ಉಸ್ತಾದ್ ಝಾಕಿರ್ ಹುಸೈನ್ ಪ್ರಕಾರ ಅವರ ಬಳಿಯಿರುವ ಅಮೂಲ್ಯ ಆಸ್ತಿ ಯಾವುದು ಗೊತ್ತಾ?

Update: 2017-12-11 16:02 GMT

ಕೋಲ್ಕತಾ,ಡಿ.11: ಖ್ಯಾತ ತಬ್ಲಾ ಪಟು ಉಸ್ತಾದ್ ಝಾಕಿರ್ ಹುಸೈನ್ ಅವರು 54 ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಸರೋದ್ ದಂತಕಥೆ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರು ತನಗೆ ಉಡುಗೊರೆಯಾಗಿ ನೀಡಿದ್ದ 100 ರೂ.ನೋಟನ್ನು ಈಗಲೂ ತನ್ನ ಬಳಿಯೇ ಉಳಿಸಿಕೊಂಡಿದ್ದಾರೆ.

12ರ ಎಳೆಯ ಪ್ರಾಯದಲ್ಲಿ ಖಾನ್ ಜೊತೆಗೆ ಪ್ರದರ್ಶನ ನೀಡಿದ್ದ ಅಂದಿನ ಪುಟ್ಟ ಕಾರ್ಯಕ್ರಮವನ್ನು ಝಾಕಿರ್ ಈಗಲೂ ನೆನಪಿಟ್ಟುಕೊಂಡಿದ್ದಾರೆ.

ಇಲ್ಲಿ ಇತ್ತೀಚಿಗೆ ಆಯೋಜಿಸಲಾಗಿದ್ದ ‘ಮಾಸ್ಟರ್‌ಕ್ಲಾಸ್ ವಿಥ್ ದಿ ಲೆಜೆಂಡ್’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಆ 100 ರೂ.ನೋಟು ಈಗಲೂ ತನ್ನ ಅಮೂಲ್ಯ ಆಸ್ತಿಯಾಗಿದೆ ಎಂದರು.

ಆಗಿನ ಕಾಲದಲ್ಲಿ ತಾನು 1000 ರೂ.ಗಳ ಸಂಭಾವನೆಯನ್ನು ಪಡೆದ ಬಳಿಕ ತನ್ನ ಮಗ ತಬ್ಲಾಕ್ಕಾಗಿಯೇ ಹುಟ್ಟಿದ್ದಾನೆ ಎನ್ನುವುದು ತನ್ನ ತಾಯಿಗೆ ಮನದಟ್ಟಾಗಿದ್ದು ಹೇಗೆ ಎನ್ನುವುದನ್ನು ಝಾಕಿರ್ ಸ್ಮರಿಸಿಕೊಂಡರು.

 ಅಂದು ಖ್ಯಾತ ತಬ್ಲಾ ವಾದಕರಾಗಿದ್ದ ತನ್ನ ತಂದೆ ಅಲ್ಲಾ ರಖಾ ಮೋಹನ್ ಸ್ಟುಡಿಯೋದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಅವರಿಗ ಮಾಸಿಕ 350 ರೂ.ಗಳ ಸಂಭಾವನೆ ದೊರೆಯುತ್ತಿತ್ತು. ಹೀಗಾಗಿ ತಾನೂ ತಬ್ಲಾ ವಾದಕನಾಗುವುದನ್ನು ತನ್ನ ತಾಯಿಯು ಬಯಸಿರಲಿಲ್ಲ. ತಾನು ವೈದ್ಯನಾಗಬೇಕೆಂದು ಆಕೆ ಬಯಸಿದ್ದರು, ಹೀಗಾಗಿ ತನ್ನನ್ನು ಮುಂಬೈನ ಮಾಹಿಮ್‌ನಲ್ಲಿಯ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದರು ಎಂದು ಅವರು ಹೇಳಿದರು.

ಅಂದಿನ ದಿನಗಳಲ್ಲಿ ತಬ್ಲಾ ವಾದಕರು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಕೆಳದರ್ಜೆಯ ಕಲಾವಿದರಾಗಿದ್ದರು ಎಂದ ಅವರು, ಇಂದು ತಬ್ಲಾ ಕಲಾವಿದರಿಗೆ ಸಿಗುತ್ತಿರುವ ಗೌರವಕ್ಕೆ ಉಸ್ತಾದ್ ಕರಮುತುಲ್ಲಾ ಖಾನ್, ಪಂಡಿತ್ ಕಿಷನ ಮಹಾರಾಜ್, ಪಂಡಿತ್ ಸಮತಾ ಪ್ರಸಾದ್ ಮತ್ತು ಉಸ್ತಾದ್ ಅಲ್ಲಾ ರಖಾರಂತಹ ಖ್ಯಾತ ಕಲಾವಿದರು ಕಾರಣರಾಗಿದ್ದಾರೆ ಎಂದರು.

“ತಂದೆ ಅನಾರೋಗ್ಯದಿಂದಿದ್ದಾಗ, ಕುಟುಂಬವು ಸಂಕಷ್ಟದಲ್ಲಿದ್ದಾಗ 1951ರಲ್ಲಿ ನಾನು ಜನಿಸಿದ್ದೆ. ಅದೊಂದು ದಿನ ಅಲ್ಲಾ ರಖಾ ತನ್ನ ಕಿವಿಯಲ್ಲಿ ತಬ್ಲಾದ ’ಬೋಲ್’ಗಳನ್ನು ಉಸುರಿದ್ದರು. ಚೇತರಿಸಿಕೊಳ್ಳುತ್ತಿದ್ದ ಅವರು ನನ್ನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಕಿವಿಯಲ್ಲಿ ತಬ್ಲಾದ ತಾಳಗಳನ್ನು ಹಾಡುತ್ತಿದ್ದರು. ಹೀಗಾಗಿ ಅವರೊಳಗಿನ ಸಂಗೀತ ನನ್ನಲ್ಲಿ ಹರಿದು ಬಂದಿತ್ತು” ಎಂದ ಝಾಕಿರ್, ಎರಡು ವರ್ಷದ ಮಗುವಾಗಿದ್ದಾಗಲೇ ತನಗೆ ತಬ್ಲಾದ ಎಲ್ಲ ತಾಳಗಳು ತಿಳಿದಿದ್ದವು. ತಾನು ತಬ್ಲಾ ಕಲಾವಿದಾಗುತ್ತೇನೆ ಎಂದು ತಂದೆಗೆ ಆಗಲೇ ಗೊತ್ತಿತ್ತು ಎಂದರು.

 ತನ್ನ 18ರ ಪ್ರಾಯದಲ್ಲಿ ಕಾಲೇಜಿನ ಮೊದಲ ವರ್ಷದಲ್ಲಿ ಓದುತ್ತಿದ್ದಾಗ ತಂದೆ ಭಾರತಕ್ಕೆ ಮರಳಬೇಕಾಗಿದ್ದರಿಂದ ಪಂಡಿತ್ ರವಿಶಂಕರ ಅವರ ಮೂರು ಕಾರ್ಯಕ್ರಮ ಗಳಲ್ಲಿ ತಬ್ಲಾ ಸಾಥ್ ನೀಡಲು ತಾನು ಅಮೆರಿಕಕ್ಕೆ ತೆರಳಿದ್ದನ್ನು ಅವರು ನೆನಪಿಸಿಕೊಂಡರು.

ರವಿಶಂಕರರ ನೆರವಿನಿಂದ ಝಾಕಿರ್ ವಾಷಿಂಗ್ಟನ್ ವಿವಿಯಲ್ಲಿ ಸಂಗೀತ ಶಿಕ್ಷಕರಾಗಿ ಎರಡು ವರ್ಷ ಕಾರ್ಯವನ್ನೂ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News