೋಮುವಾದ, ಜಾತಿವಾದ ಹಾಗೂ ಫ್ಯಾಶಿಸಂ ಅನ್ನು ಎದುರಿಸಲು ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕೆಂದು ಕರೆ ನೀಡಿ ಜನರನ್ನು ಸಂಘಟಿಸಿದ ಜೆಗ್ನೇಶ್ ಮೆವಾನಿ ಇದೀಗ ಮೇಲ್ಜಾತಿ ಮೇಲ್ವರ್ಗಗಳ ಹಿತಾಸಕ್ತಿಗಾಗಿಯೇ ಕಾರ್ಯನಿರ್ವಹಿಸುವ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳ ಹಿತಾಸಕ್ತಿಗಳಿಗೆ ವಿರುದ್ಧ್ದವಿರುವ ಪಾಟಿದಾರ್ ಆಂದೋಲನದೊಂದಿಗೆ ನೇರವಾಗಿ ಕೈಜೋಡಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿರುವುದು. ಅಂದರೆ ಪಾಟಿದಾರ್ ಸಮುದಾಯದಲ್ಲಿ ಬಡವರು ಇಲ್ಲವೆಂದಾಗಲಿ ಅವರಿಗೆ ಸವಲತ್ತು ಸೌಲಭ್ಯ ಒದಗಿಸಬಾರದೆಂದಾಗಲಿ ಅಲ್ಲ.

ಮತ್ತೊಂದೆಡೆ ಉತ್ತರಪ್ರದೇಶದಲ್ಲಿ ಚಂದ್ರಶೇಖರ ಆಝಾದ್ ಎಂಬ ಭೀಮ್ ಆರ್ಮಿಯ ಯುವನಾಯಕನನ್ನು ಬಂಧಿಸಿ ಈಗ ನ್ಯಾಯಾಲಯ ಜಾಮೀನು ನೀಡಿದ್ದರೂ ರಾಷ್ಟೀಯ ಭದ್ರತೆ ಕಾಯ್ದೆಯಡಿ ಬೇರೊಂದು ಪ್ರಕರಣ ದಾಖಲಿಸಿ ಕಾರಗೃಹದಲ್ಲಿಡಲಾಗಿದೆ. ದಲಿತರು, ಆದಿವಾಸಿಗಳ ಪರ ಕೆಲಸ ಮಾಡುತ್ತಿದ್ದ ದಿಲ್ಲಿ ವಿಶ್ವವಿದ್ಯಾನಿಲಯದ ಅಂಗವೈಕಲ್ಯವಿರುವ ಪ್ರೊ. ಸಾಯಿಬಾಬರನ್ನು ಜೀವಾವಧಿ ಶಿಕ್ಷೆ ವಿಧಿಸಿ ಕಾರಾಗೃಹದಲ್ಲಿ ಕೊಳೆಸಲಾಗುತ್ತಿದೆ. ಈಗ ಗುಜರಾತಿನಲ್ಲಿ ಚುನಾವಣಾ ಕಣಕ್ಕೆ ಇಳಿದಿರುವ ಜೆಗ್ನೇಶ್ ಮೆವಾನಿಯ ಮೇಲೆ ಬಂಧನ ವಾರಂಟ್ ಹೊರಡಿಸಿರುವ ಸುದ್ದಿ ವರದಿಯಾಗಿದೆ.

ಇಂದು ಭಾರತದ ಜನರು ಹತ್ತು ಹಲವು ಸಂದಿಗ್ಧ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ. ಇವೆಲ್ಲದರ ಆರಂಭ ಬಹಳ ಹಿಂದೆಯೇ ಆಗಿದ್ದರೂ ಅದರ ತೀವ್ರತೆ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇದರ ವೇಗ ಗಣನೀಯವಾಗಿ ತೀವ್ರವಾಗಿದೆ. ಸಂಸತ್, ಸಂವಿಧಾನ, ನ್ಯಾಯಾಂಗ, ಹೀಗೆ ಪ್ರಜಾಸತ್ತಾತ್ಮಕ ಯಂತ್ರಗಳನ್ನು ಚಾಣಾಕ್ಷತನದಿಂದ ಬಳಸಿಕೊಳ್ಳುತ್ತಾ ಅದರ ಮೂಗಿನಡಿಯಲ್ಲಿಯೇ ನಿರಂಕುಶ ಏಕವ್ಯಕ್ತಿ ಆಡಳಿತ ವ್ಯವಸ್ಥೆಯನ್ನು ಈ ದೇಶದ ಜನರ ಮೇಲೆ ಹೇರುವ ಪ್ರಯತ್ನ ಈಗ ನಡೆಯುತ್ತಿದೆ. ಕೆಲದಿನಗಳ ಹಿಂದೆ ಪ್ರಧಾನಿ ಮೋದಿ ನ್ಯಾಯಾಂಗಕ್ಕೆ ಎಚ್ಚರಿಕೆ ನೀಡುವ ರೀತಿಯಲ್ಲಿ ಮಾತಾಡಿದ್ದನ್ನು ನಾವು ಇಲ್ಲಿ ಗಮನಿಸಬಹುದು. ನ್ಯಾಯಾಂಗ ತನ್ನ ಪರಿಧಿ ದಾಟಿ ಸಂಸತ್ತಿನ ಕಾರ್ಯನಿರ್ವಹಣೆಯಲ್ಲಿ ಮಧ್ಯ ಪ್ರವೇಶ ಮಾಡುತ್ತಿದೆ. ಸೂಪರ್ ಸಂಸತ್ತಿನ ರೀತಿಯಲ್ಲಿ ವರ್ತಿಸುತ್ತಿದೆ ಇದು ನಿಲ್ಲಬೇಕು ಎಂಬಂತೆ. ಆದರೆ ನ್ಯಾಯಾಂಗದ ಕಟ್ಟೆಗೆ ಬರುತ್ತಿರುವ ಸಂಸತ್ ಸದಸ್ಯರ ಕ್ರಮಿನಲ್ ಪ್ರಕರಣಗಳ ಬಗ್ಗೆಯಾಗಲೀ, ಈಗ ತಮ್ಮ ಪಕ್ಷದ ಜನಪ್ರತಿನಿಧಿಗಳು, ಸಂಸತ್ ಸದಸ್ಯರ ಮೇಲೆಯೇ ಹೆಚ್ಚು ಕ್ರಿಮಿನಲ್ ಪ್ರಕರಣಗಳು ಇರುವು ದರ ಬಗ್ಗೆಯಾಗಲೀ ಯಾವುದೇ ಉಲ್ಲೇಖವನ್ನು ಮೋದಿ ಮಾಡಲಿಲ್ಲ.

ಆರಂಭದ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಪ್ರಧಾನಮಂತ್ರಿ ಜನ ಧನ್ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ, ಇತ್ಯಾದಿ ಸಮ್ಮೋಹಕ ಘೋಷಣೆಗಳನ್ನು ಪ್ರಕಟಿಸಿ ಭಾರೀ ಭ್ರಮೆಯನ್ನು ಮೂಡಿಸಲು ಪ್ರಯತ್ನಿಸಿದ ಬೆನ್ನಲ್ಲೇ ಅದೇ ಧಾಟಿ ಹಾಗೂ ಭಾರೀ ವೇಗದಲ್ಲಿ ನೋಟು ಅಮಾನ್ಯೀಕರಣ, ಆಧಾರ್ ಕಡ್ಡಾಯ, ನಂತರ ಜಿಎಸ್‌ಟಿಯನ್ನು ಬಲಾತ್ಕಾರವಾಗಿ ಹೇರಲಾಯಿತು. ಇವೆಲ್ಲವೂ ವ್ಯವಸ್ಥಿತ ಕುತಂತ್ರಗಳ ಪರಸ್ಪರ ಸಂಬಂಧವುಳ್ಳ ಯೋಜನೆಗಳಾಗಿದ್ದವು. ಇದರ ನಂತರದ ನೋಟು ರಹಿತ ವ್ಯವಹಾರ, ಆನ್‌ಲೈನ್ ವ್ಯವಹಾರಗಳ ಹೇರಿಕೆ ಕೂಡ ಅದೇ ಸಾಲಿನವು. ಇವೆಲ್ಲವೂ ಭಾರೀ ಕಾರ್ಪೊರೇಟ್ ಕುಳಗಳಿಗಾಗಿ ಮಾಡಿದಂತಹ ಯೋಜನೆಗಳಾಗಿದ್ದವು. ಇದಕ್ಕೆ ಕೆಲವು ಉದಾಹರಣೆಗಳನ್ನು ನೋಡುವುದಾದರೆ ನೋಟು ಅಮಾನ್ಯೀಕರಣದಿಂದ ಜನಸಾಮಾನ್ಯರ ಜೇಬುಗಳನ್ನು ಬರಿದು ಮಾಡಿದ್ದು ಬಿಟ್ಟರೆ ಕಪ್ಪು ಹಣ ಬರಲಿಲ್ಲ. ಅದೇ ವೇಳೆಯಲ್ಲಿ ಜಿಯೋ ವ್ಯಾಲೆಟ್, ಏರ್‌ಟೆಲ್ ಮನಿ, ಪೇಟಿಎಂಗಳು ಜನರ ಹಣವನ್ನು ತಮ್ಮ ಬ್ಯಾಗುಗಳಲ್ಲಿ ತುಂಬಿಸಿಕೊಂಡರು. ಅಮಾನ್ಯೀಕರಣದ ಮೊದಲು ಅಷ್ಟಾಗಿ ಗುರುತಿಸಲ್ಪಡದ ಪೇಟಿಎಂ ಸ್ಥಾಪಕ ವಿಜಯ ಶೇಖರ್ ಶರ್ಮ ಈಗ ಭಾರತೀಯ ಬಿಲಿಯಾಧೀಶರುಗಳಲ್ಲಿ ಒಬ್ಬರೆಂದು ಈತನ ಸಂಪತ್ತು ಮೇ 2017 ಕ್ಕೆ ಎಂಟು ಬಿಲಿಯನ್ ಡಾಲರುಗಳೆಂದು, ಜಾಗತಿಕ ಬಿಲಿಯಾಧೀಶರುಗಳ ಬಗ್ಗೆ ಆಗಾಗ್ಗೆ ವರದಿ ಮಾಡುವ ಫೋರ್ಬ್ಸ್ ಪತ್ರಿಕೆ ವರದಿ ಮಾಡಿದೆ. ಅದಕ್ಕೂ ಹಿಂದೆ ಆತನ ಸಂಸ್ಥೆ ಸಾವಿರಾರು ಕೋಟಿಗಳ ನಷ್ಟದಲ್ಲಿತ್ತು ಎಂದು ಎಕಾನಾಮಿಕ್ ಟೈಮ್ಸ್ ಕಳೆದ ನವೆಂಬರ್ 5 ರ ಸಂಚಿಕೆಯಲ್ಲಿ ವರದಿ ಮಾಡಿತ್ತು. ಚಲಾವಣೆಯಲ್ಲಿದ್ದ ಐನೂರು ಹಾಗೂ ಸಾವಿರದ ಮುಖಬೆಲೆಯ ನೋಟುಗಳಲ್ಲಿ ಶೇ.99 ರಷ್ಟು ಮರಳಿ ಬಂದಿದೆ ಎಂದು ಸ್ವತಃ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಅದೇ ವೇಳೆಯಲ್ಲಿ ಬ್ಯಾಂಕುಗಳನ್ನು ದಿವಾಳಿಯಂಚಿಗೆ ತಂದು ನಿಲ್ಲಿಸಿದ್ದ ಅದಾನಿ, ಅಂಬಾನಿ, ಜಿಂದಾಲ್, ಮಿತ್ತಲ್, ಮಲ್ಯಗಳಂತಹ ಕಾರ್ಪೊರೇಟ್ ಕುಳಗಳು ಬ್ಯಾಂಕುಗಳಿಗೆ ಮರಳಿಸಬೇಕಾಗಿದ್ದ ಸಾಲದ ಹಣ ಇನ್ನೂ ಬಂದಿಲ್ಲ. ಇವರೆಲ್ಲರ ನಿವ್ವಳ ಸಂಪತ್ತು ಈಗ ದಿನೇ ದಿನೇ ಹೆಚ್ಚಾಗುತ್ತಿರುವ ವರದಿಗಳಿವೆ. ಈಗ ಜಿಎಸ್‌ಟಿ ಹೇರುವುದರ ಮೂಲಕ ಜನ ಸಾಮಾನ್ಯ ಗ್ರಾಹಕರ ಮೇಲೆ ತೆರಿಗೆಯ ಮೇಲೆ ತೆರಿಗೆ ವಿಧಿಸಿ ಕಾರ್ಪೊರೇಟ್ ಸಂಸ್ಥೆಗಳಿಗೆ ಭಾರೀ ತೆರಿಗೆ ವಿನಾಯಿತಿಗಳನ್ನು ನೀಡಲಾಗಿದೆ. ಒಂದು ದೇಶ ಒಂದೇ ತೆರಿಗೆ ಎಂಬ ಆಕರ್ಷಕ ಘೋಷಣೆ ಜನರ ಮುಂದಿಡಲಾಗಿದೆ. ಆಧಾರ್ ಕಾರ್ಡ್ ಎಲ್ಲದಕ್ಕೂ ಕಡ್ಡಾಯಗೊಳಿಸುವ ಮೂಲಕ ಜನಸಾಮಾನ್ಯರ ಎಲ್ಲಾ ಆರ್ಥಿಕ, ಸಾಮಾಜಿಕ ಹಾಗೂ ವೈಯಕ್ತಿಕ ವ್ಯವಹಾರಗಳ ಮೇಲೆ ನೇರವಾದ ನಿಗಾವನ್ನು ಸರಕಾರ ಇರಿಸಲಾರಂಭಿಸಿದೆ. ಇಂತಹ ನಿಗಾಗಳು ಕಾರ್ಪೊರೇಟ್ ಕುಳಗಳ ವ್ಯವಹಾರಗಳ ಮೇಲೆ ಎಷ್ಟರ ಮಟ್ಟದಲ್ಲಿ ಇದೆ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ದೇಶದ ಒಳಗಿನ ಕಪ್ಪು ಹಣ 5 ರಿಂದ 6 ಸಾವಿರ ಕೋಟಿಗಳಷ್ಟು ಇವೆೆ ಎಂದು ವರದಿಯಾಗಿದೆ. ಇದು ಗುಡ್ಡ ಬಗೆದು ಸೊಳ್ಳೆ ಹಿಡಿದ ಕತೆ ಅಷ್ಟೆ. ಹೊರ ದೇಶದಲ್ಲಿರುವ ಕಪ್ಪು ಹಣ ತರುವುದು ನಂತರ. ಮೋದಿ ನೀಡಿದ ಭರವಸೆಯಾದ ಪ್ರತಿಯೊಬ್ಬರ ಖಾತೆಗೆ ತಲಾ ಹದಿನೈದು ಲಕ್ಷ ರೂ.ಗಳು ಜಮೆಯಾಗುವುದು ಇನ್ನೂ ಆಗಲೇ ಇಲ್ಲ. ಅದು ಆಗುವುದೂ ಇಲ್ಲ. ಗ್ಯಾಸ್ ಗೊಬ್ಬರ ಇತ್ಯಾದಿಗಳ ಸಹಾಯಧನಗಳನ್ನು ನೇರ ಬ್ಯಾಂಕ್ ಖಾತೆಗೆ ಹಾಕುತ್ತೇವೆ ಎಂದು ಸಹಾಯಧನಗಳನ್ನೇ ರದ್ದು ಮಾಡುವ ಕೆಲಸಗಳನ್ನು ನಡೆಸುತ್ತಾ ಬರಲಾಗುತ್ತಿದೆ. ಆಧಾರ್ ಹೆಸರಿನಲ್ಲಿ ಆಹಾರವೇ ಸಿಗದೆ ಸಾಯುವಂತೆ ಮಾಡಲಾಗುತ್ತಿದೆ.

ಭಾರತದ ಆರ್ಥಿಕ ಕ್ಷೋಭೆ ತೀವ್ರ ರೂಪ ಪಡೆಯುತ್ತಿದೆ. ಅದು ಸಾಮಾಜಿಕ ಕ್ಷೋಭೆಗಳಿಗೆ ಕಾರಣವಾಗುತ್ತಿದೆ. ಇದರಿಂದೆಲ್ಲಾ ದಿಕ್ಕು ತಪ್ಪಿಸಲು ಕೋಮುವಾದಿ ಹಾಗೂ ಜಾತಿವಾದಿ ದಾಳಿಗಳನ್ನು ದೇಶಾದ್ಯಂತ ಸಂಘಟಿಸಲಾಗುತ್ತಿದೆ. ಇದರೊಂದಿಗೆ ಜನರ ಕಣ್ಣಿಗೆ ಮಣ್ಣೆರಚಲು ‘ಮೂಡಿಸ್’ ಎಂಬ ವಿದೇಶಿ ರೇಟಿಂಗ್ ಸಂಸ್ಥೆ ಮೂಲಕ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಅತಿರಂಜಿತ ವರದಿಗಳು ಬರುವಂತೆ ನೋಡಿಕೊಳ್ಳ ಲಾಗುತ್ತಿದೆ. ಇಂತಹ ಅವಾಸ್ತವ ಹಾಗೂ ಅತಿರಂಜಿತ ವರದಿ ಬಿಡುಗಡೆ ಮಾಡಿದ ದೂರು ಸಾಬೀತಾದ ಕಾರಣಕ್ಕಾಗಿ ಅಮೆರಿಕ ಹಾಗೂ ಯುರೋಪಿಯನ್ ಯೂನಿಯನ್ ದೇಶಗಳಲ್ಲಿ ಮಿಲಿಯಗಟ್ಟಲೆ ಡಾಲರ್ ಹಣವನ್ನು ದಂಡವಾಗಿ ಪಾವತಿಸಿದ ಹಿರಿಮೆ ಈ ಸಂಸ್ಥೆಯದ್ದು!. ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಗಳು ಹಿಂದೆಂದೂ ಇಲ್ಲದಂತೆ ನೆಲ ಕಚ್ಚುತ್ತಿವೆ. ಇದರಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಪರಿಸ್ಥಿತಿ ದಯನೀಯವಾಗಿದೆ. ಸಣ್ಣ ವ್ಯಾಪಾರಸ್ಥರು, ಬೀದಿ ಬದಿ ವ್ಯಾಪಾರಿಗಳ ವ್ಯವಹಾರ ಗಳು ಮಕಾಡೆ ಮಲಗುತ್ತಿವೆ. ಉದ್ಯೋಗ ಸೃಷ್ಟಿಸುವ ಕತೆ ಹಾಗಿರಲಿ ಇದ್ದ ಕೋಟ್ಯಂತರ ಉದ್ಯೋಗಗಳೂ ಕಣ್ಮರೆಯಾಗುತ್ತಿವೆ. ಜನ ಸಾಮಾನ್ಯರು ಬಳಸುವ ವಸ್ತುಗಳ ಬೆಲೆಗಳು ಒಂದೇ ಸಮನೆ ಏರುತ್ತಿವೆ.

ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ಕೇಂದ್ರೀಕರಣ ಆರ್ಥಿಕತೆ ಆಡಳಿತದಲ್ಲಿ ಜಾರಿಯಾಗತೊಡಗಿದೆ. ಒಕ್ಕೂಟ ತತ್ವಕ್ಕೆ ಹಾಗೂ ಗಣರಾಜ್ಯ ವ್ಯವಸ್ಥೆಗೆ ತಿಲಾಂಜಲಿ ಇಡುವ ಕೆಲಸಗಳು ಬಿರುಸಾಗಿವೆ. ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಜನರ ಭರವಸೆಗಳು ಕುಸಿಯಲು ತೊಡಗಿ ಬಹಳ ಕಾಲವಾಗಿದೆ. ಇದೀಗ ನ್ಯಾಯಾಂಗದ ಮೇಲೂ ಜನರ ನಂಬಿಕೆ ಕುಸಿಯತೊಡಗಿದೆ. ಭ್ರಷ್ಟಾಚಾರ, ಪಕ್ಷಪಾತಗಳ ಕಪ್ಪು ಚುಕ್ಕೆಗಳು ನ್ಯಾಯಾಂಗದ ಮೇಲೆ ಇಂದು ಹೆಚ್ಚಾಗತೊಡಗಿವೆ. ಪ್ರಜಾತಾಂತ್ರಿಕ ಅಂಗಗಳಾಗಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾದ ಸಂಸತ್ತು, ವಿದಾನಸಭೆಗಳು ಸರಿಯಾಗಿ ಕಲಾಪಗಳನ್ನೇ ನಡೆಸಲಾರದ ಸ್ಥಿತಿಗೆ ತಲುಪುತ್ತಿದೆ. ಪ್ರಜಾ ಪ್ರತಿನಿಧಿಗಳೆನಿಸಿಕೊಳ್ಳಲು ಯೋಗ್ಯತೆ ಇಲ್ಲದವರು, ಕ್ರಿಮಿನಲ್ ಹಿನ್ನೆಲೆಯವರೇ ಹೆಚ್ಚಾಗಿ ಈ ಸಂಸ್ಥೆಗಳಿಗೆ ಆಯ್ಕೆಯಾಗುತ್ತಿರುವುದು ಪರಿಸ್ಥಿತಿಯು ಹದಗೆಡುತ್ತಿರುವ ಲಕ್ಷಣವಾಗಿದೆ. ಹೀಗೆಲ್ಲಾ ಆಗಲು ವ್ಯವಸ್ಥೆಯಲ್ಲಿರುವ ಲೋಪಗಳೇ ಪ್ರಧಾನ ಕಾರಣವಾಗಿವೆೆ. ಜಾಗತೀಕರಣದ ನಂತರ ಜಾಗತಿಕ ಕಾರ್ಪೊರೇಟ್ ಕಂಪೆನಿಗಳೇ ನಮ್ಮ ದೇಶದ ಅಧಿಕಾರದ ಎಲ್ಲಾ ಅಂಗಗಳನ್ನು ನೇರವಾಗಿ ನಿರ್ದೇಶಿಸಲು ತೊಡಗಿವೆ. ಮನ ಮೋಹನ್ ಸಿಂಗ್ ಆಗಲಿ, ನರೇಂದ್ರ ಮೋದಿ ಪ್ರಧಾನಿ ಪಟ್ಟಕ್ಕೆ ಏರಿದ್ದು ಇವರು ಬಯಸಿದ್ದರಿಂದಲೇ. ಮನಮೋಹನ್ ಸಿಂಗ್ ವಿಷಯ ದಲ್ಲಿ ಅದು ಹೆಚ್ಚು ಪರೋಕ್ಷವಾಗಿದ್ದರೆ, ನರೇಂದ್ರ ಮೋದಿ ವಿಚಾರದಲ್ಲಿ ಅದು ಹೆಚ್ಚು ನೇರವಾಗೇ ಕಾಣುತ್ತಿದೆ. ಹಿಂದಿನ ಯುಪಿಎ ಸರಕಾರದಲ್ಲಿ ಮನಮೋಹನ್ ಸಿಂಗ್‌ರಿಗೆ ಪ್ರಧಾನಿ ಪಟ್ಟ ಸಿಕ್ಕಿದ್ದು ಜಾಗತಿಕ ಬಂಡವಾಳಶಾಹಿಗಳ ಸಂಸ್ಥೆಯಾದ ವಿಶ್ವಬ್ಯಾಂಕಿನಲ್ಲಿ ಅವರು ನಿಷ್ಠ ಸೇವೆ ಸಲ್ಲಿಸಿದ್ದರಿಂದ. ಈ ಜಾಗತಿಕ ಶಕ್ತಿಗಳಿಗೆ ಅಗತ್ಯವಾಗಿದ್ದ ಜಾಗತೀಕರಣ ವನ್ನು ಸರಿಯಾಗಿ ಗ್ರಹಿಸಿ ಅನುಷ್ಠಾನಕ್ಕೆ ತರಬಲ್ಲರೆಂಬ ಕಾರಣಕ್ಕಾಗಿ ಯಾವುದೇ ನೇರ ಚುನಾವಣೆಗಳಲ್ಲಿ ಭಾಗವಹಿಸದೇ ಇದ್ದರೂ ಹತ್ತು ವರ್ಷಗಳು ಪ್ರಧಾನಿಯಾಗಿದ್ದರು. ಈಗಿನ ಪ್ರಧಾನಿ ನರೇಂದ್ರ ಮೋದಿ ಯನ್ನು ಈ ಜಾಗತಿಕ ಹಾಗೂ ಭಾರತೀಯ ಬಂಡವಾಳಶಾಹಿಗಳೇ ನೇರವಾಗಿ ಸಾವಿರಾರು ಕೋಟಿಗಳನ್ನು ವ್ಯಯಮಾಡಿ ಪ್ರಾಯೋಜಿಸಿ ಆಯ್ಕೆಯಾಗುವಂತೆ ಮಾಡಿದ್ದು ಗುಟ್ಟಾಗಿ ಉಳಿದಿಲ್ಲ. ಇವರಿಬ್ಬರೂ ಬೇರೆ ಬೇರೆ ವ್ಯಕ್ತಿಗಳು ಅನ್ನುವುದನ್ನು ಬಿಟ್ಟರೆ ಆರ್ಥಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸಕಾರ್ಯಗಳು ಒಂದೇ ಆಗಿವೆ. ಜನರಿಗೆ ಮಂಕು ಬೂದಿ ಎರಚುವ ಹಾಗೂ ಮೋಡಿ ಮಾಡುವ ವಿಧಾನಗಳಲ್ಲಿ ಕೆಲವು ವ್ಯತ್ಯಾಸವಿರಬಹುದು ಅಷ್ಟೆ. ಈಗ ಮೋದಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು ಮೂಲಭೂತವಾಗಿ ಹಿಂದಿನ ಸರಕಾರಗಳ ಯೋಜನೆ ಗಳ ಮುಂದುವರಿಕೆಗಳೇ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಈ ದೇಶವನ್ನು ಅತೀ ಹೆಚ್ಚು ಕಾಲ ಆಳಿರುವ ಕಾಂಗ್ರಸ್ ಪಕ್ಷ ಜಾತಿ ವಾದ, ಪ್ರಾಂತೀಯವಾದ, ಕೋಮುವಾದ, ಮೂಲಭೂತ ವಾದಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸುತ್ತಾ ಬೆಳೆಸುತ್ತಾ ಬಂದಿರುವುದರ ಪರಿಣಾ ಮವೇ ನಾವಿಂದು ಕಾಣುತ್ತಿರುವ ಅಂತಹ ದಾಳಿಗಳಾಗಿವೆ. ಇಂದು ಅಂತಹ ದಾಳಿಗಳನ್ನು ಜನಸಾಮಾನ್ಯರ ವಿರುದ್ಧ ಕ್ರೂರಾತಿಕ್ರೂರವಾಗಿ ಬಳಸಲು ಈಗಿನ ಪ್ರತಿಗಾಮಿ ಶಕ್ತಿಗಳಿಗೆ ಅದರಿಂದ ಅನುಕೂಲವಾಗಿದೆ. ನಂತರದ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳೂ ಇವುಗಳನ್ನು ಬಳಸಿಕೊಳ್ಳುತ್ತಾ ಬರುತ್ತಿರುವುದು ಕೂಡ ಸುಳ್ಳಲ್ಲವೆನ್ನುವುದು ಈ ದೇಶದ ಜನರಿಗೆ ಗೊತ್ತಿರುವ ವಿಚಾರ. ಇಂದು ನಮ್ಮ ದೇಶದ ಜನರು ಎದುರಿಸುತ್ತಿರವ ಮಾರಕ ಸಮಸ್ಯೆಗಳಿಗೆ ಈ ಎಲ್ಲಾ ಪಕ್ಷಗಳೇ ಕಾರಣವಾಗಿರುವುದರಿಂದ ಸಹಜವಾಗಿಯೇ ಇವರಿಂದ ಪರಿಹಾರ ನಿರೀಕ್ಷಿಸುವುದು ಸಾಧ್ಯವಾಗದ ವಿಚಾರ. ಈ ಯಾವ ಪಕ್ಷಗಳೂ ಜನಸಾಮಾನ್ಯರನ್ನು ಹಾಗೂ ದೇಶವನ್ನು ಕಾಪಾಡುವ ಗುರಿಯಾಗಲೀ ಛಾತಿಯಾಗಲೀ ಹೊಂದಿಲ್ಲ. ಹಾಗಾಗಿ ಇವರು ಯಾರೂ ನಿಜವಾದ ಪರ್ಯಾಯ ಹಾಗೂ ಪರಿಹಾರ ಜನರಿಗೆ ನೀಡಬಲ್ಲರೇ ಎಂಬುದು ಪ್ರಶ್ನಾರ್ಹ ವಿಚಾರ. ನೋಟು ಅಮಾನ್ಯೀಕರಣ, ಜಿಎಸ್‌ಟಿ ನಂತರ ಇದೀಗ ಬ್ಯಾಂಕುಗಳಲ್ಲಿರುವ ಜನಸಾಮಾನ್ಯರ ದುಡಿಮೆಯ ಉಳಿತಾಯಗಳ ಮೇಲೆ ಸರಕಾರದ ನೇರ ಹಿಡಿತ ಸಾಧಿಸಿ ತಮಗೆ ಅಗತ್ಯ ಎಂದು ಕಂಡು ಬಂದಾಗ ಖಾತೆದಾರರ ಅನುಮತಿ ಇಲ್ಲದೆಯೂ ಅವರ ಹಣವನ್ನು ಬಳಸಬಹುದಾದ ಕಾನೂನು ತರಲು ಸರಕಾರ ಹೊರಟಿದೆ. ಇದು ಬ್ಯಾಂಕುಗಳು ದಿವಾಳಿಯಾಗುವುದನ್ನು ತಪ್ಪಿಸಲಿಕ್ಕಂತೆ. ಅದೇ ವೇಳೆಯಲ್ಲಿ ದಿವಾಳಿ ಯಾಗಲು ಕಾರಣಕರ್ತರಾದ ಕಾರ್ಪೊರೇಟ್ ಕಂಪೆನಿಗಳು ಮರು ಪಾವತಿಸಬೇಕಾದ ಹತ್ತಾರು ಲಕ್ಷ ಕೋಟಿ ರೂ.ಗಳನ್ನು ವಸೂಲಿ ಮಾಡುವ, ಅಂತಹವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಯಾವ ಬಿಗಿಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಇದೆಲ್ಲಾ ನಡೆಗಳು ಮುಂದಿನ ದಿನಗಳಲ್ಲಿ ಕುಸಿಯಲಿರುವ ನಮ್ಮ ಆರ್ಥಿಕತೆ ಹಾಗೂ ಕಾರ್ಪೊರೇಟ್ ಕಂಪೆನಿಗಳ ರಕ್ಷಣೆಗಾಗಿ ನಡೆಯುತ್ತಿವೆ.

ಒಂದೆಡೆ ನೈಸರ್ಗಿಕ ಸಂಪತ್ತು ಮತ್ತೊಂದೆಡೆ ಜನಸಾಮಾನ್ಯರು ದುಡಿದು ಕಷ್ಟಪಟ್ಟು ಉಳಿಸಿದ ಉಳಿತಾಯಗಳನ್ನು ಹಾಗೂ ದೇಶವನ್ನು ಇಂತಹ ಲೂಟಿಗಳಿಂದ ರಕ್ಷಿಸಬೇಕಾದ ಸಾಂವಿಧಾನಿಕ ಸಂಸ್ಥೆಗಳು ಲೂಟಿ ಮಾಡುವವರ ಪರವಾಗಿ ನೇರವಾಗಿ ಕಾರ್ಯನಿರ್ವಹಿಸಲು ತೊಡಗಿವೆ. ಯಾವ ರಾಜಕೀಯ ಪಕ್ಷಗಳೂ ಇವನ್ನು ಪ್ರಶ್ನಿಸುತ್ತಿಲ್ಲ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಏನು ಮಾಡ ಬೇಕೆಂಬುದು ಈಗಿನ ಬಲು ಮುಖ್ಯ ಚರ್ಚೆಯಾಗಿರಬೇಕಿತ್ತು. ಆದರೆ ಬದಲಿಗೆ ಬಿಜೆಪಿಯಂತಹ ಕೋಮುವಾದಿ ಜಾತಿವಾದಿ ಪಕ್ಷವನ್ನು ಎದುರಿಸಲು ಕಾಂಗ್ರೆಸ್ ಅನ್ನು ಬೆಂಬಲಿಸಬೇಕು ಎಂಬಂತಹ ಚರ್ಚೆ ಗಳನ್ನು ಮುನ್ನೆಲೆಗೆ ತರಲಾಗಿದೆ. ಇಂತಹ ಸುಲಭದ್ದೆನಿಸುವ ನಿಲುವು ಗಳಲ್ಲಿ ತೇಲಿ ಹೋದರೆ ನಮ್ಮನ್ನು ನಾವೇ ಬಲಿಪೀಠಕ್ಕೆ ಅರ್ಪಿಸಿ ಕೊಂಡಂತೆ ಆಗುವುದು ಬಿಟ್ಟರೆ ಬೇರೇನಲ್ಲ. ಇದೇ ವಿಷವರ್ತುಲದಲ್ಲಿ ಸುತ್ತುತ್ತಾ ಸಮಯ, ಶ್ರಮ ವ್ಯರ್ಥಗೊಳಿಸಿ ನಿರಾಶೆ ಹಾಗೂ ಹತಾಶೆ ಗೊಳಗಾಗುವ ಸ್ಥಿತಿ ಬಿಟ್ಟರೆ ಬೇರೇನೂ ಆಗುವುದಿಲ್ಲ. ಜನಸಾಮಾನ್ಯರು ಇಂತಹ ನಿಲುವುಗಳ ಬಗ್ಗೆ ಗಂಭೀರವಾಗಿ ಪರಾಮರ್ಶೆಗೆ ಒಳಪಡಿಸಿ ನಿಜ ವಾದ ಜನ ಪರ್ಯಾಯದ ಬಗ್ಗೆ ಚಿಂತನೆ ನಡೆಸುವ ಕಾಲ ಇದಾಗಿದೆ. ಆಗ ಮಾತ್ರ ನಮ್ಮ ಜನ ಸಾಮಾನ್ಯರು ಹಾಗೂ ದೇಶ ಉಳಿಯಲು ಸಾಧ್ಯ. ಇದನ್ನು ಜನಪರ, ಪ್ರಗತಿಪರ ಸಂಘಟನೆಗಳು, ಬರಹಗಾರರು, ಬುದ್ಧಿಜೀವಿಗಳು ಬಲು ಗಂಭೀರವಾಗಿ ಪರಿಗಣಿಸುವ ಅಗತ್ಯ ಬಹಳವಿದೆ.

Writer - ನಂದಕುಮಾರ ಬೆಂಗಳೂರು

contributor

Editor - ನಂದಕುಮಾರ ಬೆಂಗಳೂರು

contributor

Similar News

ಜಗದಗಲ
ಜಗ ದಗಲ