ಕಿವಿ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಪರಿಶೀಲಿಸಿದ ವೈದ್ಯರಿಗೆ ಆಘಾತ!

Update: 2017-12-12 11:59 GMT

ಮಾನವ ಶರೀರವು ತನ್ನೊಳಗೆ ಯಾವುದೇ ಪರಕೀಯ ವಸ್ತುವನ್ನು ಸಹಿಸುವುದಿಲ್ಲ. ಅದು ಸಣ್ಣ ಮುಳ್ಳು, ಗಾಜಿನ ಚೂರಾಗಲಿ ಅಥವಾ ಮೊಳೆಯೇ ಆಗಿರಲಿ, ಶರೀರವು ನೋವಿನಿಂದ ನಲುಗುತ್ತದೆ. ಹೀಗಿರುವಾಗ ಯಾವುದೇ ಕೀಟ ಮಾನವನ ಅಂಗಾಂಗ ಗಳಲ್ಲಿ ವಾಸವಾಗಿರುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವೇ?

ಆದರೆ ಮಾನವನ ಶರೀರದಲ್ಲಿ ಕೀಟಗಳು ಪತ್ತೆಯಾಗಿರುವ ಹಲವಾರು ಪ್ರಕರಣಗಳು ವರದಿಯಾಗಿವೆ. ಇಂತಹ ವಿಲಕ್ಷಣ ಪ್ರಕರಣವೊಂದು ಇತ್ತೀಚಿಗೆ ಚೀನಾದಲ್ಲಿ ವರದಿಯಾಗಿದೆ. ಅಲ್ಲಿಯ ವೈದ್ಯರು ವ್ಯಕ್ತಿಯೋರ್ವನ ಕಿವಿಯಲ್ಲಿ 26 ಜೀವಂತ ಜಿರಳೆಗಳನ್ನು ಪತ್ತೆ ಹಚ್ಚಿದ್ದಾರೆ.

ಈ ವ್ಯಕ್ತಿ ತುಂಬ ಸಮಯದಿಂದ ಕಿವಿನೋವು ಅನುಭವಿಸುತ್ತಿದ್ದು, ನೋವನ್ನು ಇನ್ನು ತಡೆಯಲು ಸಾಧ್ಯವಿಲ್ಲ ಎಂಬ ಸ್ಥಿತಿಯಲ್ಲಿ ವೈದ್ಯರ ಬಳಿ ತೆರಳಿದ್ದ. ವೈದ್ಯರು ಕಿವಿಯನ್ನು ಪರಿಶೀಲಿಸಿದಾಗ ಒಳಗಿನಿಂದ ಏನೋ ತಮ್ಮನ್ನೇ ದಿಟ್ಟಿಸಿ ನೋಡುತ್ತಿದೆ ಎಂದು ಅವರಿಗೆ ಭಾಸವಾಗಿತ್ತು. ಯಾವುದೋ ಕೀಟ ಆತನ ಕಿವಿಯಲ್ಲಿ ಸೇರಿಕೊಂಡಿರಬೇಕು ಎಂದುಕೊಂಡ ವೈದ್ಯರು ವಿವರವಾದ ತಪಾಸಣೆಯನ್ನು ನಡೆಸಿದಾಗ ತಮ್ಮ ಬದುಕಿನಲ್ಲಿಯೇ ಬಹುದೊಡ್ಡ ಆಘಾತವನ್ನು ಅನುಭವಿಸಿದ್ದರು, ಏಕೆಂದರೆ ಜಿರಳೆಗಳ ಕುಟುಂಬವೊಂದು ಆತನ ಕಿವಿಯಲ್ಲಿ ಆಶ್ರಯ ಪಡೆದುಕೊಂಡಿತ್ತು.

 ತಕ್ಷಣವೇ ಶಸ್ತ್ರಚಿಕಿತ್ಸೆಗೆ ಸಜ್ಜಾದ ವೈದ್ಯರು ಆ ವ್ಯಕ್ತಿಗೆ ಅರಿವಳಿಕೆ ನೀಡಿ ಕಿವಿಯಲ್ಲಿದ್ದ ಜಿರಳೆಗಳನ್ನು ಒಂದೊಂದಾಗಿ ಹೊರಗೆಳೆಯಲು ಆರಂಭಿಸಿದ್ದರು. ಶಸ್ತ್ರಚಿಕಿತ್ಸೆ ಪೂರ್ಣಗೊಂಡಾಗ 26 ಜಿರಳೆಗಳು ಕಿವಿಯಿಂದ ಹೊರಬಂದಿದ್ದವು ಮತ್ತು ಅವೆಲ್ಲವೂ ಜೀವಂತವಾಗಿದ್ದವು.

0.3 ಇಂಚು ಉದ್ದದ ಹೆಣ್ಣು ಜಿರಳೆಯೊಂದು ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಗಿತ್ತು. ವ್ಯಕ್ತಿಯ ಕಿವಿಯನ್ನು ಹೊಕ್ಕಿದ್ದ ಅದು ಅಲ್ಲಿಯೇ ಮೊಟ್ಟೆಗಳನ್ನಿಟ್ಟಿತ್ತು. ಕಿವಿಯೊಳಗಿನ ಬೆಚ್ಚಗಿನ ವಾತಾವರಣ ಮೊಟ್ಟೆಗಳು ಒಡೆದು ಮರಿಗಳು ಹೊರಬೀಳಲು ಅತ್ಯಂತ ಪೂರಕವಾಗಿತ್ತು ಮತ್ತು ಈ ಎಲ್ಲ ಮರಿಗಳೂ ದೊಡ್ಡದಾಗುತ್ತ ಆತನ ಕಿವಿಯಲ್ಲಿ ಹಾಯಾಗಿ ಓಡಾಡಿ ಕೊಂಡಿದ್ದವು.

ಈ ವ್ಯಕ್ತಿಯ ಅದೃಷ್ಟ ಚೆನ್ನಾಗಿತ್ತು. ಆತ ಸಕಾಲದಲ್ಲಿ ಆಸ್ಪತ್ರೆಗೆ ಬಂದಿರದಿದ್ದರೆ ಕಿವಿಯನ್ನೇ ಕಳೆದುಕೊಳ್ಳುತ್ತಿದ್ದ ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News