ಡೋಕಾ ಲಾದಲ್ಲಿ ಹೊಸ ರಸ್ತೆಗಳನ್ನು ನಿರ್ಮಿಸಿದ ಚೀನಾ: ಉಪಗ್ರಹ ಚಿತ್ರದಿಂದ ಬಯಲು

Update: 2017-12-12 14:59 GMT

ಹೊಸದಿಲ್ಲಿ, ಡಿ.12: ಸಿಕ್ಕಿಂ ರಾಜ್ಯದ ಪೂರ್ವಭಾಗದಲ್ಲಿರುವ ವಿವಾದಿತ ಗಡಿ ಪ್ರದೇಶ ಡೋಕಾ ಲಾದಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಚೀನಾವು ಹಲವು ಹೊಸ ರಸ್ತೆಗಳನ್ನು ನಿರ್ಮಿಸಿರುವುದು ಹೊಸ ಉಪಗ್ರಹ ಚಿತ್ರಗಳಿಂದ ಬಯಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಪ್ರದೇಶದ ತುಸು ದೂರದಲ್ಲಿ ಈ ವರ್ಷದ ಆರಂಭದಲ್ಲಿ ಭಾರತೀಯ ಮತ್ತು ಚೀನಾದ ಸೇನೆಗಳು ಸುಮಾರು 70 ದಿನಗಳ ಕಾಲ ಮುಖಾಮುಖಿಯಾಗಿದ್ದವು.

 ಇತ್ತೀಚೆಗೆ ನಿರ್ಮಿಸಲಾಗಿರುವ ರಸ್ತೆಯು ಒಂದು ಕಿ.ಮೀ ವಿಸ್ತಾರ ಹೊಂದಿದ್ದು ಡೊಕಾ ಲಾದಲ್ಲಿರುವ ಭಾರತೀಯ ಸೇನಾ ಶಿಬಿರದಿಂದ ಸ್ವಲ್ಪವೇ ದೂರದಲ್ಲಿದೆ. ಎರಡನೇ ರಸ್ತೆಯನ್ನು ಸೇನೆ ಮುಖಾಮುಖಿಯಾದ ಪ್ರದೇಶದಿಂದ 7.3 ಕಿ.ಮೀ ದೂರದಲ್ಲಿ ನಿರ್ಮಿಸಲಾಗಿದ್ದು ಉತ್ತರದ ಕಡೆಗೆ 1.2 ಕಿ.ಮೀ ವಿಸ್ತಾರವನ್ನು ಹೊಂದಿದೆ. ಇನ್ನು ವಿವಾದಿತ ಸಿಂಚೆ ಲಾ ಪಾಸ್ ಸಮೀಪ ಹಲವು ಸಣ್ಣ ರಸ್ತೆಗಳನ್ನು ಚೀನಾ ನಿರ್ಮಿಸಿರುವುದಾಗಿ ಕಳೆದ ಅಕ್ಟೋಬರ್‌ನಲ್ಲಿ ಆಂಗ್ಲ ಮಾಧ್ಯಮ ವರದಿ ಮಾಡಿತ್ತು.ಕಳೆದ 13 ತಿಂಗಳ ಉಪಗ್ರಹ ಚಿತ್ರಗಳನ್ನು ತಾಳೆ ಹಾಕಿದಾಗ ಹೊಸ ರಸ್ತೆಗಳನ್ನು ಫೆಬ್ರವರಿ 19ರಿಂದ ನಿರ್ಮಾಣ ಮಾಡಲಾಗಿದೆ ಎಂಬುದು ತಿಳಿಯುತ್ತದೆ.

ಅದರಲ್ಲೂ ಕನಿಷ್ಟ ಎರಡು ರಸ್ತೆಗಳನ್ನು ತೀರಾ ಇತ್ತೀಚೆಗೆ ಅಂದರೆ ಅಕ್ಟೋಬರ್ 17 ಮತ್ತು ಡಿಸೆಂಬರ್ 8ರ ಮಧ್ಯೆ ನಿರ್ಮಿಸಲಾಗಿದೆ. ಈ ವರ್ಷ ಜೂನ್ ಮಧ್ಯ ಭಾಗದಲ್ಲಿ ಭಾರತವನ್ನು ಅದರ ಈಶಾನ್ಯ ರಾಜ್ಯಗಳ ಜೊತೆ ಸಂಪರ್ಕಿಸುವ ಕಡಿದಾದ ಪ್ರದೇಶ ಚಿಕನ್ ನೆಕ್ (ಕೋಳಿ ಕತ್ತು) ಸಮೀಪ ಚೀನಾವು ರಸ್ತೆ ನಿರ್ಮಿಸಲು ಮುಂದಾದಾಗ ಭಾರತೀಯ ಸೇನೆಯು ಸಿಕ್ಕಿಂ ಗಡಿಯನ್ನು ದಾಟಿ ಅದನ್ನು ತಡೆದಿತ್ತು. ಸುಮಾರು ಎರಡು ತಿಂಗಳ ಕಾಲ ಎರಡೂ ದೇಶಗಳ ಸೇನೆಯು ಕೇವಲ 150 ಮೀಟರ್ ಅಂತರದಲ್ಲಿ ಪರಸ್ಪರರನ್ನು ದಿಟ್ಟಿಸಿ ನೋಡುವ ಮೂಲಕ ದಶಕಗಳಲ್ಲೇ ಅತ್ಯಂತ ಸೂಕ್ಷ್ಮ ಸನ್ನಿವೇಶವನ್ನು ಈ ಪ್ರದೇಶದಲ್ಲಿ ಸೃಷ್ಟಿಸಿದ್ದವು. ಅಂತಿಮವಾಗಿ ಎರಡೂ ದೇಶಗಳು ತಮ್ಮ ಸೇನೆಯನ್ನು ಹಿಂಪಡೆಯಲು ಒಪ್ಪುವ ಮೂಲಕ ಪರಿಸ್ಥಿತಿ ಸುಧಾರಿಸಿತ್ತು. ಮುಖ್ಯವಾಗಿ ಚೀನಾ ನಿರ್ಮಿಸಿರುವ ಯಾವುದೇ ಹೊಸ ರಸ್ತೆ ಕೂಡಾ ನೇರವಾಗಿ ದಕ್ಷಿಣದ ಚಿಕನ್ ನೆಕ್ ಕಡೆಗೆ ಸಾಗುವುದಿಲ್ಲ.

ರಷ್ಯಾ, ಭಾರತ ಮತ್ತು ಚೀನಾದ ವಿದೇಶಾಂಗ ಸಚಿವರ ಸಭೆಗೂ ಮುನ್ನ ನಿನ್ನೆ ಭಾರತದ ವಿದೇಶ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ವಿದೇಶಾಂಗ ಸಚಿವಾಲಯದ ಪ್ರಕಾರ ಈ ಮಾತುಕತೆಯು ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ಚೇತನವನ್ನು ನೀಡಿದೆ. ಆದರೆ ಚೀನಾದ ವಿದೇಶಾಂಗ ಸಚಿವಾಲಯ ಇಂದು ನೀಡಿರುವ ಹೇಳಿಕೆಯಲ್ಲಿ ಡೋಕಾ ಲಾ ಮುಖಾಮುಖಿಯಿಂದ ಎರಡು ದೇಶಗಳ ನಡುವಿ ಸಂಬಂಧಕ್ಕೆ ಧಕ್ಕೆಯಾಗಿದೆ ಮತ್ತು ಕಳೆದ ವರ್ಷ ಎರಡೂ ದೇಶಗಳ ಮಧ್ಯೆ ಸಂಬಂಧ ಸುಧಾರಿಸಲು ಮಾಡಲಾಗಿರುವ ಪ್ರಯತ್ನ ಸಮಾಧಾನಕರವಾಗಿಲ್ಲ ಎಂದು ತಿಳಿಸಿದೆ.

ಸಮಸ್ಯೆಯನ್ನು ಅಂತಿಮವಾಗಿ ರಾಜತಾಂತ್ರಿಕ ರೀತಿಯಲಿ ಪರಿಹರಿಸಲಾಗಿರುವುದು ಸಂಬಂಧದಲ್ಲಿ ಪಕ್ವತೆ ಮೂಡಿರುವುದನ್ನು ತೋರಿಸುತ್ತದೆ. ಆದರೆ ಇದರಿಂದ ಪಾಠವನ್ನು ಕಲಿತು ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕಿದೆ ಎಂದು ವಾಂಗ್ ಯಿ ಎಚ್ಚರಿಕೆಯ ಧ್ವನಿಯಲ್ಲಿ ತಿಳಿಸಿದ್ದಾರೆ. ವರದಿಗಳ ಪ್ರಕಾರ ಚೀನಾವು ಡೊಕ್ಲಾಮ್ ಪ್ರದೇಶದಲ್ಲಿ ಸುಮಾರು ಒಂದು ಸಾವಿರ ಸೈನಿಕರನ್ನು ನಿಯೋಜಿಸಿದ್ದು ಈ ಸೈನಿಕರು ಇದೇ ಮೊದಲ ಬಾರಿ ಚಳಿಗಾಲ ಮುಗಿಯುವವರೆಗೂ ಇಲ್ಲಿರಲಿದ್ದಾರೆ. ಭಾರತೀಯ ಸೇನೆಯು ಈಗಾಗಲೇ ಡೋಕಾ ಲಾದಲ್ಲಿ ಚೀನಿ ಸೇನೆಗೆ ಮುಖಮಾಡಿ ಹಲವು ಶಿಬಿರಗಳನ್ನು ನಿರ್ಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News