ಶೇಕಡ 47ರಷ್ಟು ಮಸೂದೆಗಳು ಚರ್ಚೆಯಿಲ್ಲದೇ ಪಾಸ್ !

Update: 2017-12-11 04:07 GMT

ಹೊಸದಿಲ್ಲಿ, ಡಿ. 11: ಕಳೆದ ಹತ್ತು ವರ್ಷಗಳಲ್ಲಿ ಸಂಸತ್ತಿನಲ್ಲಿ ಶೇಕಡ 47ರಷ್ಟು ಮಸೂದೆಗಳು ಯಾವ ಚರ್ಚೆಯೂ ಇಲ್ಲದೆ ಅನುಮೋದನೆ ಪಡೆದಿವೆ ಎನ್ನುವ ಅಂಶ ಬೆಳಕಿಗೆ ಬಂದಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನ ವಿಳಂಬವಾಗಿರುವ ಬಗ್ಗೆ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿದ್ದು, ಸಂಸತ್ ಕಲಾಪದ ಕಳೆದ ಹತ್ತು ವರ್ಷಗಳ ದಾಖಲೆಗಳನ್ನು ಪರಿಶೀಲಿಸಿದಾಗ ಈ ಕುತೂಹಲಕಾರಿ ಅಂಶ ಬಹಿರಂಗವಾಗಿದೆ.

ಅಂತೆಯೇ ಸಂಸತ್ ಅವಧಿಯಲ್ಲಿ ಕ್ರಮೇಣ ಇಳಿಕೆಯಾಗುತ್ತಿರುವುದು ಕೂಡಾ ವ್ಯಕ್ತವಾಗಿದೆ. 1952ರಿಂದ 1972ರ ಅವಧಿಯಲ್ಲಿ ವರ್ಷಕ್ಕೆ 128 ದಿನದಿಂದ 132 ದಿನಗಳವರೆಗೆ ಅಧಿವೇಶನ ನಡೆಯುತ್ತಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಈ ಪ್ರಮಾಣ ಸರಾಸರಿ 64 ರಿಂದ 67 ದಿನಕ್ಕೆ ಸೀಮಿತವಾಗಿದೆ ಎಂದು ಸಂಸತ್ ಮೂಲಗಳು ಹೇಳಿವೆ.

ಶೇಕಡ 47ರಷ್ಟು ಮಸೂದೆಗಳನ್ನು ಯಾವ ಚರ್ಚೆಯೂ ಇಲ್ಲದೆ ಅಂಗೀಕರಿಸುವುದು ಸಂಸದೀಯ ವ್ಯವಸ್ಥೆಯ ಅಣಕವೇ ಸರಿ. ಒಟ್ಟು ಮಸೂದೆಗಳ ಪೈಕಿ ಶೇಖಡ 61ರಷ್ಟು ಮಸೂದೆಗಳನ್ನು ಅಧಿವೇಶನದ ಕೊನೆಯ ಮೂರು ಗಂಟೆಗಳಲ್ಲಿ ತರಾತುರಿಯಲ್ಲಿ ಆಂಗೀಕರಿಸಲಾಗಿದೆ.

ಕಳೆದ ಹತ್ತು ವರ್ಷಗಳಲ್ಲಿ ಶೇಕಡ 31ರಷ್ಟು ಮಸೂದೆಗಳನ್ನು ಸಂಸದೀಯ ಸ್ಥಾಯಿ ಸಮಿತಿ ಅಥವಾ ಸಲಹಾ ಸಮಿತಿಯ ಅನುಮೋದನೆ ಇಲ್ಲದೇ ಆಂಗೀಕರಿಸಲಾಗಿದೆ. ಆದರೆ ಈ ಮಸೂದೆಗಳನ್ನು ಸಮಿತಿ ಪರಿಶೀಲಿಸುವುದು ಕಡ್ಡಾಯವಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News