ಪಾಕಿಸ್ತಾನವನ್ನು ಚುನಾವಣಾ ಪ್ರಚಾರಕ್ಕೆ ಕರೆ ತಂದಿರುವ ಪ್ರಧಾನಿ ಮೋದಿ

Update: 2017-12-11 19:00 GMT

ಕಳೆದ ಲೋಕಸಭಾಚುನಾವಣೆಯಲ್ಲಿ ಬಿಜೆಪಿ ಮತ ಯಾಚಿಸಿರುವುದು ಪಾಕಿಸ್ತಾನವನ್ನು ಬೆಟ್ಟು ಮಾಡಿ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಭಾರತೀಯ ಸೈನಿಕರ ತಲೆಕತ್ತರಿಸಿದ ಘಟನೆ ಚುನಾವಣಾ ಪ್ರಚಾರದಲ್ಲಿ ಮುಖ್ಯ ವಿಷಯವಾಯಿತು. ಕೊನೆಗೆ ಬಿಜೆಪಿ ಭರ್ಜರಿ ಗೆಲುವನ್ನು ತನ್ನದಾಗಿಸಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದರು. ಆ ಬಳಿಕ ಅವರು ಪಾಕಿಸ್ತಾನದ ಅಂದಿನ ಪ್ರಧಾನಿ ನವಾಝ್ ಶರೀಫ್ ಅವರ ಮಗಳ ಮದುವೆಗೆ ತೆರಳಿ ಬಿರಿಯಾನಿ ಉಂಡು ಅದರ ಋಣವನ್ನು ತೀರಿಸಿದರು ಎನ್ನುವುದು ಬೇರೆ ವಿಷಯ. ಒಟ್ಟಿನಲ್ಲಿ ಕಳೆದ ಹಲವು ದಶಕಗಳಿಂದ ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಪಾಕಿಸ್ತಾನ ಪರೋಕ್ಷವಾಗಿ ಸಹಕರಿಸುತ್ತಿರುವುದಂತೂ ನಿಜ. ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕವೂ ನಮ್ಮ ಸೈನಿಕರ ಮೇಲೆ ನಡೆಯುತ್ತಿರುವ ಬರ್ಬರ ದಾಳಿ ನಿಂತಿಲ್ಲ.

ವಿಪರ್ಯಾಸವೆಂದರೆ, ಇದೀಗ ಗುಜರಾತ್ ಚುನಾವಣೆ ಕಾವು ಪಡೆಯುತ್ತಿದ್ದಂತೆಯೇ ಪ್ರಚಾರಕ್ಕೆ ಮತ್ತೆ ಬಿಜೆಪಿ ‘ಪಾಕಿಸ್ತಾನ’ದ ನೆರವು ಪಡೆದಿದೆ. ಗುಜರಾತ್‌ನಲ್ಲಿ ಬಿಜೆಪಿ ಮೋದಿಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳ ಮೇಲೆ ಬಾಣ ಎಸೆಯುತ್ತಿವೆ. ಇತ್ತ ಮೋದಿಯವರು ವಿರೋಧಿಗಳನ್ನು ಎದುರಿಸಲು ಮತ್ತೆ ಪಾಕಿಸ್ತಾನವೆನ್ನುವ ಬಂಕರ್‌ನ್ನು ಬಳಸಿಕೊಳ್ಳುತ್ತಿದ್ದಾರೆ. ಗುಜರಾತ್‌ನಲ್ಲಿ ಎದುರಾಗುತ್ತಿರುವ ಮುಖಭಂಗಗಳಿಂದ ಹತಾಶೆಗೊಂಡಿರುವ ಮೋದಿ ತಮ್ಮ ಮಾತಿನಲ್ಲಿನ ಹಿಡಿತನವನ್ನು ಕಳೆದುಕೊಂಡಿದ್ದಾರೆ. ತಮ್ಮ ಸ್ಥಾನದ ಘನತೆಯನ್ನು ಮರೆತು, ಗುಜರಾತ್ ಚುನಾವಣೆಗೂ ಪಾಕಿಸ್ತಾನಕ್ಕೂ ನಂಟು ಹಾಕಿದ್ದಾರೆ. ‘ತನ್ನನ್ನು ಮುಗಿಸಲು ಕಾಂಗ್ರೆಸ್ ಮುಖಂಡರು ಪಾಕಿಸ್ತಾನಕ್ಕೆ ಸುಪಾರಿ ಕೊಟ್ಟಿದ್ದಾರೆ’’ ಎಂಬಂತಹ ಹೇಳಿಕೆಯನ್ನು ಸಾರ್ವಜನಿಕ ಸಭೆಯಲ್ಲಿ ಒಮ್ಮೆ ನೀಡಿದರೆ, ಇನ್ನೊಮ್ಮೆ, ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವ ನಿರ್ದೇಶನವನ್ನು ಕಾಂಗ್ರೆಸ್‌ಗೆ ಪಾಕಿಸ್ತಾನ ನೀಡಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪಗಳನ್ನು ಪಕ್ಷದೊಳಗಿರುವ ಇತರ ಯಾವುದೇ ಮುಖಂಡರು ಮಾಡಿದ್ದಿದ್ದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿರಲಿಲ್ಲ. ಆದರೆ ಇದನ್ನು ಹೇಳಿದವರು ಈ ದೇಶದ ಪ್ರಧಾನಿ. ಪಾಕಿಸ್ತಾನದ ಸೇನೆಯ ಮಾಜಿ ಅಧಿಕಾರಿ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸುವುದು, ಕಾಂಗ್ರೆಸ್ ಮುಖಂಡರು ಪಾಕಿಸ್ತಾನದಲ್ಲಿ ಸಭೆ ನಡೆಸುವುದು ಇವೆಲ್ಲ ತೀರಾ ಗಂಭೀರ ಆರೋಪಗಳು. ದೇಶದ ಭದ್ರತೆಗೆ ಸಂಬಂಧಿಸಿದ ವಿಷಯವೂ ಹೌದು. ಚುನಾವಣೆಯ ವೇದಿಕೆಯಲ್ಲಿ ಇಂತಹ ಆರೋಪಗಳನ್ನು ಮಾಡುವ ಮೂಲಕ, ಅವರು ದೇಶಕ್ಕೆ ಅವಮಾನ ಮಾಡಿದ್ದಾರೆ.

ದೇಶದ ಪ್ರಧಾನಿಯನ್ನು ಹತ್ಯೆಗೈಯಲು ರಾಜಕೀಯ ನಾಯಕರು ಸುಪಾರಿ ನೀಡಿದ್ದಾರಾದರೆ ಎನ್ನುವುದು ಸಣ್ಣ ಆರೋಪ ಅಲ್ಲ. ದೇಶವನ್ನೇ ಅಲ್ಲೋಲ ಕಲ್ಲೋಗೊಳಿಸುವ ವಿಷಯವಿದು. ಹೀಗಿರುವಾಗ ಸುಪಾರಿ ನೀಡಿದವರ ಬಂಧನ ಯಾಕೆ ಆಗಿಲ್ಲ ಎನ್ನುವ ಪ್ರಶ್ನೆಗೆ ಪ್ರಧಾನಿ ಉತ್ತರಿಸಬೇಕಾಗುತ್ತದೆ. ಸುಮಾರು ಒಂದು ವರ್ಷದ ಅಂದರೆ ಗುಜರಾತ್ ಚುನಾವಣೆಗಾಗಿಯೇ ಈ ಭಯಂಕರ ಮಾಹಿತಿಯನ್ನು ಗುಟ್ಟಾಗಿ ಇಡಲಾಗಿತ್ತೇ? ಪ್ರಧಾನಿಯವರಿಗೆ ಈ ಕುರಿತಂತೆ ಮಾಹಿತಿ ದೊರಕಿರುವುದು ಯಾವ ಮೂಲದಿಂದ? ಎನ್ನುವ ವಿವರಗಳನ್ನು ಮೋದಿಯವರು ದೇಶದ ಮುಂದಿಡಬೇಕಾಗುತ್ತದೆ.

ಇಂತಹ ಗಂಭೀರ ಪ್ರಕರಣವನ್ನು ‘ಚುನಾವಣಾ ವಿಷಯ’ಯವಾಗಿ ಪರಿವರ್ತಿಸುವುದು ಪ್ರಧಾನಿಯ ಘನತೆಗೆ ತರವೇ? ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವುದನ್ನು ಪಾಕಿಸ್ತಾನ ತೀರ್ಮಾನ ಮಾಡಿದೆ ಎನ್ನುವ ಆರೋಪವೂ ಸಂಘಪರಿವಾರದ ತಳಸ್ತರದ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಹರಡುವ ಅಗ್ಗದ ವದಂತಿಯಂತಿದೆ. ಆದುದರಿಂದ ಪ್ರಧಾನಿಯವರು ತಮ್ಮ ಹೇಳಿಕೆಯನ್ನು ದೇಶದ ಮುಂದೆ ಇನ್ನಷ್ಟು ವಿವರವಾಗಿ ಮುಂದಿಡಬೇಕು. ಇಂತಹ ಗಂಭೀರ ಆರೋಪಕ್ಕೆ ಪೂರಕವಾದ ಸಾಕ್ಷಿಗಳನ್ನು ಒದಗಿಸಬೇಕು. ಇಲ್ಲವಾದರೆ ಅವರು ಈ ಹೇಳಿಕೆಗಾಗಿ ದೇಶದ ಮುಂದೆ ಕ್ಷಮೆ ಯಾಚಿಸಬೇಕು.

ಕಾಂಗ್ರೆಸ್ ಮುಖಂಡ ಮಣಿ ಶಂಕರ್ ಅಯ್ಯರ್ ಇತ್ತೀಚೆಗೆ ಮೋದಿಯ ಹೇಳಿಕೆಯೊಂದನ್ನು ಖಂಡಿಸುತ್ತಾ ‘ನೀಚ ಮನುಷ್ಯ’ ಎಂದು ಕರೆದರು. ಆದರೆ ಹಿಂದಿಯಲ್ಲಿ ‘ನೀಚ ಮನುಷ್ಯ’ ಎನ್ನುವುದು ಜಾತಿ ನಿಂದನೆಯ ಧ್ವನಿ ಪಡೆಯುತ್ತದೆ. ಈ ಮಾತನ್ನು ಮುಂದಿಟ್ಟು ನರೇಂದ್ರ ಮೋದಿಯವರು ಜನರ ಅನುಕಂಪವನ್ನು ಗಿಟ್ಟಿಸಲು ಯತ್ನಿಸಿದರು. ಜೊತೆಗೆ, ಇನ್ನಷ್ಟು ಆರೋಪಗಳನ್ನು ಅಯ್ಯರ್ ತಲೆಯ ಮೇಲೆ ಕಟ್ಟಲು ಯತ್ನಿಸಿದರು. ಆದರೆ ಕಾಂಗ್ರೆಸ್ ತಕ್ಷಣ ಆಯ್ಯರ್ ಮೇಲೆ ಕ್ರಮ ಕೈಗೊಂಡಿತು. ಅವರನ್ನು ಪಕ್ಷದಿಂದ ಅಮಾನತು ಮಾಡಿತು. ಆದರೆ ಮೋದಿಯವರು ತಮ್ಮ ಮಾತನ್ನು ಈವರೆಗೆ ತಿದ್ದಿಕೊಂಡಿಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಈ ಬಗ್ಗೆ ತೀವ್ರ ನೋವಿನಿಂದ ಹೇಳಿಕೆಗಳನ್ನು ನೀಡಿದ್ದಾರೆ. ಮೋದಿಯವರು ದೇಶದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ನರೇಂದ್ರ ಮೋದಿ ಸದಾ ಅಭಿವೃದ್ಧಿಯ ಮಂತ್ರವನ್ನು ಜಪಿಸುತ್ತಿರುವವರು. ತಮ್ಮ ಆಡಳಿತ ಅಭಿವೃದ್ಧಿಗೆ ಆದ್ಯತೆಯನ್ನು ನೀಡಿದೆ ಎನ್ನುವುದನ್ನು ಪದೇ ಪದೇ ಹೇಳುತ್ತಾ ಬರುತ್ತಿದ್ದಾರೆ. ಹಾಗಿರುವಾಗ, ಗುಜರಾತ್ ಚುನಾವಣೆಯಲ್ಲಿ ತಾನು ಮಾಡಿರುವ ಅಭಿವೃದ್ಧಿಯನ್ನು ಮುಂದಿಟ್ಟು ಮತ ಯಾಚನೆ ಮಾಡಲು ಯಾಕೆ ಅವರಿಗೆ ಸಾಧ್ಯವಾಗುತ್ತಿಲ್ಲ? ಗುಜರಾತ್ ದೇಶಕ್ಕೇ ಮಾದರಿ ಎಂದು ಮೋದಿ ಹೇಳುತ್ತಾ ಬಂದಿದ್ದಾರೆ. ಹಾಗಾದರೆ ಗುಜರಾತ್‌ನ ಜನರು ಯಾಕೆ ಬಿಜೆಪಿಗೆ ತಿರುಗಿ ಬಿದ್ದಿದ್ದಾರೆ? ಗುಜರಾತ್ ನಿಜಕ್ಕೂ ಅಭಿವೃದ್ಧಿಯನ್ನು ಕಂಡಿದ್ದರೆ, ಅದನ್ನೇ ಗುಜರಾತ್‌ನ ಜನರ ಮುಂದಿಡಬಹುದಲ್ಲವೇ? ನೋಟು ನಿಷೇಧದಿಂದ ಮತ್ತು ಜಿಎಸ್‌ಟಿಯಿಂದ ದೇಶಕ್ಕಾಗಿರುವ ಲಾಭವನ್ನು ಮುಂದಿಟ್ಟು ಮತ ಯಾಚನೆ ಮಾಡಬಹುದು. ತಮ್ಮ ನೆಲದ ನಾಯಕನೊಬ್ಬ ಈ ದೇಶದ ಪ್ರಧಾನಿಯಾಗಿರುವಾಗ, ಗುಜರಾತ್ ಜನರು ಒಂದಾಗಿ ಅವರ ಜೊತೆಗೆ ನಿಲ್ಲಬೇಕಾಗಿತ್ತು. ಆದರೆ ಗುಜರಾತ್‌ನಲ್ಲಿ ಬಿಜೆಪಿ ಕುರಿತಂತೆ ವ್ಯಾಪಕ ಅಸಮಾಧಾನವಿದೆ.

ವಿಶೇಷವೆಂದರೆ, ಗುಜರಾತ್‌ನ ಜನರು ರಾಜ್ಯ ಸರಕಾರದ ವೈಫಲ್ಯಕ್ಕಿಂತಲೂ, ಕೇಂದ್ರ ಸರಕಾರದ ಕೆಟ್ಟ ಆಡಳಿತದ ವಿರುದ್ಧ ಧ್ವನಿಯೆತ್ತುತ್ತಿದ್ದಾರೆ. ನೋಟು ನಿಷೇಧ ಮತ್ತು ಜಿಎಸ್‌ಟಿಯಿಂದಾಗಿ ಗುಜರಾತ್‌ನ ಉದ್ಯಮ ವಲಯ ತಲ್ಲಣಿಸಿ ಕೂತಿದೆ. ವ್ಯಾಪಾರ ಸಂಪೂರ್ಣ ಕುಸಿದಿದೆ. ನಿರುದ್ಯೋಗ ಹೆಚ್ಚಿದೆ. ಇದೇ ಸಂದರ್ಭದಲ್ಲಿ ದಲಿತರು, ಪಟೇಲರು ತಮ್ಮ ತಮ್ಮ ಜಾತಿಯನ್ನು ಸಂಘಟಿಸಿ ಬಿಜೆಪಿಯ ಹಿಂದುತ್ವಕ್ಕೆ ಸವಾಲು ಎಸೆದಿದ್ದಾರೆ. ಇತ್ತ ಬಿಜೆಪಿಯ ಹಿಂದುತ್ವವೂ ಕೈಕೊಟ್ಟಿದೆ. ಅತ್ತ ಅಭಿವೃದ್ಧಿ ಮಂತ್ರವೂ ಕೈ ಕೊಟ್ಟಿದೆ. ಈ ಕಾರಣದಿಂದ ನರೇಂದ್ರ ಮೋದಿಯವರು ಹತಾಶೆಗೊಂಡಿದ್ದಾರೆ. ಪರಿಣಾಮವಾಗಿಯೇ, ಒಬ್ಬ ಪ್ರಧಾನಿ ಆಡಬಾರದ ಮಾತುಗಳನ್ನು ಅವರು ಆಡುತ್ತಿದ್ದಾರೆ.

ಒಂದಂತೂ ಸತ್ಯ. ಪ್ರಧಾನಿಯ ಇಂತಹ ಕೀಳು ಹೇಳಿಕೆಗಳು ಗುಜರಾತ್‌ನಲ್ಲಿ ಮೋದಿಯ ಪ್ರಭಾವ ಇಳಿಮುಖವಾಗುತ್ತಿರುವುದರ ಸೂಚನೆಯನ್ನು ನೀಡಿದೆ. ಜೊತೆಗೆ ಮೋದಿಯ ಈ ಆರೋಪವನ್ನು ಯಾರೂ ಗಂಭೀರವಾಗಿ ಸ್ವೀಕರಿಸಿಲ್ಲ. ಬಿಜೆಪಿ ವಲಯದಲ್ಲೇ ಪ್ರಧಾನಿಯ ಹೇಳಿಕೆಯ ವಿರುದ್ಧ ಟೀಕೆಗಳು ಬರುತ್ತಿವೆ. ಶತ್ರುಘ್ನ ಸಿನ್ಹಾ ಈ ಹೇಳಿಕೆಯನ್ನು ವ್ಯಂಗ್ಯವಾಡಿದ್ದಾರೆ. ಅದೇ ರೀತಿ, ಶಿವಸೇನೆ ಕೂಡ ಮೋದಿಯ ಸುಳ್ಳು ಹೇಳಿಕೆಗಳನ್ನು ಟೀಕಿಸಿದೆ. ಚುನಾವಣೆಯಲ್ಲಿ ಮೋದಿಯವರು ಅಭಿವೃದ್ಧಿಯ ಕುರಿತಂತೆ ಯಾಕೆ ಮಾತನಾಡುತ್ತಿಲ್ಲ ಎಂದು ಶಿವಸೇನೆ ಪ್ರಶ್ನಿಸಿದೆ. ಸುಳ್ಳುಗಳನ್ನು, ಭ್ರಮೆಗಳನ್ನು ಬಿತ್ತಿ ಸದಾ ಜನರನ್ನು ಯಾಮಾರಿಸಲು ಸಾಧ್ಯವಿಲ್ಲ ಎನ್ನುವುದು ಪ್ರಧಾನಿ ಮೋದಿಯವರಿಗೆ ಗುಜರಾತ್ ಚುನಾವಣೆಯ ಫಲಿತಾಂಶವೇ ಮನವರಿಕೆ ಮಾಡಿಕೊಡುವ ಸಾಧ್ಯತೆಗಳು ಕಾಣುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News