ಓಖಿ ಚಂಡಮಾರುತ: 42ಕ್ಕೇರಿದ ಸಾವಿನ ಸಂಖ್ಯೆ

Update: 2017-12-11 16:17 GMT

ತಿರುವನಂತಪುರ,ಡಿ.11: ಜಿಲ್ಲೆಯ ಮೀನುಗಾರರು ಸೋಮವಾರ ಲ್ಯಾಟಿನ್ ಚರ್ಚ್‌ನ ನೇತೃತ್ವದಲ್ಲಿ ಇಲ್ಲಿಯ ರಾಜಭವನಕ್ಕೆ ಜಾಥಾ ನಡೆಸಿ, ಕಾಣೆಯಾಗಿರುವ ಮೀನುಗಾರರ ಪತ್ತೆಗಾಗಿ ಸಂಘಟಿತ ಶೋಧ ಕಾರ್ಯಾಚರಣೆಯನ್ನು ನಡೆಸಬೇಕು ಮತ್ತು ಚಂಡಮಾರುತ ಪೀಡಿತ ಪ್ರದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಬೇಕು ಎಂದು ಆಗ್ರಹಿಸಿದರು. ಕೇಂದ್ರವು ಚಂಡಮಾರುತ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದೂ ಅವರು ಒತ್ತಾಯಿಸಿದರು. ಇದೇ ವೇಳೆ ನಾಪತ್ತೆಯಾಗಿರುವ ಮೀನುಗಾರರಿಗಾಗಿ ಶೋಧ ಕಾರ್ಯಾಚರಣೆಯು ಇಂದು 11ನೇ ದಿನವನ್ನು ಪ್ರವೇಶಿಸಿದ್ದು, ವಿಳಿಂಝಮ್ ಮತ್ತು ಕೊಚ್ಚಿ ತೀರಗಳಲ್ಲಿ ಇನ್ನೆರಡು ಶವಗಳು ಪತ್ತೆಯಾಗುವುದರೊಂದಿಗೆ ಚಂಡಮಾರುತ ಮತ್ತು ಮಳೆ ಸಂಬಂಧಿತ ದುರ್ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 42ಕ್ಕೇರಿದೆ.

ಪಾಳಯಂನಿಂದ ರಾಜಭವನದವರೆಗೆ ಎರಡು ಕೀ.ಮೀ.ಜಾಥಾದಿಂದಾಗಿ ಈ ವಾಹನ ನಿಬಿಡ ಮಾರ್ಗದಲ್ಲಿ ಸಂಚಾರ ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು.

ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಜಾಥಾದ ನೇತೃತ್ವ ವಹಿಸಿದ್ದ ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥ ಆರ್ಚ್‌ಬಿಷಪ್ ಸೂಸೈ ಪಾಕಿಯಂ ಅವರು, ಚಂಡಮಾರುತದಿಂದಾಗಿ ನಾಪತ್ತೆಯಾಗಿರುವ ಮೀನುಗಾರರ ನಿಖರ ಸಂಖ್ಯೆಯನ್ನು ನೀಡಲು ಅಧಿಕಾರಿಗಳಿಗೆ ಇನ್ನೂ ಸಾಧ್ಯವಾಗದಿರುವುದು ತೀವ್ರ ಕಳವಳದ ವಿಷಯ ವಾಗಿದೆ ಎಂದರು.

ರವಿವಾರ ಪ್ರಾರ್ಥನಾ ಸಭೆಯನ್ನು ನಡೆಸಿದ್ದ ಮೀನುಗಾರರು ಸಂತ್ರಸ್ತ ಕುಟುಂಬಗಳ ಪುನರ್ವಸತಿಗಾಗಿ ಕೇಂದ್ರದಿಂದ ಆರ್ಥಿಕ ನೆರವಿಗಾಗಿ ಆಗ್ರಹಿಸಿದ್ದರು.

300ಕ್ಕೂ ಅಧಿಕ ಮೀನುಗಾರರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಲ್ಯಾಟಿನ್ ಚರ್ಚ್ ಹೇಳಿಕೆಯೊಂದರಲ್ಲಿ ತಿಳಿಸಿದ್ದರೆ, ಅಂತಹವರ ಸಂಖ್ಯೆ 95 ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಚಂಡಮಾರುತದಿಂದ ಸಂಭವಿಸಿರುವ ನಷ್ಟದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವೂ ಕೇಂದ್ರದಿಂದ 1,834 ಕೋ.ರೂ.ಗಳ ಆರ್ಥಿಕ ನೆರವಿಗಾಗಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News