ಕ್ರಿಪ್ಟೋ ಕರೆನ್ಸಿ ಎಂಬ ಗ್ಲೋಬಲ್ ಗುಳ್ಳೆ ಮತ್ತು ನೋಟು ರದ್ದತಿ ಎಂಬ ಇಂಡಿಯನ್ ಸೂಜಿ!

Update: 2017-12-11 18:35 GMT

ಯಾವುದೇ ದೇಶದಲ್ಲಿ ಸರಕಾರಿ ನಿಯಂತ್ರಣವಾಗಲೀ, ಲೆಕ್ಕಾಚಾರವಾಗಲೀ ಇರದ ಈ ಕಣ್ಣಿಗೆ ಕಾಣಿಸುವ- ಕೈಗೆ ಸಿಗದ ವರ್ಚುವಲ್ ಕರೆನ್ಸಿ, ಕಳೆದ ವರ್ಷ ಕೇಂದ್ರ ಸರಕಾರ ನೋಟು ರದ್ದತಿಯ ಪ್ರಕಟಣೆ ಹೊರಡಿಸಿದ ಮರುದಿನದಿಂದಲೇ ಒಂದೇ ಸವನೆ ಏರಿಕೆ ಕಾಣುತ್ತಾ ಬಂದಿದೆ. ಸ್ವತಃ ಗೂಗಲ್ ಸಂಸ್ಥೆ, ಕಳೆದೊಂದು ವರ್ಷದಿಂದ ಭಾರತದಲ್ಲಿ ಬಿಟ್‌ಕಾಯಿನ್ ಬಗ್ಗೆ ಮಾಹಿತಿ ಅರಸುವವರ ಸಂಖ್ಯೆ ಹಠಾತ್ತಾಗಿ ಗಗನಕ್ಕೇರಿದೆ ಎಂದು ಹೇಳಿದೆಯಂತೆ.

ಸ್ಟಾಕ್ ಮಾರ್ಕೆಟಿನಲ್ಲಿ ಕೂತಲ್ಲಿಗೆ ಕಾಸು ಗಳಿಸಿಕೊಳ್ಳುವ ಮತ್ತು ಕಳೆದುಕೊಳ್ಳುವ ವ್ಯವಹಾರದಲ್ಲಿ ಪರಿಣತಿ ಪಡೆದ ಬಳಿಕ ದೇಶದ ವಣಿಕವರ್ಗ ಕಳೆದ ಒಂದು ವರ್ಷದಿಂದ ಹೊಸದೊಂದು ಅಂಗಡಿಗೆ ಹೆಚ್ಚುಹೆಚ್ಚು ಎಡತಾಕುತ್ತಿದ್ದಾರೆ. ಈ ಹೊಸ ಅಂಗಡಿಯವರು ಮೊಣಕೈಗೆ ಹಚ್ಚಿದ ಬೆಲ್ಲ ಈಗ ಹಳಸುವ ದಿನ ಹತ್ತಿರಾದಂತೆ ಕಾಣಿಸತೊಡಗಿದೆ!

ಸುದ್ದಿ ಏನೆಂದರೆ ನವೆಂಬರ್ 8, 2016ರಂದು ಒಂದು Bitcoin ನಾಣ್ಯಕ್ಕೆ ಕೇವಲ 46,942 ರೂಪಾಯಿ ಇದ್ದ ಬೆಲೆ ಇಂದು, 11,18, 807 ರೂಪಾಯಿಗಳಾಗಿವೆ. ಅದರಲ್ಲೂ ಈ ಏರಿಕೆಯಲ್ಲಿ ನಲವತ್ತು ಪ್ರತಿಶತ ಏರಿರುವುದು ಕಳೆದ ಒಂದು ವಾರದಲ್ಲಿ. ಹಾಗಾಗಿ, ಮಾರುಕಟ್ಟೆಯಲ್ಲಿ ಒಂದಿಷ್ಟು ಆಘಾತ, ಅಪನಂಬಿಕೆಗಳು ಕಾಣಿಸಿಕೊಳ್ಳತೊಡಗಿದ್ದು, ಮೊನ್ನೆ ಸ್ವತಃ ಭಾರತೀಯ ರಿಸರ್ವ್ ಬ್ಯಾಂಕ್ ಮೂರನೇ ಬಾರಿಗೆ ಹೇಳಿಕೆಯೊಂದನ್ನು ನೀಡಿ ‘‘ಬಿಟ್‌ಕಾಯಿನ್‌ಗಳಲ್ಲಿ ಹೂಡಿಕೆ ಮಾಡಿದರೆ ಆರ್ಥಿಕ, ಆಪರೇಶನಲ್, ಕಾನೂನು, ಗ್ರಾಹಕರ ರಕ್ಷಣೆ ಮತ್ತು ಭದ್ರತೆಯ ಅಪಾಯ ಇದೆ’’ ಎಂದು ಎಚ್ಚರಿಸಿದೆ.

ಯಾವುದೇ ದೇಶದಲ್ಲಿ ಸರಕಾರಿ ನಿಯಂತ್ರಣವಾಗಲೀ, ಲೆಕ್ಕಾಚಾರ ವಾಗಲೀ ಇರದ ಈ ಕಣ್ಣಿಗೆ ಕಾಣಿಸುವ- ಕೈಗೆ ಸಿಗದ ವರ್ಚುವಲ್ ಕರೆನ್ಸಿ, ಕಳೆದ ವರ್ಷ ಕೇಂದ್ರ ಸರಕಾರ ನೋಟು ರದ್ದತಿಯ ಪ್ರಕಟಣೆ ಹೊರಡಿಸಿದ ಮರುದಿನದಿಂದಲೇ ಒಂದೇ ಸವನೆ ಏರಿಕೆ ಕಾಣುತ್ತಾ ಬಂದಿದೆ. ಸ್ವತಃ ಗೂಗಲ್ ಸಂಸ್ಥೆ, ಕಳೆದೊಂದು ವರ್ಷದಿಂದ ಭಾರತದಲ್ಲಿ ಬಿಟ್‌ಕಾಯಿನ್‌ಬಗ್ಗೆ ಮಾಹಿತಿ ಅರಸುವವರ ಸಂಖ್ಯೆ ಹಠಾತ್ತಾಗಿ ಗಗನಕ್ಕೇರಿದೆ ಎಂದು ಹೇಳಿದೆಯಂತೆ. ಯಾವುದೇ ತೆರಿಗೆ ಭಾರವಿರದ ಈ ವರ್ಚುವಲ್ ಕರೆನ್ಸಿಯನ್ನು ಭಾರತದಲ್ಲಿ ಜಾಗತಿಕ ಶೇ. 20 ಹೆಚ್ಚುವರಿ ಪ್ರೀಮಿಯಂ ಹಣ ನೀಡಿ ಖರೀದಿಸಲಾಗುತ್ತಿದೆ. ಅಧಿಕೃತವಾಗಿ ಕೇಳಿದರೆ, ಅದಕ್ಕೆ ಭಾರತದಲ್ಲಿ ಲಿಕ್ವಿಡಿಟಿ ಸಾಧ್ಯತೆ ಕಡಿಮೆ ಇದೆ ಎಂಬ ಕಾರಣ ಸಿಗುತ್ತಿದೆ.

ಏನಿದು ಕ್ರಿಪ್ಟೋ ಕರೆನ್ಸಿ?

ಕಳೆದ ಒಂಬತ್ತು ವರ್ಷಗಳಿಂದ ಚಾಲ್ತಿಯಲ್ಲಿರುವ ಡಿಜಿಟಲ್ ಕರೆನ್ಸಿ ಇದು. ಸರಳವಾಗಿ ಹೇಳಬೇಕೆಂದರೆ, ಹೊಟೇಲ್‌ಗಳಲ್ಲಿ ಚಿಲ್ಲರೆ ಅಭಾವ ಬಂದಾಗಲೆಲ್ಲ ಕಾಗದದ ಚೀಟಿಗಳಲ್ಲಿ ಐದು ರೂ. ಹತ್ತು ರೂ. ಅಂತ ಬರೆದು ಚಲಾವಣೆಗೆ ತರುತ್ತಾರಲ್ಲ ಅಂತಹದು. ಈಗಿನ ಸ್ಥಿತಿಯಲ್ಲಿ ಈ ಐದು ರೂಪಾಯಿ ಚೀಟಿಯನ್ನು ಐನೂರು ರೂಪಾಯಿ ಕೊಟ್ಟು ಖರೀದಿಸಿಟ್ಟುಕೊಳ್ಳುವ ಹಣದ ಹುಚ್ಚುಹಿಡಿದಿದೆ. ಇದಕ್ಕೆ ಯಾವ ನಿಯಂತ್ರಣವೂ ಇಲ್ಲದಿರುವುದರಿಂದ, ಯಾವುದೇ ತೆರಿಗೆ ಬಲೆಯಾಗಲೀ ಅಥವಾ ಸರಕಾರಿ ನಿಯಮಗಳಾಗಲೀ ಇದನ್ನು ಹಿಡಿದಿಡಲಾರದು. ಕೇಂದ್ರ ಸರಕಾರ 2018ರಲ್ಲಿ ಈ ಕರೆನ್ಸಿಗೆ ನಿಯಂತ್ರಣ ತರಲು ಉದ್ದೇಶಿಸಿದೆಯಂತೆ!

ದೇಶದಲ್ಲಿಂದು 11 ಫ್ಲಾಟ್ ಫಾರಂಗಳ ಮೂಲಕ ಅಂದಾಜು 30,000ಕ್ಕೂ ಮಿಕ್ಕಿ ಮಂದಿ ಭಾರೀ ಪ್ರಮಾಣದಲ್ಲಿ ಈ ವರ್ಚುವಲ್ ಕರೆನ್ಸಿಯಲ್ಲಿ ಹಣ ತೊಡಗಿಸಿದ್ದಾರೆ. ಇದು ಸುರಕ್ಷಿತ ಹೂಡಿಕೆ ಎಂದು ಕಥೆ ಹೇಳ ಹೇಳುತ್ತಲೇ, ಇದೇ ನವೆಂಬರ್ 19ರಂದು ಜಾಗತಿಕ ಫ್ಲಾಟ್ ಫಾರಂ ಒಂದರಲ್ಲಿ (ತೆಥರ್ ಟ್ರೆಶರಿ ವಾಲೆಟ್) ಒಂದೇ ದಿನ 30,950,010 ಡಾಲರ್ ಮೊತ್ತ ಹ್ಯಾಕರ್‌ಗಳ ಪಾಲಾಗಿದೆ!

ಜಗತ್ತಿನಾದ್ಯಂತ ಬಿಟ್‌ಕಾಯಿನ್ ಸೇರಿದಂತೆ ಸುಮಾರು 1,337 ಬ್ರಾಂಡಿನ ಕ್ರಿಪ್ಟೋ ಕರೆನ್ಸಿ ಇಂದು ಲಭ್ಯವಿದ್ದು, ಅವುಗಳ ಒಟ್ಟು ಜಾಗತಿಕ ಮಾರುಕಟ್ಟೆ ಬಂಡವಾಳ ಮೌಲ್ಯ 421,150,367,599 ಡಾಲರ್ ಎಂದು ದಾಖಲೆಗಳು ಹೇಳುತ್ತವೆ.

ನೋಟು ರದ್ದತಿಗೆ ಮೊದಲು ಜಗತ್ತಿನ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯಲ್ಲಿ ಬರಿಯ ಶೇ. 0.4 ಪಾಲು ಹೊಂದಿದ್ದ ಭಾರತ ಆರು ತಿಂಗಳ ಹಿಂದೆ ಮೇ ತಿಂಗಳ ಹೊತ್ತಿಗೆ ಜಾಗತಿಕ ವ್ಯವಹಾರದ ಶೇ. 10 ಪಾಲು ಮೀರಿತ್ತು ಎಂದು ತಜ್ಞರು ಹೇಳಿದ್ದಾರೆ. ಅದು ಕಳೆದ ಆರು ತಿಂಗಳಲ್ಲಿ ಅಲ್ಲಿಂದ ಮತ್ತಷ್ಟು ಮೇಲೇರಿರುವ ಎಲ್ಲ ಸೂಚನೆಗಳೂ ಇವೆ. ತೆರಿಗೆ ಮತ್ತು ಸರಕಾರದ ಕಣ್ಣು ತಪ್ಪಿಸಿ ಇಲ್ಲಿ ಹೂಡಿಕೆ ಆಗಿರುವ ಅಗಾಧ ಮೊತ್ತ, ಕ್ಯಾಶ್‌ಲೆಸ್‌ಆರ್ಥಿಕತೆಯ ಹೆಸರಲ್ಲಿ ಹೂಡಿಕೆದಾರರಿಗೆ ಕೋಟಿಗಟ್ಟಲೆ ಲಾಭ ತರುತ್ತಿದೆ. ಈ ಲಾಭ ಬಂದಿರುವ ವೇಗ ಎಷ್ಟಿದೆ ಎಂದರೆ, ಕಳೆದ ಒಂದು ವಾರದಲ್ಲಿ ಸ್ವತಃ ಹೂಡಿಕೆದಾರರು ಮತ್ತು ಸರಕಾರ ಬೆಚ್ಚಿಬಿದ್ದಿದೆ!

 ಒಂದು ವೇಳೆ, ಕ್ರಿಪ್ಟೋ ಕರೆನ್ಸಿ ದೇಶದಲ್ಲಿ ಕಾನೂನುಬದ್ಧ ಆದರೆ,

ಅದು:

♦ ರಿಸರ್ವ್ ಬ್ಯಾಂಕ್ ಕಾಯ್ದೆ 1934ರ ಅಡಿ ಬರಬೇಕು.

♦ ಅಲ್ಲಿನ ಹೂಡಿಕೆದಾರರು ತೆರಿಗೆ ಬಲೆಯೊಳಗೆ ಬರಬೇಕು.
♦ ಹೂಡಿಕೆ-ಖರೀದಿಗಳು ರಿಸರ್ವ್ ಬ್ಯಾಂಕಿನ ಸೂಚನೆಗಳಡಿ ನಡೆಯಬೇಕು.
♦ ವಿದೇಶಿ ಪಾವತಿಗಳು ಎಫ್‌ಇಎಂಎ ಕಾಯ್ದೆ ವ್ಯಾಪ್ತಿಗೆ ಬರಬೇಕು.
♦ ಕ್ರಿಪ್ಟೋ ಕರೆನ್ಸಿಗಳಲ್ಲಿ ಬಂದ ಲಾಭಕ್ಕೆ ಫಲಾನುಭವಿ ತೆರಿಗೆ ತೆರಬೇಕು.

ಇದಾವುದನ್ನೂ ಮಾಡದೇ, ನೇರವಾಗಿ ಈ ಮಾರುಕಟ್ಟೆಯಲ್ಲಿ ಆಡುವುದಕ್ಕೆ ದೇಶದ ಸಿರಿವಂತ ಹೂಡಿಕೆದಾರರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಮತ್ತು ಬಡವರಿಗೆ ಮಾತ್ರ ಸಬ್ಸಿಡಿ ಮನ್ನಾ, ದೊಡ್ಡ ಪ್ರಮಾಣದ ಜಿಎಸ್‌ಟಿ ತೆರಿಗೆ, ಆದಾಯ ತೆರಿಗೆ ಬಲೆ ವ್ಯಾಪ್ತಿ ಹೆಚ್ಚಳ ಎಂಬ ಹೆಸರುಗಳಲ್ಲಿ ಬದುಕು ನರಕ ಮಾಡಲಾಗುತ್ತಿದೆ ಎಂದರೆ ಇದನ್ನು ಹಗರಣ ಎನ್ನದೆ ಬೇರಾವ ಹೆಸರಿನಿಂದ ಕರೆಯಬೇಕು?
ಕೃಪೆ: avadhimag.com

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News

ಜಗದಗಲ
ಜಗ ದಗಲ